ಪ್ರಜಾ ಸಂಗಾತಿ
ವೀಣಾ ಹೇಮಂತ್ ಗೌಡ ಪಾಟೀಲ್
ಗಣರಾಜ್ಯೋತ್ಸವ( ಜನವರಿ 26 )
ಸುಮಾರು ಎರಡುವರೆ ಶತಮಾನಗಳ ದಾಸ್ಯದ ಅವಧಿಯನ್ನು ಪೂರೈಸಿ ಅಂತಿಮವಾಗಿ ಭಾರತ ದೇಶವು 1947 ಅಗಸ್ಟ್ 15 ರಂದು ಸ್ವತಂತ್ರವಾಯಿತು. ಸ್ವಾತಂತ್ರ್ಯ ದೊರೆತ ಸಮಯದಲ್ಲಿ ನಮಗೆ ನಮ್ಮದೇ ಆದ ರಾಜಕೀಯ ಆರ್ಥಿಕ ಸಾಮಾಜಿಕ ಸಹಭಾಗಿತ್ವವನ್ನು ಹೊಂದಲು ಸಂವಿಧಾನದ ಅವಶ್ಯಕತೆಯನ್ನು ಮನಗಂಡು ಆಗಸ್ಟ್ 19 ರಂದು ಸಂವಿಧಾನದ ಕರಡು ಪ್ರತಿಯನ್ನು ತಯಾರಿಸಲು ಸಮಿತಿಯೊಂದನ್ನು ರಚಿಸಿ ಅದಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಟಿ ಟಿ ಕೃಷ್ಣಮಾಚಾರ್, ಸೈಯದ್ ಮಹಮ್ಮದ್ ಅಸಾದುಲ್ಲಾ, ಡಿ ಪಿ ಖೇತಾನ್,
ಕೆ ಕೃಷ್ಣಸ್ವಾಮಿ ಅಯ್ಯರ್, ಬಿ ಎಲ್ ಮಿತ್ತಲ್, ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್, ಕೆ ಎನ್ ಮುನ್ಷಿ,
ಎಂ ಮಾಧವರಾವ್ ಸಂವಿಧಾನ ಕರಡು ಪ್ರತಿ ರಚನಾ ಸಮಿತಿಯ ಸದಸ್ಯರಾಗಿದ್ದರು. ವಿವಿಧ ದೇಶಗಳ ಸಂವಿಧಾನಗಳು, ರಾಜಕೀಯ ಶಾಸ್ತ್ರದ ಕುರಿತು ವಿಶೇಷ ಅಧ್ಯಯನ ಮಾಡಿದ್ದ ಅಂಬೇಡ್ಕರ್ ಅವರು ತಮ್ಮ ಸಮಿತಿಯ ಸಲಹೆಯ ಮೇರೆಗೆ ಜಗತ್ತಿನಲ್ಲಿಯೇ ಅತ್ಯುತ್ತಮವಾದ ಸಂವಿಧಾನ ಪ್ರತಿಯನ್ನು ತಯಾರಿಸಿದರು. ಸುಮಾರು ಎರಡುವರೆ ವರ್ಷಗಳ ಅವಧಿಯಲ್ಲಿ ಹಲವಾರು ಪರಿಷ್ಕರಣೆಗಳ ನಂತರ ಅಂತಿಮವಾಗಿ ಸಂವಿಧಾನದ ಕರಡು ಪ್ರತಿಯನ್ನು 1950 ಜನವರಿ 26ರಂದು ಅಂಗೀಕರಿಸುವುದರ ಮೂಲಕ ಭಾರತವು ಸ್ವತಂತ್ರ ಗಣರಾಜ್ಯವಾಯಿತು.
ಆ ದಿನದ ಸವಿ ನೆನಪಿನ ಅಂಗವಾಗಿ ಭಾರತದ ಸ್ವತಂತ್ರ ಗಣರಾಜ್ಯೋತ್ಸವ ದಿನವನ್ನು ಇಡೀ ಭಾರತದಾದ್ಯಂತ ಆಚರಿಸಲಾಗುತ್ತದೆ.
ಗಣರಾಜ್ಯೋತ್ಸವದ ಮುಖ್ಯ ಆಚರಣೆಯು ಭಾರತ ದೇಶದ ರಾಜಧಾನಿಯಾದ ದೆಹಲಿಯ ರಾಜಪಥದಲ್ಲಿ ನಡೆಯುತ್ತದೆ. ಅಗಸ್ಟ್ 15 ರಂದು ನಮ್ಮ ದೇಶದ ಪ್ರಧಾನಮಂತ್ರಿಯವರು ತ್ರಿವರ್ಣ ಧ್ವಜವನ್ನು ಹಾರಿಸಿದರೆ ಜನವರಿ 26ರ ಗಣರಾಜ್ಯೋತ್ಸವದ ದಿನ ಭಾರತದ ರಾಷ್ಟ್ರಪತಿಯವರು ನಮ್ಮ ದೇಶದ ಧ್ವಜವನ್ನು ಸಾವಿರಾರು ಆಹ್ವಾನಿತರ, ದೇಶದ ಪ್ರಜೆಗಳ
ಸಮಕ್ಷಮದಲ್ಲಿ ಹಾರಿಸುತ್ತಾರೆ. ನಂತರ ನಡೆಯುವ ಬೃಹತ್ ಪ್ರಭಾತ ಫೇರಿಯಲ್ಲಿ ನಮ್ಮ ದೇಶದ ಭೂ ಸೇನೆ, ವಾಯು ಸೇನೆ ಮತ್ತು ನೌಕಾ ಸೇನೆಗಳ ಸೈನಿಕರು ಗಡಿ ಭದ್ರತಾ ಪಡೆಯ ಸೈನಿಕರು, ಗೃಹರಕ್ಷಕ ದಳ, ರಾಷ್ಟ್ರೀಯ ಸೇವಾದಳ ಹೀಗೆ ಹತ್ತು ಹಲವು ಸಶಸ್ತ್ರ ಪಡೆಗಳು ರಾಜ ಪಥದ ಪಥಸಂಚಲನದಲ್ಲಿ ಭಾಗವಹಿಸುತ್ತವೆ. ನಮ್ಮ ಸೇನಾ ಪಡೆಯ ಬಲಾಬಲವನ್ನು ಪ್ರದರ್ಶಿಸುವ ವೇದಿಕೆಯು ಈ ಗಣರಾಜ್ಯೋತ್ಸವದ ಪಥಪಂಚಲನೆ ಆಗಿದೆ ಎಂದರೆ ತಪ್ಪಿಲ್ಲ. ಭಾರತ ಗಣರಾಜ್ಯೋತ್ಸವದ ದಿನ ಜರಗುವ ಕಣ್ಮನ ಸೆಳೆಯುವ ಈ ಪಥ ಸಂಚಲನಕ್ಕೆ ಒಂದು ತಿಂಗಳ ಮೊದಲಿನಿಂದಲೇ ತಯಾರಿ ನಡೆದು ವಿವಿಧ ದೇಶ ವಿದೇಶಗಳ ಗಣ್ಯರ ಮುಂದೆ ನಮ್ಮ ದೇಶದ ಹಿರಿಮೆ ಗರಿಮೆಗಳನ್ನು ಸಾರುವ ಸ್ತಬ್ಧ ಚಿತ್ರಗಳನ್ನು ಕೂಡ ಪ್ರದರ್ಶಿಸಲಾಗುತ್ತದೆ. ವಿವಿಧ ಸಾಮಾಜಿಕ ಕ್ಷೇತ್ರಗಳಲ್ಲಿ ಕೆಲಸ ಮಾಡಿದ ಗಣ್ಯರಿಗೆ, ಮಿಲಿಟರಿ ಪಡೆಯ ಹುತಾತ್ಮ ಯೋಧರಿಗೆ ಗೌರವ ಸನ್ಮಾನಗಳು ಜರುಗುತ್ತವೆ. ಗಣರಾಜ್ಯೋತ್ಸವದ ಹಿಂದಿನ ದಿನ ರಾಷ್ಟ್ರಪತಿ ಭವನದ ಬ್ಯಾಂಕ್ವೆಟ್ ಹಾಲ್ನಲ್ಲಿ ದೇಶದ ಅತ್ಯುನ್ನತ ಪ್ರಶಸ್ತಿಗಳಾದ ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿಗಳನ್ನು ರಾಷ್ಟ್ರಪತಿಗಳು ವಿವಿಧ ರಾಜ್ಯಗಳ ಆಯ್ದ ವ್ಯಕ್ತಿಗಳಿಗೆ ನೀಡುವ ಮೂಲಕ ಗೌರವ ಸನ್ಮಾನ ಕಾರ್ಯಕ್ರಮ ಜರುಗುತ್ತದೆ. ಈ ಎಲ್ಲ ಕಾರ್ಯಕ್ರಮವನ್ನು ದೂರದರ್ಶನ ವಾಹಿನಿಯಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ.
ಇನ್ನು ದೇಶದ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ, ಕಚೇರಿಗಳಲ್ಲಿ ಕೂಡ ಗಣರಾಜ್ಯೋತ್ಸವದ ನಿಮಿತ್ತ ಧ್ವಜಾರೋಹಣ ನಡೆಸಲಾಗುತ್ತದೆ. ದೇಶದ ಹಿರಿಮೆ ಗರಿಮೆಗಳನ್ನು ಸಾರುವ ವಿವಿಧ ರಾಜಕೀಯ ನಾಯಕರ, ಸಾಂಸ್ಕೃತಿಕ, ಸಾಮಾಜಿಕ,ಶೈಕ್ಷಣಿಕ ನೇತಾರರ ಛದ್ಮ ವೇಷಗಳನ್ನು ಹಾಕಿದ ಮಕ್ಕಳನ್ನು ಮೆರವಣಿಗೆ ಮಾಡಿದರೆ, ಆಯಾ ಭಾಗದ ಪೊಲೀಸ್ ಇಲಾಖೆ, ಎನ್‌ಸಿಸಿ, ಎನ್ ಎಸ್ ಎಸ್, ಅಗ್ನಿಶಾಮಕ ದಳ, ಅರಸೇನಾಪಡೆ, ಗೃಹರಕ್ಷಕ ದಳ, ಭಾರತ ಸೇವಾದಳ, ಸ್ಕೌಟ್ಸ್, ಗೈಡ್ಸ್ ಮತ್ತಿತರ ಶಾಲೆ ಕಾಲೇಜುಗಳ ತಂಡಗಳು ಪಥ ಸಂಚಲನದಲ್ಲಿ ಭಾಗವಹಿಸುತ್ತವೆ. ದೇಶದ ಹಿರಿಮೆಯನ್ನು ಸಾರುವ ದೇಶಭಕ್ತಿ ಗೀತೆಗಳನ್ನು, ನೃತ್ಯ ರೂಪಕಗಳನ್ನು ಪ್ರದರ್ಶಿಸುತ್ತಾರೆ. ಆಯಾ ಭಾಗಗಳಲ್ಲಿ ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ, ಕ್ರೀಡೆ ಮತ್ತಿತರ ವಿಭಾಗಗಳಲ್ಲಿ ಉತ್ತಮ ಕಾರ್ಯನಿರ್ವಹಿಸಿರುವವರಿಗೆ ಜಿಲ್ಲಾ ಆಡಳಿತ ಮತ್ತು ತಾಲೂಕ ಆಡಳಿತಗಳು ಸನ್ಮಾನಿಸುವ ಮೂಲಕ
ಗೌರವ ಸಲ್ಲಿಸುತ್ತವೆ.
ದೇಶಭಕ್ತಿ ಗೀತೆಗಳನ್ನು ಹಾಡುವ, ರೂಪಕಗಳನ್ನು ಅಭಿನಯಿಸುವ, ಗುಂಪು ನೃತ್ಯಗಳನ್ನು ಪ್ರದರ್ಶಿಸುವ ಮೂಲಕ ರಾಷ್ಟ್ರೀಯ ಏಕತೆಯನ್ನು ಪ್ರದರ್ಶಿಸಲಾಗುತ್ತದೆ.
ಹಲವಾರು ಧರ್ಮಗಳು, ಸಾವಿರಾರು ಜಾತಿ- ಉಪಜಾತಿಗಳು, ಹಲವಾರು ಭಾಷೆ, ವೈವಿಧ್ಯಮಯ ಸಾಮಾಜಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಹಿನ್ನೆಲೆಯನ್ನು ಹೊಂದಿರುವ ಭಾರತ ದೇಶವು ವಿವಿಧತೆಯಲ್ಲಿ ಏಕತೆಯನ್ನು ತೋರುವ ಜಗತ್ತಿನ ಅತಿ ದೊಡ್ಡ ಪ್ರಜಾತಂತ್ರ ರಾಷ್ಟ್ರವಾಗಿದ್ದು ಭಾರತದ ಪ್ರತಿಯೊಬ್ಬ ಪ್ರಜೆಗೂ ಸಮಾನ ಹಕ್ಕುಗಳನ್ನು ಮತ್ತು ಕರ್ತವ್ಯಗಳನ್ನು ನೀಡುವ ಮೂಲಕ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ಪ್ರಜಾತಂತ್ರ ವ್ಯವಸ್ಥೆಗೆ ಅಡಿಪಾಯ ಹಾಕಿರುವ ಈ ಗಣತಂತ್ರ ದಿವಸವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸುವ ಮೂಲಕ ದೇಶದ ಏಕತೆ ಮತ್ತು ಸಮಗ್ರತೆಯನ್ನು ಎತ್ತಿ ಹಿಡಿಯಬೇಕು. ಎಲ್ಲಾ ಭೇದಗಳ ಹೊರತಾಗಿಯೂ ನಾವೆಲ್ಲರೂ ಭಾರತೀಯರು, ಭಾರತಾಂಬೆಯ ಮಕ್ಕಳು ಎಂಬ ನಿತ್ಯಸತ್ಯವನ್ನು ಅರಿತು ದ್ವೇಷ ಅಸೂಯೆ ಅಸಹನೆಗಳೆಂಬ ಶತ್ರುಗಳನ್ನು ದೂರವಿರಿಸಿ ಶಾಂತಿ ಸಮಾಧಾನ ಸಮೃದ್ಧಿಯ ಮಂತ್ರಗಳನ್ನು ಜಪಿಸಬೇಕು.
ಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯಗಳು
ವೀಣಾ ಹೇಮಂತ್ ಗೌಡ ಪಾಟೀಲ್