ಕಾವ್ಯ ಸಂಗಾತಿ
ಡಾ.ಉಮೇಶ್ ಟಿ.ಪಿ. ಹೊಳಲ್ಕೆರೆ
ʼಮಹಾತ್ಮನ ಗುರುತು

ಅರಳಿದ ಹೂವುಗಳ ಗಮನಿಸಿರಿ
ಮಕ್ಕಳ ನಗುವನ್ನು ಆಸ್ವಾದಿಸಿರಿ
ರೈತರ ಮೈ ಬೆವರ ಘಮ ಸಹಿಸಿರಿ
ಹೆಂಗಳೆಯರ ಮಾತುಗಳ ಆಲಿಸಿರಿ
ಮಣ್ಣಿನ ಕಣಕಣವನ್ನು ಪೂಜಿಸಿರಿ
ಸಿಗುವನು…. ಮಹಾತ್ಮ!
ಎಲ್ಲ ಗೆರೆಗಳಿಗೆ ಸಿಕ್ಕವನು
ಎಲ್ಲ ಎಲ್ಲೆಗಳಿಗೆ ಕಾಣುವನು
ಎಲ್ಲ ಮಿತಿಗಳಿಗೆ ಒಗ್ಗಿದವನು
ಎಲ್ಲ ನೀರಿನಲ್ಲಿ ಕರಗಿದವನು
ಎಲ್ಲ ಗಾಳಿಯಲ್ಲಿ ಸುಳಿದವನು
ಎಲ್ಲ ನೆಲಗಳಲ್ಲಿ ಚಿಗುರಿದವನು
ಎಲ್ಲ ಹಾದಿಯಲ್ಲಿ ನಡೆದವನು
ಎಲ್ಲರ ದಾರಿಯ ಮುಳ್ಳು ಕಲ್ಲು ಸರಿಸಿದವನು
ಮಹಾತ್ಮನವನು!
ಗುರುತು….
ನಾನು ನೀನು ಮರೆತರು;
ಹೆತ್ತ ಭೂಮಿ ಮರೆಯದು!
ಬಚ್ಚ ಬಾಯಿಯ ಹಚ್ಚ ನಗುವಿನ
ಖಂಡ ಕಾಣುವ ತುಂಡು ಉಡುಗೆಯ
ದಡಬಡ ನಡಿಗೆಯ ಬಡಬಡ ಮಾತಿನ
ತನ್ನದೆಲ್ಲವ ಮನುಕುಲಕೆಂದು ಬಿಟ್ಟವನ
ಸ್ವಾತಂತ್ರ್ಯದ ನಿಜ ಅರ್ಥ ತಿಳಿದಿದ್ದವನ
ನಾನು ನೀನು ಮರೆತರು
ಗಾಳಿ ನೀರು ಬೆಂಕಿ ಗಗನ ಗ್ರಹ ತಾರೆಗಳು ಮರೆಯರು!
ಈ ಭೂಮಿ ಮರೆಯದು!
ಇದು ಮಹಾತ್ಮನ ಗುರುತು!
ಇಷ್ಟು ಸಾಕು
ಗುರುತು ಬೇಡೆಂದವನ ಗುರುತಿಡುವ
ಗುರುತೇ ಇರದ ನಾ – ನೀನೇಕೆ ಬೇಕು?
———————————
ಡಾ.ಉಮೇಶ್ ಟಿ.ಪಿ. ಹೊಳಲ್ಕೆರೆ
