ʼಸಿಹಿನೀರು ಹೊಂಡʼ ಸ್ಥಳ ಪರಿಚಯ-ಜಿ ಹರೀಶ್ ಬೇದ್ರೆ

ಇದು ಚಿತ್ರದುರ್ಗದ ಸಿಹಿನೀರು ಹೊಂಡ, ಸ್ಥಳೀಯರಿಗೆ ಹೊರತುಪಡಿಸಿ  ಬಹಳಷ್ಟು ಜನರಿಗೆ ತಮ್ಮ ಸುತ್ತಮುತ್ತ ನೋಡುವ ನೀರಿನ ಹೊಂಡಗಳಂತೆ ಇದೂ ಒಂದು ಎಂದುಕೊಳ್ಳುವುದು ಸಹಜ.
ವೀರ ವನಿತೆ ಒನಕೆ ಓಬವ್ವ ಯಾರಿಗೆ ಗೊತ್ತಿಲ್ಲ ಹೇಳಿ? ಹೈದರಾಲಿ ಏಳು ಸುತ್ತಿನ ಕೋಟೆಗೆ ಮುತ್ತಿಗೆ ಹಾಕಿ ಸತತ ದಾಳಿ ಮಾಡಿದರೂ ಒಂದು ಕಲ್ಲನ್ನು ಅಲುಗಾಡಿಸಲು ಆಗಿರುವುದಿಲ್ಲ. ಇದೇ ಸಂದರ್ಭದಲ್ಲಿ ಒಂದು ದಿನ ಮಧ್ಯಾಹ್ನ ಕೋಟೆ ಕಾಯುವ ಗಂಡ ಊಟಕ್ಕೆ ಮನೆಗೆ ಬಂದಾಗ, ಊಟಕ್ಕೆ ಬಡಿಸಿ ಖಾಲಿಯಾಗಿದ್ದ ಕುಡಿಯುವ ನೀರು ತರಲು ಇದೇ ಹೊಂಡಕ್ಕೆ ಹೊರಟಾಗಲೇ ಶತ್ರುಗಳಿಗೆ ಕಳ್ಳ ಗಿಂಡಿಯ ಮಾಹಿತಿ ದೊರೆತು ಅಲ್ಲಿಂದ ನುಸುಳಿ ಬರುತ್ತಿರುವುದು ತಿಳಿದು  ಒನಕೆಯಿಂದ ಅವರ ರುಂಡ ಚೆಂಡಾಡುತ್ತಾ ಅಮರಳಾಗಿದ್ದು ಇತಿಹಾಸ.
ಹಾಗೆಯೇ, ನಾಯಕರ ಕಾಲದಲ್ಲೇ ಮಳೆಕೊಯ್ಲು ಎಷ್ಟು ಸಮಂಜಸವಾಗಿ ನಡೆಯುತ್ತಿತ್ತು ಎನ್ನುವುದನ್ನು ನೋಡಬಹುದು.  ಬೆಟ್ಟದ ಮೇಲಿರುವ ಗೋಪಾಲಸ್ವಾಮಿ ಹೊಂಡವು ಮಳೆಗಾಲದಲ್ಲಿ ತುಂಬಿ ಹರಿದಾಗ ಆ ನೀರು ಅಕ್ಕ ತಂಗಿ ಹೊಂಡಗಳಿಗೆ ಬಂದು ಅವುಗಳು ಭರ್ತಿಯಾದ ಮೇಲೆ ತಣ್ಣೀರು ದೋಣಿಯಾಗಿ, ಒನಕೆ ಓಬವ್ವನ ಕಿಂಡಿ ಎಂದು ಪ್ರಖ್ಯಾತಿ ಪಡೆದ ಕಿಂಡಿಯ ಮೂಲಕ ಹರಿದು ಈ ಸಿಹಿನೀರು ಹೊಂಡಕ್ಕೆ ನೀರು ಬರುತ್ತದೆ. ಇದು ತುಂಬಿದ ಮೇಲೆ ಸುರಂಗದ ಮೂಲಕ ಊರಿನ ಹೃದಯ ಭಾಗದಲ್ಲಿ ಇರುವ ಸಂತೆ ಹೊಂಡಕ್ಕೆ ನೀರು ಸೇರುತ್ತದೆ. ಅದೂ ತುಂಬಿದ ನಂತರ ನೀರು ಮಲ್ಲಾಪುರ ಕೆರೆಗೆ ಸೇರುತ್ತದೆ. ಆದರೆ ಈಗ ಅದು ನಿಂತು ಹೋಗಿದೆ.  
ಅಂದಿನವರ ಮುಂದಾಲೋಚನೆಯಿಂದಾಗಿ ಶತ್ರುಗಳು ಕೋಟೆಯ ಮುಂಭಾಗದಲ್ಲಿ ಅದೇಷ್ಟೇ ದಾಳಿ ಮಾಡಿದರೂ ಕೋಟೆಯೊಳಗೆ ಜನ ನೆಮ್ಮದಿಯಿಂದ ಇರಲು ಸಾಧ್ಯವಾಗಿತ್ತು. ಈಗಿರುವ ಸಿಹಿನೀರು ಹೊಂಡ ಹಿಂದೆ ವಿಸ್ತೀರ್ಣದಲ್ಲಿ ಇನ್ನೂ ದೊಡ್ಡದಾಗಿತ್ತು. ಆದರೆ ಒತ್ತುವರಿಯ ಕಾರಣ ಕಿರಿದಾದರೂ ಇತಿಹಾಸದ ಕುರುಹಾಗಿ ಇನ್ನೂ ಉಳಿದಿದೆ. ನೀವು ಎಂದಾದರೂ ಚಿತ್ರದುರ್ಗಕ್ಕೆ ಭೇಟಿ ಕೊಟ್ಟಾಗ ಇಲ್ಲಿಗೂ ಹೋಗಿ ಬನ್ನಿ.




Leave a Reply

Back To Top