ನಾಡಿ ಮಿಡಿತದ ದಾರಿ

ಪುಸ್ತಕಪರಿಚಯ

ಪುಸ್ತಕ : ನಾಡಿ ಮಿಡಿತದ ದಾರಿ 🩺
(ವೈದ್ಯಲೋಕದ ಅನುಭವ ಕಥನಗಳು)

ಲೇಖಕರು: ಡಾ|| ಶಿವಾನಂದ ಕುಬಸದ
ಪ್ರಕಾಶನ: ನೀಲಿಮಾ ಪ್ರಕಾಶನ
ಬೆಂಗಳೂರು
ಪುಟಗಳು: 160
ಬೆಲೆ: ರೂ. 130/-
ಪ್ರಕಟಿತ ವರ್ಷ: 2019
ಲೇಖಕರ ದೂರವಾಣಿ: 9448012767

      ಅಖಂಡ ವಿಜಯಪುರ ಜಿಲ್ಲೆ ಪಂಚ ನದಿಗಳ ಬೀಡು. ಇಲ್ಲಿ ಐದು ನದಿಗಳು ಹರಿದರೂ ಸಹ ಹೆಚ್ಚಿನ ಭೂಪ್ರದೇಶ ಮಳೆ ಆಶ್ರಿತ ಒಣ ಬೇಸಾಯ ಹೊಂದಿದೆ. ಒಕ್ಕಲುತನದ ಜೊತೆಗೆ ಅಪಾರ ಶಿಕ್ಷಣಪ್ರೇಮ ಹೊಂದಿದ ಇಲ್ಲಿನ ತಂದೆ-ತಾಯಿಗಳು ತಾವು ಕಷ್ಟಪಟ್ಟು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕೃತಿ ನೀಡಿದರು. ಅಂದು ಶ್ರದ್ಧೆವಹಿಸಿ ವಿದ್ಯೆ ಪಡೆದವರು ಇಂದು ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿ ಈ ನಾಡಿಗೆ ಹೆಸರು ತಂದಿದ್ದಾರೆ. ಅಂಥವರಲ್ಲಿ ಡಾ|| ಶಿವಾನಂದ ಕುಬಸದ ಅವರು ಒಬ್ಬರು. ಮೂಲತಃ ವಿಜಯಪುರ ಜಿಲ್ಲೆ ಮುಳವಾಡದವರಾದ ಇವರು ಕೆಲವು ವರ್ಷ ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿ ನಂತರ ಮುಧೋಳದಲ್ಲಿ ಸ್ವತಃ ಆಸ್ಪತ್ರೆ ತೆರೆದು ಗ್ರಾಮೀಣ ಜನರ ಆರೋಗ್ಯ ಸೇವೆಗೆ ತಮ್ಮನ್ನು ತಾವು ತೊಡಗಿಸಿಕೊಂಡರು. 

ವೃತ್ತಿಯಿಂದ ಪರಿಣತ ಶಸ್ತ್ರ ಚಿಕಿತ್ಸಕರಾಗಿ, ಜನಾನುರಾಗಿ ವೈದ್ಯರಾಗಿ, ವಿವಿಧ ವ್ಯಾಧಿಗಳ ಕುರಿತು ಜನತೆಗೆ ಮಾಹಿತಿ ನೀಡುವ ವಕ್ತಾರರಾಗಿ, ಗ್ರಾಮೀಣರ ಮೂಡನಂಬಿಕೆಗಳನ್ನು ಹೋಗಲಾಡಿಸಿ ವೈಜ್ಞಾನಿಕ ಮನೋಭಾವ ಮೂಡಿಸುವ ಆಪ್ತ ಬಂಧುವಾಗಿ, ರೋಗಿಗಳ ಸೇವೆಯಲ್ಲಿ ದೇವರನ್ನು ಕಾಣುವ ಕಾಯಕ ಯೋಗಿಯಾಗಿ, ಸೃಜನಶೀಲ ಕವಿ, ಲೇಖಕರಾಗಿ ಒಂದು ಪ್ರದೇಶದ ಒಂದು ಕಾಲಗಟ್ಟದ ಇತಿಹಾಸಕಾರರಾಗಿ, ಎಲ್ಲರನ್ನು ಪ್ರೀತಿ, ಗೌರವ, ವಿಶ್ವಾಸದಿಂದ ಕಾಣುವ ವೈದ್ಯ ಸಾಹಿತಿಯಾಗಿರುವ ಮುಧೋಳದ ಡಾ|| ಶಿವಾನಂದ ಕುಬಸದ ಅವರು ಕಳೆದ ವರ್ಷ ಪ್ರಕಟಿಸಿದ “ನಾಡಿ ಮಿಡಿತದ ದಾರಿ” ಇಂದಿನ ಕೃತಿ ಪರಿಚಯ.

ವೈದ್ಯಲೋಕದ ಜೀವನಾನುಭವಗಳ ಸುಂದರ ಇಪ್ಪತ್ನಾಲ್ಕು ಕಥನಗಳು ಇಲ್ಲಿ ದೃಶ್ಯಕಾವ್ಯಗಳಾಗಿವೆ. ಸಂವೇದನಾಶೀಲತೆ, ಮಾನವೀಯತೆ, ಸಾಮಾಜಿಕ ಜಾಡ್ಯಗಳಿಗೆ ಪರಿಹಾರೋಪಾಯ ಇಲ್ಲಿನ ವಿಷಯ ವಸ್ತು. ಲೇಖಕಿ ವೀಣಾ ಬನ್ನಂಜೆ ಅವರ ಅನುಭಾವದ ಮುನ್ನುಡಿ ಹಾಗೂ ಖ್ಯಾತ ಕಥೆಗಾರರಾದ ಕುಂ. ವೀರಭದ್ರಪ್ಪ ಅವರ ಆತ್ಮೀಯತೆಯ ಮಾತುಗಳು ಇಲ್ಲಿ ಮನೋಜ್ಞವಾಗಿ ಮೂಡಿ ಬಂದಿವೆ. ಇಲ್ಲಿರುವ ಎಲ್ಲ ಅನುಭವಾಮೃತದ ಕಥೆಗಳು ಉದಯವಾಣಿ ಪತ್ರಿಕೆಯಲ್ಲಿ ಅಂಕಣ ಬರಹಗಳಾಗಿ ಪ್ರಕಟವಾಗಿವೆ. ವರ್ತಮಾನದ ಸಾಂದರ್ಭಿಕ ಸಮಸ್ಯೆಗಳ ಮೇಲೆ ಸ್ಟೆಥಸ್ಕೋಪ್ ಆಡಿಸಿ, ಸಮಾಜದ ಸಾಕ್ಷಿಪ್ರಜ್ಞೆಯನ್ನು ಪೋಷಿಸಿ ರೋಗಿಗಳ ಮನೋಜ್ಞ ಚಿತ್ರಣ ನೀಡಿದ್ದಾರೆ. ಇಲ್ಲಿನ ಅಂಕಣ ಬರಹಗಳಿಗೆ ಕಥೆಗಳ ಜೀವದ್ರವ್ಯವಿದೆ. ಜಾತಕ, ಕುಂಡಲಿ ನಕ್ಷತ್ರಗಳಿಗಿಂತಲೂ ಆಸ್ತಿಕನಾಗಿ ರಕ್ತಪರೀಕ್ಷೆ, ನಾಡಿ ಮಿಡಿತ ಹಾಗೂ ಸೂಕ್ತ ಚುಚ್ಚು ಮದ್ದಿನ ಮೂಲಕ ರೋಗಿಯನ್ನು ಗುಣಪಡಿಸಬೇಕು ಎಂಬುದು ವೈದ್ಯರ ಆಶಯ. ವೃತ್ತಿ ಧರ್ಮದಲ್ಲಿ ದೇವರನ್ನು ಕಾಣುವ ಇವರು ‘ದಯವೇ ಧರ್ಮದ ಮೂಲ’ ಎನ್ನುತ್ತಾರೆ.

ಇಲ್ಲಿನ ಕಥೆಗಳು ನೈಜ ಬದುಕಿನ ಅಭಿವ್ಯಕ್ತಿಯಾಗಿದ್ದು ಯಾವುದೂ ಸಹ ಕಾಲ್ಪನಿಕವಾಗಿಲ್ಲ. ‘ವೃತ್ತಿ ಸಾರ್ಥಕ್ಯದ ಆ ದಿನ’ ಎಂಬ ಬರಹ ಹೃದಯಸ್ಪರ್ಶಿಯಾಗಿದ್ದು ಹೆರಿಗೆ ಸಮಯದಲ್ಲಿ ಹೆಣ್ಣುಮಗಳೊಬ್ಬಳು ಜೀವನ್ಮರಣದೊಡನೆ ಹೋರಾಡುತ್ತಿರುವಾಗ ವೈದ್ಯರೇ ಸ್ವತಃ ರಕ್ತದಾನ ನೀಡಿ, ನಿರಂತರ ಒಂದು ಗಂಟೆ ಶಸ್ತ್ರಚಿಕಿತ್ಸೆ ನಡೆಸಿ ಅವಳ ಪ್ರಾಣ ಉಳಿಸಿದ ರೋಚಕ ಅನುಭವಗಾಥೆ ಓದುಗರಲ್ಲಿ ಧನ್ಯತಾ ಭಾವ ಮೂಡಿಸುತ್ತದೆ.

‘ಅವ್ವನೆಂಬ ಆಧಾರಸ್ತಂಭಕ್ಕೆ ಆಸರೆಯಾಗಿ’ ಎಂಬ ಲೇಖನದಲ್ಲಿ ತಾಯಿಯೇ ಸರ್ವಸ್ವ ಎಂದು ನಂಬಿದ ವೈದ್ಯಮಿತ್ರರೊಬ್ಬರು ಆಕಸ್ಮಿಕವಾಗಿ ಅನಾರೋಗ್ಯಕ್ಕೊಳಗಾದ ತಾಯಿಯನ್ನು ಏಳು ವರ್ಷಗಳ ಕಾಲ ಮಗುವಿನಂತೆ ಉಪಚರಿಸಿದ ಸಂಗತಿ ಎಲ್ಲರಿಗೂ ಆದರ್ಶಪ್ರಾಯ ಹಾಗೂ ಅನುಕರಣಿಯ.

‘ಜಗವೆಲ್ಲ ನಗುತಿರಲಿ ಜಗದಳುವು ನನಗಿರಲಿ’ ಎನ್ನುವ ಕವಿವಾಣಿಯಂತೆ ಇಲ್ಲಿ ರೋಗಿಯೊಬ್ಬ ತನಗೆ ಕ್ಯಾನ್ಸರ್ ಕಾಯಿಲೆ ಇದ್ದರೂ ಸಹ ಮನೆಯವರಿಗೆ ಹೇಳದೆ ತಾನೇ ಅನುಭವಿಸುವ ಸ್ಥಿತಿ ಕಂಡ ವೈದ್ಯರು ಅವನಲ್ಲಿ ಯೋಗಿಯ ಗುಣವನ್ನು ಕಾಣುತ್ತಾರೆ.

‘ಗುಟಕಾ ಎಂಬ ಹೊಗೆಯಿಲ್ಲದ ಬೆಂಕಿ’ ಎಂಬ ಕಥೆಯಲ್ಲಿ ಇಂದಿನ ಸಮಾಜದಲ್ಲಿ ಯುವಜನಾಂಗ ದುಶ್ಚಟಗಳಿಗೆ ದಾಸರಾಗುವುದನ್ನು ಕಂಡು ಖೇದ ವ್ಯಕ್ತಪಡಿಸುತ್ತಾರೆ. ಒಂದು ದಿನ ವೈದ್ಯರು ಆಸ್ಪತ್ರೆಗೆ ಬರದೇ ಮರುದಿನ ಬಂದಾಗ ಸಿರಿವಂತ ರೋಗಿ ಒಬ್ಬ ಕೋಪಗೊಂಡು ಬೈದಾಗಲೂ ಸಹ ಸ್ಥಿತಪ್ರಜ್ಞರಾಗಿ ಉಪಚರಿಸಿದ್ದು ಶ್ಲಾಘನೀಯ. ನೇಣು ಹಾಕಿಕೊಂಡು ಬದುಕುಳಿದವನ ದೇಹದಲ್ಲಾಗುವ ಬದಲಾವಣೆಗಳ ಬಗ್ಗೆ ಆಪ್ತ ಗೆಳೆಯನಂತೆ ತಿಳಿಸಿದ್ದಾರೆ.

“ಮಡದಿ ಎಂಬ ಮಹಾಗುರು” ಎಂಬ ಅಧ್ಯಾಯದಲ್ಲಿ ಮದ್ಯಪಾನ ವ್ಯಸನಕ್ಕೆ ಒಳಗಾದ ಗಂಡನನ್ನು ಪತ್ನಿಯೊಬ್ಬಳು ಮದ್ಯವ್ಯಸನದಿಂದ ಮುಕ್ತನಾಗಿ ಮಾಡಿದ ಕಥೆ ಮಾರ್ಮಿಕವಾಗಿದೆ. ಮದ್ಯ ಸೇವನೆಯಿಂದ ಶರೀರದ ಮೇಲಾಗುವ ದುಷ್ಪರಿನಾಮಗಳ ಬಗ್ಗೆ ವಿವರಿಸುವಾಗ ಇಲ್ಲಿ ವೈದ್ಯರು ಶಾಲಾ ಅಧ್ಯಾಪಕನಂತೆ ಗೋಚರಿಸುತ್ತಾರೆ.

ಅಪ್ಪ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ? ಪಿಯುಸಿಯಲ್ಲಿ ರಾಜ್ಯಕ್ಕೆ ಹತ್ತನೇ ಸ್ಥಾನ ಪಡೆದಾಗ ಅಪ್ಪನ ಮೊಗದಲ್ಲಿ ಮೂಡುವ ಗೆಲುವಿನ ಗೆರೆ, ಮಗ ವೈದ್ಯನಾದಾಗ ಕಣ್ಣಂಚಲ್ಲಿ ಹೊಮ್ಮಿದ ಸಾರ್ಥಕತೆ, ಕೈಬೆರಳು ಹಿಡಿದು ನಡೆಸಿದ ಅಪ್ಪ ಕೈಬಿಟ್ಟು ಹೋದಾಗ ಉಂಟಾಗುವ ಶೂನ್ಯತೆ. ಇವೆಲ್ಲವೂ “ಅಪ್ಪ ನೆನಪಾಗುತ್ತಾನೆ” ಎಂಬ ಅಧ್ಯಾಯದಲ್ಲಿ ಸಿನಿಮಾ ರೀಲಿನಂತೆ ಅಪ್ಪನ ನೆನಪುಗಳು ಬಿಚ್ಚಿಕೊಳ್ಳುತ್ತವೆ.

ಹೀಗೆ ಇಲ್ಲಿರುವ ಎಲ್ಲ ಬರಹಗಳ ಹಿಂದೆ ಸ್ವಾರಸ್ಯಕರ ಅನುಭವ ಅವಿಸ್ಮರಣೀಯ ಸಂಗತಿಗಳು ಕಥಾವಸ್ತುಗಳಾಗಿವೆ. ವಾಸ್ತವ ಸಮಾಜಕ್ಕೆ ಕೈಗನ್ನಡಿಯಾಗಿ, ಸ್ವಸ್ಥ ಸಮಾಜಕ್ಕೆ ಮಾರ್ಗದರ್ಶಿಯಾಗಿ ನಿಲ್ಲುವ ಈ ಕೃತಿ ಸಾರಸ್ವತ ಲೋಕಕ್ಕೆ ಒಂದು ಅಮೂಲ್ಯ ಕೊಡುಗೆ. ಈಗಾಗಲೇ “ಇಷ್ಟು ಮಾಡಿದ್ದೇನೆ” ಎಂಬ ಕವಿತಾ ಸಂಕಲನ ಹಾಗೂ “ಗಿಲೋಟಿನ್” ಎನ್ನುವ ಯುರೋಪ್ ಪ್ರವಾಸ ಕಥನ ಪ್ರಕಟಿಸಿ ಓದುಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇವರಿಂದ ಇನ್ನಷ್ಟು ಮೌಲಿಕ ಕೃತಿಗಳು ಮೂಡಿ ಬರಲಿ ಎಂಬುದು ನಮ್ಮೆಲ್ಲರ ಬಯಕೆ.

****

ಬಾಪು ಖಾಡೆ

Leave a Reply

Back To Top