ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

( ಆಕೆಯ ವ್ಯಕ್ತಿತ್ವದ ಅದುಮಿಟ್ಟ ಭಾವವನ್ನು ಸಂಭ್ರಮಿಸಲು ಅವಕಾಶ ಕಲ್ಪಿಸಿ)

ಈ ದಿನ ಅಮ್ಮಂದಿರ ದಿನ. ವಿಶ್ವದಾದ್ಯಂತ ಅಮ್ಮಂದಿರ ದಿನವನ್ನು ಎಲ್ಲರೂ ಆಚರಿಸುತ್ತಾರೆ. ಅಮ್ಮನ ಮಮತೆ, ಪ್ರೀತಿ, ತ್ಯಾಗ, ಕರ್ತವ್ಯಪರತೆಯನ್ನು ಹಾಡಿ ಹೊಗಳುತ್ತಾರೆ. ಆಕೆಯನ್ನು ದೇವತೆಯ ಸ್ಥಾನದಲ್ಲಿ ಇಟ್ಟು ಪೂಜಿಸುತ್ತಾರೆ. ಆಕೆಯ ಗುಣಗಾನ ಮಾಡಿ, ಹಾಡಿ ಹೊಗಳುತ್ತಾರೆ.
ಝೆನ್ ಜಿ ಮಕ್ಕಳಿಂದ ಹಿಡಿದು ಇಂದಿನ ಸಾಮಾಜಿಕ ಜಾಲತಾಣಗಳ ಬಳಕೆದಾರರೆಲ್ಲರೂ ತಮ್ಮ ತಮ್ಮ ಮೊಬೈಲ್ನ ಸ್ಟೇಟಸ್ಗಳಲ್ಲಿ ತಾಯಿಯ ಚಿತ್ರವನ್ನು ಹಾಕಿ ನನ್ನ ಹಿಂದಿನ ಶಕ್ತಿ, ನನ್ನ ಸರ್ವಸ್ವ ಎಂದು ಹೇಳುವ ಮಕ್ಕಳ ಸಂಖ್ಯೆ ಕೋಟಿ ಇದ್ದರೆ ಅಯ್ಯೋ ಅಲ್ಲಿ ಹಾಕಿದ್ರೆ ಮಾತ್ರ ತಾಯಿಯ ಮೇಲೆ ಪ್ರೀತಿ ಇರುತ್ತದೆಯೇ ಎಂದು ತಾವು ಸ್ಟೇಟಸ್ ಗಳಲ್ಲಿ ಏನನ್ನೂ ಹಾಕದೆ ಇರುವ ಕಾರಣವನ್ನು ಹೇಳುವ ಮಕ್ಕಳು ಕೂಡ ಇದ್ದಾರೆ.
ಅಮ್ಮನಿಗೆ ಒಂದು ಹೂವನ್ನು ಅರ್ಪಿಸುವ, ಒಂದು ಕಾಣಿಕೆಯನ್ನು ತಂದು ಕೊಡುವ, ಒಂದು ಸೀರೆಯನ್ನು ಗಿಫ್ಟ್ ನೀಡುವ ಮಕ್ಕಳು ಇದ್ದಾರೆ.
ತಾಯಿ ತಮಗೆ ನೀಡಿದ ಸಮಯದ ಸಾವಿರಾರು ಘಂಟೆಗಳಲ್ಲಿ ಕೇವಲ ಒಂದು ಗಂಟೆ ಆಕೆಗೆ ನೀಡದ ಮಕ್ಕಳು ಕೇವಲ ಸ್ಟೇಟಸ್ ಹಾಕಿ ಸಂಭ್ರಮಿಸುವುದು ಯಾವ ನ್ಯಾಯ?
 ತನ್ನಿಡಿ ಬದುಕನ್ನು ಗಂಡ ಮನೆ ಮಕ್ಕಳು ಕೌಟುಂಬಿಕ ಜವಾಬ್ದಾರಿ ಎಂದು ಎಲ್ಲವನ್ನು ತನ್ನ ತಲೆ ಮೇಲೆ ಹೇರಿಕೊಳ್ಳುವ ಹೆಣ್ಣುಮಗಳನ್ನು ಗೌರವಿಸುವ ರೀತಿ ಇದಲ್ಲ?
ನಮ್ಮೆಲ್ಲರ ನಿರೀಕ್ಷೆಗಳ ಭಾರಕ್ಕೆ ಯಾರದೋ ಮಗಳು, ಯಾರದೋ ಪತ್ನಿ, ಯಾರದ್ದೋ ಪುತ್ರಿ, ಯಾರದೋ ಸಹೋದರಿಯಾಗಿ ಬಾಳುವ ಹೆಣ್ಣು ಮಗಳಿಗೆ ತನ್ನದು ಎನ್ನುವ ಸ್ವಂತ ಮನೆ ಇಲ್ಲ. ಆಸೆ ಆಕಾಂಕ್ಷೆಗಳಿಗೆ ಬೆಲೆ ಇಲ್ಲ. ಕನಸುಗಳಿಗೆ ಬೆಂಬಲವಿಲ್ಲ. ನನಸಾಗಿಸಿಕೊಳ್ಳಲು ಸಾಧ್ಯವಾಗದಂತೆ ಆಕೆಯ ಕನಸಿನ ಹಕ್ಕಿಯ ರೆಕ್ಕೆಯನ್ನು ಮುರಿದು ಬಿಡುವರಲ್ಲ. ಆಕೆಯಿಂದಲೇ ಇಹ ಪರವನ್ನು ಕಾಣುವ, ಬೆಳಗಿನಿಂದ ಬೈಗಿನವರೆಗೂ ತಮ್ಮೆಲ್ಲ ಕೆಲಸಗಳಿಗೆ ಆಕೆಯ ಮೇಲೆ ಭಾವನಾತ್ಮಕವಾಗಿ, ಕೌಟುಂಬಿಕವಾಗಿ, ಧಾರ್ಮಿಕವಾಗಿ ಸಾಮಾಜಿಕವಾಗಿ ಅವಲಂಬಿತರಾಗಿರುವ ನಾವು ಕೇವಲ ಆರ್ಥಿಕ ಅವಲಂಬನೆಯನ್ನು ಆಕೆ ನಮ್ಮ ಮೇಲೆ ಹೊಂದಿರುವ ಕಾರಣ ಆಕೆಯನ್ನು ಅವಲಂಬಿತಳು ಎಂಬಂತೆ ಬಿಂಬಿಸುವುದು ಯಾವ ನ್ಯಾಯ? ನಿಜವಾಗಿಯೂ ಇಲ್ಲಿ ಯಾರ ಮೇಲೆ ಯಾರು ಅವಲಂಬಿತರಾಗಿದ್ದಾರೆ ಎಂಬುದು ಪ್ರಶ್ನೆಯಾಗಿಯೇ ಉಳಿಯುತ್ತದೆ ?.. ನೂರಕ್ಕೆ ನೂರರಷ್ಟು ಹೆಣ್ಣು ಮಕ್ಕಳ ಮೇಲೆ ಅವಲಂಬಿತರಾಗಿರುವ ಬಹುತೇಕ ಎಲ್ಲರೂ ಕೇವಲ ಒಂದು ಶೇಕಡ ಆಕೆ ತಮ್ಮ ಮೇಲೆ ಆರ್ಥಿಕವಾಗಿ ಅವಲಂಬಿತಳಾಗಿರುವುದನ್ನೇ ದೊಡ್ಡದಾಗಿಸುವುರು ಹೆಣ್ಣು ಮಕ್ಕಳ ಶೋಚನೀಯ ಪರಿಸ್ಥಿತಿಯನ್ನು, ಪಿತೃ ಸತ್ತಾತ್ಮಕ ವ್ಯವಸ್ಥೆಯ ಕ್ರೌರ್ಯವನ್ನು ತೋರಿಸುತ್ತದೆ.
ಇಲ್ಲಿ ಹೆಣ್ಣಾಗಲಿ ಗಂಡಾಗಲಿ ಪರಸ್ಪರಾವಲಂಬಿಗಳು… ಅನಾದಿಕಾಲದಿಂದಲೂ ಸಾಮಾಜಿಕವಾಗಿ ತಮಗೆ ಕೊಡಮಾಡಿದ ಜವಾಬ್ದಾರಿಗಳನ್ನು ನಿರ್ವಹಿಸುತ್ತಾ ಬಂದವರು ಆದರೆ ನಂತರದ ದಿನಗಳಲ್ಲಿ ಹೆಣ್ಣು ಮಕ್ಕಳನ್ನು ಕ್ಷುಲ್ಲಕವಾಗಿ ಕಾಣುವ ಅವರ ಅಸ್ಮಿತೆಯನ್ನು ಕಡೆಗಣಿಸುವ ಅವರನ್ನು ತೇಜೋವಧೆ ಮಾಡುವ ಹುನ್ನಾರಗಳು ಆರಂಭವಾದವು. ಭಾರತೀಯ ಸಮಾಜದ ಪಿತೃ ಸತ್ತಾತ್ಮಕ  ದೃಷ್ಟಿಕೋನವು ಇದಕ್ಕೆ ಪೂರಕವಾಗಿ ಹೆಣ್ಣು ಮಕ್ಕಳನ್ನು ಎರಡನೆಯ ದರ್ಜೆಯ ಪ್ರಜೆಯನ್ನಾಗಿಸಿತು. ಅವರನ್ನು ಅಕ್ಷರಶಃ ತೊತ್ತಿನ ಸ್ಥಾನಕ್ಕೆ ಇಳಿಸಿತು. ಆಗಾಗ ಅಲ್ಲಲ್ಲಿ ಇದರ ವಿರುದ್ಧವಾಗಿ ಒಬ್ಬಿಬ್ಬರು ಹೆಣ್ಣು ಮಕ್ಕಳು ಧ್ವನಿ ಎತ್ತಿದರಾದರೂ ಅದನ್ನು ವ್ಯವಸ್ಥಿತವಾಗಿ ಸಂಪ್ರದಾಯದ ಹೆಸರಿನಲ್ಲಿ ಅಲ್ಲಲ್ಲಿಯೇ ಅಡಗಿಸಲಾಯಿತು. ಇದನ್ನು ಮೀರಿ ತಮ್ಮ ವೈಯಕ್ತಿಕ ಹಿತಾಸಕ್ತಿಗಳನ್ನು ನೋಡಿಕೊಂಡವರನ್ನು ಕೆಟ್ಟದಾಗಿ ನಡೆಸಿಕೊಂಡರು.
ತಮಗಿರುವ ಜವಾಬ್ದಾರಿಗಳು, ತ್ಯಾಗಗಳು, ಕುಟುಂಬವೇ ಮೊದಲು ಎಂಬ ಸಾಮಾಜಿಕ ಒತ್ತಡಗಳ ನಡುವೆ ಹೆಣ್ಣು ಮಕ್ಕಳು ತಣ್ಣಗಿನ ಕ್ರೌರ್ಯವನ್ನು ಎದುರಿಸುತ್ತಾ ವಿರೋಧಿಸುವ ಗುಣವನ್ನೇ ಕಳೆದುಕೊಂಡರು. ತಮ್ಮ ಕನಸುಗಳನ್ನು ಬದಿಗೊತ್ತಿ, ಕುಟುಂಬದ ಮರ್ಯಾದೆಯ ದೃಷ್ಟಿಯಿಂದ ಸರಿ ಎಂದು ತೋರಿದ್ದನ್ನೇ ಮಾಡುವ ಮೂಲಕ ತಮ್ಮತನವನ್ನು ಕಳೆದುಕೊಂಡರು. ಬದುಕಿನಿಂದ ಹೆಚ್ಚಿನದನ್ನು ಅಪೇಕ್ಷಿಸದೆ ತಮ್ಮ ಕುಟುಂಬ, ತಮ್ಮ ಮಕ್ಕಳು ಎಂದು ಎಲ್ಲರ ಬದುಕನ್ನು ನೇರ್ಪಡಿಸುವ ನಿಟ್ಟಿನಲ್ಲಿ ತಮ್ಮನ್ನು ತಾವು ಗಾಣಕ್ಕೆ ಕಟ್ಟಿದ ಎತ್ತಿನಂತೆ ಭಾವಿಸಿ ಕಾರ್ಯನಿರ್ವಹಿಸಿದರು. ತಮ್ಮ ವೈಯುಕ್ತಿಕ ಆಸೆ ಆಕಾಂಕ್ಷೆಗಳು ಅವರಿಗೆ ನಗಣ್ಯವಾಗಿ ಕನಿಷ್ಠ ಪಕ್ಷ ತಮ್ಮ ಮಕ್ಕಳಾದರೂ ಚೆನ್ನಾಗಿ ತಮ್ಮ ಬದುಕನ್ನು ರೂಪಿಸಿಕೊಳ್ಳಲಿ ಎಂದು ಭಾವಿಸಿ ಗಂಧದ ಕೊರಡಿನಂತೆ ತಮ್ಮನ್ನು ತಾವು ಸವೆಸಿಕೊಂಡು ಉಳಿದವರ ಬದುಕಿಗೆ ಸುಗಂಧವಾದರು. ತನ್ನನ್ನು ತಾನುರಿಸಿಕೊಂಡು ಇತರರಿಗೆ ಬೆಳಕಾಗುವ ದೀಪವಾಗಿ ಬೆಳಗಿದರು.
ಸಾಕು…. ಇನ್ನಾದರೂ ಹೆಣ್ಣು ಮಕ್ಕಳನ್ನು ಕಡೆಗಣಿಸುವ ಅವರ ಆಸೆ-ಆಕಾಂಕ್ಷೆಗಳಿಗೆ ತಣ್ಣೀರೆರಚುವ ಮತ್ತು ವರ್ಷದ ಯಾವುದೋ ಒಂದು ದಿನ ಅವರ ತ್ಯಾಗವನ್ನು, ಪ್ರೀತಿಯನ್ನು ಕರ್ತವ್ಯ ಪ್ರಜ್ಞೆಯನ್ನು  ಅಮ್ಮಂದಿರ ದಿನವನ್ನಾಗಿ ಆಚರಿಸುವ ಈ ಪದ್ಧತಿಯನ್ನು ಬಿಟ್ಟುಬಿಡೋಣ.
ನಮ್ಮ ತಾಯಿಯೂ ಕೂಡ ಓರ್ವ ಹೆಣ್ಣು ಮಗಳು. ಓರ್ವ ಸ್ವತಂತ್ರ ವ್ಯಕ್ತಿ, ತನ್ನದೇ ಆದ ವೈಯಕ್ತಿಕ ಆಸೆ ಆಕಾಂಕ್ಷೆಗಳನ್ನು ಹೊಂದಿದ್ದ ವ್ಯಕ್ತಿ ಎಂಬುದನ್ನು ಮೊದಲು ಗುರುತಿಸೋಣ. ಆಕೆಯ ವ್ಯಕ್ತಿತ್ವವನ್ನು ಸಂಭ್ರಮಿಸುವುದರ ಜೊತೆ ಜೊತೆಗೆ  ಚಿಕ್ಕಂದಿನಿಂದ ಕಂಡಿರುವ ಕನಸನ್ನು ಈಗಲಾದರೂ ನನಸಾಗಿಸುವ ಪ್ರಯತ್ನಕ್ಕೆ ನಾವು ನಮ್ಮ ಕೈಲಾದಷ್ಟು ಸಹಾಯ ಮಾಡೋಣ. ಮಮತೆಯ, ಮಾತೃತ್ವದ ಪ್ರತೀಕವಾದ ಆಕೆಯೂ ಕೂಡ ಒಂದೊಮ್ಮೆ ಹೊಂದಿರಬಹುದಾದ ತನ್ನದೇ ಆದ ಆಸೆ ಆಕಾಂಕ್ಷೆಗಳನ್ನು ಅರಿತು ಅವುಗಳನ್ನು ಈಡೇರಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ಪಡೋಣ.
ಅಮ್ಮ ಎಂದರೆ ಕೇವಲ ತ್ಯಾಗವಲ್ಲ, ಪ್ರೀತಿ, ವಾತ್ಸಲ್ಯಗಳ ಹಾಗೂ ಮಮತೆಯ ಮೂರ್ತಿಯಲ್ಲ. ಎಲ್ಲಕ್ಕೂ ಮುನ್ನ ಆಕೆ ಓರ್ವ ಹೆಣ್ಣು ಮಗಳು ನಮ್ಮ ನಿಮ್ಮೆಲ್ಲರಂತೆ ಆಕೆಯಲ್ಲಿಯೂ ಇರಬಹುದು. ಆಕೆಯ ಚಿಕ್ಕ ಪುಟ್ಟ ಆಸೆಗಳು,ಆಕಾಂಕ್ಷೆಗಳು, ಅದುಮಿಟ್ಟಿರುವ ಕನಸುಗಳನ್ನು ನನಸು ಮಾಡುವ ನಿಟ್ಟಿನಲ್ಲಿ ನಾವು ಆಕೆಗೆ ಜೊತೆಯಾಗೋಣ. ಅತ್ಯಂತ ಪ್ರೀತಿಯಿಂದ ಆಕೆಯನ್ನು ತಬ್ಬಿಕೊಂಡು ಐ ಲವ್ ಯು ಅಮ್ಮ ಎಂದು ಹೇಳುವುದು ನಿಜವಾದ ಪ್ರೀತಿಯ ಅಭಿವ್ಯಕ್ತಿ ಎಂದು ನಾವು ಭಾವಿಸುವುದು ಬೇಕಿಲ್ಲ… ನಿಜವಾದ ಪ್ರೀತಿಯೆಂದರೆ ನಿಸ್ವಾರ್ಥದಿಂದ ತಮ್ಮೆಲ್ಲವನ್ನು ನಮಗಾಗಿ ಬಿಟ್ಟು ಕೊಟ್ಟಿರುವ ನಮ್ಮ ತಾಯಂದಿರದು.

ತಾಯಂದಿರ ದಿನದಂದು ಭಾವನಾತ್ಮಕವಾಗಿ ತಾಯಿಯ ಬಗ್ಗೆ ಹೇಳುತ್ತಾ ತಾಯ್ತನ ತಂದು ಕೊಡುವ ನೂರೆಂಟು ತ್ಯಾಗ ಬಲಿದಾನದ ಕಥೆಗಳ ಮೂಲಕ ಜಾಹೀರು ಮಾಡುವ ಬದಲಾಗಿ ಹೆಣ್ಣು ಮಕ್ಕಳನ್ನು ಅವರವರ ಪಾಡಿಗೆ ಬಿಟ್ಟುಬಿಡಬೇಕು. ಅವರದ್ದೇ ರೀತಿಯಲ್ಲಿ ಅವರು ತಮ್ಮ ಬದುಕನ್ನು ರೂಪಿಸಿಕೊಳ್ಳಲು ಸಹಾಯ ಮಾಡಬೇಕು. ಅತ್ಯಂತ ಅಸಹಾಯಕ ಸ್ಥಿತಿಯಲ್ಲಿದ್ದ ತನ್ನ ಮಗುವನ್ನು , ಇಂದಿನ ಈ ಸ್ವಾವಲಂಬಿ ಬದುಕಿಗೆ ಸಿದ್ದ ಮಾಡಲು ಅವರನ್ನು ಪಾಲಿಸಿ ಪೋಷಿಸಿ ಸದಾ ಅವರ  ಕೈ ಹಿಡಿದು ಇಲ್ಲಿಯತನಕ ನಡೆಸಿರುವ ತಾಯಂದಿರನ್ನು ಪರಾವಲಂಬಿಯಾಗಿಸದೆ, ಈ ಹಿಂದೆ ನಮ್ಮಲ್ಲಿ ಆಕೆ ತುಂಬಿದ ಮಾನಸಿಕ, ಭಾವನಾತ್ಮಕ ಕೌಟುಂಬಿಕ ಹಾಗೂ ವಾಸ್ತವಿಕವಾದ ಆರ್ಥಿಕ ಬೆಂಬಲವನ್ನು ನಾವು ನೀಡಲೇಬೇಕು.
ಆ ಮೂಲಕ ತಾಯಂದಿರು ಮತ್ತಷ್ಟು ಸಶಕ್ತರಾಗಿ, ಸಚೇತನರಾಗಿ ನಮ್ಮ ಬಾಳಿನ ಬೆಳಕಾಗಿ ಪ್ರಖರವಾಗಿ ಬೆಳಗುವಂತೆ ಪೋಷಿಸಬೇಕು. ಅವರಿಗೆ ತಮ್ಮ ಕುರಿತು ಯೋಚಿಸುವಂತೆ ಪ್ರೇರೇಪಿಸಬೇಕು. ಎಲ್ಲರಿಗೂ ಎಲ್ಲವನ್ನೂ ಮಾಡುವ ತಾಯಿ ತನ್ನ ವೈಯಕ್ತಿಕ ಕಾಳಜಿಯನ್ನು ಮಾಡಿಕೊಳ್ಳಬೇಕು. ಹಾಗೆ ತನ್ನ ಕಾಳಜಿಯನ್ನು  ಮಾಡಿಕೊಳ್ಳದೆ ಆತ್ಮ ದ್ರೋಹ ಮಾಡಿಕೊಳ್ಳಬಾರದು.

 ನಿಜ! ಪೋಷಣೆಯ ಅಗತ್ಯ ಕೇವಲ ಮಕ್ಕಳಿಗೆ ಮಾತ್ರವಲ್ಲ…. ತಾಯಂದಿರಿಗೂ ಇದೆ ಎಂಬ ಸತ್ಯವನ್ನು ಅರಿತು ಅವರ ಸಂತೋಷಕ್ಕೆ ಕಾರಣವಾಗಬೇಕು. ಆಗಲೇ ತಾಯಂದಿರ ದಿನಾಚರಣೆಗೆ ನಿಜವಾದ ಸಾರ್ಥಕತೆ ಹಾಗೂ ಅರ್ಥಪೂರ್ಣತೆ ದೊರೆಯುವುದು.
..ಏನಂತೀರಾ ಸ್ನೇಹಿತರೇ ?


About The Author

Leave a Reply

You cannot copy content of this page

Scroll to Top