ಕಾವ್ಯ ಸಂಗಾತಿ
ದೀಪ್ತಿ ಭದ್ರಾವತಿ
ʼಕೆಂಪು ನವಿಲುʼ

ಕೆಂಪು ನವಿಲು
ಪ್ರತಿ ಕ್ಷಣ ನಾನು ಬಿಡುಗಡೆಗಾಗಿ
ಹಂಬಲಿಸುತ್ತೇನೆ
ಹಗಲುಗಳು ಸುದೀರ್ಘ ಎನ್ನಿಸುತ್ತವೆ
ಚಾಚಿರುವ ಕಾರಿರುಳು
ವಿರಾಮವಿಲ್ಲದೆ ದುಡಿಯುತ್ತಿದೆ
ಕುಣಿಯುತ್ತಿವೆ ವಾಸ್ತವದ ನೆಲೆಗಟ್ಟುಗಳು
ಕೋರೆದಾಡಿಯ ಹೊತ್ತು
ಗಿರಗಿರನೆ
ತಿರುಗುತ್ತವೆ ಕೆಂಗಣ್ಣಿನ ಕೆಂಪು
ನವಿಲುಗಳು
ಸರಸರನೆ
ಸರಿಯುವ ಸಮಯಕ್ಕೆ ಕೊಂಚ
ಕರುಣೆ ಎಂಬುದು
ಗೊತ್ತಿಲ್ಲ
ಕಗ್ಗಂಟಿನ ಹಾದಿ ಸಡಿಲಾಗುವ
ಸಣ್ಣ ಸೂಚನೆಯೂ ಕಾಣುತ್ತಿಲ್ಲ..
ಬೆರಳುಗಳು ಕಂಪಿಸುತ್ತವೆ
ಇನ್ನೆಷ್ಟು ದೂರ ಈ ತಳಮಳದ
ದಾರಿ
ನಡೆದಷ್ಟು ನೂರಾಗುವಷ್ಟು
ನೂರಾದರೆ ಸಾವಿರ ಚೂರಾಗುವಷ್ಟು
ಕತ್ತಿಯಂಚಿನ ಹಾದಿ
ಅಲುಗುವ ತುಟಿಗಳಲ್ಲಿ ಬೀಡು
ಬಿಟ್ಟ ಭಯಕೆ
ಕೊನೆಯ ಅವಧಿ ಏನಿರಬಹುದು?
ನಿಂತ ನೆಲ ಕುಸಿಯುವ
ಮೊದಲು ಏನು ಸಂಭವಿಸಬಹುದು ಇಲ್ಲಿ?
ನರ ಉಬ್ಬಿದ ಕೊರಳು
ಬಿಗಿದ ಉಸುಕಿನ ತೊಗಲು
ಹೂಂಕರಿಸಿ ಕತ್ತು
ಹಿಸುಕುವಾಗ
ಕೈ ಕೊಸರಿ ಹೊರಟ
ಒಂದು ಹಿಡಿ ಸಂಜೆ
ನನ್ನನ್ನೂ ಒಮ್ಮೆ ನೋಡಬಾರದೇಕೆ?
ದೀಪ್ತಿ ಭದ್ರಾವತಿ

One thought on “ದೀಪ್ತಿ ಭದ್ರಾವತಿ ಅವರ ಹೊಸ ಕವಿತೆ-ʼಕೆಂಪು ನವಿಲುʼ”