ಕಾವ್ಯ ಸಂಗಾತಿ
“ತನಗ ಕಾವ್ಯ ಪ್ರಕಾರದ ಬಗ್ಗೆ ಒಂದಿಷ್ಟು ಮಾಹಿತಿ”
ತನಗ ಕವಿ ವ್ಯಾಸ ಜೋಷಿ
ತನಗ ದ ಬಗ್ಗೆ ಒಂದಿಷ್ಟು
ತನಗ ದ ಬಗ್ಗೆ ಒಂದಿಷ್ಟು
ಈ “ತನಗ” ಫಿಲಿಫೈನ್ಸ ನ ಕಾವ್ಯ ಕನ್ಯೆ.
ಸುಮಾರು 300 ವರ್ಷ ಚಾರಿತ್ರ್ಯ ಹೊಂದಿದ್ದು,ಅಲ್ಲಿನ “ಟ್ಯಾಗ್ಲೋಗ್” ಭಾಷೆಯಲ್ಲಿ ಅಲಂಕಾರಗೊಂಡು ಈಗ ವಿಶ್ವದ ಮೂಲೆ ಮೂಲೆಯಲ್ಲಿ ಸಂಚರಿಸಿರಬಹುದು.
ನಮ್ಮ ಮಾತಿನಲ್ಲಿ ಹೇಳುವುದಾದರೆ ಒಂದು ಸಾಲಿನಲ್ಲಿ ಏಳು ಮಾತ್ರಾಗಳು,
ಅಂಥ ನಾಲ್ಕು ಸಾಲುಗಳ ಚೌಪದಿ.
ಏಳು ಅಕ್ಷರದಲಿ
ನಾಕೇ ಸಾಲಿನೊಳಗ
ಫಿಲಿಫೈನ್ಸ ನ ಕಾವ್ಯಾ
ಬಂದವಳೇ ತನಗ
“ತನಗ” ಕ್ಕೆ ತಲೆಬರಹ ಇಲ್ಲ. ಪ್ರಾಸ ಸಾಧ್ಯವಾಗದಿದ್ದರೆ ತ್ರಾಸ ಬೇಡ.
ಆದರೂ ಎರಡು ಮತ್ತು ನಾಲ್ಕನೇ ಸಾಲು ಅಥವಾ ಕೊನೆಯ ಎರಡು ಸಾಲು ಪ್ರಾಸವಿದ್ದರೆ ಚೆಂದ.
ಬದುಕು, ಸಂಸ್ಕೃತಿ, ಸಂಪ್ರದಾಯ
ಇತಿಹಾಸ, ಪುರಾಣ, ರಾಜಕೀಯ ಬೇಸಾಯ,ಸಮಾಜ ಹೀಗೆ ಎಲ್ಲ ವಿಷಯಗಳಲ್ಲೂ, ನವರಸಗಳಲ್ಲಿ
“ತನಗ” ರಚನೆ ಸಾಗುತ್ತಲಿದೆ.
ತಕ್ಷಣವೇ ಬಾ ಎಂದೆ
ಆ ಆಶು ಕವಿತೆಗೆ
ಮೇಕಪ್ ಇಲ್ಲದೆಯೇ
ಬರಲಿಲ್ಲ ಹೊರಗೆ
ತಕ್ಷಣದ ವಿಷಯಕ್ಕೆ ಅವಸರದಿ ಹುಟ್ಟುವ “ತನಗ”ವು ಅಲ್ಪಾಯುಸಿ, ಆದರೆ
ಸರ್ವಜ್ಞನ ವಚನದಂತೆ ಸರ್ವ ಕಾಲಕ್ಕೂ ಪ್ರಸ್ತುತ ವೆನಿಸುವ “ತನಗ”ಗಳಿಗೆ ಹೆಚ್ಚಿನ ಬೆಲೆ.
ಎಲ್ಲ ಸಾಹಿತ್ಯ ಪ್ರಕಾರಗಳಂತೆ ಈ “ತನಗ”ದ ಕೃಷಿಯಲ್ಲಿಯೂ ಪ್ರತಿಮೆ, ದರ್ಪಣ, “ಪಂಚ್” “ಪಟ್ಟು” ಗಳ ಬಳಕೆ ಸಾಹಿತಿಗಳ ಕೈಚಳಕದಲ್ಲಿದೆ.
“ತನಗ” ವನ್ನು ಕನ್ನಡಕ್ಕೆ ಪರಿಚಯಿಸಿದವರು ಡಾ|ಗೋವಿಂದ ಹೆಗಡೆಯವರು. ಮೊದಲನೇ “ತನಗ” ಸಂಕಲನ ಪ್ರಕಟಿಸಿದವರು ಹುನಗುಂದದ ಸಿದ್ದಲಿಂಗಪ್ಪ ಬೀಳಗಿಯವರು
ಈಗ ನಮಗೆ ದೊರಕಿದ ವರದಿ ಪ್ರಕಾರ ಒಟ್ಟು ಏಳು “ತನಗ” ಸಂಕಲನ ಪ್ರಗಟಗೊಂಡಿವೆ
೧ ನೀಲಿ ಕಣ್ಣಿನ ಹವಳ
ಸಿದ್ದಲಿಂಗಪ್ಪ ಬೀಳಗಿ
೨ ಪುಟಕ್ಕಂಟಿದ ಪತಂಗ
ವೀರೇಶ ಕುರಿ
೩ ತನಗ ತರಂಗ
ಡಾ|ಸುರೇಶ ನೆಗಳಗುಳಿ
೪ ತೇಲಿ ಬಂದಿದೆ ದೋಣಿ
ಪಿ ಎಲ್ ಕುಮಾರ್
೫ ನದಿಯ ಹಂಗು ಸಾಗರಕೆ
ಜಿ ಎಸ್ ಬಿಜಾಪುರ
೬. ಕಿರು ಗೆಜ್ಜೆಯ ಹಾಡು
ಸುಧಾ. ಎನ್ ತೇಲ್ಕರ್
೭ ನೀಲ ಸಾಗರ ಮಣಿ
ಶಕುಂತಲಾ ಹಿರೇಮಠ.
ಇದಲ್ಲದೇ
ಡಾ|ವೈ ಎ ಯಾಕೊಳ್ಳಿ ಹಾಗೂ
ಪ್ರಮೀಳಾ ಪಾಟೀಲ ಇವರಿಬ್ಬರ
“ತನಗ” ಸಂಕಲನ ಮುದ್ರಣ ಹಂತದಲ್ಲಿವೆ.
ನಿತ್ಯ ಹಗಲು ರಾತ್ರಿ
ಧ್ಯಾನದಲ್ಲಿ “ತನಗ”
ಹೇಳಿರುವೆ ಬರಲು
ಕನಸಲ್ಲಿ ನನಗ
ಈ ಕನ್ನಡದ “ತನಗ” ದೇವಳದ ಪ್ರಾಕಾರದಲ್ಲಿ ವಿದ್ವಾಂಸರು,ಪಂಡಿತರು, ಗುರುಗಳು, ಆರೈಕೆಗೆ ವೈದ್ಯರು, ರುಚಿಯ ತಯಾರಿಸುವ ಬಾಣಸಿಗರು, ಹಸಿವು ಹಿಂಗಿಸುವ ಅನ್ನಪೂರ್ಣಿಯರು, ಹೀಗೆ ಸಾಹಿತಿಗಳ ದಂಡೇ ಇದೆ. ಈ ಗುಂಪಿನಲ್ಲಿ ನಾನೊಬ್ಬ “ತನಗ”ದ ಪೂಜಾರಿ.
————————————–
ವ್ಯಾಸ ಜೋಶಿ