ಪ್ರೀತಿಯ ಮಗಳೇ.
ಹೇಗಿದ್ದೀಯಾ. ನೀನು ಬಿಡು ಸ್ನೇಹಿತರು ನಿನ್ನ ಮೊಬೈಲ್ ಫೋನ್ ಸೋಶಿಯಲ್ ಮೀಡಿಯಾ ಎಂದು ಹಾಯಾಗಿ ಇರ್ತೀಯಾ. ಅದು ನಿನ್ನ ವಯಸ್ಸಿಗೆ ಸಹಜವೂ ಹೌದು. ಆದರೆ ಈಗ ನಿನಗೆ ಪತ್ರ ಬರೆಯಲು ಕಾರಣ ಜೀವನದಲ್ಲಿ ನಿಮ್ಮ ಗುರಿಯಿಂದ ನಿಮ್ಮನ್ನು ವಿಚಲಿತಗೊಳಿಸುವ ಸ್ನೇಹಿತರು, ಪ್ರೀತಿ ಪ್ರೇಮದ ಭಾವಗಳು, ಸಾಮಾಜಿಕ ಜಾಲತಾಣಗಳು, ಮೊಬೈಲ್ ಫೋನ್ ಇವುಗಳ ಹೊರತಾಗಿಯೂ ಸಾಕಷ್ಟು ಬೇರೆ ವಿಷಯಗಳು ನಿಮ್ಮ ಕಿವಿಯಲ್ಲಿ ಗುಂಗಿ ಹುಳುವಿನಂತೆ ಗುಂಯ್ಗುಡುತ್ತಿರುತ್ತವೆ.
ಆದರೆ ಕೆಲ ವಿಷಯಗಳನ್ನು ನೀನು ಖಂಡಿತವಾಗಿಯೂ ಅರಿಯಬೇಕಾದ ಅವಶ್ಯಕತೆ ಇದೆ ಅವುಗಳನ್ನು ನಿನಗೆ ಹೇಳಲೆಂದೇ ಈ ಕಾಗದ.

ಸರಿಯಾದ ನಿರ್ಣಯ ತೆಗೆದುಕೊಳ್ಳುವುದು ಬಹಳ ಮುಖ್ಯ… ನೀನು ತೆಗೆದುಕೊಳ್ಳುವ ಒಂದು ನಿರ್ಣಯ ನಿನ್ನ ಜೀವನದ ದಿಕ್ಕನ್ನು ಬದಲಾಯಿಸಬಹುದು. ಹಾಗೆ ನಿರ್ಣಯ ತೆಗೆದುಕೊಳ್ಳಲು ಧೈರ್ಯವೂ ಬೇಕು. ಯಾವುದೇ ಹೊಸ ವಿಷಯವನ್ನು ನೋಡುವಾಗ, ಕಲಿಯುವಾಗ ನಿನ್ನಲ್ಲಿರುವ ದುರ್ಬಲತೆಯನ್ನು ನೀನು ಮೆಟ್ಟಲು ಧೈರ್ಯವನ್ನು ಹೊಂದಿರಲೇಬೇಕು.

ನಿಮ್ಮ ಮನೆಯ ಅಡುಗೆ ಕೋಣೆಯಲ್ಲಿ ಎಲ್ಲರೊಂದಿಗೆ ಕುಳಿತು ಮಾತನಾಡುವಷ್ಟೇ ಸಲೀಸಾಗಿ ನೀನು ನಿನ್ನ ಸ್ವಂತ ವಿಷಯಗಳನ್ನು ಮೊಬೈಲ್ ನಲ್ಲಿ ಹಂಚಿಕೊಳ್ಳಬೇಡ. ಎಲ್ಲರೂ ಒಂದೇ ರೀತಿ ಇರುವುದಿಲ್ಲ ನೀನು ಹಂಚಿಕೊಳ್ಳುವ ವಿಷಯಗಳು ಬೇರೆ ಬೇರೆ ದೃಷ್ಟಿಕೋನದಲ್ಲಿ ನೋಡಲ್ಪಡುತ್ತವೆ. ಯಾವುದೇ ವಿಷಯವನ್ನು ಹಂಚಿಕೊಳ್ಳುವ ಮೊದಲು ಎರಡು ಬಾರಿ ಯೋಚಿಸು.
ಸಾಮಾಜಿಕ ಜಾಲತಾಣಗಳಲ್ಲಿ ನೀನು ಪಡೆಯುವ ಲೈಕಗಳು ಕಾಮೆಂಟ್ಗಳು ನಿನ್ನ ಬದುಕಿಗೆ ಪ್ರಗತಿಯನ್ನು ಕೊಡುವುದಿಲ್ಲ.ನಿನ್ನ ಬದುಕಿನ ಪ್ರಗತಿಗಾಗಿ ನಿನ್ನ ಜಾಣತನವನ್ನು ಹೆಚ್ಚಿಸಿಕೋ. ಹೊಸ ವಿಷಯಗಳ ಕಲಿಕೆಯ ಮೂಲಕ ನಿನ್ನ ಜ್ಞಾನದ ಹರಹನ್ನು ಹೆಚ್ಚಿಸಿಕೋ. ಬೇರೆಯವರು ನಿನ್ನ ಕುರಿತು ಗೌರವಯುತವಾಗಿ ಯೋಚಿಸುವ ಪ್ರೀತಿಯಲ್ಲಿ ನಿನ್ನ ಬದುಕನ್ನು ರೂಪಿಸಿಕೋ. ಮೆದುಳಿನ ಬೆಳವಣಿಗೆ ಮತ್ತು ಹೃದಯ ವೈಶಾಲ್ಯತೆಯನ್ನು ಬೆಳೆಸಿಕೊಂಡರೆ ಸಾಕು ಉಳಿದೆಲ್ಲ ವಿಷಯಗಳು ನಿನ್ನ ಬದುಕಿನಲ್ಲಿ ಸುಗಮವಾಗಿ ಸಾಗುತ್ತವೆ.

ಬೇರೆಯವರಲ್ಲಿರುವ ಕುಂದು ಕೊರತೆಗಳನ್ನು ಎಣಿಸದೆ ಅವರಲ್ಲಿರುವ ಒಳ್ಳೆಯ ಗುಣಗಳನ್ನು ಮಾತ್ರ ಅವಲೋಕಿಸು. ಎಲ್ಲರೂ ಸ್ವಾರ್ಥಿಗಳಾಗಿರುವುದಿಲ್ಲ ಎಲ್ಲರೂ ನಿನ್ನ ಕುರಿತು ಮಾತನಾಡುವುದಿಲ್ಲ… ಒಂದೊಮ್ಮೆ ಬಹಳಷ್ಟು ಜನರು ನಿನ್ನ ಕುರಿತು ಮಾತನಾಡುತ್ತಿದ್ದಾರೆ ಎಂದಾದರೆ ನಿನ್ನ ವರ್ತನೆಯ ಬಗ್ಗೆ
ನೀನು ಕೊಂಚ ಅವಲೋಕನ ಒಂದು ಮಾಡು…. ನಮ್ಮ ಬೆನ್ನು ನಮಗೆ ಕಾಣುವುದಿಲ್ಲ ಅಲ್ಲವೇ?

ನಿನ್ನ ಮನದ ಪಿಸುಮಾತುಗಳಿಗೆ ನೀನೇ ಗಟ್ಟಿ ದನಿಯಾಗಬೇಕು. ನಿನ್ನ ಒಳಿತು ಕೆಡುಕುಗಳನ್ನು ನಿನ್ನ ಪಾಲಕರು ಸರಿಯಾಗಿಯೇ ಯೋಚಿಸಿರುತ್ತಾರೆ ಆದ್ದರಿಂದ ಅವರ ಮಾತುಗಳಲ್ಲಿ ಬಹಳ ಗಮನವಿರಲಿ

ಅನುಕರಣೆ ಬೇಡ…ಬಹಳಷ್ಟು ಹೆಣ್ಣು ಮಕ್ಕಳನ್ನು ನೋಡಿದಾಗ ನನಗೆ ಅನ್ನಿಸುವುದು ಇಷ್ಟೇ. ಯಾರೋ ಬೇರೆಯವರನ್ನು ಅನುಕರಿಸಲು ಹೋಗಿ ತಮ್ಮ ಸ್ವಂತಿಕೆಯನ್ನು ಕಳೆದುಕೊಳ್ಳುವ ಹೆಣ್ಣು ಮಕ್ಕಳನ್ನು ನೋಡಿದಾಗ ಮರುಕ ಎನಿಸುತ್ತದೆ. ಬೇರೆಯವರಾರೋ ಧರಿಸಿದಂತ ಬಟ್ಟೆಗಳನ್ನು ನಮಗೆ ಮುಜುಗುರವಾದರೂ ಧರಿಸಿ, ಅವರಂತೆ ಸೆಲ್ಫಿ ತೆಗೆದುಕೊಂಡು ಅವರ ಹಾವಭಾವಗಳನ್ನು ಅನುಕರಿಸುವುದರಿಂದ ನಾವು ಅವರಾಗುವುದಿಲ್ಲ ಎಂಬ ಸತ್ಯವನ್ನು ಅರಿಯದ ಬಹಳಷ್ಟು ಜನ ಹೆಣ್ಣು ಮಕ್ಕಳು ತಮ್ಮ ವ್ಯಕ್ತಿತ್ವವನ್ನು ತಮ್ಮ ಕಣ್ಣಲ್ಲಿಯೇ ಕುಬ್ಜಗೊಳಿಸಿಕೊಳ್ಳುತ್ತಾರೆ.

ಈ ಜಗತ್ತಿನಲ್ಲಿ ನಿನ್ನಂತೆ ಬೇರೊಬ್ಬರಿಲ್ಲ… ನೀನೊಂದು ಅದ್ಭುತ ಸೃಷ್ಟಿ ಎಂದು ಅರಿತು ನೀನು ನೀನಾಗಿಯೇ ನಿನ್ನ ವ್ಯಕ್ತಿಗತ ಮೌಲ್ಯವನ್ನು ವರ್ಧಿಸಿಕೊ… ಬಿ ದ ಬೆಸ್ಟ್ ವರ್ಷನ್ ಆಫ್ ಯುವರ್ಸೆಲ್ಫ್. ನಿಮ್ಮದಲ್ಲದ ವ್ಯಕ್ತಿತ್ವವನ್ನು ನೀವೆಂದು ಎಂದೂ ಬಿಂಬಿಸಲು ಪ್ರಯತ್ನಿಸಬೇಡ. ನಿನ್ನದೇ ಆದ ಸ್ವಂತ ವ್ಯಕ್ತಿತ್ವವನ್ನು ಬೆಳೆಸಿಕೊ. ಬೇರೆಯವರಂತೆ ನೀನು ನಿನ್ನ ಬಾಹ್ಯ ಸ್ಯರೂಪವನ್ನು ಬದಲಿಸಿಕೊಳ್ಳಬಹುದು… ಆದರೆ ಆಂತರಿಕವಾಗಿ ನೀನು ನೀನೇ ಆಗಿರುವೆ. ಬೇರೆಯವರನ್ನು ಮೆಚ್ಚಿಸಲು ನಿನ್ನನ್ನು ನೀನು ಬದಲಿಸಿಕೊಳ್ಳಬೇಡ. ಅಸಹಾಯಕಿ ಮತ್ತು ಮುಗ್ಧೆ ನೀನಲ್ಲ ಆದರೂ ಹಾಗೆ ನಿನ್ನನ್ನು ನೀನು ಬಿಂಬಿಸಿಕೊಳ್ಳದೆ ಇದ್ದರೆ ನಿನಗೂ ಕ್ಷೇಮ
ನಿನ್ನ ಸಂತೋಷಕ್ಕೆ ನೀನೇ ಕಾರಣವಾಗು…. ಬೇರೆಯವರು ನಿನ್ನನ್ನು ಖುಷಿ ಪಡಿಸಲಿ ಎಂದು ಆಶಿಸಬೇಡ. ನಿನ್ನ ಸಂತೋಷದ ಆಯ್ಕೆ ಕಷ್ಟವಾದರೂ ಪರವಾಗಿಲ್ಲ ನಿನ್ನ ಜೀವನದಲ್ಲಿ ತುಂಬಿರುವ! ನಿರ್ವಾತವನ್ನು ಹೊರಹಾಕಲು ಅತಿಯಾದ ಜಂಕ್ ಫುಡ್, ಡ್ರಗ್ಸ್ ಮುಂತಾದ ಮಾದಕ ಪದಾರ್ಥಗಳನ್ನು ಹತ್ತಿರಕ್ಕೂ ಸೇರಿಸಬೇಡ. ಒಳ್ಳೆಯ ಹವ್ಯಾಸಗಳನ್ನು ಆಯ್ದುಕೊಂಡು, ಉತ್ತಮ ಸ್ನೇಹಿತರ ಜೊತೆ ನಿನ್ನ ಗುರಿ ಸಾಧನೆಯ ಮೆಟ್ಟಿಲನ್ನು ಏರಲು ಪ್ರಯತ್ನಿಸು.

[4:55 pm, 21/01/2025] Veena hemanth Patil: ಒಡಹುಟ್ಟಿದವರು ಮತ್ತು ಸ್ನೇಹಿತರನ್ನು ಎಂದೂ ಅಲಕ್ಷಿಸಬೇಡ…. ಅವರ ಉಪಸ್ಥಿತಿ ನಿನ್ನ ಬದುಕಿನಲ್ಲಿ ಅತ್ಯವಶ್ಯಕ ಎಂಬ ಅರಿವಿರಲಿ.. ಸಾಮಾಜಿಕ ಜಾಲತಾಣವೆಂಬ ಭ್ರಮೆಯ ಜಗತ್ತಿನಲ್ಲಿ ಸಾವಿರ ಜನರಿದ್ದರೂ ಸಮಯಕ್ಕೆ ಆಗುವುದು ವಾಸ್ತವ ಬದುಕಿನ ಸ್ನೇಹಿತರು, ಸಂಬಂಧಿಗಳು ಮಾತ್ರ.

ನೀನು ನೀನಾಗಿರು….ನೀನು ಹೇಗಿರುವೆಯೋ ಹಾಗೆಯೇ ಇರು. ಬೇರೆಯವರು ನೀನು ಅಸಮರ್ಥಳು ಎಂದು ನೂರು ಬಾರಿ ಹೇಳಬಹುದು… ಆದರೆ ನಿನ್ನ ಸ್ವ ಸಾಮರ್ಥದ ಅರಿವು ನಿನಗಿರಲಿ. ಹಲವಾರು ಶೇಡ್ ಗಳನ್ನು, ಫೋಟೋಶಾಪ್ ಗಳನ್ನು, ಬ್ಯೂಟಿ ಪ್ಲಸ್ ಗಳನ್ನು ಅಳವಡಿಸಿ ನಿನ್ನನ್ನು ನೀನು ಸುಂದರವಾಗಿಸಿಕೊಳ್ಳಬಹುದು… ಆದರೆ ನಿನ್ನ ನಿಜದ ಸೌಂದರ್ಯ ನಿನ್ನ ಗಟ್ಟಿಯಾದ ವ್ಯಕ್ತಿತ್ವದಲ್ಲಿದೆ ಎಂಬುದು ನಿನಗೆ ನೆನಪಿರಲಿ.
ನಿನ್ನ ಕೂದಲು ಚೆನ್ನಾಗಿಲ್ಲ, ಹಲ್ಲುಗಳು ಬೆಳ್ಳಗೆ ಶುಭ್ರವಾಗಿಲ್ಲ, ನೀನು ಸ್ತೂಲಕಾಯಳು, ಎತ್ತರ ತುಸು ಕಮ್ಮಿ,ಹಣೆಯ ಭಾಗ ದೊಡ್ಡದಾಗಿದೆ, ನೀನು ಹಾಕಿರುವ ಬಟ್ಟೆಗಳು ಔಟ್ ಡೇಟೆಡ್ ಆಗಿದ್ದು ನೀನು ಧರಿಸಿರುವ ಶಿವಗಳು ಅತ್ಯಂತ ಕಡಿಮೆ ಬೆಲೆಯವಾಗಿವೆ, ಕೆಟ್ಟದಾಗಿ ಕೂಗಾಡಿ ಮಾತನಾಡುತ್ತೀಯಾ ಹೀಗೆ ಹತ್ತು ಹಲವು ಮಾತುಗಳನ್ನು ನೀನು ಪರರಿಂದ ಕೇಳಿಸಿಕೊಳ್ಳಬೇಕಾಗುತ್ತದೆ…. ನಕ್ಕು ಸುಮ್ಮನಾಗಿಬಿಡು. ನೀನು ಹೇಗೆ ಇದ್ದರೂ ನಿನಗೆ ನೀನೇ ವಿಶ್ವ ಸುಂದರಿ. ನಿನ್ನೆಲ್ಲಾ ದೈಹಿಕ ರೂಪವನ್ನು ಹಿಂದಿಕ್ಕಿ ನಿನ್ನ ವ್ಯಕ್ತಿತ್ವದ ಅಂತರಂಗಿಕ ಸ್ವರೂಪವನ್ನು ಸುಂದರವಾಗಿಸಿಕೊ. ಈ ಜಗತ್ತಿಗೆ ನೀನು ಒಂದು ಒಳ್ಳೆಯ ಕೊಡುಗೆಯಾಗು.

ಇನ್ನೂ ಗೊತ್ತಾಗದಿದ್ದರೆ ಕೇಳು… ನಿನ್ನಮ್ಮನಾಗಿ ನನಗೆ ನೀನು ಹೇಗಿದ್ದರೂ ಚೆನ್ನ. ಒಂದು ಹಂತದ ನಂತರ ಬಾಹ್ಯ ಸೌಂದರ್ಯ ನಶಿಸಿ ಹೋಗುತ್ತದೆ ಅಂತರಂಗ ಬಹಿರಂಗಗಳಲ್ಲಿ ನೀನು ಸ್ವಚ್ಛ ಶುದ್ಧ ಮನಸ್ಸಿನ ಪ್ರೀತಿಸುವ ತಾಯಿ ಹೃದಯದ ಆದರೆ ಅಷ್ಟೇ ಆತ್ಮವಿಶ್ವಾಸ, ಸ್ವಯಂ ಪ್ರೀತಿಯನ್ನು ಹೊಂದಿರುವ ವ್ಯಕ್ತಿಯಾಗಿ ಬೆಳೆದು ನಿಲ್ಲು.

ಬದುಕಿನ ಮುಂಜಾನೆಯ ಎಳೆ ಬಿಸಿಲಿನಲ್ಲಿ ನಿಂತಿರುವ ನಿನಗೆ ಬದುಕಿನ ಬರ ಬಿಸಿಲುಗಳು, ಹಲವಾರು ಏರಿಳಿತಗಳು ಸಾಲುಗಟ್ಟಿ ನಿಂತಿದೆ. ಮುಂದಿನ ಹಲವಾರು ವರ್ಷ ಬದುಕಿನ ಎಲ್ಲ ತಿರುವುಗಳನ್ನು ನೀನು ಸಾಗಲೇಬೇಕಿದ್ದು ನಿನ್ನ ಬೆಂಬಲಕ್ಕೆ ನಾವು ಇದ್ದೇ ಇರುತ್ತೇವೆ. ನೆರಳಾಗಿ ನಿನ್ನನ್ನು ಕಾಯುತ್ತೇವೆ.. ನಿನ್ನೆಲ್ಲ ಕಷ್ಟ ಸುಖಗಳಲ್ಲಿ ನಾವು ಪಾಲುದಾರರಾಗಿದ್ದೇವೆ ಎಂಬುದನ್ನು ನೆನಪಿನಲ್ಲಿಟ್ಟುಕೋ.
ಪತ್ರ ತುಸು ದೊಡ್ಡದೇ ಆಯಿತು… ಇರಲಿ ನನ್ನ ಮನದಾಳದ ಎಲ್ಲ ಮಾತುಗಳನ್ನು ನಿನಗೆ ತಿಳಿಸಿರುವೆ.

Leave a Reply

Back To Top