ಜಂಬಿಕೊಳ್ಳಿ ಮತ್ತು ಪುಟ್ಟವಿಜಿ

ಅನುಭವ ಕಥನ

ಕಾಡಿನಲ್ಲಿ ಓದು

ವಿಜಯಶ್ರೀ ಹಾಲಾಡಿ

 ವಿಜಿ ಮತ್ತು ಅವಳಂತಹ ಆಗಿನ ಕಾಲದ ಮಕ್ಕಳು ಸಣ್ಣ ವಯಸ್ಸಿನಲ್ಲಿದ್ದಾಗ ಎದ್ದುಬಿದ್ದು ಓದುವುದೆಲ್ಲ ಏನೂ  ಇರಲಿಲ್ಲ. ಮನೆಕೆಲಸ, ಆಟ, ಹಾಡಿ-ಗುಡ್ಡಗಳ ಸುತ್ತಾಟ,   ಎಲ್ಲದರ ನಡುವೆ ಶಾಲೆಗೂ ಹೋಗಿಬರುತ್ತಿದ್ದರು!  ಪರೀಕ್ಷೆ ಬಂದಾಗ ಅಲ್ಪಸ್ವಲ್ಪ ಓದಿಕೊಳ್ಳುತ್ತಿದ್ದರು. ಹಾಗಂತ ಶಾಲೆಗೆ ಹೋಗುವುದು ಅವರಿಗೆ ಸುಲಭವೇನೂ ಆಗಿರಲಿಲ್ಲ.  ಗದ್ದೆ, ತೋಡು, ಕಾಡುಗಳಲ್ಲಿ ಮೈಲಿಗಟ್ಟಲೆ ನಡೆದು ಹೋಗಿಬರಬೇಕಿತ್ತು . ಆದರೆ ‘ಓದಿ ಓದಿ’ ಎಂದು ಶಾಲೆಯಲ್ಲೂ ಮನೆಯಲ್ಲೂ ಯಾರೂ ಅವರ ತಲೆ ತಿನ್ನುತ್ತಿರಲಿಲ್ಲ. ಹಾಗಾಗಿ ಮನಸ್ಸಾದರೆ ಓದಿಕೊಳ್ಳುತ್ತಿದ್ದರು. ಆದರೆ ತರಗತಿಯಲ್ಲಿ ಪಾಠಗಳನ್ನು ಚೆನ್ನಾಗಿ ಕೇಳಿಸಿಕೊಳ್ಳುತ್ತಿದ್ದರು. ಒಂಬತ್ತನೇ ತರಗತಿಯವರೆಗೂ ಇದೇ ತರ ತಲೆಬಿಸಿ ಇಲ್ಲದೆ ಇದ್ದರು. ವಿಜಿ ಶಾಲೆ ಪುಸ್ತಕಗಳ ಜೊತೆಗೆ ಕಥೆ ಪುಸ್ತಕಗಳನ್ನೂ ಓದುತ್ತಿದ್ದಳು. ಹತ್ತನೇ ತರಗತಿಯಲ್ಲಿ ಮಾತ್ರ ತುಸು ಗಂಭೀರವಾಗಿ ಓದಬೇಕಿತ್ತು. ಪರೀಕ್ಷೆಯ ತಯಾರಿ ಎಂದರೇನೆಂದು ತಿಳಿದದ್ದು ಆಗಲೇ. ಈ ಮಕ್ಕಳ ಓದುವಿಕೆಯೂ ವಿಚಿತ್ರವಾಗಿತ್ತು. ಕೋಣೆಯೊಳಗೆ ಕುರ್ಚಿ, ಮೇಜುಗಳನ್ನಿಟ್ಟುಕೊಂಡು ಶಿಸ್ತಾಗಿ ಕೂತು ಓದುತ್ತಿದ್ದುದು ಭಾರೀ ಕಮ್ಮಿ. ಅಲ್ಲದೆ ಹಾಗೆಲ್ಲ ಓದಲು ಹೆಚ್ಚಿನ ಮಕ್ಕಳ ಮನೆಯಲ್ಲಿ ಟೇಬಲ್ಲು ಕುರ್ಚಿಗಳು ಇರಲಿಲ್ಲ. ನೆಲದಲ್ಲಿ ಚಿಮಣಿದೀಪದ ಎದುರಿಗೆ ಕೂತು ಪುಸ್ತಕಗಳನ್ನು ಹರಡಿಕೊಂಡು ಬರೆದುಕೊಳ್ಳುತ್ತಿದ್ದರು. ವಿಜಿ ದಿನವೂ ರಾತ್ರಿ ಒಂದರ್ಧ ಗಂಟೆಯಾದರೂ ಹೀಗೆ ಅಜ್ಜಿ, ಅಮ್ಮನಎದುರಿಗೆ ಬರೆಯಲೇಬೇಕಿತ್ತು .ಇದು ಊಟದ ಮುಂಚೆ ನಡೆಯುತ್ತಿತ್ತು. ಆಮೇಲೆ ಊಟ ಮಾಡಿ ಒಂಭತ್ತು ಗಂಟೆಗೆಲ್ಲ ಮಲಗಿಬಿಡುತ್ತಿದ್ದರು.

Indian Rural Girl Studying High Resolution Stock Photography and ...

 ಪರೀಕ್ಷೆಯ ಸಮಯದಲ್ಲಿ ವಿಜಿ ಮತ್ತು ಅವಳ ಗೆಳತಿಯರು ಓದುತ್ತಿದ್ದುದು ಹೆಚ್ಚಾಗಿ ತೋಟ ಹಾಡಿಗಳಲ್ಲಿ. ತೋಟದಲ್ಲಿ ಹುಲ್ಕುತ್ರೆ ಇರುತ್ತಿತ್ತು. ಸೂಡಿಹಲ್ಲುಕುತ್ರೆಯಾದರೆ  ಹುಲ್ಲನ್ನು ಜಪ್ಪಿ ಭತ್ತವನ್ನು ಪೂರ್ತಿಯಾಗಿ ಬೇರ್ಪಡಿಸಿ ಹುಲ್ಲನ್ನು ಸೂಡಿ ಮಾಡಿ ಜೋಡಿಸಿಡುತ್ತಿದ್ದ ಕುತ್ರೆ. ಇಂತಹ ಒಣಹುಲ್ಲನ್ನು ಸಂಗ್ರಹಿಸಿ ಇಟ್ಟು ವರ್ಷಪೂರ್ತಿ ದನಕರುಗಳಿಗೆ ತಿನ್ನಲು ಬಳಸುತ್ತಿದ್ದರು . ಹಟ್ಟಿಯ ಅಟ್ಟದಲ್ಲಿ ಕೂಡಿಟ್ಟು ಉಳಿದ  ಹುಲ್ಲನ್ನು ಹುಲ್ಕುತ್ರೆ ಮಾಡಿ ಇಡುತ್ತಿದ್ದರು. ಬೇಕಾದಾಗ ಇದರಿಂದ ಹುಲ್ಲನ್ನು ತೆಗೆದುಕೊಳ್ಳುತ್ತಿದ್ದರು. ಇಂತಹ ಕುತ್ರೆಗಳು ಮೂರ್ನಾಲ್ಕು ಇರುತ್ತಿದ್ದವು. ಇದಲ್ಲದೆ ತಳು ಹುಲ್ಲಿನ ಕುತ್ರೆಯೂ ಇರುತ್ತಿತ್ತು. ಇದು ಸೂಡಿ ಮಾಡದ ಬಿಡಿ ಹುಲ್ಲು. ಸ್ವಲ್ಪ ಸ್ವಲ್ಪ ಹುಲ್ಲು ತೆಗೆದು ಅರ್ಧ ಆದ ಇಂತಹ ಕುತ್ರೆಗಳ ಮೇಲೆ ಆರಾಮವಾಗಿ ಕುಳಿತು ಅಥವಾ ಕಾಲು ಚಾಚಿ ಮಲಗಿ ಓದುತ್ತಿದ್ದರು. ನಾಲ್ಕೈದು ಜನ ಅಂದರೆ ನೀಲಿಮಾ,ಮಾಣಿಕ್ಯ ಮತ್ತು ಅವಳ ತಂಗಿಯರು ಸೇರಿದರೆ ಮಾತ್ರ ಓದು ನುಗುಳಿ (ಜಾರಿ ) ಹೋಗಿ ಮಾತು ಜೋರಾಗುತ್ತಿತ್ತು…. ಅಂತಹ ಸಂದರ್ಭದಲ್ಲಿ ಹುಲ್ಕುತ್ರೆ ಮೇಲೆ  ಕುಣಿಯುತ್ತ ಆಟವಾಡುತ್ತಿದ್ದುದೂ ಉಂಟು.   ಆಟ ಎಂದಮೇಲೆ ಜಗಳವೂ ಇರುತ್ತಿತ್ತು; ರಾಜಿಯೂ ಆಗುತ್ತಿತ್ತು! ಅಜ್ಜಿಯೇನಾದರೂ  ತೋಟದ ಕಡೆಗೆ ಬಂದರೆ “ಎಂತಾ ಮಕ್ಳೆ ಅದ್ ನಳಿನಳಿ ಓಡೂದ್, ನೀವ್ ಓದೂಕ್ ಬಂದದ್ದಾ, ಕೊಣೂಕ್ ಬಂದದ್ದಾ?” ಎಂದು ಜೋರು ಮಾಡುತ್ತಿದ್ದರು. ಅವರು ಆಚೆ ದಾಟುವವರೆಗೆ ಸುಮ್ಮನೆ ಹೆಡ್ಡರ ತರ ನಿಂತುಕೊಂಡು ಮತ್ತೆ ಮೊದಲಿನಂತೆ ಓಡುವುದು, ಹಾರುವುದು ಬೀಳುವುದು ಮಾಡಿ ಕುತ್ರೆ ಹರಡುತ್ತಿದ್ದರು . ಆದರೆ ಹೆಚ್ಚು ಶಬ್ದ ಆಗದಂತೆ ಬಾಯಿ ಒತ್ತಿ ಹಿಡಿಯುತ್ತಿದ್ದರು. ಮನೆಗೆ ಹೊರಡುವಾಗಂತೂ ಹುಲ್ಲನ್ನೆಲ್ಲ ಮೊದಲಿನಂತೆ ಇಟ್ಟು ಜಾಗ್ರತೆ ಮಾಡುತ್ತಿದ್ದರು ವಿಜಿ, ನೀಲಿಮಾ.  ಇಲ್ಲದಿದ್ದರೆ ಅಜ್ಜಿ ಬೆನ್ನಿಗೆ ಬಾರಿಸುತ್ತಾರೆ ಎಂದು ಅವರಿಗೆ ಗೊತ್ತಿತ್ತು.ಕೆಲವೊಮ್ಮೆ ಹಾಡಿಗೆ ಪುಸ್ತಕ ಹಿಡಿದು ಹೋಗಿ ಕೂತುಕೊಳ್ಳುತ್ತಿದ್ದರು. ಹತ್ತಲಿಕ್ಕಾಗುವ ಸಣ್ಣ ಮರ ಇದ್ದರೆ ಮಂಗಗಳಂತೆ ಅದರ ಮೇಲೆ ಹತ್ತಿ ಕೂತು ಪುಸ್ತಕ ಬಿಡಿಸುತ್ತಿದ್ದರು.  ಒಂದೈದು ನಿಮಿಷ ಓದಲಿಕ್ಕಿಲ್ಲ, ಅಷ್ಟೊತ್ತಿಗೆ ಎಂತದೋ ನೆನಪಾಗಿ ಒಬ್ಬರನ್ನೊಬ್ಬರು ಕರೆದುಕೊಂಡು ಮಾತು ಶುರು ಮಾಡುತ್ತಿದ್ದರು. ಅದೂ ಸಹ ಒಂದ್ಹತ್ತು ನಿಮಿಷ ಅಷ್ಟೇ….. ಮರ ಇಳಿದು ಹಾಡಿ ತಿರುಗಲು ಆರಂಭಿಸುತ್ತಿದ್ದರು. ಯಾವುದಾದರೂ ಹಣ್ಣೋ, ಕಾಯೋ , ಚಿಗುರೋ, ಎಲೆಯೋ  ಹೀಗೆ ತಿನ್ನಲಿಕ್ಕಾಗುವುದು ಏನಾದರೂ ಇದೆಯಾ ಎಂದು ಹುಡುಕುತಿದ್ದರು. ಈ ವಿಷಯದಲ್ಲಿ ಇವರು ಮಂಗಗಳಿಗೇನೂ ಕಮ್ಮಿ ಇರಲಿಲ್ಲ. ವರ್ಷದ ಯಾವುದೇ ಕಾಲವಾಗಲಿ, ಈ ಮಕ್ಕಳಿಗೆ ಹಾಡಿಯಲ್ಲಿ ಎಂತಾದರೂ ತಿನ್ನಲು ಸಿಗುತ್ತಿತ್ತು!  ಮಳೆಗಾಲದ ಆರಂಭದಲ್ಲಾದರೆ ರಾಶಿರಾಶಿ ನೇರಳೆ, ಸಳ್ಳೆ ಹಣ್ಣು ಇರುತ್ತಿತ್ತು . ನೇರಳೆ ಹಣ್ಣು ತಿಂದು ಮುಖ ಮೈ ಅಂಗಿಗೆಲ್ಲ ಬಣ್ಣ ಮೆತ್ತಿಕೊಂಡು ಥೇಟ್ ಮಂಗನಾಗುತ್ತಿದ್ದರು ! ವೈಶಾಖದಲ್ಲಂತೂ ಕೇಳುವುದೇ ಬೇಡ; ಗರ್ಚ (ಕರಂಡೆ),  ಜಡ್ಡ್ ಮುಳ್ಳ್ ಹಣ್ಣು,ಸೂರಿಹಣ್ಣು, ಚಾಂಪಿಹಣ್ಣು ಇನ್ನೂ ಎಂತೆಂತದೆಲ್ಲ ಸಿಗುತ್ತಿತ್ತು. ಹಾಡಿಯಲ್ಲಿ ಹಣ್ಣೇ ಇಲ್ಲ ಎಂದಾದರೆ, ಗರ್ಚನ ಗಿಡ ಮತ್ತು ದುರ್ಕಲ ಗಿಡದ ಎಳೆಕಾಂಡವನ್ನು ತಿನ್ನುತ್ತಿದ್ದರು. ಗರ್ವಾಳ ಕಾಯಿ ಹುಡುಕುತ್ತಿದ್ದರು. ಯಾವ್ಯಾವುದೋ ಹುಳಿ ಸೊಪ್ಪನ್ನು ಬಾಯಿಗೆ ತುಂಬಿಕೊಳ್ಳುತ್ತಿದ್ದರು. ಇಷ್ಟೆಲ್ಲ ಆಗುವಾಗ ಓದುವುದು ಮರೆತುಹೋಗಿ ಕಾಡಿನ ಹಣ್ಣೋ, ಎಲೆಯೋ,  ಹಕ್ಕಿಯೋ, ಮೊಲವೋ ಯಾವ್ಯಾವುದರ ಕುರಿತೋ ಪಂಚಾಯಿತಿಗೆ ಮಾಡುತ್ತಾ ಮನೆ ತಲುಪುತ್ತಿದ್ದರು.  ಇನ್ನು ಕೆಲವೊಮ್ಮೆ ಓದುವ ರಜೆ ಕೊಟ್ಟಾಗ ಗಂಟಿ(ದನಕರು) ಎಬ್ಬಿಕೊಂಡು ಸುಮಾರು ದೂರ ಹೋಗುತ್ತಿದ್ದರು. ದನಗಳು ತಮ್ಮಷ್ಟಕ್ಕೆ ಹಸಿ ಮೇಯ್ದುಕೊಳ್ಳುವಾಗ ಅಲ್ಲೇ ಮರಗಳ ಬುಡದಲ್ಲಿ ದರಲೆಗಳ ಮೇಲೆ ಕುಳಿತು ಓದುತ್ತಿದ್ದರು . ಪರೀಕ್ಷೆಯ ರಜೆಯಲ್ಲಿ ಸ್ವಲ್ಪ ಗಂಭೀರವಾಗಿ ಓದಲು ತೊಡಗುತ್ತಿದ್ದರು. ಆಗಲೂ ಮಧ್ಯೆ ಎದ್ದು ಹೋಗಿ ಹಣ್ಣುಗಳನ್ನು ಹೊಟ್ಟೆಗೆ ಸೇರಿಸದೆ ಬಿಡುತ್ತಿರಲಿಲ್ಲ. ಹತ್ತನೇ ಕ್ಲಾಸಿನ ಪರೀಕ್ಷೆಗೆ ರಜೆ ಕೊಟ್ಟಾಗ ಚೋರಾಡಿ ಎಂಬಲ್ಲಿಗೆ ಹೋಗುವ ದಾರಿಯಲ್ಲಿ ಇರುವ ಗರ್ಚನ ಗಿಡಗಳ ಗುಡ್ಡೆಯಲ್ಲಿ ಗಂಟಿ ಬಿಟ್ಟುಕೊಂಡು ಒಬ್ಬಳೇ ಓದುತ್ತಾ ಕುಳಿತಿರುತ್ತಿದ್ದುದು ವಿಜಿಗೆ ಕಣ್ಣಿಗೆ ಕಟ್ಟಿದಂತೆ ನೆನಪಿಗೆ ಬರುತ್ತದೆ. ಪಿಯುಸಿಗೆ ಹೋಗುವಾಗ ನಾಗ್ ದೇವ್ರ್ ಬನದ ಸುರುಳಿ ಸುರುಳಿ ಸುತ್ತಿದ ದಪ್ಪ ಬೀಳಿನ ಮೇಲೆ ಕುಳಿತು ಓದಿದ್ದು ಅವಳಿಗೆ ನೆನಪಿದೆ. ಕೆಲವು ವಿಷಯಗಳನ್ನು ಅಲ್ಲಿ ಕೂತು ಬಾಯಿಪಾಠ ಮಾಡುತ್ತಿದ್ದಳು. ಅವಳಿಗೆ ಇಂಗ್ಲಿಷ್ ಸ್ವಲ್ಪ ಕಷ್ಟವಾದ್ದರಿಂದ ಹಾಗೆ ಕೆಲವು ಉತ್ತರಗಳನ್ನು ಕಂಠಪಾಠ ಮಾಡಿಕೊಳ್ಳುತ್ತಿದ್ದಳು.

 ವಿಜಿಯ ಮನೆಯಲ್ಲಿ’ ಆಚೆ ಒಳ’ ಅಂತ ಒಂದು ಪುಟಾಣಿ ಕೋಣೆಯಿತ್ತು. ಅದಕ್ಕೊಂದು ಸಣ್ಣ ಕಿಟಕಿ. ಮೇಲೆ ಮುಚ್ಚಿಗೆಯ ಮಾಡು. ಆ ಕೋಣೆಯಲ್ಲಿ ಅಕ್ಕಿಮುಡಿ ಗಳನ್ನು ಸಂಗ್ರಹಿಸಿಡುತ್ತಿದ್ದರು. ಉಳಿದ ಜಾಗದಲ್ಲಿ ಒಂದು ಮರದ ಪೆಟ್ಟಿಗೆ, ಟ್ರಂಕ್ ಮತ್ತು ಕೆಲವು ದಿನನಿತ್ಯ ಉಪಯೋಗಿಸದ ಪಾತ್ರೆಗಳು , ಹಪ್ಪಳದ ಕಟ್ಟಿನ ಡಬ್ಬಗಳು, ಹಿಟ್ಟಿನ ಡಬ್ಬ, ಶಾವಿಗೆ ಒರಳು ಮುಂತಾದುವೆಲ್ಲ ಇದ್ದವು. ತುಂಬಾ ಚಳಿ ಇದ್ದಾಗ ಅಥವಾ ಮನೆಗೆ ಯಾರಾದರೂ ನೆಂಟರು ಬಂದು ಹೊರಗೆ ಕುಳಿತು ಓದಲಾಗದ ಸಮಯದಲ್ಲಿ ಆ ಸಣ್ಣ ಕೋಣೆಯ ಸಣ್ಣಜಾಗದಲ್ಲಿ ವಿಜಿ ಓದಿ ಕೊಳ್ಳುತ್ತಿದ್ದಳು. ಹಾಗೊಂದು ಸಲ ಚಿಮಣಿದೀಪ ಇಟ್ಟುಕೊಂಡು ಕುಳಿತಿದ್ದಳು. ಮನೆಗೆ ಯಾರೋ ನೆಂಟರೆಲ್ಲ ಬಂದ ಸಮಯವಾದ್ದರಿಂದ ಗಲಾಟೆ ಕೇಳುತ್ತದೆ ಎಂದು ಕೋಣೆಯ ದಪ್ಪಬಾಗಿಲನ್ನು ಎಳೆದು ಹಾಕಿದ್ದಳು .ಕಿಟಕಿಯು ಮಾಮೂಲಿಯಂತೆ ಹಾಕಿಕೊಂಡಿತ್ತು .ಅದಲ್ಲದೆ ಅಕ್ಕಿ ಮುಡಿಗಳು ಬೆಚ್ಚಗಿರಬೇಕು ಎಂದು ಆ ಕಿಟಕಿಗೆ ಯಾವಾಗಲೂ ಒಂದು ಪ್ಲಾಸ್ಟಿಕ್ಕಿನ ಹಾಳೆಯನ್ನು ಹೊಡೆದಿರುತ್ತಿದ್ದರು. ಈ ಸಂದರ್ಭದಲ್ಲಿ ಬಾಗಿಲು ತೆಗೆದು  ಬಂದ ಅಣ್ಣ” ಅಯ್ಯೋ ಇಂಥ ಹೊಗೆಯಲ್ಲಿ ಕುಳಿತು ಓದುವುದಾ!? ಆರೋಗ್ಯಕ್ಕೆ ಒಳ್ಳೆಯದಲ್ಲ, ಕಿಟಕಿ ತೆಗೆದಿಡಬೇಕು ” ಎಂದು ಉದ್ಗರಿಸಿದ್ದ, ಏಕೆಂದರೆ ಹೊಗೆ ಕೋಣೆಯನ್ನೆಲ್ಲಾ ತುಂಬಿ ಉಸಿರುಕಟ್ಟುವಂತೆ ಆಗಿತ್ತು . ಆದರೂ ಅದು ವಿಜಿಗೆ ಗೊತ್ತಾಗಿರಲಿಲ್ಲ. ಆದರೆ ಸಾಮಾನ್ಯವಾಗಿ ಅವಳು ಓದುತ್ತಿದ್ದುದು ಹೊರಗೆ ಚಾವಡಿ – ಜಗಲಿಯಲ್ಲಿ ಅಥವಾ ಉಪ್ಪರಿಗೆಯಲ್ಲಿ. ಅಲ್ಲಾದರೆ ಚೆನ್ನಾಗಿ ಗಾಳಿಯಾಡುವಂತಿತ್ತು .

ಈ ಮೊದಲೇ ಹೇಳಿದಂತೆ ವಿಜಿಯ ಊರಿಗೆ ಕರೆಂಟ್ ಬರುವಾಗ ಅವಳಂತಹ ಮಕ್ಕಳೆಲ್ಲ ಪಿಯುಸಿ ಮುಗಿಸಿಯಾಗಿತ್ತು. ಚಿಮಣಿ ದೀಪದ ಬೆಳಕಲ್ಲಿ ಓದುವಾಗ ದೀಪಕ್ಕೆ ಆಕರ್ಷಿತವಾಗಿ ಕುಟ್ಟೆ, ಹಾತೆ, ಮಿಡತೆ, ಮಳೆಹಾತೆ ಒರ್ಲೆಹಾತೆ ಹೀಗೆ ವಿಧವಿಧ ಕೀಟಗಳು ಬಂದು ದಾಳಿ ಮಾಡುತ್ತಿದ್ದವು. ಕೆಲವು ದೀಪಕ್ಕೆ ಬಿದ್ದು ಸುಟ್ಟು ಸತ್ತೂ ಹೋಗುತ್ತಿದ್ದವು. ಮತ್ತೆ ಕೆಲವು ಮೈಮುಖದ ಮೇಲೆ ಕೂತು ಕಿರಿಕಿರಿ ಕೊಡುತ್ತಿದ್ದವು. ಕೆಲವೊಮ್ಮೆ ದೀಪದ ಬುಡದಲ್ಲಿ ರಾಶಿರಾಶಿ ಬಂದು ಬೀಳುತ್ತಿದ್ದವು. ಚಿಮಣಿದೀಪದಲ್ಲಿ ಮಕ್ಕಳು ಓದುವುದು ಕಷ್ಟ ಎಂದು ಮನಗಂಡ ಅಪ್ಪಯ್ಯ ಲ್ಯಾಂಪು ತರುತ್ತಿದ್ದರು. ಸಣ್ಣ ಲ್ಯಾಂಪು ಕೋಣೆಯಲ್ಲಿ ಮೊಳೆಗೆ ಸಿಕ್ಕಿಸಿ ಇಡಲಾದರೆ , ದೊಡ್ಡ ಲ್ಯಾಂಪು ಓದಲಿಕ್ಕೆ. ಒಂದು ಸಲ ಸುಮಾರು ದೊಡ್ಡ ಲ್ಯಾಂಪ್ ತಂದಿದ್ದರು. ಅದರ ಬುರುಡೆ ಸೋರೆಕಾಯಿಯ ಗಾತ್ರಕ್ಕಿತ್ತು! ಮತ್ತೊಂದು ಸಲ ಸಪೂರ ಬುರುಡೆಯ ನೋಡಲು ವಿಚಿತ್ರವಾಗಿರುವ ಲ್ಯಾಂಪನ್ನು ತಂದುಕೊಟ್ಟಿದ್ದರು . ಅದು ಚೀನಿ ಲ್ಯಾಂಪಂತೆ! ಯಾಕೆ ಆ ಹೆಸರು ಬಂದದ್ದೋ ಗೊತ್ತಿರಲಿಲ್ಲ. ಚೀನಾದವರು ಅಂತಾ ಲ್ಯಾಂಪು ಉಪಯೋಗಿಸುತ್ತಾರೋ  ಏನೋ ಎಂದು ಅವಳು ಅಂದುಕೊಂಡಿದ್ದಳು. ಇಂತಹ ಲ್ಯಾಂಪುಗಳಲ್ಲಾದರೆ ಓದಲು ಸ್ವಲ್ಪ ಆರಾಮವೆನಿಸುತ್ತಿತ್ತು. ಹೊಗೆ ಮುಖಕ್ಕೆ ಬಡಿಯುವುದಿಲ್ಲ ಮತ್ತು ಜಾಸ್ತಿ ಪ್ರಕಾಶ ಬೀರುತ್ತಿತ್ತು. ಅವರ ಮನೆಯ ಎಡಬದಿಯಲ್ಲಿ ಒಂದು ಸಪೂರ ಚಿಟ್ಟೆ (ದಂಡೆ ) . ಅದರ ಕೆಳಗೆ ಗದ್ದೆ. ಅಲ್ಲಿ ಉದ್ದಾನುದ್ದಕ್ಕೆ ಊರಿನ ಎಲ್ಲರ ಮನೆಯ ಗದ್ದೆಗಳು ಹಬ್ಬಿಕೊಂಡಿದ್ದವು. ಗದ್ದೆಯ ಇನ್ನೊಂದು ಬದಿಗೆ ಕಾಡು . ಮನೆಯ ಬಲಭಾಗದಲ್ಲಿ ತೋಟ; ಅದನ್ನು ದಾಟಿದರೆ ಕಾಡು. ಇಂತಹ ಗದ್ದೆ, ಕಾಡುಗಳ ನಡುವೆ ರಾತ್ರಿಯ ದಟ್ಟಕತ್ತಲು, ನೀರವತೆ…. ನಡುನಡುವೆ ಇರುಳ ಸದ್ದುಗಳು, ಕೆಲವೊಮ್ಮೆ ತೋಟದ ಕಡೆಯಿಂದ ಗುಮ್ಮಗಳ ಕೂಗು. ಒಂದು ಗುಮ್ಮ ‘ಹೂಂ’ ಎಂದರೆ ಇನ್ನೊಂದು ಗುಮ್ಮ ‘ಹೂಂಊಂಹೂಂ’ ಎಂದು ಉತ್ತರ ಕೊಡುತ್ತಿತ್ತು! ಹಾಡಿಯಲ್ಲಿ ನೀರಿಗೆ ಕಲ್ಲು ಹಾಕಿದಂತೆ ಕೂಗುವ ಯಾವುದೋ ರಾತ್ರಿಹಕ್ಕಿಯ ಕೂಗು . ಆಗಾಗ ನಾಯಿಗಳ ನೀಳ ಬೊಗಳು. ಮಳೆಗಾಲವಾದರೆ ಮನೆಯೆದುರಿನ ಗದ್ದೆಯಲ್ಲಿ ಅಸಂಖ್ಯಾತ ಕಪ್ಪೆಗಳ, ಕೀಟಗಳ  ಸದ್ದು ಅಥವಾ’ಜೈಲ್’ ಎಂದು ಸುರಿಯುವ ಮಳೆಯ ಶಬ್ದ. ಮನೆಯೊಳಗೆ ಕುಳಿತು ಓದಿನಲ್ಲಿ ಮುಳುಗುವ ವಿಜಿಗೆ ಸುತ್ತಲಿನ ಪರಿಸರ ನಿಜಕ್ಕೂ ಸಹಕಾರಿಯಾಗಿತ್ತು. ಓದು ಎಂದರೆ ಬರೀ ಶಾಲೆ ಪುಸ್ತಕದ ಓದಷ್ಟೇ ಅಲ್ಲ, ಆರನೇ ತರಗತಿಯಲ್ಲೇ ಅವಳು ಕತೆ ಕಾದಂಬರಿಗಳನ್ನು ಓದಲು ಶುರು ಮಾಡಿದ್ದಳು. ಅವರ ಮನೆಯಲ್ಲಿದ್ದ ಕುವೆಂಪು, ಕಾರಂತರ ಪುಸ್ತಕಗಳು ಮತ್ತು ಇತರ ಪುಸ್ತಕಗಳು, ವಾರಪತ್ರಿಕೆ, ಮಾಸ ಪತ್ರಿಕೆಗಳನ್ನು ಓದುತ್ತಿದ್ದಳು.  ಹಗಲೆಲ್ಲ ಶಾಲೆ, ಮನೆಕೆಲಸ ಹೀಗೆ ಸಮಯ ಕಳೆದುಹೋಗುತ್ತಿತ್ತು. ರಾತ್ರಿ ಶಾಲೆಯ ಓದಿನ ನಂತರ ಕಥೆ ಪುಸ್ತಕಗಳನ್ನು ಓದುವುದು ಸ್ವಲ್ಪ ದೊಡ್ಡವಳಾಗುತ್ತಿದ್ದಂತೆ ಪ್ರಾರಂಭವಾಗಿ ಮುಂದುವರೆಯಿತು. ಶಾಲೆಯ ಓದು ಅನಿವಾರ್ಯವಾಗಿತ್ತು ; ಅದಲ್ಲದೆ ಓದಲೇಬೇಕೆಂಬ ಛಲ, ಹಠವೂ ಇತ್ತು. ಇತರ ಪುಸ್ತಕಗಳ ಓದು ಮಾತ್ರ ಹೊಸ ಲೋಕವೊಂದನ್ನು ಪರಿಚಯಿಸಲು ಸಹಕಾರಿಯಾಯಿತು.

***

One thought on “ಜಂಬಿಕೊಳ್ಳಿ ಮತ್ತು ಪುಟ್ಟವಿಜಿ

  1. ಚೆನ್ನಾಗಿದೆ ಲೇಖನ ಆಗಿನ ಮಕ್ಕಳ ಓದಿನ ಸ್ವಾತಂತ್ರ ಮತ್ತು ತಾನಾಗೇ ಹುಟ್ಟಿಕೊಳ್ಳುವ ಆಸಕ್ತಿ . ನಮ್ಮ ಬಾಲ್ಯವೂ ಹೀಗೆ ಇತ್ತು ನಮ್ಮನ್ನು ಬಾಲ್ಯಕ್ಕೆ ಮರಳಿಸಿತು ನಾವು ಬಯಲು ಸೀಮೆಯ ಮಕ್ಕಳಾಗಿದ್ದರೂ ಅನುಭವಗಳಲ್ಲಿ ಸಾಮ್ಯತೆ ಇದೆ

Leave a Reply

Back To Top