ಡಾ.ಯಲ್ಲಮ್ಮ ಕೆ ಅವರ ಕವಿತೆ-ʼಡಸ್ಟ್‌ ಬಿನ್ʼ

ಕೆಲಸಕ್ಕೆ ಬಾರದ
ಕೆಲ ಪಡಿ-ಪದಾರ್ಥ,
ಕೆಟ್ಟಿರುವ,ಹರಿದ-ಮುರಿದ,
ಹದಗೆಟ್ಟ ಸಂಬಂಧಗಳನ್ನು
ಕಸದ ಬುಟ್ಟಿಗೆ ಎಸೆಯುತ್ತಾರೆ..,

ಕೋತಿಯ ಕೈಗೆ ಸಿಕ್ಕು
ತಿಪ್ಪೆಗೆ ಬಿಸುಟಿದ ಮಾಣಿಕ್ಯದಂತೆ
ನನ್ನೀ ಬಾಳು!

ಕಸದಿಂದಲೇ ರಸ-
ವೆಂಬುದರಿಯದ ಜನರೆದಿರು,  
ಕಸವೆಂದು ತಿಳಿದು
ಬುಟ್ಟಿಗೆಎಸೆದವರೆದಿರು,
 ಕಸುವಿನಿಂದಲೇ ಮೇಲೆದ್ದು
ತೋರಬೇಕಿದೆ ತಾನಾರೆಂಬುದುನು?

ಕಾಲಡಿಯ ಕಸವೆಂದು
ಧೂಳವ ಕೊಡವಿದ
ಜನರ ಹಣೆಗೆ
ಅಂಗಾರ-ವಾಗಬೇಕಿದೆ!

ಕವಡೆ-ಕಾಸಿನ
ಕಿಮ್ಮತ್ತು ಕೊಡದೆ
ಕಸವೆಂದು ತಿಪ್ಪೆಗೆಸೆದ
ಜನರೆದುರು ;

ತಿಪ್ಪೆ ಉಪ್ಪರಿಗೆ
ಆಗುವ ಪರಿಯ
ಬೆಡಗು ತೋರಬೇಕಿದೆ!

ಕಸದಬುಟ್ಟಿ ಎಂದರೆ
ಬರೀ ಕಸವಲ್ಲ,
ನವರಸದ ಗಣಿಯದು.


Leave a Reply

Back To Top