ಅಂಕಣ ಸಂಗಾತಿ
ಅರಿವಿನ ಹರಿವು
ಶಿವಲೀಲಾ ಶಂಕರ್
ಎಷ್ಟೋ ಬಾರಿ ಪ್ರಾಮಾಣಿಕತೆಗೆ ಬೆಲೆಯೇ ಇಲ್ಲ.
“ನಿನ್ನೊಳಗೆ ನೀ ಹೊಕ್ಕು ನಿನ್ನ ನೀನೇ ಕಂಡು ನೀನು ನೀನಾಗು ಗೆಳೆಯ.”
— ದ.ರಾ. ಬೇಂದ್ರೆ
ಜಗತ್ತು ವಿಶಾಲವಾಗಿದೆ,ಯಾವುದು ನಮ್ಮ ಅನುಮತಿಯಿಂದ ನಡೆಯುವುದಿಲ್ಲ.ಎಲ್ಲವೂ ವಿಸ್ಮಯದಲ್ಲಿ ಲೀನ! ಎಷ್ಟೊಂದು ಭಿನ್ನ ಈ ಬದುಕು.ಎಲ್ಲೊ ಹುಟ್ಟಿ ಎಲ್ಲೊ ಬೆಳೆದು ಇನ್ನೆಲ್ಲೋ ಕೂಡಿ,ಮತ್ತೆಲ್ಲೋ ಮೌನವಾಗುವ ಜೀವ ನಡೆಗೆ ನಾವು ಸಾಕ್ಷಿಯಾಗಬೇಕಿದೆ.ಮನುಷ್ಯ ಸಂಘ ಜೀವಿ.ಒಬ್ಬಂಟಿಯಾಗಿ ಜೀವಿಸಲಾರ!. ಯಾವ ಗಳಿಗೆಯಲ್ಲಿ ಏನಾಗುತ್ತದೆಯೋ…ಎಂಬ ಚಿಂತೆ!.ಯುಗಗಳು ಹೀಗೆ ಸಾಗುವುದಿಲ್ಲ,ಅದಕ್ಕೊಂದು ಮಹತ್ವದ ತಿರುವು ಇರುತ್ತದೆ.ಆಗ ಮಾತ್ರ ಉಸಿರಿಗೊಂದು ಬೆಲೆ.ಸಂಘಜೀವಿಯಾದ ಮನುಷ್ಯನಿಗೆ ಎಲ್ಲವೂ ಸಂಘರ್ಷದ ಹಾದಿಯಲ್ಲೇ ಲಭಿಸಿದೆ. ತಾನು ತನಗಾಗಿಯೆಂದು ಬಾಳಿದವರು ಹೆಸರಾಗಿಲ್ಲ ಅದರ ಬದಲು;ಕೇವಲ ವ್ಯಕ್ತಿತ್ವದಿಂದ ಹೆಸರಾದವರು ಇಂದಿಗೆ ಉಳಿದು ನಮಗೊಂದು ಜೀವನ ತಂದುಕೊಟ್ಟಿದ್ದಾರೆ ಎಂದರೆ ಅತಿಶಯೋಕ್ತಿಯಾಗಲಾರದು.
ಒಂದು ಸಂಬಂಧ ರಕ್ತ ಸಂಬಂಧಿಗಳಿಂದ ಮಾತ್ರ ಪೂರ್ಣಗೊಳ್ಳುವುದು ಎಂಬ ನಂಬಿಕೆ,ಸತ್ಯಕ್ಕೆ ದೂರ!.ಎಲ್ಲಿಯ ತನಕ ನಮ್ಮ ಕೈಕಾಲುಗಳು ಕೆಲಸ ಮಾಡುತ್ತವೆಯೋ,ಅಲ್ಲಿಯ ತನಕ ನಾವು ಈ ಜಗತ್ತಿಗೆ ಹೊರೆಯಾಗುವುದಿಲ್ಲ.ದುಡ್ಡು ನಮ್ಮ ಬೆನ್ನ ಮೇಲೆ, ತಲೆಯ ಮೇಲೆ ಅದರ ಸವಾರಿ ಜಮಾಯಿಸುವಾಗಲೂ ಜಗತ್ತು ಸುಂದರಕ್ಕಿಂತ ಸುಂದರ!
“ಜನ ಮರುಳೋ ಜಾತ್ರೆ ಮರುಳೋ” ಎಂಬ ಗಾದೆ ಮಾತಿನಂತೆ, ಜನಜೀವನ ಪ್ರಗತಿದಾಯಕ.ಕಿಸೆ ತುಂಬ “ಝಣ್ ಝಣ್ “ಸದ್ದು ಯಾರಿಗೆ ತಾನೆ ಬೇಡ ಹೇಳಿ. ಹಣದ ಮುಂದೆ ಹೆಣವು ಬಾಯ್ ತೆರೆಯುವುದೆಂಬ ಮಾತಿದೆ.ಇನ್ನೂ ಸಂಬಂಧಗಳು ಯಾವ ಲೆಕ್ಕ? ಎಷ್ಟೋ ಬಾರಿ ಪ್ರಾಮಾಣಿಕತೆಗೆ ಬೆಲೆಯೇ ಇಲ್ಲ!. ಉಪಕಾರಕ್ಕೂ ತಾತ್ಸಾರ ಭಾವಗಳು!.ಅದರಲ್ಲೂ ಕಿತ್ತುಕೊಂಡು ತಿನ್ನುವ ಮನೋಭಾವಗಳು ಜನಜೀವನ ಛಿದ್ರವಾಗಲು ಅದುಕೂಡ ಇಂದಿನ ದಿನಗಳಲ್ಲಿ ಸಾಕ್ಷಿಯಾಗಿ ನಿಲ್ಲುತ್ತಿರುವುದು ಮಾನವೀಯ ಸಂಬಂಧಗಳಿಗೆ ಮುಖವಾಡದ ಲೇಪನವಾಗಿರುವುದು ದುರಂತವೇ ಸರಿ.
ಹಿಂದೆಲ್ಲ,ಮನುಷತ್ವದ ಮೇಲೆ ಬಲವಾದ ನಂಬಿಕೆ.ಪ್ರಾಣಿಗಳು ನಿಯತ್ತಿಗೆ ಹೆಸರಾಗಿರುವುದು ಅದಕ್ಕೆ ಸಾಕ್ಷಿ!.ಪಂಜರದ ಗಿಳಿಗೂ,ಸ್ವತಂತ್ರ ಗಿಳಿಗೂ, ಕಟುಕನ ಗಿಳಿಗೂ,ಯೋಗಿಯ ಮನೆಯ ಗಿಳಿಗೂ,ಇರತಕ್ಕ ವ್ಯತ್ಯಾಸ ಗಮನಿಸಿದರೆ,ನಾವೆಲ್ಲ ಕಲಿಯಬೇಕಾದ ವಿಚಾರಗಳು ಹಾಗೂ ಯಾವುದಕ್ಕೆ ಎಷ್ಟು ಮಹತ್ವ ಕೊಡಬೇಕು ಎಂಬ ಸಂಸ್ಕಾರ ಮೇರು ಶಿಖರವಾಗಿ ನಿಖರವಾಗಿ ನಿಲ್ಲುತ್ತದೆ.”ಗೆಳೆತನ”ಕ್ಕೆ ಅದರದ್ದೆ ಆದ ಹಿನ್ನಲೆ ಇದೆ.ಬದುಕಿನ ಯಾತ್ರೆಯಲ್ಲಿ ನಮಗೆದುರಾಗುವ ಸ್ನೇಹಿತರನ್ನು ಮರೆಯಲು ಸಾಧ್ಯವಿಲ್ಲ.ಒಂದು ಆ ಸ್ನೇಹದಿಂದ ಜೀವನ ಉಜ್ವಲವಾಗಿರಬಹುದು ಅಥವಾ ನಶಿಸಿರಬಹುದು.ಸ್ನೇಹ ಮಾಡುವ ಮೊದಲು ಸಾವಿರಸಲ ಯೋಚಿಸಿ ನಂಬಿದರೂ,ಕೊನೆಗೊಂದು ಸಮಯ ಕಳೆದಂತೆ ಆ ಗೆಳೆತನ ತುಕ್ಕು ಹಿಡಿಯುವುದು ಉಂಟು.ವಿಚಿತ್ರ ನೋಡಿ,ಬಡವರ ಗೆಳೆತನ ಬಯಸುವವರು ಸಾವಿರದಲ್ಲಿ ಬೆರಳೆಣಿಕೆಯಷ್ಟು ಮಾತ್ರ!. ಇಳಿದವರೆಲ್ಲ ಆಸ್ತಿ ಅಂತಸ್ತುಗಳ ಕಾಯ್ದುಕೊಳ್ಳುವ ಹೊಯ್ದಾಟ!.
ಅರವಿಯ ಹಂಗಿಲ್ಲ
ಜನಿವಾರದ ಗುಂಗಿಲ್ಲ
ದುಷ್ಟರ ಸಂಗಿಲ್ಲ
ಅಹಂಕಾರದ ಗುಂಗಿಗೆ
ನಿಂದನೆಯ ಶಾಪವಾತಲ್ಲ
ಗೆಳೆತನದ ಸಿರಿವಂತಿಕೆಗೆ
ಕೊರಡುಕೊನರಿತಲ್ಲ…
ಸಮಾಜದಲ್ಲಿ ಕೃಷ್ಣ ಸುಧಾಮರ ಸ್ನೇಹ,ಕರ್ಣ ದುರ್ಯೋಧನನ ಸ್ನೇಹದ ಚರ್ಚೆ ಆದಾಗ್ಯೂ ಇವೆರಡರ ನಡುವೆ ಇರುವ ಮೌಲಿಕ ಆಧಾರಗಳು ಭಿನ್ನವಾಗಿ ನಿಲ್ಲುತ್ತವೆ.ನೈಜ ಜಗತ್ತಿನ ಗೆಳೆತನ ಹೀಗೂ ಇರಬಹುದು ಅಥವಾ ಇರದೆಯು ಇರಬಹುದು.ನಮ್ಮ ನಮ್ಮ ಜೀವನದಲ್ಲಿ ಗೆಳತನಕ್ಕೆ ನಾವು ಕೊಟ್ಟಿರುವ ಸ್ಥಾನದ ಬಗ್ಗೆ ನಮಗೊಂದಿಷ್ಟು ಪರಿಕಲ್ಪನೆ ಇದೆ. ನಮ್ಮ ಗೆಳೆತನದ ಲಾಭ ಪಡೆದು ನಾವು ಯಾವಾಗಲೂ ಹೀಗೆ ಇರುತ್ತಿವಿ ಎಂಬ ಭ್ರಮೆಯನ್ನು ಕೆಲವೇ ವರ್ಷಗಳಲ್ಲಿ ಅದನ್ನು ಹುಸಿಯಾಗಿಸಿ ಗೆಳೆತನಕ್ಕೆ ಅಹಂಕಾರದ ಲೇಪನ ಮಾಡಿ ದೂರವಾದ ಅನೇಕ ಗೆಳಯ ಗೆಳತಿಯರನ್ನು ಕಣ್ಣಾರೆ ಕಂಡು ಮೌನವಾಗಿದ್ದು ಕಣ್ಮುಂದಿದೆ.ಇಂತಹ ಸನ್ನಿವೇಶದಲ್ಲಿ ಯಾರಿಗೆ ಯಾರು ಆಸರಾಗಿ ನಿಲ್ಲಲ್ಲು ಸಾಧ್ಯ ಹೇಳಿ? ಭಯ,ಸಂಕೋಚ,ಅಸಹಾಯಕ ಗಳಿಗೆಗಳು ಎಲ್ಲವೂ ವಿಚಿತ್ರವಾಗಿ ನಿಲ್ಲುತ್ತವೆ.ನಾವು ಯಾವತ್ತೂ ನಮ್ಮೊಳಗೆ ಇಳಿದು ಚಿಂತಿಸಿಲ್ಲ.ಮತ್ತು ನಮ್ಮ ನಾವು ಅರಿಯಲು ಪ್ರಯತ್ನ ಕೂಡ ಮಾಡಿಲ್ಲ.ಹೀಗಿರುವಾಗ ಜೀವನದ ವಾಸ್ತವಿಕ ಮೌಲ್ಯವನ್ನು ಜಗತ್ತಿಗೆ ಸಾರುವ ಫಕೀರ್ ಆಗಲು ಹೇಗೆ ಸಾಧ್ಯ? ಸಾಧು ಸಂತರ ನಡುವೆ ಕಪಟ ಸನ್ಯಾಸಿಯಾಗಿ ಜೀವಿಸಲು ಆದಿತೆ? ನೈಜತೆಯ ಮುಖವಾಡ ಎದುರಾದಾಗ ಆಗುವ ಸಂಕಟ ಯಾರಿಗೂ ಬೇಡ..ಇನ್ನೂ ಮೋಸಹೊದ ಸ್ನೇಹ ನಮ್ಮೊಂದಿಗೆ ಬಲವಾಗಿ ಸ್ಥಿರಗೊಳ್ಳಲು ಹೇಗೆ ತಾನೆ ಸಾಧ್ಯ?.
ಒಟ್ಟಾರೆಯಾಗಿ ಹೇಳುವುದಾದರೆ, ವಿಸ್ಮಯ ವಿರೋಧಿಯಾಗಿ ಬದುಕುವ ಧೈರ್ಯ,ಶೌರ್ಯವನ್ನು ಯಾರು ತೋರಿಸಿಲ್ಲ.ಆದರೆ ಜಗತ್ತಿನ ವಿವಿಧ ನೈಪುಣ್ಯತೆಗೆ ಪರಸ್ಪರ ಸಹಕಾರ ಮನೋಭಾವ ಮಾತ್ರ ಸಹಕಾರಿಯಾಗಬಲ್ಲದು.ಇದೊಂದೇ ಪರಿಹಾರವಲ್ಲ.ಮನುಷ್ಯನ ಬದುಕು ಒಂಟಿಯಾಗಿ ಬದುಕುವ ಪ್ರಯತ್ನದ ನಂತರವೇ ಸ್ಥಿರವಾಗಿ ಉಳಿಯುತ್ತದೆ. ಕಾರಣ ನೀರ ಮೇಲಿನ ಗುಳ್ಳೆಯಂತೆ ಕ್ಷಣಮಾತ್ರದಲ್ಲಿ ಇಲ್ಲವಾಗುವ ಪರಿಯನ್ನು ಉಹಿಸಲು ಸಾಧ್ಯವಿಲ್ಲ.ಇನ್ನೂ ಗೆಳೆಯರಾಗುವ ಯೋಗ ಪಡೆದುಕೊಂಡವರು ಮಾತ್ರ ನಿಸ್ವಾರ್ಥ ತ್ಯಾಗ ಮನೋಭಾವದ ಫಲವಾಗಿ ಲಭಿಸಲು ಸಾಧ್ಯ.ಅದು ಶಾಶ್ವತವಾಗಿ ನಿಲ್ಲುತ್ತದೆ.ಕ್ಷಣಿಕ ಸ್ನೇಹ ಅಪಾಯದ ಮುನ್ನುಡಿ ಬರೆಯಲು ಕಾರಣಿಕರ್ತವಾಗುತ್ತ ಸಾಗುತ್ತದೆ.ಅದೊಂದು ವಿನಾಶದತ್ತ ಹೆಜ್ಜೆ ಹಾಕಿದಂತೆ. ಮಕರಂದವನ್ನು ಕಲೆಹಾಕಿದ ಜೇನುನೊಣಗಳು ತಾವು ಸಂಗ್ರಹಿಸಿದ ಜೇನನ್ನು ತಾವೆಂದಾದರೂ ಬಳಸಲು ಅವಕಾಶ ನಾವು ನೀಡಿದ್ದೆವೆಯೇ? ಎಂಬ ಪ್ರಶ್ನೆಗೆ ಬಹುಶಃ ಸಿಗಲಿಕ್ಕಿಲ್ಲ…ಸ್ನೇಹದ ಆಯಾಮಗಳು ಭಿನ್ನವಾಗಿ ನಿಂತಿರುವುದು ಇದಕ್ಕೆ ಕಾರಣ!. ಅದರೂ ಪ್ರಾಮಾಣಿಕ ಗೆಳೆತನ ಸಿಕ್ಕಿದ್ದರೆ ಅದನ್ನು ಕಳೆದುಕೊಂಡು ನರಳುವ ಸ್ಥಿತಿಗೆ ಹೋಗದಿರುವುದು ಲೇಸು.
ಶಿವಲೀಲಾ ಶಂಕರ್