ಪ್ರಭಾವತಿ ದೇಸಾಯಿ ಅವರ ಗಜಲ್ ಸಂಕಲನ-ʼಸೆರಗಿಗಂಟಿದ ಕಂಪುʼ ಒಂದು ಅವಲೋಕನ ಡಾ. ಮಲ್ಲಿನಾಥ ಎಸ್. ತಳವಾರ ಅವರಿಂದ

ಸೆರಗಿಗಂಟಿದ ಕಂಪು ಗಜಲ್ ಸಂಕಲನ
-ಪ್ರಭಾವತಿ ದೇಸಾಯಿ
ಪ್ರಕಾಶನ – ದೇವನಾಂಪ್ರಿಯ ಪ್ರಕಾಶನ, ಮಸ್ಕಿ
ಬೆಲೆ -೧೫೦

ಸುಂದರ ಯುವಕರು ಪ್ರಕೃತಿಯ ಅಪಘಾತಗಳು, ಆದರೆ ಸುಂದರ ವೃದ್ಧರು ಕಲಾಕೃತಿಗಳು.”
– ಎಲೀನರ್ ರೂಸ್ವೆಲ್ಟ್

      ಅಳು-ನಗು ಒಂದೇ ನಾಣ್ಯದ ಎರಡು ಮುಖಗಳು ಎಂದು ಹೇಳಲಾಗುತ್ತದೆಯಾದರೂ ಈ ನಾಣ್ಯ ಮೇಲಕ್ಕೆ ಚಿಮ್ಮಿದಾಗ ಹೆಚ್ಚಿಗೆ ದರ್ಶನ ನೀಡುವುದೇ ‘ಅಳು’. ಅಂತೆಯೇ ಶರಣರು ‘ಸಾಸಿವೆಯಷ್ಟು ಸುಖಕ್ಕಾಗಿ ಸಾಗರದಷ್ಟು ದುಃಖ ನೋಡಾ’ ಎಂದಿದ್ದಾರೆ. ಇದನ್ನು ಇನ್ನೊಂದು ಅರ್ಥದಲ್ಲಿ “Life is a preparation for Death” ಎಂದೂ ಹೇಳುತ್ತಾರೆ. ಜೀವನದುದ್ದಕ್ಕೂ ನಗಲಾರದ ಮನುಷ್ಯರು ಇರಬಹುದು, ಆದರೆ ಅಳಲಾರದ ಮನುಷ್ಯ ಸಿಗಲಾರರು! ಅಂದರೆ ಎಷ್ಟೊ ಕಡೆಗಳಲ್ಲಿ, ಎಷ್ಟೊ ಜನರ ಜನರ ಜೀವನದಲ್ಲಿ ‘ನೋವು’ ಎಂಬುದು ಬದುಕಿನ ಸ್ಥಾಯಿ ಭಾವವಾಗಿರುವುದು ಮನದಟ್ಟಾಗುತ್ತದೆ. ಪ್ರತಿಯೊಂದು ಸುಂದರವಾದ ವಸ್ತುವಿನ ಹಿಂದೆ, ಕೆಲವು ರೀತಿಯ ನೋವು ಇರುತ್ತದೆ. ಸಿದ್ಧ ಮಾರ್ಗವನ್ನು ಅನುಸರಿಸುವುದು ಬಹು ಸುಲಭ. ಹೊಸದನ್ನು ರಚಿಸುವುದು ನೋವಿನಿಂದ ಕೂಡಿದೆ. ಆದರೆ ಅದು ನಮ್ಮನ್ನು ನಿಸ್ಸಂಶಯವಾಗಿ ಹೊಸ ಸ್ಥಳಗಳಿಗೆ ಕರೆದೊಯ್ಯುತ್ತದೆ. ‘ದುರಂತವನ್ನು ಶಕ್ತಿಯ ಮೂಲವಾಗಿ ಬಳಸಿಕೊಳ್ಳಬೇಕು’ ಎಂಬ ಮಾತಿದೆ. ಯಾವುದೇ ರೀತಿಯ ತೊಂದರೆಗಳು, ಎಷ್ಟೇ ನೋವಿನ ಅನುಭವವಾಗಿದ್ದರೂ, ನಾವು ನಮ್ಮ ಭರವಸೆಯನ್ನು ಕಳೆದುಕೊಂಡರೆ, ಅದು ನಮ್ಮ ನಿಜವಾದ ದುರಂತವಾಗುತ್ತದೆ. “ಎಲ್ಲ ಸಂಕಟಗಳ ಮೂಲ ಬಾಂಧವ್ಯ” ಎಂಬ ಬುದ್ಧನ ಮಾತು ಅಕ್ಷರಶಃ ಸತ್ಯ. ಆದರೆ ಮನುಷ್ಯ ಬಾಂಧವ್ಯಗಳನ್ನು ತೊರೆದು ಜೀವಿಸಲಾರ. ಇದೆಲ್ಲವನ್ನೂ ಗಮನಿಸಿದಾಗ ನೋವು ಮನುಷ್ಯನ ಸಂಗಾತಿ ಎಂದರೆ ಅತಿಶಯೋಕ್ತಿಯಾಗದು. ಯಾವ ನೋವೂ ಅನವಶ್ಯಕವಲ್ಲ. ಪ್ರತಿ ವೈಫಲ್ಯವೂ ಒಂದೊಂದು ಉಡುಗೊರೆ, ಪ್ರತಿ ನೋವು ಒಂದೊಂದು ಅವಕಾಶ ಎಂಬುದನ್ನು ಮರೆಯಬಾರದು. ನೋವು ನಮ್ಮನ್ನು ಬೆಳೆಯುವಂತೆ ಮಾಡುತ್ತದೆ. ಯಾರಿಗೆ ಬೆಳೆಯುವುದು ಬೇಕಾಗಿರುತ್ತದೆಯೊ ಅವರಿಗೆ ಆ ನೋವು ಸಹ ಸಂತೋಷ ನೀಡುತ್ತದೆ. ಏಕೆಂದರೆ ಮನುಷ್ಯ ಸಂತೋಷದಿಂದ ಕಲಿಯುವುದಕ್ಕಿಂತ ಹೆಚ್ಚಿನದನ್ನು ನೋವಿನಿಂದ ಕಲಿಯುತ್ತಾನೆ/ಳೆ. ದೀರ್ಘಾವಧಿಯ ಲಾಭಗಳನ್ನು ತಲುಪಲು ನಾವು ಅಲ್ಪಾವಧಿಯ ನೋವಿನ ಮೂಲಕ ಹೋಗಲೇಬೇಕು. ಕಾರಣ, ನೋವಿನ ಆಳವು ನಮ್ಮ ಭವಿಷ್ಯದ ಎತ್ತರದ ಸೂಚನೆಯಾಗಿದೆ.‌ ನಯವಾದ ಸಮುದ್ರಗಳು ಕೌಶಲ್ಯಪೂರ್ಣ ನಾವಿಕರನ್ನು ಮಾಡುವುದಿಲ್ಲ. ಇಂಥಹ ನೋವು, ವೇದನೆಗಳಿಗೆ ನಿಗದಿತವಾಗಿ ಒಂದು ಸ್ಪಷ್ಟವಾದ ವಿಳಾಸವಿರುವುದಿಲ್ಲ. ಇವು ಚಲನಶೀಲ ಗುಣವನ್ನು ಹೊಂದಿವೆ. ಹಾಗಂತ ಯಾವಾಗಲೂ ನೋವನ್ನು ಸಹಿಸಿಕೊಳ್ಳಬೇಕು ಅಂತಲ್ಲ. ಯಾವುದೇ ಒಂದು ನೋವನ್ನು ಅರ್ಥವಿರುವವರೆಗೂ ಮಾತ್ರ ಸಹಿಸಬೇಕು. ಅರ್ಥ ಕಳೆದುಕೊಂಡ ನೋವುಗಳು ನಮ್ಮ ಮೇಲೆ ಸವಾರಿ ಮಾಡುತಿದ್ದರೆ ನಾವು ಆ ನೋವಿಗೆ ದಾಸರಾಗಿದ್ದೇವೆಂದೆ ಅರ್ಥ. ಒಂದಂತೂ ಸತ್ಯ, ನಮ್ಮ ಅನುಮತಿಯಿಲ್ಲದೆ ಯಾರೂ ನಮ್ಮನ್ನು ನೋಯಿಸಲು ಸಾಧ್ಯವಿಲ್ಲ. ಹೆಚ್ಚಿನ ನೋವುಗಳು ನಮ್ಮ ಸ್ವಯಂ ಆಯ್ಕೆಗಳೇ ಆಗಿವೆ. ಇದರಿಂದ ಹೊರ ಬರುವ ದಾರಿಯೆಂದರೆ ಪ್ರೀತಿ. ಈ ‘ಪ್ರೀತಿ’ ಎನ್ನುವ ಎರಡಕ್ಷರದ ಪದವು ಜೀವನದ ಎಲ್ಲಾ ಭಾರ ಮತ್ತು ನೋವಿನಿಂದ ನಮ್ಮನ್ನು ಮುಕ್ತಗೊಳಿಸಬಲ್ಲದು. ನಾವು ಮಾಡುತ್ತಿರುವ ವೃತ್ತಿಯನ್ನು ಪ್ರೀತಿಸಬೇಕು. ಆವಾಗ ನಮಗೆ ಯಾವುದೇ ರೀತಿಯ ಅಂಗವೈಕಲ್ಯ ಅಥವಾ ನೋವು ತಟ್ಟುವುದಿಲ್ಲ. ಇಂಥಹ ನೋವನ್ನು ಪ್ರೀತಿಸುತ್ತಲೇ ನೋವಿನ ಶಮನ ಮಾಡುವ ಮರಮ್ ಅಂದರೆ ಮುಲಾಮು ಎಂದರೆ ಅದೂ ಉರ್ದು ಶಾಯರಿಯ ಜೀವ, ಮುಕುಟ ಗಜಲ್ ಎನ್ನಲು ಅಡ್ಡಿಯಿಲ್ಲ. “ನೋವಿನ ಚಿಕಿತ್ಸೆ ನೋವಿನಲ್ಲಿದೆ” ಎಂಬ ರೂಮಿಯ ಮಾತು ಗಜಲ್ ನ ಸ್ಥಾಯಿ ಭಾವವಾಗಿದೆ. ಯಾರದೋ ನಗುವಿಗೆ ನಮ್ಮ ನೋವು ಕಾರಣವಾಗಿರಬಹುದು. ಆದರೆ ನಮ್ಮ ನಗು ಯಾರ ನೋವಿಗೂ ಕಾರಣವಾಗಬಾರದು ಎಂಬುದೇ ಗಜಲ್ ನ ಧ್ವನಿಯಾಗಿದೆ. ಅಂದರೆ ಗಜಲ್ ನೋವನ್ನು ಪ್ರೀತಿಸುತ್ತದೆ, ಆದರೆ ಯಾರನ್ನೂ ನೋಯಿಸುವುದಿಲ್ಲ!

       ಕಾಲದ ಪ್ರಭಾವ ಅವಿರತ. ಯಾವುದೇ ಕಲಾಕೃತಿ ತಾನು ಸೃಷ್ಟಿಯಾದ ಸಂದರ್ಭದ ವಿಶಿಷ್ಟ ಧ್ವನಿಯನ್ನು ನಿಗೂಢ ರೀತಿಯಲ್ಲಿ ಹೊಂದಿರುತ್ತದೆ. “I have always painted for my time” ಎಂದು ಪಿಕಾಸೋ ಹೇಳಿರುವಂತೆ ಕಾಲ ಕಲಾವಿದನ ಸಂವೇದನೆಯನ್ನು ಜಗ್ಗಿ ಬದಲಿಸಬಲ್ಲದು. ಆದರೆ ‘ಪ್ರೀತಿ’ಯ ಸಂವೇದನೆ ಎಂದಿಗೂ ಬದಲಾಗದಂತಹ ಸಂವೇದನೆ. ಅಂದೂ ‘ಪ್ರೀತಿ’ಗಾಗಿ ಹೃದಯ ಮಿಡಿಯುತಿತ್ತು, ಇಂದೂ ಮಿಡಿಯುತ್ತಿದೆ; ನಾಳೆಯೂ ಮಿಡಿಯುತ್ತದೆ. ಇಂಥ ಪ್ರೀತಿಯ ರಾಯಭಾರಿಯೆಂದರೆ ‘ಗಜಲ್’. ಇದು ಜೀವಜಂತುಗಳ ಪ್ರೀತಿಯನ್ನು ಬೆಸೆಯುತ್ತದೆ, ಮನುಕುಲದಲ್ಲಿ ಒಲವಿನ ಸಹಬಾಳ್ವೆಯನ್ನು ಬಯಸುತ್ತದೆ. ಪ್ರೀತಿಯೇ ಇದರ ಸ್ಥಾಯಿ ಭಾವ. ಇದು ಪ್ರೀತಿಯನ್ನೇ ಹಾಸಿಕೊಂಡು, ಹೊದ್ದುಕೊಂಡಿದೆ; ಪ್ರೀತಿಯನ್ನೇ ಉಸಿರಾಡುತ್ತಿದೆ. ಈ ಸಮಾಜದ ಸಜೀವತೆ ಪ್ರೀತಿಯಲ್ಲಿದೆ. ಈ ಪ್ರೀತಿಯೇ ದಾನವರನ್ನು ಮಾನವರನ್ನಾಗಿ ಮಾಡಿರುವುದು. ಇಂಥಹ ಪ್ರೀತಿಯ ಪಲ್ಲಕಿ ಇಂದು ನಮ್ಮ ಕನ್ನಡ ಸಾರಸ್ವತ ಲೋಕದಲ್ಲಿ ಸದ್ದು ಮಾಡುತ್ತಿರುವುದು ರಸಿಕರಿಗೆ ಅಮೃತದೌತಣ ಬಡಿಸಿದಂತಾಗಿದೆ.

       ವಯಸ್ಸಾಗುವುದು ಎಂದರೆ ‘ಕಳೆದುಹೋದ ಯೌವನ’ ಎಂದಲ್ಲ, ಬದಲಿಗೆ ಅವಕಾಶ ಮತ್ತು ಶಕ್ತಿಯ ಹೊಸ ಹಂತ. ಏಕೆಂದರೆ ವಯಸ್ಸು ಕೇವಲ ಒಂದು ಸಂಖ್ಯೆ ಮಾತ್ರ. ಜೀವನ ಮತ್ತು ವೃದ್ಧಾಪ್ಯ ನಾವು ಪ್ರಾಯಶಃ ಹೊಂದಬಹುದಾದ ಶ್ರೇಷ್ಠ ಕೊಡುಗೆಗಳಾಗಿವೆ. ಕಾರಣ, ವೃದ್ಧಾಪ್ಯವು ನಿರಂತರವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ ಬುದ್ಧಿವಂತಿಕೆ, ಅನುಭವ ಮತ್ತು ಸ್ಥಿರತೆಯ ಮೂಲವಾಗಿದೆ. ಇದಕ್ಕೆಲ್ಲ ಅನ್ವರ್ಥಕನಾಮವೆಂದರೆ ಶ್ರೀಮತಿ ಪ್ರಭಾವತಿ ದೇಸಾಯಿಯವರು! ಎಪ್ಪತ್ತೆಂಟರ ಈ ಹರೆಯದಲ್ಲೂ ಅವರ ಉತ್ಸಾಹ ಯುವಜನತೆಯನ್ನು ನಾಚಿಸುವಂತಿದೆ. ಈ ಉತ್ಸಾಹವೇ ಅವರ ಯಶಸ್ಸಿನ ನಿಜವಾದ ರಹಸ್ಯವಾಗಿದೆ ಎಂದರೆ ತಪ್ಪಾಗಲಾರದು. ಇವರ ಉತ್ಸಾಹವು ಕೇವಲ ಲೌಕಿಕತೆಗೆ ಸೀಮಿತವಾಗಿಲ್ಲ, ಅಲೌಕಿಕ ಪ್ರಶಾಂತತೆಯಾಗಿದೆ. ೨೦೦೨ ರಿಂದ ಕನ್ನಡ ಸಾರಸ್ವತ ಲೋಕದಲ್ಲಿ ಸಾಹಿತ್ಯ ಕೃಷಿ ಮಾಡುತ್ತ ಬಂದಿರುವ ಇವರು ೨೦೦೭ ರಿಂದ ಗಜಲ್ ಜನ್ನತ್ ನಲ್ಲಿ ಪಾದರಸದಂತೆ ಸಕ್ರಿಯವಾಗಿದ್ದಾರೆ. ಇಲ್ಲಿಯವರೆಗೆ ಏಳು ಗಜಲ್ ಸಂಕಲನಗಳನ್ನು ಪ್ರಕಟಿಸಿದ್ದಾರೆ. (ಇದರಲ್ಲಿ ತರಹಿ ಹಾಗೂ ಜುಗಲ್ ಬಂಧಿ ಗಜಲ್ ಸಂಕಲನಗಳೂ ಸೇರಿವೆ) ಪ್ರಸ್ತುತ ‘ಸೆರಗಿಗಂಟಿದ ಕಂಪು’ ಎಂಟನೆಯ ಗಜಲ್ ಸಂಕಲನ. ಇದು ೧೦೨ ಗಜಲ್ ಗಳನ್ನು ಒಳಗೊಂಡಿದೆ. ಇವು ಹೆಚ್ಚಾಗಿ ೫ ಹಾಗೂ ೭ ಅಶ್ಆರ್ ಹೊಂದಿದ್ದು, ಕೆಲವು ೬ ಅಶ್ಆರ್ ಹೊಂದಿವೆ. ಇಲ್ಲಿಯ ಗಜಲ್ ಗಳು ಮುರದ್ಧಫ್, ಗೈರ್ ಮುರದ್ದಫ್, ಹುಸ್ನ್-ಎ-ಮತ್ಲಾ ಗಜಲ್ ಗಳಾಗಿವೆ. ಶಾಯರಾ ಪ್ರಭಾವತಿ ದೇಸಾಯಿಯವರು ಬಳಸುವ ತಖಲ್ಲುಸನಾಮ ಹಾಗೂ ರದೀಫ್ ಸಹೃದಯ ಓದುಗರ ಗಮನ ಸೆಳೆಯುತ್ತವೆ. ಅದರಲ್ಲಂತೂ ‘ಪ್ರಭೆ’ ಎನ್ನುವ ತಖಲ್ಲುಸನಾಮ ವಿವಿಧ ನೆಲೆಗಳಲ್ಲಿ ಬಳಕೆಯಾಗಿ ‘ತಖಲ್ಲುಸನಾಮ’ ಬಳಕೆಗೆ ಇವರು ‘ಉಸ್ತಾದ್’ ಆಗಿ ಕಂಗೊಳಿಸುತ್ತಾರೆ. ಹಲವು ಕಡೆ ಸಮತೂಕದ ಏಕ ಅಲಾಮತ್ ಕವಾಫಿ ಆಯಾ ಗಜಲ್ ಗಳಿಗೆ ಪರಿಪೂರ್ಣತೆಯ ಕಳೆ ನೀಡಿವೆ.

       ಸೆರಗಿಗಂಟಿದ ಕಂಪನ್ನು ಆಸ್ವಾದಿಸುತ್ತಾ ಹೋದಂತೆ ಪ್ರೀತಿ, ಪ್ರೀತಿಯ ಕನವರಿಕೆ, ಪ್ರೇಮದ ನಿವೇದನೆ, ಮೋಹ, ಮೋಸ, ಹತಾಶೆ, ವಿರಹ, ಪ್ರಕೃತಿಯ ರಮ್ಯತೆ, ಬದುಕಿನ ತಲ್ಲಣಗಳ ಕಂಪನ, ಸಾಮಾಜಿಕ ವ್ಯವಸ್ಥೆಯ ಚಿತ್ರಣ, ಸ್ತ್ರೀ ಸಂವೇದನೆ, ಆಧ್ಯಾತ್ಮಿಕ ಚಿಂತನೆ, ಅತಿವೃಷ್ಟಿ… ಮುಂತಾದ ವಿಷಯಗಳ ಅನಾವರಣವಾಗುತ್ತದೆ.

      ಕಣ್ಣುಗಳು ನಿಜವಾಗಿಯೂ ಅಂತರಂಗದ ಕಿಟಕಿ. ಅವು ಮಾನವನ ರಹಸ್ಯಗಳು ಮತ್ತು ಸತ್ಯಗಳನ್ನು ಅರುಹುತ್ತವೆ, ಹೃದಯಗಳನ್ನು ಬೆಸೆಯುತ್ತವೆ. ಬಾಯಿಯಿಂದ ಒಂದೇ ಒಂದು ಪದವನ್ನು ಮಾತನಾಡದೆಯೂ ಕಣ್ಣುಗಳು ಪ್ರೇಮಲೋಕವನ್ನೆ ಸೃಷ್ಟಿಸಬಲ್ಲವು. ಇಂಥಹ  ಕಣ್ಣುಗಳ ಮೋಡಿಗೆ ಒಳಗಾಗದವರು ಉಂಟೆ ಈ ದುನಿಯಾದಲ್ಲಿ! ಅಂತೆಯೇ ಪ್ರೀತಿಗೆ ಪದಗಳ ಅಗತ್ಯವಿಲ್ಲ, ಕೇವಲ ಒಂದು ನೋಟ ಸಾಕು ಎನ್ನುತ್ತಾರೆ. ಕಣ್ಣುಗಳಿಂದ ಕೂಡಿದ ನಗು ಹೃದಯಕ್ಕೆ ಮನ್ಮಥನ ಬಾಣದಂತೆ ನಾಟುತ್ತದೆ. ಕಣ್ಣಿನ ಸಂಪರ್ಕವು ಪದಗಳಿಗಿಂತ ಹೆಚ್ಚು ನಿಕಟವಾಗಿದೆ. ಈ ಕಾರಣಕ್ಕಾಗಿಯೇ ‘ಮೊದಲ ನೋಟ’ದಲ್ಲೇ ಪ್ರೀತಿಯಾಯಿತು ಎನ್ನುವ ಪಿಸುಮಾತುಗಳು ಸದ್ದು ಮಾಡುತ್ತವೆ! ಇಲ್ಲಿ ಶಾಯರಾ ಪ್ರಭಾವತಿ ದೇಸಾಯಿಯವರೂ ಪ್ರೀತಿಯಲ್ಲಿ ಕಣ್ಣಿನ ಪಾತ್ರ ಹೇಗಿರುತ್ತದೆ ಎಂಬುದನ್ನು ವಿವಿಧ ಆಯಾಮಗಳ ನೆಲೆಯಲ್ಲಿ ವಿವೇಚಿಸಿದ್ದಾರೆ. ಇದರೊಂದಿಗೆ ಪ್ರೇಮಿಗಳ ಸಾಂಗತ್ಯದ ಮುಂದೆ ಪರಪಂಚದ ಯಾವ ವಿಷಯ, ವಸ್ತುವೂ ನಿಲ್ಲುವುದಿಲ್ಲ. ಅವೆಲ್ಲವುಗಳು ಪೇಲವವಾಗಿ ಕಾಣಿಸುತ್ತವೆ ಎಂಬ ಸಾರ್ವತ್ರಿಕ ಸತ್ಯವನ್ನು ಸೂಕ್ಷ್ಮವಾಗಿ ದಾಖಲಿಸಿದ್ದಾರೆ. ಈ ಪ್ರೀತಿ ಎನ್ನುವುದು ಕಳಂಕರಹಿತವಾದದ್ದು ಎಂಬುದರಲ್ಲಿ ಯಾವ ಸಂದೇಹವೂ ಇಲ್ಲ.‌ ಆದರೆ ಪ್ರೇಮಿಗಳು ಆ ಪ್ರೀತಿಯ ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳುತಿಲ್ಲ ಎಂಬ ಆತಂಕವು ಇಲ್ಲಿ ಮಡುಗಟ್ಟಿದೆ.

“ಮೊದಲ ನೋಟಕೆ ಕದವಿಲ್ಲದ ಬಂಧಿಖಾನೆಯಲ್ಲಿ ಬಂಧಿಯಾದೆನು
ನೀನಿಲ್ಲದ ಗಳಿಗೆ ಮೌನದಿ ಒಂಟಿಯಾಗಿ ನಾ ಎಂದೂ ಬಾಳೆನು”

ಮಾದಕ ಕಣ್ಣಲಿ ಮದಿರೆ ನೀನು ಕುಡಿಸಿದರೆ ಶರಣಾಗುವೆ
ಕೆಂದುಟಿಯಲಿ ಪ್ರೀತಿಯ ಜೇನು ಸುರಿಸಿದರೆ ಶರಣಾಗುವೆ

“ಮುಖವಾಡಗಳನ್ನು ಅರಿಯದೆ ತನುಗಳು ಒಂದಾದವು
ಪ್ರೀತಿಯಲಿ ಮೋಸ ಹೋದ ಆ ಮನಸುಗಳು ನರಳುತಿವೆ

       ‘ಆನೆಯ ಭಾರ ಆನೆಗೆ, ಇರುವೆಯ ಭಾರ ಇರುವೆಗೆ’ ಎಂಬ ಸಾಲು ಅನೇಕ ಗೂಢಾರ್ಥಗಳ ಸಂಗಮವಾಗಿದೆ. ಯಾರೂ, ಯಾರನ್ನೂ ಹೀಗೆಯೇ ಎಂದು ತೀರ್ಮಾನಕ್ಕೆ ಬರಬಾರದು ಎಂಬುದನ್ನು ಈ ಕೆಳಗಿನ ಷೇರ್ ಸಶಕ್ತವಾಗಿ ಹಿಡಿದಿಟ್ಟಿದೆ. ಪ್ರತಿಯೊಬ್ಬರು ತಮ್ಮ ತಮ್ಮ ಪಾತ್ರಗಳನ್ನು ನಿರ್ವಹಿಸುತ್ತಾರೆ. ಅದೆಲ್ಲವನ್ನೂ ವೀಕ್ಷಿಸುವ, ಗ್ರಹಿಸುವ ಹಾಗೂ ಅರ್ಥೈಸಿಕೊಳ್ಳುವ ಅವಶ್ಯಕತೆಯನ್ನು ಶಾಯರಾ ರವರು ಇಲ್ಲಿ ಸಾರಿ ಹೇಳಿದ್ದಾರೆ.

“ಗೂಡಲಿ ಕಾಯುತಿದೆ ಪುಟ್ಟ ಮರಿಯೊಂದು ತಾಯಿಯನು
ಗುಟುಕನು ತರುವ ಹಕ್ಕಿಯ ಕಷ್ಟ ಮರಿಗೇನು ಗೊತ್ತು

      ಮನಸ್ಸಿಗೆ ಏನು ಅರ್ಥವಾಗುವುದಿಲ್ಲವೋ ಅದನ್ನು ಪೂಜಿಸುತ್ತದೆ ಅಥವಾ ಭಯಪಡುತ್ತದೆ. ಅಂತೆಯೇ ಭಯವು ಮೂಢನಂಬಿಕೆಯ ಮತ್ತು ಕ್ರೌರ್ಯದ ಮುಖ್ಯ ಮೂಲಗಳಲ್ಲಿ ಒಂದಾಗಿದೆ ಎನ್ನಲಾಗುತ್ತದೆ.‌ ಭಯವನ್ನು ಜಯಿಸುವುದು ಬುದ್ಧಿವಂತಿಕೆಯ ಪ್ರಾರಂಭವಾಗಿದೆ. ಸ್ವಯಂ ಗ್ರಹಿಕೆ ಮತ್ತು ವಾಸ್ತವದ ನಡುವಿನ ಅಂತರವು ಹೆಚ್ಚಿದಷ್ಟೂ, ವ್ಯತ್ಯಾಸವನ್ನು ಸೂಚಿಸುವವರ ಮೇಲೆ ಹೆಚ್ಚು ಆಕ್ರಮಣಶೀಲತೆ ಉಂಟಾಗುತ್ತದೆ. ಈ ಹಿನ್ನೆಲೆಯಲ್ಲಿ ಗಮನಿಸಿದಾಗ ಹೆಚ್ಚಿನ ಜನರು ತಮ್ಮ ನಂಬಿಕೆಗಳು ಮೂಢನಂಬಿಕೆ ಎಂಬುದನ್ನು ಅರಿಯದೇ ಆ ನಂಬಿಕೆಗಳಲ್ಲಿಯೇ ಸಂತೃಪ್ತರಾಗಿದ್ದಾರೆ ಎಂದೆನಿಸದೆ ಇರದು! ಇಂಥಹ ಮುಗ್ಧ, ಅಮಾಯಕ ಹಾಗೂ ದ್ವಂದ್ವ ಮನಸುಗಳನ್ನು ನೋಡಿ ಶಾಯರಾ ಶ್ರೀಮತಿ ಪ್ರಭಾವತಿ ದೇಸಾಯಿಯವರು ಆತಂಕವನ್ನು ಎದುರಿಸುತ್ತಾರೆ.

ಮೌಢ್ಯತೆಯ ಕೂಪದಲಿ ನಲಿಯುತಿವೆ ಜೀವಿಗಳು ಜಗದಲಿ
ಕತ್ತಲೆಯಲಿ ಇದ್ದವರಿಗೆ ದುಃಖಿಸುತ ಮೌನಿಯಾದೆ

       ಪುರಾಣವು ಪ್ರತಿಯೊಂದು ಕಥೆಯ ಗುಪ್ತ ಭಾಗವಾಗಿದೆ, ಸಮಾಧಿ ಭಾಗವಾಗಿದೆ; ಇನ್ನೂ ಅನ್ವೇಷಿಸದ ಪ್ರದೇಶವಾಗಿದೆ. ಏಕೆಂದರೆ ಅಲ್ಲಿಗೆ ಹೋಗಲು ನಮಗೆ ಇನ್ನೂ ಸಾಧ್ಯವಾಗಿಲ್ಲ. ಇಂಥಹ ಪುರಾಣವು ಮೌನದಿಂದ ಮತ್ತು ಮಾತಿನ ಮೂಲಕ ಪೋಷಣೆ ಪಡೆಯುತ್ತದೆ. ನಮ್ಮ ಪರಂಪರೆಯಲ್ಲಿ ಇಂಥಹ ಪುರಾಣಗಳಿಗೆ, ಕಥೆಗಳಿಗೆ ಬರವಿಲ್ಲ. ಆದರೆ ದುರಂತವೆಂದರೆ ಎಲ್ಲವೂ ಪುರುಷ ಪ್ರಧಾನ ನೆಲೆಯಲ್ಲಿಯೇ ಸೃಷ್ಟಿಯಾಗಿವೆ. ಹರಿಶ್ಚಂದ್ರ ತಾನು ಕೊಟ್ಟ ಮಾತಿನಂತೆ ನಡೆದುಕೊಳ್ಳಲು ತನ್ನ ಹೆಂಡತಿ ಚಂದ್ರಮತಿಯನ್ನು ಮಾರಿದನು. ಯುಧಿಷ್ಠಿರನು ಕ್ಷತ್ರಿಯ ಧರ್ಮವನ್ನು ನಿಭಾಯಿಸಲು, ಜೂಜನ್ನೂ ಅರ್ಧದಲ್ಲೇ ಬಿಡಲಾಗದೆ ದ್ರೌಪದಿಯನ್ನು ಪಣಕ್ಕಿಟ್ಟು ಸೋತನು.‌ ಈ ಎರಡು ಘಟನೆಗಳಲ್ಲಿ ಮಹಿಳೆಯರ ತಪ್ಪೇನು ಎಂಬುದನ್ನು ಶಾಯರಾ ಅವರು ಇಲ್ಲಿ ಜಿಜ್ಞಾಸೆಗೆ ಒಳಪಡಿಸಿದ್ದಾರೆ.

ವಚನಕಾಗಿ ಸತಿ ಮಾರಿದವನನು ಏನೆಂದು ಕರೆಯಲಿ
ಮೋಜಿಗಾಗಿ ಪಣಕೆ ಇಟ್ಠವನನು ಏನೆಂದು ಕರೆಯಲಿ”

        ಶಾಂತಿ ಮತ್ತು ಸೌಹಾರ್ದತೆ, ಒಗ್ಗಟ್ಟಿನಿಂದ ಹಾಗೂ ಬಲದಿಂದ ಬದುಕಲು, ನಾವು ಒಂದು ರಾಷ್ಟ್ರ, ಒಂದು ಧ್ವಜವನ್ನು ಹೊಂದಿರಬೇಕಾದ ಅಗತ್ಯವಿದೆ. ಧ್ವಜವು ಎಲ್ಲಾ ಮೌಲ್ಯಗಳನ್ನು ಪ್ರತಿನಿಧಿಸುತ್ತದೆ. ಧ್ವಜವು ನಮ್ಮ ರಾಷ್ಟ್ರೀಯ ಏಕತೆಯ ಸಂಕೇತವಾಗಿದೆ. ಆದರೆ ದುರಂತವೆಂದರೆ ಜನರನ್ನು ಮೂರ್ಖರನ್ನಾಗಿಸುವ ಸಾಧನವಾಗಿ ಧರ್ಮ, ಜಾತಿ, ಪಕ್ಷ, ರಾಜ್ಯ… ಮುಂತಾದುವುಗಳನ್ನು ಪ್ರತಿನಿಧಿಸುತ್ತ ಧ್ವಜಗಳನ್ನು ಸುತ್ತಿಕೊಂಡು ಕಹಳೆಯನ್ನು ಊದುವವರು ನಮ್ಮ ಮಧ್ಯದಲ್ಲಿ ಇದ್ದಾರೆ. ಈ ಕೆಳಗಿನ ಷೇರ್ ಜನರು ಹೇಗೆ ‘ಧ್ವಜ’ದ ಮಹತ್ವವನ್ನು ಕಳೆಯುತ್ತಿದ್ದಾರೆ ಎಂಬುದನ್ನು ಪ್ರತಿಧ್ವನಿಸುತ್ತಿದೆ.  

ಬಣ್ಣದ ಧ್ವಜಗಳು ಚೀರುತ ಸಾಗಿವೆ ಬೀದಿ ಬೀದಿಯಲಿ
ರಂಗಿನ ಬಾವುಟಗಳ ಕದನಗಳನು ತಡೆಯುವುದೇ ಒಳಿತು”

      ನಾವು ನಮ್ಮ ದೃಷ್ಟಿಯಲ್ಲಿ ಅಮೂಲ್ಯರು, ನಮ್ಮನ್ನು ನಾವು ಗೌರವಿಸುತ್ತೇವೆ ಮತ್ತು ಪ್ರೀತಿಸುತ್ತೇವೆ. ಶಾಂತ ಆತ್ಮಸಾಕ್ಷಿಯು ಒಬ್ಬನನ್ನು ಬಲಪಡಿಸುವ ಶಕ್ತವಾದ ಸಾಧನವಾಗಿದೆ! “ನಿಮ್ಮೊಳಗಿನ ಮೌನವನ್ನು ನೀವು ಸಂಪರ್ಕಿಸಿದಾಗ, ನಿಮ್ಮ ಸುತ್ತಲೂ ನಡೆಯುತ್ತಿರುವ ಗೊಂದಲವನ್ನು ನೀವು ಅರ್ಥಮಾಡಿಕೊಳ್ಳಬಹುದು” ಎಂಬ ಪಾಶ್ಚಾತ್ಯ ಚಿಂತಕ ಸ್ಟೀಫನ್ ರಿಚರ್ಡ್ಸ್ ರವರ ಚಿಂತನೆಯು ಶಾಂತಿಯುತ ಬದುಕಿಗೆ ನಾಂದಿಯಾಡುತ್ತದೆ. ಇನ್ನಿತರರನ್ನು ಗೌರವಿಸುವ, ಪ್ರೀತಿಸುವ ಕಾರ್ಯ ಆಗಬೇಕಿದೆ. ಹೆಚ್ಚು ನಗು, ಕಡಿಮೆ ಚಿಂತೆ, ಹೆಚ್ಚು ಸಹಾನುಭೂತಿ, ಕಡಿಮೆ ತೀರ್ಪು, ಹೆಚ್ಚು ಆಶೀರ್ವಾದ, ಕಡಿಮೆ ಒತ್ತಡ, ಹೆಚ್ಚು ಪ್ರೀತಿ, ಕಡಿಮೆ ದ್ವೇಷದಂತಹ ಮೌಲ್ಯಗಳ ಅಡಿಯಲ್ಲಿ ಜೀವನವನ್ನು ಕಟ್ಟಿಕೊಳ್ಳುತ್ತಾ ಬಯಲಲ್ಲಿ ಬಯಲಾಗುವ ಪರಿಯನ್ನು ಇಲ್ಲಿ ಶಾಯರಾ ಪ್ರಭಾವತಿ ದೇಸಾಯಿಯವರು ದಾಖಲಿಸಿದ್ದಾರೆ.

ಗಳಿಸಿದ ಜ್ಞಾನ ನಿಧಿಯನು ದಿನ ಹಂಚಿದವರು ಬಯಲಾದರು
ಎಲ್ಲರ ಹೃದಯದಿ ಪ್ರೇಮ ಸುಧೆ ತುಂಬಿದವರು ಬಯಲಾಗಿದ್ದು

       ‘ಮಳೆ’ ಎಂದಾಗ ಮನಸ್ಸಿಗೆ ಮುದ ನೀಡುತ್ತದೆ.‌ ಆದರೆ ಅದೇ ಮಳೆ ಹೆಚ್ಚಾದಾಗ ಹಳ್ಳ-ಕೊಳ್ಳಗಳು, ನದಿಗಳು ತುಂಬಿ ಹರಿಯುತ್ತ ತಮ್ಮ ಪಕ್ಕದ ಗ್ರಾಮಗಳನ್ನು ಆಪೋಶನ ಮಾಡಿಕೊಳ್ಳುತ್ತವೆ. ಚಂಡಮಾರುತವು ನಮ್ಮ ತಂತ್ರಜ್ಞಾನಗಳ ಹೊರತಾಗಿಯೂ, ಹೆಚ್ಚಿನ ಪ್ರಕೃತಿಯು ಅನಿರೀಕ್ಷಿತವಾಗಿ ಉಳಿದಿದೆ ಎಂಬ ವಿನಮ್ರ ಜ್ಞಾಪನೆಯನ್ನು ತರುತ್ತದೆ. ಇಂಥಹ ಚಂಡಮಾರುತದ ಸಮಯದಲ್ಲಿ ಮನುಷ್ಯ ತನಗೆ ಗೊತ್ತಿಲ್ಲದಂತೆಯೇ ದೇವರಿಗೆ ಮೊರೆ ಹೋಗುತ್ತಾನೆ ಎಂಬ ವಾಸ್ತವದ ಚಿತ್ರಣವನ್ನು ಈ ಷೇರ್ ಧ್ವನಿಸುತ್ತದೆ.‌

ಮುಗಿಲೇ ಹರಿದು ಜಲಧಾರೆ ಸುರಿಯುತಿದೆ ನಿಲ್ಲಿಸು ದೇವ
ಜಗದ ಜೀವಿಗಳ‌ ಬದುಕು ಹರಿದುಹೋಗುತಿದೆ
ಉಳಿಸು ದೇವ”

      ಸಂವೇದನೆಯ ನೆಲೆಗಳು ಬದುಕಿನ ವೈವಿಧ್ಯಮಯ ಆಯಾಮಗಳ ಬಲದಿಂದ ಬದಲಾಗುವ, ಒಬ್ಬನೇ ಸುಖನವರ್ ತನ್ನ ಬಾಳಿನ ವಿವಿಧ ಹಂತಗಳಲ್ಲಿ ಬೇರೆ ಬೇರೆ ಸಂವೇದನೆಗಳಿಗೆ ಗುರಿಯಾಗಿ ಬಗೆಬಗೆಯಾಗಿ ರಚಿಸುವಂತೆ ಮಾಡಬಹುದು, ಇಲ್ಲವೇ ಎಲ್ಲ ಘಟ್ಟಗಳಲ್ಲೂ ಒಂದೇ ರೀತಿಯ ಸಂವೇದನೆಗಳಿಗೆ ವೇದಿಕೆಯನ್ನು ಒದಗಿಸಬಹುದು. ‘ಪ್ರೀತಿ’ ಎಂಬುದು ಒಂದೇಯಾದರೂ ಅದು ನೀಡುವ ಅನುಭವ ಚಿರನೂತನವಾದದ್ದು. ಈ ಹಿನ್ನೆಲೆಯಲ್ಲಿ ಪ್ರೀತಿ ಎಂಬುದು ಗಜಲ್ ಗೆ ಯಾವತ್ತೂ ನವನವೀನ ಫೀಲ್ ನೀಡುವ ಕಾಯಕಲ್ಪವಾಗಿದೆ. ಇದಕ್ಕೆ ಶಾಯರಾ ಶ್ರೀಮತಿ ಪ್ರಭಾವತಿ ದೇಸಾಯಿಯವರ ‘ಸೆರಗಿಗಂಟಿದ ಕಂಪು’ ಗಜಲ್ ಸಂಕಲನ ತಾಜಾ ಉದಾಹರಣೆಯಾಗಿದೆ.

          ‘ಮತ್ಲಾ’ ಎನ್ನುವುದು ಇಡೀ ಗಜಲ್ ಗೆ ಬುನಾದಿಯಿದ್ದಂತೆ! ಈ ಬುನಾದಿ ಹಾಕುವವರು ಬೇರೆ ಯಾರೂ ಅಲ್ಲ, ಸುಖನವರ್ ಗಳೆ! ಆದಾಗ್ಯೂ ಅವರು ಹಾಕಿದ ಬುನಾದಿಯ ಮೇಲೆ ಕವಾಫಿ ಬಳಸಲು ಮರೆಯುತ್ತಾರೆ. ಇದಾಗಬಾರದು. ಮತ್ಲಾದಲ್ಲಿ ಬಳಕೆಯಾದ ಕವಾಫಿ, ಮೀಟರ್, ವಜ್ನ… ಎಲ್ಲವೂ ಇಡೀ ಗಜಲ್ ನುದ್ದಕ್ಕೂ ಬಳಸಬೇಕು. ಇನ್ನೂ ‘ಬೆಹರ್’ ಅಂದರೆ ಛಂದಸ್ಸು. ಕಾವ್ಯದ ಲಯಗಾರಿಕೆಯಲ್ಲಿ ‘ಮಾತ್ರೆ’ಗಳ ವರ್ಗೀಕರಣ ತುಂಬಾ ಪ್ರಮುಖವಾದ ಪಾತ್ರವನ್ನು ನಿರ್ವಹಿಸುತ್ತದೆ.‌ ಇದಕ್ಕೆ ‘ವಜ್ನ’ ಎಂದು ಕರೆಯಲಾಗುತ್ತದೆ. ಮಾತ್ರೆಗಳ ಒಂದು ಗುಂಪಿಗೆ ‘ರುಕ್ನ'(ಗಣ) ಎಂದೂ, ಗಣಗಳ ಗುಂಪಿಗೆ ‘ಅರ್ಕಾನ್’ ಎಂದು ಕರೆಯಲಾಗುತ್ತದೆ. ಇಲ್ಲಿ ಫಊಲುನ್, ಫಾಇಲುನ್, ಮುಫಾಈಲುನ್, ಫಾಇಲಾತುನ್, ಮುಸ್ತಫಇಲುನ್, ಮುತಫಾಇಲುನ್, ಮಫಾಇಲತುನ್, ಫಾಈಲಾತು..ಎಂಬ ‘ರುಕ್ನ’ ಇವೆ. ಇಂಥಹ ‘ರುಕ್ನ’ಯಿಂದ ಆವೃತವಾದ ‘ಅರ್ಕಾನ್’ಗಳ ಗಜಲ್ ಗಳಿಗೆ ಕ್ರಮಬದ್ಧವಾಗಿ ಬೆಹರ್-ಎ-ಮುತಕಾರಿಬ್, ಬೆಹರ್-ಎ-ಮುತದಾರಿಕ್, ಬೆಹರ್-ಎ-ಹಜಜ್, ಬೆಹರ್-ಎ-ರಮಲ್, ಬೆಹರ್-ಎ-ರಜಜ್, ಬೆಹರ್-ಎ-ಕಾಮಿಲ್, ಬೆಹರ್-ಎ-ವಾಫಿರ್ ಎಂದು ಕರೆಯಲಾಗುತ್ತದೆ. ಈ ಹಿನ್ನೆಲೆಯಲ್ಲಿ ಗಮನಿಸಿದಾಗ ಕನ್ನಡದಲ್ಲಿ ಸಂಪೂರ್ಣ ಬೆಹರ್ ಆಧಾರಿತ ಗಜಲ್ ಗಳು ಬಂದಿರುವುದು ಕೆಲವೇ ಕೆಲವು, ಬೆರಳೆಣಿಕೆಯಷ್ಟು ಎಂದರೆ ತಪ್ಪಾಗಲಾರದು! ಆದರೆ ಬೆಹರ್ ನ ಮೊದಲ ಹೆಜ್ಜೆಯಾಗಿ ಮಾತ್ರೆಯಾಧಾರಿತ ಗಜಲ್ ಗಳನ್ನು ಕೆಲವರು ಬರೆದಿದ್ದಾರೆ, ಬರೆಯುತ್ತಿದ್ದಾರೆ. ಅವರಲ್ಲಿ ಶಾಯರಾ ಶ್ರೀಮತಿ ಪ್ರಭಾವತಿ ದೇಸಾಯಿಯವರು ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಇವರು ಗಜಲ್ ನ ಪ್ರತಿ ಮಿಸರೈನ್ ಸಮ ಮಾತ್ರೆಗಳಿರುವಂತೆ ನೋಡಿಕೊಳ್ಳುತ್ತಾರೆ. ಈ ಕಾರಣಕ್ಕಾಗಿ ಇವರು ನಿಜಕ್ಕೂ ಅಭಿನಂದನಾರ್ಹರು. ಆದರೆ ಇವರು ಇಲ್ಲಿಯೇ ನಿಲ್ಲದೆ ಇನ್ನೂ ಮುಂದುವರೆಯಬೇಕು, ಮಾತ್ರೆಗಳನ್ನು ವರ್ಗೀಕರಿಸಿ ರುಕ್ನ ಗುರುತಿಸಬೇಕು; ಬೆಹರ್ ಹೆಸರಿಸಬೇಕು ಎಂಬುದು ಗಜಲ್ ಪ್ರೇಮಿಯಾದ ನನ್ನ ಆಸೆ. ಇದೇನು ಅವರಿಗೆ ಅಸಾಧ್ಯವಾದುದೇನಲ್ಲ, ಯಾಕೋ ಸಮಯ ನೀಡುತ್ತಿಲ್ಲ ಅನಿಸುತ್ತಿದೆ. ಮುಂದಿನ ದಿನಗಳಲ್ಲಿ ಶಾಯರಾ ಶ್ರೀಮತಿ ಪ್ರಭಾವತಿ ದೇಸಾಯಿಯವರು ಈ ನಿಟ್ಟಿನಲ್ಲಿ ಗಮನಿಸಲಿ ಎಂದು ಹಾರೈಸುತ್ತೇನೆ. ಇದಕ್ಕೆ ಹೊರತುಪಡಿಸಿ ಇವರ ಗಜಲ್ ಗಳು ಮೃದುತ್ವದಿಂದ ಕೂಡಿದ್ದು, ಸಹೃದಯಿಗಳ ಎದೆಯ ಕದವನ್ನು ತಟ್ಟುತ್ತವೆ. ಗಜಲ್ ನ ಸ್ಥಾಯಿ ಭಾವವಾದ ಪ್ರೀತಿಯ ತರಂಗಗಳು ಎಲ್ಲೆಡೆ ಗುನುಗುವುದನ್ನು ಗಮನಿಸಬಹುದು. ಈ ನೆಲೆಯಲ್ಲಿ ‘ಸೆರಗಿಗಂಟಿದ ಕಂಪು’ ಗಜಲ್ ಸಂಕಲನವು ಕನ್ನಡ ಗಜಲ್ ಮನಸುಗಳನ್ನು ಆವರಿಸಲಿ ಎಂದು ಪ್ರೀತಿ ಮತ್ತು ಅಭಿಮಾನದಿಂದ ಶುಭ ಕೋರುತ್ತೇನೆ.‌

“ನಮ್ಮನ್ನು ನಾಶ ಮಾಡಲು ಜಗತ್ತಿಗೆ ಕಾವು ಇಲ್ಲ.
ಜಗತ್ತು ನಮ್ಮಿಂದ ಇದೆ ಜಗತ್ತಿನಿಂದ ನಾವು ಇಲ್ಲ”
-ಜಿಗರ್ ಮುರಾದಾಬಾದಿ


Leave a Reply

Back To Top