ಕಾವ್ಯ ಸಂಗಾತಿ
ಎಮ್ಮಾರ್ಕೆ
ಕೆಂಪಿ,ಸ್ಥಿ(ಗ)ತಿಯ ಬದಲಿಸಿದವಳು


ಹರಕಲು ಬಟ್ಟೆ,ಹಸಿದ ಹೊಟ್ಟೆ
ಚಪ್ಪಲಿ ಕಂಡಿರದ ಕಾಲುಗಳು,
ಬಾಡಿದ ಮೊಗ,ಕಾಡುವ ಜಗ
ಬಾಚಣಿಕೆಯ ಕಾಣದ ಕೇಶವು
ಬುದ್ಧಿ ಬಂದಾಗಿನಿಂದ ಅರಿವಿಲ್ಲ
ತಂದೆ-ತಾಯಿ ಇರದ ಅನಾಥಳು,
ಹಿಂದು-ಮುಂದಿನದರ ಪರಿವಿಲ್ಲ
ಸದ್ಯ ಸಂಕಷ್ಟಕೆ ಪಾಲುದಾರಳು
ಹಸುಳೆಯಾಗಿದ್ದಾಗಲೇ ಹಸಿವು
ಹೊತ್ತು ಗಲ್ಲಿ ಗಲ್ಲಿ ಸುತ್ತಿದವಳು,
ತುತ್ತು ಕೂಳಿಗಾಗಿ ಗೋಳಾಡುತ
ಭಿಕ್ಷೆಯ ಶಿಕ್ಷೆಗೆ ಗುರಿಯಾದವಳು
ಇಂದೆಲ್ಲಕೂ ಪೂರ್ಣವಿರಾಮವ
ಇಟ್ಟು ಕೆಂಪಿ ಗಟ್ಟಿಗಿತ್ತಿಯಾದವಳು,
ತನ್ನಂತೆ ಬೇರಾವ ಹೆಣ್ಣು ಕೂಡಾ
ಕೇಡಿಗೀಡಾಗದಂತೆ ಕಾಯುತಿಹಳು
ಕೆಂಪಿ ಕೊರಳು ತಾಳಿಯ ಕಂಡಿಲ್ಲ
ತಾಳಿ ವಯ ವ್ಯಯವಾಯಿತಷ್ಟೇ,
ಸಂಸಾರದ ಸುಖವಂತೂ ಉಂಡಿಲ್ಲ
ಜಂಟಿಯಾದುದು ಒಂಟಿತನವಷ್ಟೇ
ಹೆಣ್ಣು ಮಕ್ಕಳಿಗಾಗಿ ಉಚಿತ ಶಿಕ್ಷಣ,
ಉದ್ಯೋಗ,ಆರೋಗ್ಯ ಕಲ್ಪಿಸಿದಳು,
ತಾನು ನುಂಗಿದ್ದು ಮಾತ್ರ ಕತ್ತಲನ್ನೇ
ಪ್ರತಿಯಾಗಿ ಬೆಳಕು ನೀಡಿದವಳು
ಆ(ತೀ)ರದ ಕಿ(ಹು)ಚ್ಚು ಹೊತ್ತಿಹ
ಕೆಂಪಿ ಪದಗಳಿಗೆ ನಿಲುಕದವಳು,
ಬರಿ ಹೆಣ್ಣಲ್ಲ,ಜಗದ ಕಣ್ಣಾಗುತಲೇ
ಸ್ಥಿ(ಗ)ತಿಯ ಬದಲಿಸಿ ನಿಂತವಳು
——————-
ಎಮ್ಮಾರ್ಕೆ

ಅತ್ಯುತ್ತಮ ಕವನ