ಕಥಾ ಸಂಗಾತಿ
ರತ್ನಾ ಪಟ್ಟರ್ಧನ್
“ಜಲಕನ್ಯೆ”
ಅವನು ಸಮುದ್ರ ಕಿನಾರೆಯ ಬಂಡೆಯ ಮೇಲೆ ಕುಳಿತು ಕೊಳಲನ್ನು ನುಡಿಸುತ್ತಿದ್ದ. ಯಾವ ಜಂಜಾಟದ ಬಂಧನಗಳಿಲ್ಲ. ಅರ್ಧ ಕಣ್ಣು ಮುಚ್ಚಿ ಈ ಬಿಟ್ಟೂ ಬಿಡದ ಮಾಯೆಯಲ್ಲಿ ಒಂದಾದ ಅವನ ಹೆಸರು ‘ಪುರುಷ’.
ಪುರುಷನೆಂದರೆ ಅಂತಿಂಥಾ ಪುರುಷನಲ್ಲ. ಉಬ್ಬಿದ ಮೈಕಟ್ಟಿನ ಸುಂದರಾಂಗ ಚೆಲುವ ಅವನು. ನೋಡಿದರೆ ಮತ್ತೊಮ್ಮೆ ನೋಡಬೇಕು…. ಮಗದೊಮ್ಮೆ ನೋಡಬೇಕು ಎನ್ನುವಂಥಾ ಚೆಲುವ ಚೆನ್ನಾಗಿರಾಯ. ಅವನ ಚೆಲುವಿನ ಗುಟ್ಟು ಅವನಿಗೆ ತಿಳಿದಿಲ್ಲ ಎಂದೇನಿಲ್ಲ. ಅವನಿಗೆ ಚೆನ್ನಾಗಿ ತಿಳಿದಿದೆ. ಇನ್ನು ಆ ಬಿದಿರಿನ ಕೋಲು ಹಿಡಿದನೆಂದರೆ ಇನ್ನು ಊಹಿಸಿಕೊಳ್ಳಿ… ಅವನು ಹೇಗೆ ಕಾಣುವನೆಂದು.
ತನ್ಮಯತೆಯನ್ನೇ ಹೊದ್ದವನಿಗೆ ಪ್ರಪಂಚದ ಗೊಡವೆ ಇರಲಿಲ್ಲ. ಆಗ ಅವನು ಕಡಲಿನ ಕಿನಾರೆಯ ನೀರಿನಲ್ಲಿ ಕೋಲ್ಮಿಂಚೊoದನ್ನು ಕಂಡ.
ಆ ‘ಅದು’ ನೀರಿನಲ್ಲಿ ಚಲಿಸುವ ಮೀನಂತೂ ಅಲ್ಲ. ನೀರಿನ ಮೇಲ್ಮೈ ಮೇಲೆ ಬರುತ್ತದೆ, ಕ್ಷಣಾರ್ಧದಲ್ಲಿ ಕಣ್ಮರೆಯಾಗುತ್ತದೆ.
ಒಂದು ನಿಮಿಷದ ಚಿತ್ತ ಚಾಂಚಲ್ಯಯಿಂದ ಕೊಳಲು ವಾದನ ನಿಂತಿತು. ಎದುರಿಗೆ ಕಾಣುತ್ತಿರುವ ತುಂಟಾಟ ಚಿನ್ನಾಟ ಅವನಿಗೂ ಮುದ ಕೊಟ್ಟಿತು. ಈ ಕ್ರಿಯೆ ಸತತವಾಗಿ ನಡೆಯುತ್ತಿದ್ದಾಗ ಅವನಿಗೆ ಅದೇನೆಂದು ನೋಡುವ ಕುತೂಹಲ ಉಂಟಾಯಿತು. ಕೊಳಲನ್ನು ಬದಿಗೆ ಇರಿಸಿ, ಬಂಡೆಯ ಮೇಲಿನಿಂದ ಇಳಿದ. ಸಾವಕಾಶವಾಗಿ ನೀರಿನ ಚಿಕ್ಕ ಅಲೆಗಳ ಮೇಲೆ ಹೆಜ್ಜೆ ಹಾಕಿದ.
ಈಗಷ್ಟೇ ನೋಡಿದ ಮಿಂಚುಳ್ಳಿ ಒಮ್ಮಿಂದೊಮ್ಮೆಲೆ ಕಾಣೆಯಾಯಿತು. ತನ್ನ ಕಣ್ಣೇ ಮೋಸ ಮಾಡಿತೇ. ತನಗುಂಟಾದ ಅನುಭವ ಬರೀ ಭ್ರಮೆಯೇ ತಿಳಿಯದಾಯಿತು.
ಅರೆ…. ಪಕ್ಕದಲ್ಲೆಲ್ಲೊ ಕಿಲ ಕಿಲನೆ ನಕ್ಕಂತಾಯಿತು. ನೀರಿನ ಮೇಲ್ಮೈ ಮಟ್ಟಕ್ಕೆ ಬಗ್ಗಿ ನೋಡಿದಾಗ ಅಲ್ಲೊಬ್ಬ ಪುಟ್ಟ ಅನುಪಮ ಸುಂದರಿ ನಿಂತಿದ್ದಾಳೆ!
ಮೈಯ್ಯೆಲ್ಲ ಮನುಷ್ಯರದು. ಕಾಲುಗಳು ಮಾತ್ರ ಮೀನಿನ ಬಾಲ! ಒಂದು ಕಾಲದಲ್ಲಿ ತಾನು ಕೂಡ ಹೀಗೆಯೇ ಇದ್ದೆ. ವಿಶಾಲ ಸಮುದ್ರದ ನೀರಿನಲ್ಲಿ ಸ್ವಚ್ಛಂದವಾಗಿ ಈಜುತ್ತ, ಸಮುದ್ರದ ತಳದಲ್ಲಿರುವ ಹವಳದ ದಿಬ್ಬ, ಮುತ್ತಿನ ಚಿಪ್ಪುಗಳ ಮಧ್ಯೆ ಕಾಲ ಕಳೆದಿದ್ದೆ. ನೀರಿನ ಮೇಲ್ಮೈಮೇಲೆ ಬಂದು ಆಕಾಶದೆಡೆಗೆ ಮುಖವೆತ್ತಿ ಇನ್ನೊಂದು ಜಗತ್ತನ್ನು ನೋಡಿದ್ದೇನೆ. ಸಾಕಷ್ಟು ತಿಳಿದಿದ್ದೇನೆ.
ಆಂ… ಈಗ ನೆನಪಾಯಿತು. ಈ ಪುಟ್ಟ ಸುಂದರಿ ಜಲಕನ್ಯೆ, ಸಮುದ್ರದಲ್ಲಿ ವಾಸಿಸುವ ಸಮುದ್ರ ರಾಜನ ಮಗಳು. ತನ್ನ ಪ್ರಿಯದನ್ನೆಯನ್ನೇ ಹೋಲುವ ಅವಳ ಕಿರಿಯ ಸೋದರಿ. ಹೋಲಿಕೆ ಒಂದೇ ಇದೆ!
ಮನೆಯವರೆಲ್ಲರ ಮುದ್ದಿನ ಪುಟಾಣಿ ಜಲಕನ್ಯೆ ಬಹಳ ಚುರುಕಿನ ಹುಡುಗಿ. ಅವಳನ್ನು ಹಿಡಿಯುವುದೇ ಕಷ್ಟ. ಇವಳಿಗೋ…. ಸುತ್ತ ಮುತ್ತಲೆಲ್ಲ ಶೋಧಿಸಿ ನೋಡುವಾಸೆ. ರಾಜ ರಾಣಿಯರಿಗೆ ಮಗಳ ಮೇಲಿನ ಮಮಕಾರದಿಂದ ಅವಳ ರಕ್ಷಣೆಯೊಂದೇ ಅವರ ಧ್ಯೇಯ ಎಂದು ತಿಳಿದವರು. ಈಗಾಗಲೇ ಅವರು ಒಬ್ಬ ಮಗಳನ್ನು ಕಳೆದುಕೊಂಡಿದ್ದಾರೆ.
ಅಂದದ ಅರಮನೆಯ ಮುತ್ತಿನ ಗೋಡೆಗಳ ಮಧ್ಯೆ ಹವಳದ ಜೋಡಣೆಯ ಕಿಟಕಿಗಳು. ಚಿಪ್ಪಿನ ಮೇಲ್ಚಾವಣಿಯ ಅಂದದ ಅರಮನೆ. ಆ ಅರಮನೆಯ ಆಕರ್ಷಣೆಯೇ ಈ ಜಲಕನ್ಯೆ.
ಕೋಣೆಯಿಂದ ಕೋಣೆಗೆ ಈಜಿ ಚಿಮ್ಮತ್ತಾ ಈಜಾಡುವ ಇವಳನ್ನು ನೋಡಿಕೊಳ್ಳಲು ಒಬ್ಬಳು ಅಜ್ಜಿ ಇದ್ದಾಳೆ. ಆ ಅಜ್ಜಿಯ ಕಣ್ಣು ತಪ್ಪಿಸಿ, ಸುತ್ತ ಮುತ್ತಲು ಎಲ್ಲಾದರೂ ಹಡಗುಗಳು ಮುಳುಗಿದ್ದರೆ ಅದರಿಂದ ಬೆಲೆ ಬಾಳುವ ವಸ್ತುಗಳನ್ನು ಶೇಖರಿಸಿ ತರುತ್ತಾಳೆ. ಇವಳ ಸಂಗ್ರಹಣೆಯನ್ನು ನೋಡಿ ಹಿರಿಯರು ನಗುತ್ತಿದ್ದರು. ಐಶ್ವರ್ಯದ ಮಧ್ಯೆ ಇರುವ ನಮಗೆ ಇದಕ್ಕಿಂತ ಬೆಲೆ ಬಾಳುವ ವಸ್ತುಗಳ ಸಂಗ್ರಹಣೆ ಬೇಕೆ ಎನ್ನುತ್ತಾರೆ.
ಇವಳಿಗೋ ಸುತ್ತಲೂ ಇರುವ ಮುತ್ತು ಹವಳಗಳ ಜೊತೆ ಜೊತೆ ಬೆಳೆದವಳಿಗೆ, ಇವಳು ಹುಡುಕಿ ತರುವುದೇ ಅನರ್ಘ್ಯ ವಸ್ತುಗಳು.
ಹೊರ ಜಗತ್ತು ನೋಡುವ ಆಸೆಯಿಂದ, “ಅಜ್ಜಿ…. ಅಜ್ಜಿ….ಸಮುದ್ರದ ಆಚೆ ಏನಿದೆ?” ಎಂದು ಕೇಳಿದಳು.
ಆಗ ಅಜ್ಜಿ ಕೋಪದಿಂದ, “ದುಷ್ಟ ಪ್ರಪಂಚವಿದೆ” ಎಂದಳು.
ಅಜ್ಜಿಯ ಉತ್ತರ ಮಿಂಚುಳ್ಳಿ ಜಲಕನ್ಯೆಗೆ ಸಮಾಧಾನ ಕೊಡಲಿಲ್ಲ. ಹೆಚ್ಚು ಕೇಳಿದಾಗ…. ನೀನಿನ್ನೂ ಚಿಕ್ಕವಳು ಎನ್ನುವ ಸಮಾಧಾನದ ಉತ್ತರದಿಂದ ಬೇಸತ್ತಳು.
ಇದೇ ರೀತಿಯಲ್ಲಿ ಬಹಳ ದಿನಗಳು ಅಜ್ಜಿಯನ್ನು ಕೇಳಿ ಪೀಡಿಸಿದಳು. ಇನ್ನು ಹೆಚ್ಚು ದಿನಗಳು ವಿಷಯ ಮುಚ್ಚಿಟ್ಟು ಪ್ರಯೋಜನ ಇಲ್ಲವೆಂದು ತಿಳಿದ ಅಜ್ಜಿ, “ನಿನ್ನ ಅಕ್ಕ ಹಠಮಾಡಿ ಸಮುದ್ರದ ಮೇಲ್ಮೈಗೆ ಹೋಗುತ್ತಿದ್ದಳು. ಒಮ್ಮೆ ಹಾಗೆ ಹೋದವಳು ಹಿಂತಿರುಗಿ ಬರಲಿಲ್ಲ. ಎಲ್ಲರೂ ಕಂಗಾಲಾದೆವು. ಅವಳನ್ನು ಸಮುದ್ರದ ಮಾಟಗಾತಿ ಬಂಧಿಸಿದ್ದಳು. ಆಗ ಅವಳನ್ನು ಮಾಟಗಾತಿಯಿಂದ ಬಿಡಿಸಲು ಹೋದ ಎಷ್ಟೋ ಜನರು ಸಾವಿಗೀಡಾದರು” ಎಂದಳು.
ಇದನ್ನು ತಿಳಿದ ಪುಟ್ಟ ಜಲಕನ್ಯೆ ಅಕ್ಕನ ಸ್ಥಿತಿಗೆ ಕಣ್ಣೀರು ಹಾಕಿದಳು. ಹೇಗಾದರೂ ಮಾಡಿ ಅಕ್ಕನ ಬಗೆಗೆ ತಿಳಿಯಲು ಮುಂದಾದಳು. ಹೇಗಾದರೂ ತಂದೆತಾಯಿಯನ್ನು ಒಪ್ಪಿಸುವ ಪಣ ತೊಟ್ಟಳು.
ವಿಷಯ ಹೇಳಿದರೆ ಅವರು ಒಪ್ಪುವುದಿಲ್ಲ ಎಂದು ತಿಳಿದಿದೆ. ಅದಕ್ಕೇ ಅವರ ಬಳಿ, ‘ತಾನೂ ಸಮುದ್ರದ ಸೌಂದರ್ಯ ನೋಡಬೇಕು’ ಎಂದು ದುಂಬಾಲು ಬಿದ್ದಳು. ಅವರು ಒಪ್ಪಲಿಲ್ಲ. ನಿರಂತರವಾಗಿ ಕಾಡಿದ ನಂತರ ಒಂದು ದಿನ ಅವಳ ತಂದೆ ಸಮುದ್ರದ ಮೇಲ್ಮೈ ಮೇಲೆ ಹತ್ತು ನಿಮಿಷಗಳು ಹೋಗಿ ಹಿಂದಿರುಗಿ ಬರಲು ಒಪ್ಪಿಗೆ ಕೊಟ್ಟನು.
ತಂದೆ ಒಪ್ಪಿಗೆ ಕೊಟ್ಟ ತಕ್ಷಣ ಅವಳು ತಡ ಮಾಡದೆ ತನ್ನ ಸೊಂಟದ ಕೆಳ ಭಾಗವನ್ನು ನೀರಿಗೆ ಹೊಡೆಯುತ್ತಾ ಮುಖವನ್ನು ಮೇಲೆ ಮಾಡಿ ಸಮುದ್ರದ ಮೇಲ್ಮೈಗೆ ಬಂದಳು.
ಆಹಾ…. ಎಂತಹ ಸುಂದರ ದೃಶ್ಯ. ಸ್ವಚ್ಛ ಗಾಳಿ, ಮೇಲೆ ನೋಡಿದರೆ ಬಂಗಾರದ ಬಣ್ಣ ಹೊದ್ದ ಆಕಾಶ. ಆಕಾಶದೆತ್ತರಕ್ಕೆ ಹಾರುವ ಹಕ್ಕಿಗಳು ಕೆಲವೊಮ್ಮೆ ಸಮುದ್ರದ ತೆರೆಯ ಮೇಲೆ ಹಾಯ್ದು ಚಿನ್ನಾಟವಾಡುತ್ತವೆ. ಎಲ್ಲಿಂದ ಎಲ್ಲಿಗೆ ನೋಡಿದರೂ ಜಲ ರಾಶಿ. ಅವಳಿಗೆ ಅಲ್ಲಿಂದ ಹಿಂದಿರುಗಲು ಮನಸ್ಸೇ ಬರಲಿಲ್ಲ. ಆದರೆ….ತಂದೆ ಕೊಟ್ಟ ಸಮಯದ ನೆನಪಾಯಿತು. ತಕ್ಷಣ ಹಿಂದಿರುಗಿದಳು.
ಆ ನಂತರ ತಂದೆತಾಯಿಯ ಮನ ಒಲಿಸಿ ಹೊರ ಪ್ರಪಂಚ ನೋಡುವ ಅವಕಾಶ ಸಿಗತೊಡಗಿತು. ಸಮಯದ ಅಂತರ ಹೆಚ್ಚಾದಂತೆ ಒಂದು ಬಗೆಯ ವಿಶ್ವಾಸ ಹೆಚ್ಚಿತು.
ಕೆಲವು ಬಾರಿ ಸಮುದ್ರದ ಮೇಲ್ಮೈಗೆ ಬರುತೊಡಗಿದಳು. ಆಶ್ಚರ್ಯ…. ತಲೆ ಎತ್ತಿ ನೋಡಿದಾಗ ಆಕಾಶ ಕೆಲವೊಮ್ಮೆ ನೀಲಿಯಾಗಿ ಕಾಣುತ್ತದೆ. ಕೆಲವೊಮ್ಮೆ ಕಿತ್ತಳೆಯ ಬಣ್ಣ ಹೊಂದಿದರೆ, ಕೆಲವೊಮ್ಮೆ ಗಾಢವಾದ ನಿಗಿ ನಿಗಿ ಹೊಳೆಯುವ ಕೆಂಪು ವರ್ಣ. ಕೆಲವು ಬಾರಿ ಕಪ್ಪು ಬಣ್ಣ ಹೊಂದಿರುತ್ತದೆ. ಕೆಲವೊಮ್ಮೆ ಕಾರಿರುಳು!
ಆಕಾಶದ ಈ ಅಗಮ್ಯ ಒಡನಾಟದಲ್ಲಿ ಹಲವುಬಾರಿ ನಸು ನಗುವ ಚಂದ್ರನನ್ನು ನೋಡಿದ್ದಾಳೆ. ಅಸಂಖ್ಯ ಸಂಖ್ಯೆಯಲ್ಲಿ ನಕ್ಷತ್ರಗಳು ಚುಕ್ಕಿಗಳಂತೆ ಚದುರಿ ನಗುತ್ತವೆ. ಅವುಗಳೋ…. ಚಂದ್ರನೊಂದಿಗೆ ಕಣ್ಣು ಮುಚ್ಚಾಲೆಯಾಟ ಆಡುವವು. ಹೀಗೆ ರಾತ್ರಿ ಮತ್ತು ಹಗಲಿನ ಕಣ್ಣು ಮಿಟುಕಿಸುವ ಪರಿ ನೋಡಿ ಮೂಕ ವಿಸ್ಮಿತಳಾದಳು.
ನೀರಿನ ಒಳಗೆ ತಮ್ಮದೇ ಪ್ರಪಂಚ. ದೊಡ್ಡ ಚಿಕ್ಕ ಬಂಡೆಗಳು. ಅವುಗಳ ಆಶ್ರಯದಲ್ಲಿ ಬೆಳೆಯುವ ಜೊಂಡೆ ಗಿಡಗಳು. ಅಲ್ಲೂ ನೆರಳು ಬೆಳಕುಗಳ ಅಂಧಕಾರವಿದೆ. ಆದರೆ ಅದೆಲ್ಲ ಅಭ್ಯಾಸ ಆದವಳಿಗೆ ಹೊರಗೊಂದು ಪ್ರಪಂಚದ ಪರಿಸರ ಕುತೂಹಲವನ್ನು ಉಂಟುಮಾಡಿತು.
ಈಗ ದೂರ ದೂರದ ವರೆಗೂ ಈಜಾಡಿ ವಿಷಯ ಸಂಗ್ರಹಿಸುತ್ತಾಳೆ. ಹಲವಾರು ಚಿಕ್ಕ ದೊಡ್ಡ ನದಿಗಳು ಸಾಗರದಲ್ಲಿ ಲೀನವಾಗುತ್ತವೆ ಎಂದು ಅವಳಿಗೆ ತಿಳಿದಿದೆ. ಮಂಜುಗಡ್ಡೆಗಳು ಹರಿದು ಸಮುದ್ರದ ನೀರಿನೊಂದಿಗೆ ಬೆರೆಯುತ್ತದೆ. ಹಲವು ದೈತ್ಯಾಕಾರದ ಮಂಜು ಗೆಡ್ಡೆಗಳು ನೀರಿನಲ್ಲಿ ತೇಲುವಾಗ ಹೆದರುತ್ತಾಳೆ. ಅವುಗಳು ಕರಗಿ ಸಮುದ್ರ ಉಕ್ಕೇರಿದರೆ!
ಸಮಸ್ತ ಜಲಚರಗಳ ಪರಿಚಯ ಅವಳಿಗಿದೆ. ಸಾಗರದ ಮೇಲ್ಮೈ ಮೇಲೆ ತೆರೆಗಳು ಏಳುತ್ತವೆ ಎಂದು ತಿಳಿದಿದೆ. ಸಮುದ್ರದಲ್ಲಿ ದೈತ್ಯಾಕಾರದ ಹಡಗುಗಳು, ದೋಣಿಗಳು ತೇಲುತ್ತವೆ ಎನ್ನುವ ಅರಿವೂ ಅವಳಿಗಿದೆ.
ಸಮುದ್ರದ ಅಂಚಿನಲ್ಲಿ ದೂರ ದೂರದಲ್ಲಿ ಹಲವಾರು ಬೆಟ್ಟ
ಗುಡ್ಡಗಳಿವೆ ಎಂದು ತಿಳಿದುಕೊಂಡಿದ್ದಾಳೆ. ಸಮುದ್ರದ ಕಿನಾರೆ, ಬಿಳಿಯ ಮರಳು, ಕಪ್ಪೆ ಚಿಪ್ಪು, ಶಂಖ ಅದಲ್ಲದೆ ಅಲ್ಲಲ್ಲಿ ಕಪ್ಪು ಬಂಡೆಗಳು…. ಹೀಗೆ ಪ್ರಪಂಚ ಜ್ಞಾನವನ್ನು ವಿಸ್ತರಿಸಿಕೊಂಡಳು.
***
ಈ ದಿನ ತಾನು ನೋಡುತ್ತಿರುವುದೇನು…. ಸುಂದರ ತರುಣನೊಬ್ಬ ಪ್ರಪಂಚದ ಗೊಡವೆ ಮರೆತು ಕೊಳಲ ನಾದದಲ್ಲಿ ತಲ್ಲೀನನಾಗಿದ್ದಾನೆ.
ತರುಣ ಕೆಳಕ್ಕೆ ಬಾಗಿ ನೋಡಿದ. ನನ್ನ ಪ್ರಿಯತಮೆಯೂ ಹೀಗೆಯೇ ಇದ್ದಳು. ದುಷ್ಟ ಮಾಟಗಾತಿ ನನ್ನ ಮನದನ್ನೆ ಮತ್ಸ್ಯಕನ್ಯೆಯನ್ನು ಬಂಧಿಸಿದ್ದಾಳೆ. ನನ್ನನ್ನು ನೀರಿಗೆ ಇಳಿಯದ ಹಾಗೆ ಮಾನವನ ಶರೀರ ಕೊಟ್ಟು ದಡದಲ್ಲಿ ಇರುವ ಹಾಗೆ ಮಾಡಿದ್ದಾಳೆ. ಇಲ್ಲದೇ ಇದ್ದರೆ ನಾನೂ ಅವಳ ಜೊತೆ ವಿಹರಿಸ ಬಹುದಿತ್ತು ಎಂದುಕೊಂಡನು.
ಪ್ರಿಯತಮೆಯ ನೆನಪಲ್ಲಿ ಅವಳ ಸೋದರಿಯೊಂದಿಗೆ ಸ್ನೇಹ ಹಸ್ತ ನೀಡಿ, “ನೀನು ಕೂಡ ನನ್ನ ಮತ್ಸ್ಯಕನ್ಯೆಯಷ್ಟೇ ಚೆಲುವೆ” ಎಂದನು.
ಮಿಂಚುಳ್ಳಿ ಚೆಲುವೆಗೆ ತನ್ನ ಕಿವಿಗಳನ್ನೇ ನಂಬಲಾಗಲಿಲ್ಲ. ನಿರಾಸೆಯ ಧ್ವನಿಯಲ್ಲಿ, “ನಿನಗೆ ಒಬ್ಬಳು ಪ್ರಿಯತಮೆ ಇದ್ದಾಳ. ಹಾಗಿದ್ದರೆ ನೀನು ಹೇಗೆ ಸಾಮಾನ್ಯರಂತೆ ಹೇಗೆ ಆದೆ? ಅಥವಾ ಮನುಷ್ಯ ಮತ್ಸ್ಯಕನ್ಯೆಯನ್ನು ಪ್ರೀತಿಸುತ್ತಿರುವುದ?” ಎಂದು ಕೇಳಿದಳು.
ಓಹ್….ನಾನು ಕೂಡ ಜಲ ಮಾನವ. ಜಲಕನ್ಯೆಯೊಬ್ಬಳನ್ನು ಪ್ರೀತಿಸುತ್ತಿದ್ದೆ. ಆಗ ಸಮುದ್ರದ ಮಾಟಗಾತಿ ಅವಳನ್ನು ಬಂಧನದಲ್ಲಿರಿಸಿ, ನನ್ನನ್ನು ಈ ಸಮುದ್ರ ಕಿನಾರೆಯಲ್ಲಿ ಹೀಗೆ ಸಮುದ್ರದ ನೀರಿನೊಳಗೆ ಇಳಿಯದಂತೆ ಮಾನವನನ್ನಾಗಿ ಮಾಡಿದ್ದಾಳೆ” ಎಂದ.
ಪುಟ್ಟ ಜಲಕನ್ಯೆ ಮನೆಗೆ ಹಿಂದಿರುಗಿ ಅಜ್ಜಿಯನ್ನು ಇದರ ಬಗೆಗೆ ಕೇಳಿದಳು. ಆಗ ಅಜ್ಜಿ, “ಮಾಟಗಾತಿ ಬಂಧಿಸಿ ಇಟ್ಟಿರುವುದು ನಿನ್ನ ಅಕ್ಕನನ್ನು. ಸಮುದ್ರ ಕಿನಾರೆಯಲ್ಲಿ ಮಾನವನಂತೆ ಇರುವ ಆ ಯುವಕ ಅವಳ ಪ್ರಿಯತಮ. ಮಾಟಗಾತಿಯೇ ಅವನನ್ನು ಅವಳ ಮಾಟದಿಂದ ಮಾನವನನ್ನಾಗಿ ಮಾಡಿ ಸಮುದ್ರ ಕಿನಾರೆಯಲ್ಲಿ ಬಂಧಿಸಿ ಇಟ್ಟಿದ್ದಾಳೆ” ಎಂದಳು.
ಆಗ ಪುಟ್ಟ ಜಲಕನ್ಯೆ, “ನಾನು ಹೇಗಾದರೂ ಮಾಡಿ ಅಕ್ಕನನ್ನು ಬಿಡಿಸ ಬೇಕು” ಎಂದಳು.
“ಅದು ಸಾಧ್ಯವಿಲ್ಲ. ಈಗಾಗಲೇ ಅದಕ್ಕೆ ಪ್ರಯತ್ನ ನಡೆದಿದೆ. ಪರಿಣಾಮ ಮಾತ್ರ ಶೂನ್ಯ”.
ಮಿಂಚುಳ್ಳಿ ಜಲ ಕನ್ಯೆಗೆ ಹೆಚ್ಚು ವಿವರಿಸಿ ಹೇಳಬೇಕಾಗಲಿಲ್ಲ. ಅವಳಿಗೆ ನಿರಾಸೆ ಆಯಿತು. ಆದರೂ ಮುಗ್ಧಳಾದ ಅವಳು ಈ ಸುಂದರಾಂಗನಿಗೆ ಸಹಾಯ ಮಾಡಲು ಮುಂದಾದಳು.
“ಎಷ್ಟು ಕಷ್ಟ ಆದರೂ ಪರವಾಗಿಲ್ಲ. ನಾನು ಪ್ರಯತ್ನಿಸಿತ್ತೇನೆ” ಎಂದಳು.
“ಮಾಟಗಾತಿ ಸಮುದ್ರದ ಕೋಟೆಯೊಂದರಲ್ಲಿ ನಿನ್ನ ಅಕ್ಕ ಮತ್ಸ್ಯಕನ್ಯೆಯನ್ನು ಬಂಧಿಸಿ, ಅವಳ ಕಾವಲಿಗೆ ತಾನೇ ನಿಂತಿದ್ದಾಳೆ. ಅವಳ ಪ್ರಿಯಕರನನ್ನು ಒಬ್ಬ ಮಾನವನನ್ನಾಗಿ ಮಾಡಿ ಈ ಸಮುದ್ರದ ದಡದಲ್ಲಿ ಇರುವ ಇನ್ನೊಂದು ಕೋಟೆಯಲ್ಲಿರಿಸಿದ್ದಾಳೆ. ಆದರೆ ಅವನನ್ನು ಬಂಧಿಸಿಲ್ಲ. ಅವನು ಈಗ ಮಾನವನನಾದುದರಿಂದ ನೀರಿನ ಆಳಕ್ಕೆ ಇಳಿದು ತನ್ನ ಪ್ರಿಯತಮೆಯನ್ನು ರಕ್ಷಿಸಲು ಸಾಧ್ಯವಿಲ್ಲ ಎನ್ನುವುದು ಅವಳಿಗೆ ಗೊತ್ತು”.
“ಹಾಗಾದರೆ ಇದಕ್ಕೆ ಪರಿಹಾರವೇನು?”.
“ಇದು ಬಹಳ ಅಪಾಯಕಾರಿ ಕೆಲಸ. ಈಗಾಗಲೇ ಬಹಳ ಜನರು ಅವಳನ್ನು ರಕ್ಷಿಸಲು ಹೋಗಿ ಜೀವ ತೆತ್ತಿದ್ದಾರೆ”.
“ಪರವಾಗಿಲ್ಲ ಹೇಳು”.
“ಆ ರಾಕ್ಷಸಿಯ ಸೊಂಟದಲ್ಲಿ, ಒಂದು ಸಂಚಿಯಲ್ಲಿ ಚಿನ್ನದ ಸೂಜಿ ಇದೆ. ಆ ಸೂಜಿಯಿಂದ ಅವಳ ಕಣ್ಣನ್ನು ಚುಚ್ಚಿದವರು ಹವಳದ ದಿಬ್ಬವಾಗುತ್ತಾರೆ. ಮಾಟಗಾತಿ ಸುಂದರ ಮೀನುಹುಡುಗಿ ಆಗುತ್ತಾಳೆ. ನಿನ್ನ ಅಕ್ಕ ಬಂಧ ಮುಕ್ತಳಾಗುತ್ತಾಳೆ. ಹಾಗೂ ಸಮುದ್ರದ ದಡದಲ್ಲಿ ಇರುವ ಪುರುಷನಿಗೆ ಮತ್ಸ್ಯಲೋಕಕ್ಕೆ ಮರಳಲು ಮೊದಲಿನ ರೂಪ ಬರುವುದು” ಎಂದಳು.
ಇದನ್ನು ಕೇಳಿದ ಜಲಕನ್ಯೆ
ಮಾಟಗಾತಿಯನ್ನು ಹುಡುಕಿ ಹೊರಟಳು. ಮಾಟಗಾತಿ ಸೊಂಟದ ಸಂಚಿಯನ್ನು ತನ್ನ ಬೆನ್ನ ಹಿಂದೆ ಇಟ್ಟು ಮಲಗಿದ್ದಳು. ಪುಟ್ಟ ಜಲಕನ್ಯೆ ಉಪಾಯವಾಗಿ ಹೋಗಿ ಆ ಸಂಚಿಯಿಂದ ಚಿನ್ನದ ಸೂಜಿಯನ್ನು ಸೆಳೆದು ಅವಳ ಕಣ್ಣಿಗೆ ಚುಚ್ಚಿದಳು. ಆಗ ಮಾಟಗಾತಿ ಭಯಂಕರವಾಗಿ ಆರ್ಭಟಿಸುತ್ತಾ ಎದ್ದಳು.
ಅವಳು ಎದ್ದು ನಿಲ್ಲುತ್ತಿದ್ದಂತೆಯೇ ಸುಂದರ ಮೀನುಹುಡುಗಿ ಆದಳು. ಮಿಂಚುಳ್ಳಿ ಜಲಕನ್ಯೆ ಹವಳದ ದಿಬ್ಬವಾದಳು. ಬಂಧನದಲ್ಲಿದ್ದ ಮತ್ಸ್ಯಕನ್ಯೆ ಬಂಧ ಮುಕ್ತಳಾದಳು. ಅಷ್ಟರಲ್ಲಿ ಸಮುದ್ರದ ಕಿನಾರೆಯಲ್ಲಿದ್ದ ಯುವಕ ಮತ್ಸ್ಯ ಪುರುಷನಾಗಿ ಅಲ್ಲಿಗೆ ಬಂದ.
ಮತ್ಸ್ಯ ಪುರುಷ ಹಾಗೂ ಮತ್ಸ್ಯಕನ್ಯೆ ಒಂದಾದರು. ಜಲ ಕನ್ಯೆ ಶಾಶ್ವತವಾಗಿ ಹವಳದ ದಿಬ್ಬವಾಗಿ ಉಳಿದಳು. ತಂಗಿಯ ಈ ತ್ಯಾಗ ಎಂದಿಗೂ ಅಕ್ಕ ಮರೆಯುವುದಿಲ್ಲ. ಮತ್ಸ್ಯಕನ್ಯೆ ಮತ್ತು ಪುರುಷ ಹವಳದ ದಿಬ್ಬದ ಸುತ್ತಲೂ ಈಜಾಡಿ ಮಿಂಚುಳ್ಳಿ ಜಲಕನ್ಯೆಗೆ ಕೃತಜ್ಞತೆಯನ್ನು ತಿಳಿಸುತ್ತಾರೆ.
ರತ್ನಾ ಪಟ್ಟರ್ಧನ್