ವಿಚಾರ ಸಂಗಾತಿ
ಡಾ.ಯಲ್ಲಮ್ಮ ಕೆ
ʼಐತಿಹ್ಯ ಮನೋಭಾವದೊಂದಿಗೆ,
ವೈಜ್ಞಾನಿಕ ಹುಡುಕಾಟʼ
ಕುಕ್ಕುಟ ಪಿಶಾಚ –
ಕೆ.ಪಿ.ಪೂರ್ಣಚಂದ್ರ ತೇಜಸ್ವಿರವರ ಕಥಾವಿಶ್ಲೇಷಣೆ.
ಪ್ರವೇಶಿಕೆ :
ಹಕ್ಕ-ಬುಕ್ಕರ ಮೇಲೆ ಮೊಲವೊಂದು ತಿರುಗಿ ಬಿದ್ದುದ ಕಂಡು ಇದೊಂದು ಗಂಡು ಮೆಟ್ಟಿನ ನೆಲವೆಂದು ತೀರ್ಮಾನಿಸಿ ಗುರುಗಳಾದ ವಿದ್ಯಾರಣ್ಯರು ಅಲ್ಲಿ ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಬುನಾದಿ ಹಾಕಿದರೆಂಬ ದಂತಕತೆ ಅಥವಾ ಐತಿಹ್ಯ ಕೇಳಿದ್ದೇವೆ ಎಂಬ ಮಾತಿನೊಂದಿಗೆ ತೇಜಸ್ವಿಯವರು ಕುಕ್ಕಟ ಪಿಶಾಚ ಎಂಬ ಕಥಾಭೂಮಿಕೆಯಲ್ಲಿ ಪ್ರವೇಶಿಕೆ ಪಡೆಯುತ್ತಾರೆ. ದಂತಕತೆ ಅಥವಾ ಐತಿಹ್ಯ ಎಂದರೇನು ಪದಾರ್ಥದ ತಿಳಿವಿನೊಂದಿಗೆ ಮುಂದೆ ಸಾಗೋಣ.
ದಂತಕತೆ ಅಥವಾ ಐತಿಹ್ಯ :
ಐತಿಹ್ಯಗಳ ಅಧ್ಯಯನ ಕುರಿತಾಗಿ ಕರ್ನಾಟಕದ ಮಟ್ಟಿಗೆ ಹೇಳುವುದಾದರೆ.., ಎಸ್.ಎಸ್.ಭದ್ರಾಪುರರವರು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡಗೆ ಸಾದರಪಡಿಸಿದ ಉತ್ತರ ಕರ್ನಾಟಕದ ಜನಪದ ಐತಿಹ್ಯಗಳು ಎಂಬ ಪಿ.ಹೆಚ್.ಡಿ.ಪ್ರೌಢಪ್ರಬಂಧ ; ವೀರಣ್ಣನವರು ಮಂಗಳೂರು ವಿಶ್ವವಿದ್ಯಾಲಯಕ್ಕೆ ಸಾದರಪಡಿಸಿದ ಕನ್ನಡ ಕವಿಗಳ ಮೇಲಿನ ಐತಿಹ್ಯಗಳು ಎಂಬ ಎಂ.ಫಿಲ್. ಸಂಪ್ರಬಂಧ ; ಶ್ರೀಮತಿ ಲಕ್ಷ್ಮೀದೇವಿಯವರು ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಸಾದರಪಡಿಸಿದ ಕೋಲಾರ ಜಿಲ್ಲೆಯ ಐತಿಹ್ಯಗಳು ಎಂಬ ಪಿ.ಹೆಚ್.ಡಿ ಮಹಾಪ್ರಬಂಧ ಗಮನಿಸುವಂತವುಗಳಾಗಿವೆ.
ಪದನಿಷ್ಪತ್ತಿ :
ಜರ್ಮನ್ ಭಾಷೆಯಲ್ಲಿ ಸಾಗೆ (Sagenಸಾಗೆನ್) ಎಂದೂ ಆಂಗ್ಲಭಾಷೆಯಲ್ಲಿ ಲೆಜೆಂಡ್ (Legend) ಎಂದೂ ಬಳಕೆಯಲ್ಲಿರುವ ಪದಕ್ಕೆ ಸಂವಾದಿಯಾಗಿ ಕನ್ನಡದಲ್ಲಿ ಐತಿಹ್ಯವೆಂಬ ಪದಬಳಕೆಯಲ್ಲಿದೆ. ಬಾಗ್ಸ್ ರವರ ಪ್ರಕಾರ : ಲೆಜೆಂಡ್ ಅಂದರೆ ನಿರ್ದಿಷ್ಟ ವ್ಯಕ್ತಿ, ಸ್ಥಳ, ವಸ್ತುಗಳಿಗೆ ಸಂಬಂದಪಟ್ಟ ಕಥೆ. ಇನ್ನೊಂದೆಡೆ ವ್ಯಕ್ತಿ, ಸ್ಥಳ, ಘಟನೆಗಳಿಗೆ ಸಂಬಂಧಿಸಿದಂತೆ ನಡೆದವುಗಳೆಂದೇ ಹೇಳಲಾಗುವ, ಯಾವುದೇ ನಿರ್ದಿಷ್ಟ ಹಿನ್ನಲೆಯಲ್ಲಿ ಸಾಂಪ್ರದಾಯಿಕ ವಿಷಯಗಳೂ ಸೇರಿ ಹುಟ್ಟಿರುವ ನಿರೂಪಣೆಯಾಗಿದೆ. ಲೆಜೆಂಡ್ ಇದು ಮೂಲತಃ ಲ್ಯಾಟಿನ್ ಭಾಷೆಯ ಪದವಾಗಿದ್ದು, (Things to be read ) ಎಂಬ ಅರ್ಥವನ್ನು ಹೊಂದಿದೆ (ಪುರುಷೋತ್ತಮ ಬಿಳಿಮಲೆ ; ೧೯೯೦,ಪು.೭೩)
ಇತಿ, ಇತಿಹ ಎನ್ನುವ ಸಂಸ್ಕೃತ ರೂಪದಿಂದ ಐತಿಹ್ಯವು ನಿಷ್ಪನ್ನಗೊಂಡಿದೆ. ಈ ಶಬ್ದರೂಪಗಳಿಗೆ ಹೀಗೆ, ಹೀಗಿತ್ತು, ಹೀಗೆ ನಡೆದದ್ದು ಎಂಬಿತ್ಯಾದಿ ಅರ್ಥಗಳನ್ನೊಳಗೊಂಡಿದೆ. ಅಂತೆಯೇ ಇಂದು ನಾವು ಯಾವುದನ್ನು ಐತಿಹ್ಯವೆಂದು ಗುರುತಿಸುತ್ತೇವೆಯೋ ಅದು ಒಂದು ಕಾಲದಲ್ಲಿ ನಿಜವಾಗಿ ನಡೆದ ಘಟನೆಯೊಂದರ ನಿರೂಪಣೆ ಎಂಬ ವಿಶ್ವಾಸ ಅದರ ಪ್ರಸಾರಕರಲ್ಲಿರುತ್ತದೆ. ಈ ಅಂಶವನ್ನು ಮನಗಂಡೇ ಜನಪದ ಸಾಹಿತ್ಯದ ವಿಶಿಷ್ಟ ಪ್ರಕಾರವನ್ನು ವಿದ್ವಾಂಸರು ದಂತಕತೆ ಅಥವಾ ಐತಿಹ್ಯವೆಂದು ಕರೆದಿದ್ದಾರೆ.
ಐತಿಹ್ಯವೆಂದರೆ..? ಮೌಖಿಕ ಸಂಪ್ರದಾಯದಲ್ಲಿ ಉಳಿದುಕೊಂಡು ಬಂದಿರುವ, ಹಿಂದೆ ವಾಸ್ತವವಾಗಿ ನಡೆದದ್ದೇ ಎಂಬುದಾಗಿ ಅದರ ಪ್ರಸಾರಕರಿಗೆ ವಿಶ್ವಾಸವಿರುವ ಘಟನೆಗಳ ಗದ್ಯರೂಪದ ನಿರೂಪಣೆಯಾಗಿದೆ. ಒಂದು ದೃಷ್ಟಿಯಿಂದ ಇದು ಜನಪದ ಇತಿಹಾಸವೆಂತಲೂ ಹೇಳಬಹುದು. ಐತಿಹ್ಯವೆಂದು ತಿಳಿಯುವ ಜನಪದಸಾಹಿತ್ಯವು ನೈಜ ಘಟನೆಗಳ ನಿರೂಪಣೆಯಾಗಿರಬಹುದು ಅಥವಾ ಕಲ್ಪಿತ ಅಂಶಗಳೂ ಸೇರಿದ ನಿರೂಪಣೆಯಾಗಿರಲೂಬಹುದು. ಕೆಲವು ಐತಿಹ್ಯಗಳಲ್ಲಿ ನೈಜಘಟನೆಯ ಸಣ್ಣ ಎಳೆಯೊಂದು ಮಾತ್ರವಿದ್ದು, ಅದರ ಸುತ್ತಲೂ ಕಲ್ಪಿತಾಂಶಗಳು ಹಬ್ಬಿಕೊಂಡಿರುವ ಸಾಧ್ಯತೆಗಳು ಹೆಚ್ಚಿರುತ್ತವೆ. ಎಂತಿದ್ದರೂ ಈಗ ಐತಿಹ್ಯಗಳನ್ನು ಜನಪದ ಸಾಹಿತ್ಯದ ಒಂದು ಪ್ರಕಾರವಾಗಿ ಪರಿಗಣಿಸಲಾಗುತ್ತಿರುವುದು, ಜೊತೆಗೆ ಜನಪದ ಇತಿಹಾಸವೆಂದು ತಿಳಿಯಲಾಗಿದೆ. ಹೀಗೆ ಐತಿಹ್ಯ ಪದನಿಷ್ಪತ್ತಿ, ಸ್ವರೂಪ, ಪ್ರಕಾರಗಳ ಬಗ್ಗೆ ವಿಸ್ತೃತವಾದ ಅಧ್ಯಯನಾಂಶಗಳನ್ನು ಗಮನದಲ್ಲಿರಿಸಿಕೊಂಡು, ಮುಂದುವರೆದು ಕುಕ್ಕಟ ಪಿಶಾಚ ಕಥಾವಿಶ್ಲೇಷಣೆಯಲ್ಲಿ ತೊಡಗಿಕೊಳ್ಳುವುದಾದರೆ.., ವಿಜ್ಞಾನದ ವಿಸ್ಮಯಗಳ ಮೂಲಕ ತೇಜಸ್ವಿಯವರು ಕನ್ನಡ ಸಾಹಿತ್ಯಕ್ಕೆ ಅನೇಕ ಮಹತ್ವಪೂರ್ಣ ಕೃತಿಗಳನ್ನು ನೀಡಿದ್ದಾರೆ. ಇದರಲ್ಲಿ ಕೀಟಗಳು, ಪ್ರಾಣಿ-ಪಕ್ಷಿಗಳು, ನದಿ-ಹಳ್ಳ-ಕೊಳ್ಳಗಳು, ಕಾಡು-ಮೇಡುಗಳು, ಮೃಗ-ಖಗಗಳ ಬೇಟೆಯ ವೈವಿಧ್ಯತೆಯ ನಿರೂಪಣೆಯ ಹಲವು ಕೃತಿಗಳನ್ನು ನೀಡಿದ್ದಾರೆ. ಕರ್ವಾಲೋ ಕೃತಿಯಲ್ಲಿ : ಜೀವವಿಕಾಸದ ಪಥದಲ್ಲಿ ಎಲ್ಲವೂ ಬದಲಾಗುತ್ತಾ ರೂಪಾಂತರ ಹೊಂದುತ್ತಾ ಬಂದಿರುವಾಗ ಹಾರುವ ಓತಿಯ ಕುರಿತು ಕುತೂಹಲ ಹುಟ್ಟಿಸುವ ಸನ್ನಿವೆಶಗಳು ಮೂಡಿಬಂದಿವೆ. ಇಂಥದ್ದೇ ಒಂದು ವಿಚಿತ್ರ ಸಂಗತಿಯನ್ನು ಆಧರಿಸಿದ ಅಂಶವಿರುವ ಐತಿಹ್ಯವನ್ನಿಟ್ಟುಕೊಂಡು ಸಮಸ್ಯೆಗೆ ವೈಜ್ಞಾನಿಕ ದೃಷ್ಟಿಕೋನದಿಂದ ಉತ್ತರವನ್ನು ಕಂಡುಕೊಳ್ಳುವ ಪ್ರಯತ್ನವನ್ನು ಮಾಡಿದ್ದಾರೆ.
ನಾನು ಮತ್ತು ಈಶಾನ್ಯೆ (ಇಬ್ಬರು ಹೆಣ್ಣುಮಕ್ಕಳು) ಜೊತೆಗೆ ಮಾರ ಮತ್ತು ಪ್ಯಾರ ತೋಟದ ಕೆಲಸ-ಕಾರ‍್ಯಗಳಿಗೆ ಇರುವ ಸಹಾಯಕರು. ಇಷ್ಟು ನನ್ನ ಕುಟುಂಬ ವರ್ಗ. ಮಕ್ಕಳಿಬ್ಬರಿಗೆ ಮಾರ ಎಂದರೆ ಎಲ್ಲಿಲ್ಲದ ಪ್ರೀತಿ. ಅವರಿಗೆ ರಸವತ್ತಾದ ಕಥೆಗಳನ್ನು ಹೇಳಿ ನಕ್ಕು-ನಗಿಸಿ ಈಶಾನ್ಯಳಲ್ಲಿ ಕಾಡಿ-ಬೇಡಿ ದುಡ್ಡು ಪಡೆದು, ಸೇಂದಿ ಕುಡಿಯುತ್ತಿದದ್ದು ಅವನ ದಿನಚರಿಯಾಗಿತ್ತು. ಒಮ್ಮೆ ಮಾರ ಕೊರಲಿನಲ್ಲಿ ಬಿದ್ದು ಮೈ-ಕೈಗಾಯಮಾಡಿಕೊಂಡು ಬಂದಿದ್ದ, ಏನಾಯ್ತು ಎಂದು ಕೇಳಿದ್ದಕ್ಕೆ –ಜನ್ನಾಪುರದ ಈಚಲು ಹರದಲ್ಲಿ ಒಂದು ದೆವ್ವ ಕಾಡುಕೋಳಿಯ ರೂಪದಿ ಬಂದು ಕಾಟ ಕೊಟ್ಟಿತ್ತೆಂದು, ಅವನನ್ನು ಹಿಂಬಾಲಿಸಿ ಕರೆದೊಯ್ದು ಕೊರಕಲಿಗೆ ಬೀಳಿಸಿತೆಂದು ಇಲ್ಲದ ಕಟ್ಟುಕತೆಕಟ್ಟಿದ್ದ. ಸೇಂದಿ ಕುಡಿದ ಅಮಲಿನಲ್ಲಿ ಬಿದ್ದರಬೇಕೆಂದು ನಾನು ಲಘುವಾಗಿ ಎಣಿಸಿ, ಇಂಥ ದೆವ್ವ-ಭೂತದ ಕತೆಗಳನ್ನು ಮಕ್ಕಳಿಗೆ ಹೇಳಿ ಹೆದರಿಸಬೇಡ ಎಂದು ಗದರಿದೆ. ಆದರೆ ದೆವ್ವ ಕಾಡುಕೋಳಿ (Red Jungle fowl) ಯ ರೂಪದಲ್ಲಿ ಬಂದಿತ್ತು ಎಂಬುದು ನನ್ನಲ್ಲಿ ಕುತೂಹಲ ಹುಟ್ಟಿಸಿತ್ತು.
ಮಾರ ಸೇಂದಿ ಕುಡಿದ ಅಮಲಿನಲ್ಲಿ ಆಯತಪ್ಪಿ ಕೊರಕಲಿಗೆ ಬಿದ್ದು ಮುಜುಗರಕ್ಕೀಡಾದ ಸಂಗತಿಗೆ ಬಣ್ಣಬಳಿದು ಕಾಡುಕೋಳಿ ದೆವ್ವದ ರೂಪದಲ್ಲಿ ಬಂದು ಕಾಟಕೊಟ್ಟಿತ್ತೆಂದು ಮತ್ತದು ತನ್ನನ್ನು ಕೊರಕಲಿಗೆ ಬೀಳಿಸಿತೆಂದು ಸುಳ್ಳು ಕಥೆಟ್ಟಿದ್ದಾನೆ ಎಂದು ಜನರೂ ಕೂಡ ಇದೇ ತೀರ್ಮಾನಕ್ಕೆ ಬಂದಿದ್ದರು. ಕಾಡಿನ ಒಡನಾಡಿಯಾದ ನನ್ನ ಬದುಕಿನ ಅನುಭವದ ಹಿನ್ನಲೆಯಲ್ಲಿ ಹೇಳುವುದಾದರೆ : ಪ್ರತಿ ಸಂದರ್ಭಗಳಲ್ಲಿಯೂ ಪ್ರಾಣಿಗಳ ವರ್ತನೆಗೆ ಒಂದು ನಿರ್ದಿಷ್ಟ ಕಾರಣಗಳಿರುತ್ತವೆ ಎಂದು ನನಗೆ ಸಾಕಷ್ಟು ಬಾರಿ ಮನವರಿಕೆಯಾಗಿದೆ.
ಮಾರ ಕಟ್ಟಿದ ಕಥೆ ಕೇಳಿ ಉತ್ಸುಕತೆಯಿಂದ ಅದರ ಪೂರ್ವಾಪರಗಳನ್ನು ತಿಳಿಯಲು ಮುಂದಾದೆ. ಕೆಲಸದ ಒತ್ತಡದ ಮಧ್ಯೆ ಅದೆಲ್ಲವನ್ನೂ ಮರೆತೆ. ಇದಾದ ಕೆಲವು ದಿನಗಳ ನಂತರ ಪ್ಯಾರ ಮತ್ತು ಮಾರನ ಜೊತೆ ಈಚಲು ಹರಕ್ಕೆ ಹೋಗಬೇಕಾದ ಪ್ರಸಂಗ ಒದಗಿಬಂತು : ಈಚಲು ಮರದ ಬಯಲಿನಲ್ಲಿ ಗೌಲು ಮರದ ಕೆಳಗೆ ಹುತ್ತವಿದೆ, ಅದರೊಳಗೆ ಜೇನುಹುಳುಗಳಿದ್ದಾವೆ ಎಂಬು ಸುದ್ದಿಯನ್ನು ದನ ಕಾಯುವ ಹುಡುಗರಿಂದ ತಿಳಿದ ಪ್ಯಾರನು ಬಂದು ಮನೆಯಲ್ಲಿ ಖಾಲಿಬಿದ್ದಿದ್ದ ಜೇನು ಪೆಟ್ಟಿಗೆಯೊಳಗೆ ಅವುಗಳನ್ನು ಕೂರಿಸೋಣವೆಂದ ಹಾಗಾಗಿ ಈಚಲು ಮರದ ಹರವಿನ ಬಯಲಿಗೆ ಹೋಗಬೇಕಾಯ್ತು. ನನ್ನ ಮನೆಯ ಮುಂದಿನ ತೋಟ ದಾಟಿದರೆ ಗದ್ದೆಬಯಲು, ಆ ಗದ್ದೆ ದಾಟಿದರೆ ಈಚಲುಮರ ಹಲವಾರು ಮೈಲುಗಳ ದೂರ ಜನ್ನಾಪುರದವರೆಗೂ ಹಬ್ಬಿದೆ. ಈ ಕಾಡಿನಲ್ಲಿ ಕಾಡುಕೋಳಿ, ಕವುಜಗನ ಹಕ್ಕಿ, ಮೊಲಗಳನ್ನು ಬಿಟ್ಟರೆ ಇನ್ನಾವ ಕಾಡುಪ್ರಾಣಿಗಳು ಇರುತ್ತಿರಲಿಲ್ಲ. ಈಚಲು ಬಯಲಿನ ನಡುವೆ ಒಂದು ಸ್ಮಶಾನ, ಅದನ್ನು ದಾಟಿ ಮುನ್ನಡೆದರೆ ಆ ಗೌಲುಮರ. ನಾನು ಮಾರ ಮತ್ತು ಪ್ಯಾರ ಮತ್ತ ಕಿವಿ (ನಾಯಿಯ ಹೆಸರು) ಜೊತೆಗೂಡಿ ಗೌಲುಮರ ಸಮೀಪಿಸುತ್ತಿದ್ದಂತೆಯೇ ಧುತ್ತೆಂದು ಕಾಡುಕೋಳಿ ಪ್ರತ್ಯಕ್ಷವಾಗಿ ನಮ್ಮೆದುರು ಉರುಳಾಡಿ ರಪರಪ ರೆಕ್ಕೆ ಬಡಿಯುತ್ತಾ, ತತ್ತರಿಸುತ್ತಾ, ತೂರಾಡುತ್ತಾ ಮುಂದುವರೆಯಿತು. ಪ್ಯಾರನಿಗೆ ಹಿಡಿದ ಕೆಲಸ ಬಿಟ್ಟು ಬೇರೆ ಅಡ್ಡಕಸುಬುಗಳನ್ನು ಮಾಡುವುದೆಂದರೆ.., ಪಂಚಪ್ರಾಣ..! ಜೇನುಪೆಟ್ಟಿಗೆ ಬಿಸಾಕಿ ನಾಯಿ ಛೂಬಿಟ್ಟು ಹಿಡಿಹಿಡಿ ಎನ್ನುತ್ತ.., ಹಿಂದೆ ಓಡೋಡಿ ಈಚಲು ಮರಗಳ ಬಯಲಿನಲ್ಲಿ ಮಾಯವಾದ.
ಮಾರ ಹೇಳಿದ ಕಥೆ ನಿಜವೆಂಬಂತೆ ಕೋಳಿ ವರ್ತಿಸಿತ್ತು. ಕೆಲಹೊತ್ತಿನ ಬಳಿಕ ಇನ್ನೇನು ಹಿಡಿಯಬೇಕು ಎನ್ನುವಷ್ಟರಲ್ಲಿ ಕೈತಪ್ಪಿಸಿಕೊಂಡು ಕೋಳಿ ಬರ‍್ರನೆ ಹಾರಿ ಬಯಲಿನಲ್ಲಿ ಮರೆಯಾಯ್ತು ಎಂದು ನಿರಾಸೆಯಿಂದ ಮರಳಿದ. ತದನಂತರ ಜೇನುಪೆಟ್ಟಿಗೆಯನ್ನು ಹುತ್ತದ ಬಳಿ ಇಟ್ಟುಬಂದೆವು.., ಸಂಜೆಯ ಸುಮಾರಿಗೆ ಜೇನುಪೆಟ್ಟಿಗೆ ತರಲು ಹೋದ ಪ್ಯಾರ ಮತ್ತು ಮಾರ ಮತ್ತದೇ ರೀತಿ ಕಾಡುಕೋಳಿ ಪ್ರತ್ಯಕ್ಷವಾಗಿ ಹೊರಳಾಡಿತು ಎಂದು ಹೇಳಿದರು. ಮತ್ತೆ ಆ ಕೋಳಿಯನ್ನು ಹಿಡಿಯುವ ಸಾಹಸಕ್ಕೆ ಕೈಹಾಕಿರಲಿಲ್ಲ ಪ್ಯಾರ-ಮಾರ ದೆವ್ವಮೆಟ್ಟಿದ ಕೋಳಿಯದು, ಮೊನ್ನೆ ಅದೇ ಕೋಳಿ ನನ್ನ ಕೊರಕಲಿನಲ್ಲಿ ಬೀಳಿಸಿದ್ದು ಎಂದು ಹೇಳಿದ್ದನ್ನು ಕೇಳಿ – ಕೋಳಿಯ ವರ್ತನೆಗೆ ಬೇರೇನೋ ಕಾರಣವಿರಲೇಬೇಕೆಂದು ಆಳವಾಗಿ ಯೋಚಿಸಿದೆ. ಕಾಡುಪ್ರಾಣಿಗಳಲ್ಲಿ ಮನೋವಿಲತೆ, ಹುಚ್ಚು ಅಪರೂಪ. ಏಕೆಂದರೆ..? ಆ ರೀತಿಯ ಚಿತ್ತವಿಕಾರಗಳಿರುವ ಯಾವುದೇ ಜೀವಿಯೂ ಕಾಡಿನಲ್ಲಿ ಬದುಕುಳಿಯುವುದು ಅಸಾಧ್ಯ. ಮೊಟ್ಟೆ-ಮರಿಗಳ ಸಂರಕ್ಷಣಾ ತಂತ್ರವಿರಬಹುದೇನೋ ಎಂದೆನಿಸಿತು. ಹಾಗಾಗಿ ಖುದ್ದು ಆ ಸ್ಥಳ ಪರಿಶೀಲನೆಗಾಗಿ ಒಬ್ಬನೇ ಹೋದೆ, ಹುತ್ತ ಸಮೀಪಿಸುತ್ತಲೇ ಮತ್ತದೇ ಕೋಳಿ ಪ್ರತ್ಯಕ್ಷವಾಗಿ ವಿಚಿತ್ರವಾಗಿ ವರ್ತಿಸಿ ಪೊದೆಯೊಳಗೆ ಮಾಯವಾಯ್ತು. ಮತ್ತೆ ಕೆಲ ನಿಮಿಷಗಳು ಕಾಲ ನಾನು ಅಲ್ಲೇ ನಿಂತದ್ದನ್ನು ಕಂಡು, ಹೊರಬಂದು ಮತ್ತದೇ ರೀತಿಯಲ್ಲಿ ನರ್ತಿಸಿತು, ಆಗ ಅದು ನಟನೆ ಎಂದು ತೋರಿತು. ನನ್ನ ಕಡೆಯಿಂದ ಯಾವುದೇ ರೀತಿಯ ಪ್ರತಿಕ್ರಿಯೆ ಬಾರದಿದ್ದಾಗ ತನ್ನ ಜೀವಕ್ಕೆ ಆಪತ್ತೆಂದು ತಿಳಿದು ಕಾಡುಕೋಳಿ ಗದ್ದೆಬಯಲಿನ ಕಡೆಗೆ ಪರ‍್ರನೆ ಹಾರಿಹೋಯ್ತು. ನಂತರ ಪೊದೆಗಳನ್ನು ಪರಿಶೀಲಿಸಲಾಗಿ ಒಣಗಿದ ಈಚಲು ಮರಗಳನ್ನು ಒಟ್ಟುಗೂಡಿಸಿ ಗೂಡುಮಾಡಿ ಒಟ್ಟು ಹದಿಮೂರು ಮೊಟ್ಟೆಗಳನ್ನು ಇಟ್ಟಿದ್ದು ಕಂಡುಬಂದಿತು. ಅಲ್ಲಿಗೆ ಬಂದವರು ಮೊಟ್ಟೆಗಳನ್ನು ಕಂಡುಬಿಟ್ಟಾರೆಂದು, ಅವರನ್ನು ದಿಕ್ಕುತಪ್ಪಿಸಲೆಂದೇ ಆ ಕೋಳಿಯು ಅತ್ತ ಸುಳಿದವರ ಎದಿರು ಆ ರೀತಿ ವರ್ತಿಸುತ್ತಿತ್ತು. ಹೀಡಿಯಲು ಹೋದವರನ್ನು ಕೈಗೆ ಇನ್ನೇನು ಸಿಕ್ಕಂತೆ-ಸಿಗದಂತೆ ನಟಿಸಿ ದೂರಸೆಳೆದೊಯ್ದು ದಾರಿತಪ್ಪಿಸಿ ಗದ್ದೆಬಯಲಿನಲ್ಲಿ ಪರಾರಿಯಾಗಿ ಬಿಡುತ್ತಿತ್ತು.
ಬಾಳೆಗುಬ್ಬಿ – ಸ್ಪೆಡರ್ ಹಂಟರ್ :
ನಾನು ಏಲಕ್ಕಿ ಹನಾಲಿನಲ್ಲಿ ಪತ್ತೆ ಮಾಡಿದ ಸ್ಪೆಡರ್ ಹಂಟರ್ ಹಕ್ಕಿಗೂಡು ಸಹ ಒಂದು. ಈ ಹಕ್ಕಿಗಳ ಜೋಡಿಗಳೆರೆಡೂ ಒಮ್ಮೆ ನನ್ನೆದರು ಮರದ ಮೇಲಿಂದ ಗಾಯಗೊಂಡು ಬಿದ್ದಂತೆ ಬಿದ್ದು ನೆಲೆದಮೇಲೆ ಒದ್ದಾಡಿದವು, ಹಾರಿಹೋದವು, ತದನಂತರ ಗೂಡುಮಾತ್ರ ನಾನೆಷ್ಟೇ ಹುಡುಕಿದರೂ ಸಿಗಲಿಲ್ಲ. ನಿರಾಶೆಯಿಂದ ಸಂಜೆ ಮನೆಗೆ ಬಂದು ಸಲೀಂ ಅಲಿಯವರ ಪುಸ್ತಕ ತೆಗೆದು ನೋಡಿದೆ, ಅದರಲ್ಲಿ : ಬಾಳೆಗುಬ್ಬಿ ಪಕ್ಷಿಗಳು ಎಲೆಗಳಡಿಯಲ್ಲಿ ಅವಕ್ಕೆ ಅಂಟಕೊಂಡಂತೆ ಜೇಡರ ಬಲೆ ಹೆಣೆದು ಗೂಡು ಕಟ್ಟುತ್ತವೆ ಎಮದು ವಿವರಿಸಿತ್ತು. ಈ ಸೂಚನೆಯ ಮೇರೆಗೆ ಏಲಕ್ಕಿ ಹನಾಲಿನಲ್ಲಿ ಬಾಳೆಗಿಡಗಳು ಇರಲಿಲ್ಲವಾದರೂ ಅದೇ ಜಾತಿಗೆ ಸೇರಿದ ಪರ್ವತ ಬಾಳೆಗಿಡದ ಚಿಕ್ಕ ಸಸಿಯೊಂದು ಹಳ್ಳದ ಪಕ್ಕದಲ್ಲಿ ಕಾಣಿಸಿತು. ನಾನು ಆ ಗಿಡದ ಹತ್ತಿರ ಸುಳಿದಾಗ ಮತ್ತದೇ ರೀತಿಯಲ್ಲಿ ಹಾರಾ.., ಕೂಗಾಟ.., ನೆಲದಮೇಲೆ ಬಿದ್ದು ಹೊರಳಾಡುವುದು ಅತಿಯಾಯ್ತು. ಹತ್ತಿರ ಹೋದಾಗ ಹಾರಿಹೋಗಿ ಹಾಹಾಕಾರ ಎಬ್ಬಿಸಿದವು. ಪುಟ್ಟಹಕ್ಕಿಗಳಿಗೆ ತೊಂದರೆ ಕೊಡಬಾರದೆಣದೆನಿಸಿ, ಅವುಗಳಿಗೆ ಸಮಾಧಾನವಾಗಲೆಂದು ಅಲ್ಲಿಂದ ಬೇಗ ಕಾಲ್ಕಿತ್ತಿದೆ. ಕೊನೆಗೂ ಸಲೀಂ ಅಲಿಯವರ ಸೂಚನೆ ಆಧಾರದ ಮೇಲೆ ಗೂಡು ಪತ್ತೆಮಾಡಿದ್ದಾಗಿ ಹೇಳುತ್ತಾ.., ಮುಂದುವರೆದು ಕಾಡುಕೋಳಿ ಕುಣಿದಾಡಿದ್ದನ್ನು ನೋಡಿ ಕೋಳಿಗೆ ದೆವ್ವಮೆಟ್ಟಿದೆ ಎಂದು ತೀರ್ಮಾನಿಸಿದ ಮಾರನಂತೆಯೇ ; ಹಕ್ಕ-ಬುಕ್ಕರ ಮೇಲೊಂದು ಮೊಲವು ತಿರುಗಿ ಬಿದ್ದುದ್ದನ್ನು ನೋಡಿದ ವಿದ್ಯಾರಣ್ಯರು ಇದೊಂದು ಗಂಡು ಮೆಟ್ಟಿನ ನೆಲವೆಂದು ತೀರ್ಮಾನಿಸಿದರೋ ಏನೋ..? ಕೊಂಚ ತಾಳ್ಮೆಯಿಂದ ಹುಡುಕಿ ನೋಡಿದ್ದರೆ ಮೊಲ ತಿರುಗಿ ಬಿದ್ದುದ್ದಕ್ಕೆ ಬೇರೆ ಏನಾದರೂ ಕಾರಣ ಕಂಡುಬರುತ್ತಿತ್ತೆಂದು ನನಗೆ ಅನ್ನಿಸುತ್ತದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ.
ಇದಕ್ಕೆ ಪೂರಕವಾಗಿ ಸಹ-ಸಂಬಂಧೀಕರಣ ತತ್ತ್ವದನ್ವಯ ಐತಿಹ್ಯವೊಂದನ್ನು ನೋಡುವುದಾದರೆ.., ಶೃಂಗೇರಿಯಲ್ಲಿ ಆದಿಶಂಕರಾಚರ‍್ಯರು ತಾಯಿ ಶಾರದೆಯನ್ನು ಪ್ರತಿಷ್ಠಾಪಿಸಿ ಮಠವನ್ನು ಸ್ಥಾಪಿಸಿದ್ದರ ಕುರಿತಾದ ದಂತಕತೆಯ ಪ್ರಕಾರ : ತುಂಗೆಯ ತಟದಿ ಬಿರುಬೇಸಗೆಯ ಬಿಸಿಲಿನ ಝಳಕ್ಕೆ ಮೈಯೊಡ್ಡಿ ಪ್ರಸವವೇದನೆಯನ್ನನುಭವಿಸುತ್ತಿರುವ ಕಪ್ಪೆಗೆ ನಾಗರ ಹಾವೊಂದು ತನ್ನೆಡೆ ಬಿಚ್ಚಿ ನೆರಳು ಮಾಡಿ ಸಂತೈಸುತ್ತಿರುವAತೆ ತೋರುವ ದೃಶ್ಯವನ್ನು ಕಂಡು ಈ ನೆಲದಲ್ಲಿ ಶತ್ರುಗಳೂ ಕೂಡ ಮಿತ್ರರಾಗಿ ಸಹಾಯಹಸ್ತವನ್ನು ಚಾಚುತ್ತಾರೆ, ಅಂತಹ ಶಕ್ತಿ ಈ ಮಣ್ಣಿಗಿದೆ ಎಂದು ತಾಯಿಶಾರದಾ ಮಠವನ್ನು ನಿರ್ಮಿಸಿದರೆಂಬ ಪ್ರತೀತಿ ಇದೆ, ಹಾವು ಕಪ್ಪೆಗೆ ನೆರಳು ನೀಡಿದ್ದರ ಹಿನ್ನಲೆಯನ್ನು ಕ್ಷಣಕಾಲ ನಿಂತು, ಸೂಕ್ಷ್ಮವಾಗಿ ಅವಲೋಕಿಸಿದ್ದರೆ ಬೇರೆ ಕಾರಣ ಸಿಗಬಹುದಿತ್ತೇನೋ..? ಯಾವುದೇ ಒಂದು ವಸ್ತು-ವಿಷಯ, ಸಂಗತಿಯನ್ನು ನೋಡುವ ದೃಷ್ಟಿಕೋನ ಬದಲಾದರೆ ಹೊಸದೊಂದು ಸೃಷ್ಟಿಯನ್ನು ಕಾಣಲು ಸಾಧ್ಯ ಎಂಬುದನ್ನು ತೇಜಸ್ವಿಯವರು ಕುಕ್ಕಟ ಪಿಶಾಚ ಕಥಾಹಿನ್ನಲೆಯಲ್ಲಿ ಸ್ಪಷ್ಟಪಡಿಸುತ್ತಾರೆ.
ಡಾ. ಯಲ್ಲಮ್ಮ ಕೆ