ಕಾವ್ಯ ಸಂಗಾತಿ
ನಿರಂಜನ ಕೆ ನಾಯಕ
“ಹಣ್ಣೆಲೆಯ ಮುತ್ತು”


ಎಸೆದ ಚೆಂಡ ಹೆಕ್ಕಿ ತರುವ
ನಡುಗುವ ಆ ಮುಪ್ಪಿನ ಕೈಗಳು,
ಒಲವಿನ ಒಡಂಬಡಿಕೆಗೆ ಸೋತು
ಎಂದೂ ಕಿಂಚಿತ್ತೂ ಬೇಸರಿಸವು!
ದೂರದೂರಕೆ ಚೆಂಡು ಸಾಗಿದರೂ,
ಸುಕ್ಕುಗಳ ನಡುವಿನ ನಗುವು
ಆಯಾಸಕೆ ಅರೆದ ದಿವ್ಯ ಮದ್ದಿನಂತೆ
ವಿಧಿಯ ಶಾಪಕೆ ಕದ್ದು ಕೂರದು!
ಪುಟಿಯದ ಚೆಂಡ ಬದಿಗೆ ಸರಿಸಿ,
ಬದುಕಲೇಬೇಕು ಸಂಕೋಲೆಗಳ ದಾಟಿ.
ಎದೆಯಾಳದ ಅನುಭವದ ಮಾತುಗಳು
ನಿತ್ಯ ಜೀವನಕೆ ಪೋಣಿಸಿದ ಮುತ್ತುಗಳು!
ಅನುದಿನದ ಈ ಪರಿಪಾಠಕೆ ಬಳಲದೇ
ಇಟ್ಟ ಹೆಜ್ಜೆಗಳ ಬಿಡದೇ ಎಣಿಸಿ,
ಎಳೆಯ ಕೈಗಳ ಹಣ್ಣಾಗಿಸುವ ಯತ್ನದಿ
ಮೂಡಿದ ಆ ಕನಸೇ ನಿತ್ಯವೂ ಹಿತವು!
ಹೆಕ್ಕಿ ತರುವ ಆ ಚೆಂಡು
ಅವಕಾಶಗಳ ದಾರಿಯ ಸಂಧಿಸಲು,
ನೆರಳಾಗಿ ನಿಲ್ಲುವುದೊಂದೇ
ಒಲವ ಸವಿಯ ಪವಿತ್ರ ಹಾರೈಕೆ!
————–
ನಿರಂಜನ ಕೆ ನಾಯಕ



