ವ್ಯಕ್ತಿ ಸಂಗಾತಿ
ಗೊರೂರು ಅನಂತರಾಜು,
ಗಮಕ ಕಲಾಶ್ರೀ ರುಕ್ಮಿಣಿ ನಾಗೇಂದ್ರ–
ಹಾಸನದ ಗಮಕ ಕ್ಷೇತ್ರದಲ್ಲಿ ಚಿರಪರಿಚಿತ ಹೆಸರು ರುಕ್ಮಿಣಿ ನಾಗೇಂದ್ರ. ಇವರ ತಂದೆ ಕನಕಪುರಂದರ ಪ್ರಶಸ್ತಿ ವಿಜೇತ ಗಮಕ ಭೀಷ್ಮ ಬಿ.ಎಸ್.ಎಸ್.ಕೌಶಿಕ್‌ರವರು. ತಾಯಿ ಜಯಲಕ್ಮಿ.ಜನ್ಮದಿನಾಂಕ ೩೧-೧೨-೧೯೫೫. ಗಮಕ ವಾಚನ ಮತ್ತು ವ್ಯಾಖ್ಯಾನ ಕಲೆಯನ್ನು ತಂದೆಯ ವಾಚನ ವ್ಯಾಖ್ಯಾನ ಕೇಳಿ ಕಲಿತವರು. ೧೬ನೇ ವಯಸ್ಸಿಗೆ ಕನ್ನಡ ಸಾಹಿತ್ಯ ಪರಿಷತ್ತು ನಡೆಸುತ್ತಿದ್ದ ಗಮಕ ಪ್ರೌಢ ಪರೀಕ್ಷೆಯಲ್ಲಿ ಶೇ ೯೯ ಅಂಕ ಪಡೆದ ಪ್ರತಿಭೆ. ಎಸ್‌ಎಸ್‌ಎಲ್‌ಸಿ ಓದಿ ತುಮಕೂರಿನಲ್ಲಿ ಶಿಕ್ಷಕ ತರಭೇತಿ ಪಡೆದಿದ್ದಾರೆ. ೧೮ನೇ ವಯಸ್ಸಿಗೆ ಪ್ರವೇಶ ಮತ್ತು ಪ್ರೌಢ ತರಗತಿ ನಡೆಸಿ ಶ್ರವಣಬೆಳಗೊಳ ಹಾಸನದಲ್ಲಿ ೩೦ ವರ್ಷ ತರಗತಿ ನಡೆಸಿ ಅನೇಕ ಶಿಷ್ಯರನ್ನು ಬೆಳೆಸಿದ್ದಾರೆ. ೧೩ನೇ ವಯಸ್ಸಿಗೆ ಗಮಕ ವಾಚನ ಪ್ರಾರಂಭಿಸಿ ವ್ಯಾಖ್ಯಾನವನ್ನು ೩೦ ವರ್ಷ ವಯೋಮಾನದಲ್ಲಿ ಪ್ರಾರಂಭಿಸಿ ಶ್ರವಣಬೆಳಗೊಳ ಜೈನ ಮಠದಲ್ಲಿ ಚಾರುಕೀರ್ತಿ ಭಟ್ಟಾರಾಕ ಸ್ವಾಮೀಜಿಯವರ ಆಶಯದಂತೆ ೧೯೯೪ರಲ್ಲಿ ೧೦ ದಿನ ಚಂದ್ರಪ್ರಭ ಚರಿತ್ರೆಯನ್ನು ಚಾತುರ್ಮಾಸದಲ್ಲಿ ವಾಚನ ವ್ಯಾಖ್ಯಾನ ಎರಡನ್ನೂ ಒಟ್ಟಾಗಿ ನಿಬಾಯಿಸಿದ್ದಾರೆ.
ಮನೆ ಮನೆ ಕವಿಗೋಷ್ಠಿ ಸತತ ೩೨೫ ತಿಂಗಳಿ೦ದ ಸತತವಾಗಿ ನಡೆದುಕೊಂಡು ಈಗ ನಾನು ಸಂಚಾಲಕನಾಗಿ ಮುನ್ನೆಡೆದು ೩೨೬ನೇ ತಿಂಗಳ ಕಾರ್ಯಕ್ರಮ ಫೆಬ್ರವರಿ ೨ ಭಾನುವಾರ ಡಾ.ಜಗದೀಶ್‌ರವರ ಪ್ರಾಯೋಜಕತ್ವದಲ್ಲಿ ಇವರ ಮಡದಿ ದಿವಂಗತ ಡಾ. ಎಚ್.ಬಿ.ಯಶೋಧರ ಅವರ ಮಹಾಪ್ರಬಂಧ ಕೃತಿ ಕನ್ನಡದಲ್ಲಿ ಯಕ್ಷಗಾನ ಸಾಹಿತ್ಯ ಕುರಿತು ಉಪನ್ಯಾಸ ಕವಿಗೋಷ್ಠಿ ನಡೆಯಲ್ಲಿದೆ. ಮೇಡಂ ಅವರು ಹಾಸನದಲ್ಲಿ ಮನೆ ಮನೆ ಗಮಕ ಗೋಷ್ಠಿ ನೂರು ಕಂತುಗಳನ್ನು ನಡೆಸಿ ಅನೇಕ ಕಲಾವಿದರಿಂದ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಈ ಹಿಂದೆ ಇವರು ಮನೆ ಮನೆ ಕವಿಗೋಷ್ಠಿಯಲ್ಲಿ ಭಾಗವಹಿಸುತ್ತಿದ್ದರು. ಹಾಸನ ಜಿಲ್ಲಾ ಗಮಕ ಕಲಾ ಪರಿಷತ್ತಿನ ಕಾರ್ಯದರ್ಶಿಯಾಗಿ ೨೨ ವರ್ಷ ಕಾರ್ಯ ನಿರ್ವಹಿಸಿ ೨೦೧೯ರಲ್ಲಿ ಕರ್ನಾಟಕ ಯುವ ಗಮಕ ಸಮ್ಮೇಳನದ ಯಶಸ್ಸಿನಲ್ಲಿ ಸೇವೆ ನೀಡಿದ ತೃಪ್ತಿ ಇವರಿಗಿದೆ. ಹಾಸನ ಚನ್ನಕೇಶವ ದೇವಾಲಯದಲ್ಲಿ ೧೦ ವರ್ಷ ನವರಾತ್ರಿಗೆ ವ್ಯಾಖ್ಯಾನ ಮಾಡಿದ್ದಾರೆ. ೧೯೯೬ರಲ್ಲಿ ಮುಧೋಳದ ಸಮೀರವಾಡಿಯಲ್ಲಿ ಗಮಕ ಗಾಯನ ವ್ಯಾಖ್ಯಾನ ಸೊಬಗು ಉಣಬಡಿಸಿದ್ದಾರೆ. ಅಖಿಲ ಕರ್ನಾಟಕ ಗಮಕ ಸಮ್ಮೇಳನಗಳು ನಡೆದ ಹುಬ್ಬಳಿ, ಬಾಗಲಕೋಟೆ, ಬಿಜಾಪುರದಲ್ಲಿ ವಾಚನ ವ್ಯಾಖ್ಯಾನ, ಮುಂಬೈಯಲ್ಲಿ ನಡೆದ ಅಖಿಲ ಭಾರತ ಪ್ರಥಮ ಗಮಕ ಸಮ್ಮೇಳನದಲ್ಲಿ ಗಣೇಶ ಉಡುಪರೊಂದಿಗೆ ವ್ಯಾಖ್ಯಾನ ಮಾಡಿದ್ದನ್ನು ಸ್ಮರಿಸುತ್ತಾರೆ. ಕರ್ನಾಟಕ ಗಮಕ ಕಲಾ ಪರಿಷತ್ತು, ಬೆಂಗಳೂರು ಜಿಲ್ಲಾ ಘಟಕ ಕಳೆದ ೨೦ ವರ್ಷಗಳಿಂದ ಹಾಸನದಲ್ಲಿ ಗಮಕ ಹಬ್ಬ ಕವಿ ನಮನ ಯಶಸ್ವಿಯಾಗಿ ನಡೆಸಿಕೊಂಡು ಬಂದಿದೆ. ಈ ವರ್ಷ ಜನವರಿ ೩ ರಿಂದ ೭ವರೆಗೆ ೫ ದಿನ ನಡೆಯಿತು. ಮೊದಲ ಉದ್ಘಾಟನಾ ದಿನ ರುಕ್ನಿಣಿ ನಾಗೇಂದ್ರ ಮೇಡಂ ಅವರ ಗಮಕ ಸಾಧನೆಗೆ ‘ಗಮಕ ಕಲಾಶ್ರಿ’ ಬಿರುದು ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಕಡೆಯ ದಿನ ಸಮಾರೋಪ ಸಮಾರಂಭದಲ್ಲಿ ನನಗೆ (ಗೊರೂರು ಅನಂತರಾಜು) ಸಾಹಿತ್ಯ ಕಲಾಸೇವೆಗೆ ಕಲಾ ವಿಮರ್ಶಾ ವಿಚಕ್ಷಣ ಕಲೋಪಾಸನ ತತ್ಪರ ವಿಮರ್ಶಾ ವಿಧು ಪ್ರಶಸ್ತಿ ನೀಡಿ ಸನ್ಮಾನಿಸಿ ಈ ವೇಳ ಮೇಡಂ ಸಿಕ್ಕಿ ಮಾತನಾಡಿದರು. ನಮ್ಮ ಮನೆಯವರು ಗೊರೂರಿನ ಹೇಮಾವತಿ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದು, ಹತ್ತಾರು ವರ್ಷ ಗೊರೂರಿನಲ್ಲೇ ವಾಸವಿದ್ದೆವು ಎಂದರು. ಆಗ ಅವರ ಈ ಸೇವೆಯ ಅರಿವು ನನಗಿರಲಿಲ್ಲ. ೨೦೦೫ರಲ್ಲಿ ಹಿರೇಮಗಳೂರು ಕಣ್ಣನ್ ರವರು ಅನೇಕರೊಡಗೂಡಿ ಕೊಡಮಾಡಿದ ಹಲಸಿಂಗ ವೇದಿಕೆಯಿಂದ ಸನ್ಮಾನ, ಪಿರಿಯಾಪಟ್ಟಣ ತಾ. ವಿಪ್ರ ಮಹಿಳಾ ಸಂಘದಿ೦ದ ಸನ್ಮಾನ, ದೂರದರ್ಶನ ಚಂದನದಲ್ಲಿ ಗಮಕ ವಾಚನ, ಶ್ರವಣಬೆಳಗೊಳದ ಎರಡು ಮಹಾಮಸ್ತಕಾಭಿಷೇಕಗಳಲ್ಲಿ ಜೈನ ಕಾವ್ಯಗಳಿಗೆ ಗಣೇಶ ಉಡುಪರೊಡಗೂಡಿ ವ್ಯಾಖ್ಯಾನ ನಡೆಸಿಕೊಟ್ಟಿರುವರು. ಕಳೆದ ೧೦ ವರ್ಷಗಳಿಂದ ವ್ಯಾಖ್ಯಾನವನ್ನೇ ಪ್ರಧಾನವಾಗಿ ರಾಜ್ಯದ ಹಲವೆಡೆ ಮಹಾರಾಷ್ಟ್ರದ ಪೂನಾದಲ್ಲಿ ಕಾರ್ಯಕ್ರಮ ನೀಡಿರುವರು. ಭಾವಗೀತೆ, ಜಾನಪದ ಗೀತೆ, ಸಂಪ್ರದಾಯ ಹಾಡುಗಳನ್ನು ಹಾಡುವ ಇವರು ಆಕಾಶವಾಣಿಯಲ್ಲಿ ನಾಟಕ ಮತ್ತು ಸಂದರ್ಶನಗಳಲ್ಲಿ ಭಾಗವಹಿಸಿದ್ದಾರೆ. ಇವರ ಗಮಕ ಸೇವೆಗೆ ೨೦೨೪ನೇ ಸಾಲಿನ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭ್ಯವಾಗಿದೆ.
——————————————————-
ಗೊರೂರು ಅನಂತರಾಜು,