
ಅಂಕಣ ಸಂಗಾತಿ
ಅನುಭಾವ
ಡಾ.ಸಾವಿತ್ರಿ ಮಹಾದೇವಪ್ಪ ಕಮಲಾಪುರ
ಅಕ್ಕಮಹಾದೇವಿಯವರ ವಚನ

ಒಳಗೆ ಶೋಧಿಸಿ ಒಳಗೆ ಶುದ್ಧವಿರಿಸಿ
ಒಳಹೊರಗೆಂಬ ಉಭಯ ಶಂಕೆಯ ಕಳೆದು
ಸ್ಪಟಿಕದ ಸಲಾಕೆಯಂತೆ ತಲೆವೆಳಗು ಮಾಡಿ
ಸುಕ್ಷೇತ್ರವನರಿದು ಬೀಜವ ಬಿತ್ತುವಂತೆ
ಶಿಷ್ಯನ ಸರ್ವ ಪ್ರಪಂಚ ನಿವೃತ್ತಿ ಮಾಡಿ ನಿಜೋಪದೇಶವನಿತ್ತು
ಆ ಶಿಷ್ಯನ ನಿಜದಾರಿಯ ನೈದಿಸುವನೀಗ ಜ್ಞಾನ ಗುರು
ಆ ಸಹಜ ಗುರುವಿಗೆ ಜಗದಾರಾಧ್ಯರು ಅವರ ಶ್ರೀಪಾದಕ್ಕೆ ನಮೋ ನಮೋ ಎಂಬೆ
ಕಾಣಾ ಚೆನ್ನಮಲ್ಲಿಕಾರ್ಜುನ
________
ಗುರು ಸ್ಥಾನದಲ್ಲಿರುವ ಗುರುವಿನ ಆಂತರಿಕ ಹಾಗೂ ಬಾಹ್ಯ ಮನಗಳೆರಡು ಶುದ್ಧವಾಗಿದ್ದಂತೆ ,ತನ್ನ ಶಿಷ್ಯನ ಮನವೂ ಕೂಡಾ ಆಂತರಿಕ ಹಾಗೂ ಬಾಹ್ಯ ಮನಗಳೆರಡೂ ಶುದ್ಧವಾಗಿರಬೇಕು ಎಂದು ಬಯಸುವ ಗುರು ಸರ್ವ ಶ್ರೇಷ್ಠ.
ಸಮಾಜದಲ್ಲಿ ಗುರು ಸ್ಥಾನದಲ್ಲಿ ಇರುವ ವ್ಯಕ್ತಿಗೆ ತುಂಬಾ ಗೌರವ ಭಾವನೆ ಇರುತ್ತದೆ .ಆ ಗೌರವ ಭಾವನೆಯನ್ನು ಉಳಿಸಿಕೊಂಡು ಹೋಗುವುದು ಗುರುವಿಗೆ ಇರಬೇಕು .
ಗುರುವು ಲಘುವರ್ತನದಲ್ಲಿ ವರ್ತಿಸಬಾರದು .ಗುರು ಲಿಂಗ ಜಂಗಮವನ್ನು ಹಗುರವಾಗಿಯೂ ಭಾವಿಸಬಾರದು .
ಗುರು ಅಹಂಕಾರ ರಹಿತ ಶುದ್ಧ ಜ್ಞಾನವನ್ನು ಹೊಂದಿದ ,ಉತ್ತಮ ವ್ಯಕ್ತಿತ್ವವನ್ನು ಹೊಂದಿರುವ ಗುರುವು .
ತನ್ನ ಶಿಷ್ಯರನ್ನು ಆಯ್ಕೆ ಮಾಡಿಕೊಳ್ಳುವ ಗುರು .ಆಂತರಿಕ ಹಾಗೂ ಬಾಹ್ಯ ಮನಗಳು ಎರಡೂ ಒಂದೇ ಆಗಿದ್ದು ,
ನಿತ್ಯ ಪರಿಶೋಧಕನಾಗಿರುವ ಗುರುವು ,ತನ್ನ ಆಂತರಿಕ ಹಾಗೂ ಬಾಹ್ಯ ವಾಗಿ ಮನದ ಎರಡೂ ಶಂಕೆ ಕಳೆದು ಪರಿಶುದ್ಧತೆಯ ನಡೆಯನ್ನು ಹೊಂದಿರುವ ಗುರುವಿನ ಮನವನ್ನು ಅಕ್ಕನವರ ಈ ನುಡಿಯಲ್ಲಿ ಕಾಣಬಹುದು.
ಒಳಗೆ ಶೋಧಿಸಿ ಒಳಗೆ ಶುದ್ಧವಿಸಿ ಒಳಹೊರಗೆಂಬ ಉಭಯ ಶಂಕೆಯ ಕಳೆದು
ಗುರುವು ಅಂತರಂಗ ಹಾಗೂ ಬಹಿರಂಗದ ಸಂಶಯವನ್ನು ಕಳೆಯುವನು.
ಬಾಹ್ಯ ದಲ್ಲಿ ಹೇಗೋ ಅಂತರಂಗದಲ್ಲಿಯೂ ಅದೇ ನಡೆಯನ್ನು ಕಂಡುಕೊಂಡು ಸಾಗುವ ಗುರು ಸನ್ಮಾರ್ಗ ಸಾಧಕನಾಗಿ ನಿಲ್ಲುವನು .
ಗುರುವಿಗೆ ಯಾವುದೇ ಭೇದ ಭಾವ ಇರುವುದಿಲ್ಲ. ಭೇದ ಭಾವ ಮಾಡುವ ಗುರುವು ಗುರುವು ಎನಿಸಿಕೊಳ್ಳಲಾರ .ಗುರುವಿನ ನಡೆಯು ಯಾವಾಗಲೂ ಏಕಮೂಖವಾಗಿರಬೇಕಾಗುತ್ತದೆ .
ತನ್ನ ಅಂತರಂಗ ಹಾಗೂ ಬಾಹ್ಯ ಮನಗಳು ಒಂದೇ ಆಗಿರುವ ಗುರು ನನ್ನ ಮನದ ಶಂಕೆಯ ಕಳೆದು ಮನ ಶುದ್ಧ ಗೊಳಿಸಿದ ಗುರುವಿಗೆ ನಮೋ ಎನ್ನುವೆ ಎನ್ನುವರು ಅಕ್ಕ.
ಸ್ಪಟಿಕದ ಸಲಾಕೆಯಂತೆ ತಲೆವೆಳಗು ಮಾಡಿ .
ಸುಕ್ಷೇತ್ರವನರಿದು ಬೀಜವ ಬಿತ್ತುವಂತೆ
ಸ್ಪಟಿಕದ ಹರಳಿನ ಸಲಾಕೆ ಬಹು ನಿರ್ಮಲವಾಗಿರುತ್ತದೆ. ಆ ಹರಳಿನ ಗಟ್ಟಿಯ ಕೆಳಗೆ ಒಂದು ಕೆಂಪು ಹೂವನ್ನಿರಿಸಿ ಮೇಲಿಂದ ನೋಡಿದರೆ ಇಡೀ ಹರಳೇ ಕೆಂಪಾಗಿ ಕಾಣುವುದು . ಅಂತೆಯೇ ನಮ್ಮ ಮಾತುಗಳು ನಮ್ಮ ಹೃದಯವನ್ನು ಸಂಪೂರ್ಣವಾಗಿ ಪ್ರತಿಬಿಂಬಿಸುವಂತಿರಬೇಕು. ಒಳಗಿನ ಆಂತರಿಕ ಮನಸ್ಸು ಕುಟಿಲದಿಂದ ಹೊರಗೆ ವಿಷಯದಿಂದ ಇರಬಾರದು ಎರಡೂ ಮನಗಳು ಒಂದೇ ಆಗಿದ್ದು ,
ಅಂಥಹ ಮನದ ಶಿಷ್ಯರನ್ನು ಗುರು ಆಯ್ಕೆಮಾಡಿಕೊಂಡು ,
ಹೇಗೆ ಒಳ್ಳೆಯ ಬೀಜವನ್ನು ಬಿತ್ತಲು ಒಳ್ಳೆಯ ನೆಲವನ್ನು ಆಯ್ದುಕೊಂಡ ತೆ. ಉತ್ತಮ ನೆಲದಲ್ಲಿ ಉತ್ತಮ ಬೀಜ ಬಿತ್ತಿ ಉತ್ತಮ ಬೆಳೆಯನ್ನು ಬೆಳೆಯುವಂತೆ
ಗುರುವು ನನ್ನನ್ನು ಆಯ್ಕೆಮಾಡಿಕೊಂಡಿರುವ ಗುರುವಿಗೆ ನಮೋ ನಮೋ ಎನ್ನುವೆ ಎನ್ನುವರು ಅಕ್ಕ.
ಶಿಷ್ಯನ ಸರ್ವ ಪ್ರಪಂಚ ನಿವೃತ್ತಿ ಮಾಡಿ ನಿಜೋಪದೇಶವನಿತ್ತು
ಆ ಶಿಷ್ಯನ ನಿಜದಾರಿಯ ನೈದಿಸುವನೀಗ ಜ್ಞಾನ ಗುರು
ಆ ಸಹಜ ಗುರುವಿಗೆ ಜಗದಾರಾಧ್ಯರು ಅವರ ಶ್ರೀಪಾದಕ್ಕೆ ನಮೋ ನಮೋ ಎಂಬೆ
ಕಾಣಾ ಚೆನ್ನಮಲ್ಲಿಕಾರ್ಜುನ
ಸಂಸಾರ ಎನ್ನುವ ಬಂಧನದಿಂದ ಬಿಡುಗಡೆಗೊಳಿಸಿ ಆತನಿಗೆ ಸತ್ಯದ ಮೂಲದೆಡೆಗೆ ಕೊಂಡೊಯ್ಯುವ, ಜ್ಞಾನದ ಕಾರ್ಯವು .ಇಂಥಹ ಶ್ರೀಗುರು ಆದ ಚೆನ್ನಮಲ್ಲಿಕಾರ್ಜುನ ಎನ್ನುವ ಅರಿವಿನ ಗುರು ಸ್ವರೂಪ ಲಿಂಗವೇ ನಿನಗೆ ನಮೋ ನಮೋ ಎನ್ನುವೆ .ಎನ್ನುವರು ಅಕ್ಕ.
ಇಂಥಹ ಅಸಹಜ ಗುರು ಇಡೀ ವಿಶ್ವಕ್ಕೆ ಗುರುವಾಗುವನು .ಇಂಥಹ ಶ್ರೇಷ್ಠ ಗುರುವಿಗೆ ಭಕ್ತಿಯಿಂದ ಪಾದಕ್ಕೆ ಎರಗಿ ನಮೋ ನಮೋ ಎನ್ನುವೆ ಎನ್ನುವರು ಅಕ್ಕ
ಡಾ ಸಾವಿತ್ರಿ ಕಮಲಾಪೂರ

Super