ಗಝಲ್

ಮಾಲತಿ ಹೆಗಡೆ

ಇಳೆಯ ಕೊಳೆಯನು ತೊಳೆದು ಹರಸಿದೆ ಮುಂಗಾರು ಮಳೆ
ಕಂಗೆಟ್ಟ ರೈತರ ಕಣ್ಣಲ್ಲಿ ಕನಸು ಬಿತ್ತುತ್ತದೆ ಮುಂಗಾರು ಮಳೆ‌‌

ಬಿರು ಬಿಸಿಲ ಕಡು ತಾಪದಲಿ ಬೆಂದಿವೆ ಜೀವಕೋಟಿ
ಎಲ್ಲರ ಬಾಳಿಗೆ ಭರವಸೆಯಾಗಿ ಬೀಳುತ್ತದೆ ಮುಂಗಾರು ಮಳೆ

ಕಾದು ಕಾದು ಬಿರಿದ ಭುವಿಯ ತಣಿಸಲು ಬೇಕು ವರ್ಷಧಾರೆ
ಮಣ್ಣಿನಲಿ ಅವಿತ ಬೀಜವ ಮೊಳೆಯಿಸುತ್ತದೆ ಮುಂಗಾರು ಮಳೆ

ಕರಿಮುಗಿಲು ಕರಕರಗಿ ಹನಿ ಮುತ್ತಾಗಿ ಬೀಳುವುದೇ ಸೊಗ
ಎಷ್ಟೇ ಅಬ್ಬರಿಸಿ ಬೊಬ್ಬಿದರೂ ಹಿತನಿಸುತ್ತದೆ ಮುಂಗಾರು ಮಳೆ

ಮಾಲತಿಯ ಮನದಲ್ಲಿ ತುಂಬಿತ್ತು ಸಾವು ನೋವಿನ ಭೀತಿ
ಹೊಸ ಹಸುರ ಹುಟ್ಟಿನ ಹರುಷ ಹಂಚುತ್ತದೆ ಮುಂಗಾರು ಮಳೆ

************

7 thoughts on “ಗಝಲ್

  1. ಮಳೆ ಹನಿ ಬಿದ್ದಂತ ಎಲೆ ಫೋಟೋ ಕಣ್ಣಿಗೆ ಮುದ ನೀಡ್ತ್ತು.ಹಾಗೆಯೇ ಗಜಲ್ ಸೂಪರ್
    ಮನದಲ್ಲಿ ಸಾವು ನೋವಿನ ಭೀತಿ ಬೇಡ

Leave a Reply

Back To Top