ಕವಿತೆ
ಮಾಂತೇಶ ಬಂಜೇನಹಳ್ಳಿ
ಮೂರನೇ ತಿರುವಿನ ಬಾನೆತ್ತರದ
ದೀಪದ ಕಂಬದ ಅಡಿ
ನಿಂತ ಆಗಸದಗಲ ಛತ್ರಿಯ ಕೆಳ
ಮಲ್ಲಿಗೆ ತುರುಬಿನ ಎಳವೆ ಮಲ್ಲೆಗೆ,
ರಾಶಿಯೋಪಾದಿ ಕೋರೈಸುವ
ಹೂಗಳ ಸ್ಪರ್ಶ ಗೆಳೆತನ.
ಉದುರಿದ ದಿನಗಳು ಈಗೀಗ ಒಗ್ಗುತ್ತಿವೆ,
ಬಿರಿದ ಚೆಂಗುಲಾಬಿ ಮುಡಿದು,
ಸೂರ್ಯನಿಳಿವ ಹೊತ್ತಿಗೆ
ಮುದುಡಿದ ದೇಹ,
ಕತ್ತಲೆಯಾಗುತ್ತಲೇ ಹೊರಡುವ
ತರಾತುರಿ..
ಒಣಗಿ ಮಬ್ಬೇರಿದ ಕಂದು
ಹೂಗಳ ನೆತ್ತಿಯಿಂದೆ ಸುತ್ತಿದಾಕೆ,
ತಾನು ಒಪ್ಪದ ವರನ ವರಿಸದ್ದಕ್ಕೆ,
ಹಿಂದೆ ಬಿದ್ದವರ ಸಲಹಲು,
ಭವಿಷ್ಯ ಪಕ್ಕಕ್ಕೆ ಎತ್ತಿಟ್ಟವಳು.
ಈಗೀಗ ಮುಂಜಾನೆ ಅರಳಿ,
ಸಂಜೆಗೂ ನಳನಳಿಸೋ ಹೂವಂತೆ ದಿನವೂ
ಅರಳುವ ಮತ್ತು ಮನದಲ್ಲೇ ಮರುಗುವ, ನಿತ್ಯ ಒಳ ನರಳಿಗೆ
ಕುಗ್ಗಿದ ಸುಕ್ಕು ಕುಸುರಿ ದೇಹ.
ಬದುಕು ಬಯಸಿದಂತೆ ನಡೆದಿದ್ದರೆ,
ಹೀಗೆ ಗಿರಾಕಿ ಬಯಸುವ ಬಣ್ಣದ,
ಭಿನ್ನ ಅಳತೆಯ ಜಡೆ ಹಾರ ಕಟ್ಟುವ ಮಾರುವ, ಕೂಗುವ ಮತ್ತೆ ಮೌನವಾಗುವ,
ಅಂತರಂಗದ ಒಂಟೀ ತುಳಿತಕ್ಕೆ ಅಡಿಯಾಗುತ್ತಿರಲಿಲ್ಲವೇನೋ!?..
ಹೂವ ಚೌಕಾಸಿ ಕೇಳುವವರ ಬಳಿ,
ಅರಿವಿರದೆ ಅಡ್ಡಿಗೊಳಿಸಿಕೊಂಡ,
ಗತದ ಬಗ್ಗೆ ಈಗೀಗ ಅಲವತ್ತುಕೊಳ್ಳುತ್ತಾಳೆ.
*************
ಹ್ಯಾಟ್ಸ್ ಆಫ್ ಸಾರ್
ಧನ್ಯವಾದಗಳು ಸರ್
Super sir.super
Tq sir
Super sir…
ಧನ್ಯವಾದಗಳು ಸರ್