ಗಜಲ್ ಗಂಧ
ವೈ ಎಂ ಯಾಕೊಳ್ಳಿ
ಶಮಾ ಎಮ್ ಜಮಾದಾರ
ಸ್ವತ: ನುರಿತ ಗಜಲ್ ಕವಿಯಾಗಿ ಮತ್ತು ವಿಮರ್ಶಕರಾಗಿ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿರುವ ಡಾ.ವೈ ಎಂ ಯಾಕೊಳ್ಳಿಯವರು ಇಂದಿನಿಂದವರ್ತಮಾನದ ಗಜಲ್ ಕವಿಗಳ ಅತ್ಯುತ್ತಮ ಗಜಲ್ ಒಂದನ್ನು ಆಯ್ಕೆ ಮಾಡಿಕೊಂಡು ಅದನ್ನು ವಿಶ್ಲೇಷಣೆಯನ್ನು ಪ್ರತಿಬಾನುವಾರ ʼಗಜಲ್ ಗಂಧʼ ಅಂಕಣದಲ್ಲಿ ಬರೆಯಲಿದ್ದಾರೆ.
ಗಜ಼ಲ್
ಕರುಳಬಳ್ಳಿಗೆ ಕತ್ತರಿಯಾಡಿಸದಿರು ಪಳಗಲಾಗದ ತಲ್ಲಣವಿಹುದಲ್ಲಿ
ಒರಳುಗಲ್ಲಿಗೆ ತಲೆಯೊಡ್ಡದಿರು ಮುಳುಗಲಾಗದ ತಳಮಳವಿಹುದಲ್ಲಿ
ಎದೆಕಣಿವೆಯ ಇಳಿಜಾರಿನಲ್ಲಿ ಮೇಲೇಳದಂತ ಸೆಳೆತವಿಹುದು
ಮುಂಗುರುಳಿಗೆ ಮರುಳಾಗದಿರು ಹೇಳಲಾಗದ ಕಳವಳವಿಹುದಲ್ಲಿ
ಸಿಂಬಳದ ನೊಣದಂತೆ ಸೆಣಸಾಟದ ಸೆರೆಮನೆ ನಿನ್ನೊಲವು
ಹೆಂಗರುಳಿಗೆ ಉರುಳಾಗದಿರು ಹೊರಳಲಾಗದ ಇರುಳಿಹುದಲ್ಲಿ
ಅರಳುವ ವನದ ಸುಮಗಳಿಗೆ ಭಾಗ್ಯವಿಹುದೇ ಮುಡಿಯೇರಲು
ಬೆರಳುಗಳಿಗೆ ಬೆಂಕಿಯಾಗದಿರು ಉರಿಯಲಾಗದ ಸಹನೆಯಿಹುದಲ್ಲಿ
ಬರಸೆಳೆಯದಿರು ದುರುಳ, ಮರುಳ ತರಳೆಯೆಂದುಬಗೆದು
ನೆರಳ ಬಳಿಗೆ ಸುಳಿಯದಿರು ಉಳಿಯಲಾಗದ ವಿಷವಿಹುದಲ್ಲಿ.
ಕೆರಳಿಸದಿರು ಕೇಸರಿಯ ಕೊಸರಿದರೂ ಉಸುರಲಾರೆ ಹೆಸರನು
ಸುಳಿಯೊಳಗೆ ಸರಿಯದಿರು ಇಳಿಯಲಾಗದ ಆಳವಿಹುದಲ್ಲಿ
ತೆರಳದಿರು ಹೊಸಲಿನಾಚೆ ರಾಮ ಸೋದರನ ರೇಖೆಯಿಹುದು
ಮನಸೊಳಗೆ ಇಳಿಯದಿರು ಬೆಳಗಲಾಗದ ಶಮೆಯಿಹುದಲ್ಲಿ.
*****
ಶಮಾ ಎಂ ಜಮಾದಾರ
ವಿವೇಕ ಸಾರಿ, ಬದುಕಿನ ಸತ್ಪಥ ತೋರುವ ಶಮಾ ಎಮ್ ಜಮಾದಾರ ಅವರ ಗಜಲ್.
ಗಜಲ್ ಎಂಬ ಕಾವ್ಯವೇ ಮೋಹಕವಾದದ್ದು . ರಮ್ಯತೆ ಮಾರ್ದವತೆ ಅದರ ಗುಣ ಎನ್ನಬಹುದು. ನೋವನ್ನೂ ಹಿತವಾಗುವಂತೆ ಹೇಳುವ ಗುಣ ಇರುವದು ಗಜಲ್ ಕಾವ್ಯಕ್ಕೆ ಮಾತ್ರ ಅನಿಸುತ್ತದೆ. ಅಂತೆಯೆ ಕನ್ನಡದ ಅನೇಕ ಕವಿಮನಸುಗಳು ಗಜಲ್ ಕಾವ್ಯಕೆ ಒಲಿದಿದ್ದಾರೆ, ಮತ್ತು ಕೆಲವರಾದರೂ ಆಳವಾದ ಅಧ್ಯಯನ ಮಾಡಿದ್ದಾರೆ.ಅಂತಹ ವಿರಳರಲ್ಲಿ ಒಬ್ಬರು ಬೆಳಗಾವಿ ಜಿಲ್ಲೆಯ ಯರಗಟ್ಟಿ(ತಾಲೂಕು ಕೇಂದ್ರ) ಯ ಶ್ರೀಮತಿ ಶಮಾ ಜಮಾದಾರ ಅವರು. ಒಂದು ಕಥಾ ಸಂಕಲನ , ಎರಡು ಗಜಲ್ ಸಂಕಲನ, ಒಂದು ಕವನ ಸಂಕಲನ ಹೀಗೆ ನಾಲ್ಕು ಕೃತಿ ಪ್ರಕಟಿಸಿರುವ ಅವರು ತುಂಬ ಸಂಯಮದ ಬರಹಗಾರರು . ಪರಿಪಕ್ವತೆ ಇಲ್ಲದೆ ಬರೆಯಬಾರದು.. ಎಂಬಂತಹ ಸ್ವಭಾವ ಹೊಂದಿರುವ ಇವರು ಅನೇಕ ಪ್ರಶಸ್ತಿಗಳಿಗೆ ಭಾಜನರೂ ಹೌದು. ಗಜಲ್ ಕಾವ್ಯವನ್ನು ಸಾಕ್ಷಾತ್ತಾಗಿ ಜೀವಿಸುತ್ತಿದ್ದಾರೆನೊ ಎನ್ನುವಷ್ಟು ಧ್ಯಾನಸ್ಥ ಸ್ಥಿತಿಯಲ್ಲಿ ಬರೆಯುವ ಅವರ ನೆಂದ ನೆಲದ ಘಮಲು ಸಂಕಲನ ಸಾಕಷ್ಟು ಪ್ರಸಿದ್ಧಿ ಪಡೆದಿದೆ.
ಈ ಗಜಲ್ಕಾರ್ತಿಯವರು ಬರೆದ ಒಂದು ಗಜಲ್ ಓದು ಮತ್ತು ಪ್ರೀತಿ ಇಂದು ಗಜಲ್ ಗಂಧವಾಗಿದೆ. ಇದು ಪ್ರೀತಿ ಮತ್ತು ವಿರಹದಾಚೆಗೆ ತನ್ನ ಅರ್ಥ ವಿಸ್ತಾರ ಹರಡಿಕೊಂಡ ಗಜಲ್ ಆದ್ದರಿಂದ ಇದನ್ನೆ ನಾನು ಚರ್ಚೆಗೆ ಎತ್ತಿಕೊಂಡಿರುವೆ. ಪ್ರೀತಿ ಮತ್ತು ವಿರಹದಾಚೆಗೆ ಗಜಲ್ ಕಾವ್ಯ ಇಂದು ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಅದಕ್ಕೆ ಬದುಕಿನ ಎಲ್ಲ ಸಂಗತಿಗಳು ಮುಖ್ಯವೆನಿಸುತ್ತಿವೆ. ಹೀಗಾಗಿ ಶಮಾ ಅವರ ಈ ಗಜಲ್ ನನಗೆ ಮುಖ್ಯ ಎನ್ನಿಸಿದೆ. ಇಂದು ಮಾನವೀಯತೆಯ ಬೇರಿಗೆ ಕೊಡಲಿಯೇಟು ಹಾಕುವ ಪ್ರೀತಿ ಸ್ನೇಹಗಳ ಕುಡಿಯ ಚಿವುಟುವ ಯತ್ನಗಳು ಕಾಣುತ್ತಿರುತ್ತವೆ. ಅದನ್ನು ಗಜಲ್ ನ ಮೊದಲ ದ್ವಿಪದಿಯಾದ ಮತ್ಲಾ ಸ್ಪಷ್ಟಪಡಿಸುತ್ತದೆ.
“ಕರುಳಬಳ್ಳಿಗೆ ಕತ್ತರಿಯಾಡಿಸದಿರು ಪಳಗಲಾಗದ ತಲ್ಲಣವಿಹುದಲ್ಲಿ”
“ಒರಳುಗಲ್ಲಿಗೆ ತಲೆಯೊಡ್ಡದಿರು ಮುಳುಗಲಾಗದ ತಳಮಳವಿಹುದಲ್ಲಿ”
ಬೆಳೆಯುವ ಮಕ್ಕಳ ಏಳಿಗೆಗೆ ಮುಳ್ಳಾಗಬೇಡ ಕತ್ತರಿಯಾಡಿಸಿ ಅವು ಚಿಕ್ಕದಿರುವಾಗಲೆ ಕತ್ತರಿಸುವ ಯತ್ನಕ್ಕೆ ಇಳಿಯಬೇಡ ಎನ್ನುವ ಗಜಲ್ ಕಾರ್ತಿ ಇಲ್ಲಿನ ತಲ್ಲಣಗಳ ನೆನಪು ಮಾಡುತ್ತಾರೆ. ಸಂಕಟಗಳಿಗೆ ಎದೆಯೊಡ್ಡು ಆದರೆ ತಲೆ ಬಾಗಬೇಡ. ಎದುರಿಸುವ ಛಾತಿಯಿರಲಿ, ಬರುವದೆಲ್ಲ ಬರುವುದೇ ಎನ್ನುತ್ತಾರೆ.
ಒಮ್ಮೊಮ್ಮೆ ಬದುಕಿನಲ್ಲಿ ನಾವು ಉಳಿದು ಪಾರಾಗದಂತಹ ಸೆಳೆತಗಳು ಬರುತ್ತವೆ . ಯಾವಕ್ಕೆ ನಮ್ಮ ಹೃದಯ ಇಂಬುಕೊಡಬೇಕು ಯಾವಕ್ಕೆ ನಮ್ಮ ಹೃದಯ ತಾಟಸ್ಥ್ಯ ನೀತಿ ತೋರಬೇಕು.. ಇದು ಹೃದಯಕ್ಕೆ ಬಿಟ್ಟ ಸಂಗತಿ. ಎದೆ ಕಣಿವೆಯ ಇಳಿಜಾರು ಎನ್ನುವದು, ಕೆಲವೊಮ್ಮೆ ಮೋಹ ಎನ್ನುವುದಾಗಿ ನಮ್ಮನ್ನು ಪ್ರಪಾತಕ್ಕೆ ಕರೆದೊಯ್ಯುವ ಕೊರಕಲಿನಂತೆ ಭಾಸವಾಗುತ್ತದೆ. ಯಾವುದಕ್ಕೆ ಅವಕಾಶ ಕೊಡಬೇಕು ಎನ್ನುವ ವಿವೇಕ ನಮಗಿರಬೇಕು. ಕಣ್ಣಿಗೆ ಚಂದ ಕಂಡದ್ದೆಲ್ಲ, ಮನ ಸೆಳೆದದ್ದೆಲ್ಲ ನಮ್ಮನ್ನು ಆಕರ್ಷಿಸಬಹುದಾದರೂ ನಮ್ಮನ್ನೇ ಮುಳುಗಿಸುವ ಪ್ರಪಾತವಾಗಿದ್ದರೆ ಅದನ್ನು ಅರಿಯುವ ಹೊಣೆಗಾರಿಕೆಯೂ ನಮ್ಮದೇ ಎಂಬುದರ ಬಗ್ಗೆ ಗಜಲ್ಕಾರ್ತಿ ನೆನಪಿಸುತ್ತಾರೆ. ಮನಸು ಒಮ್ಮೊಮ್ಮೆ ತನಗರಿಯದೆ ಯಾವುದೋ ಮೋಹದಲಿ ಬೀಳಬಹುದು ವಿವೇಕ ಆಗ ಎಚ್ಚರಿಸಬೇಕು ಎನ್ನುತ್ತದೆ ಗಜಲ್
“ಎದೆಕಣಿವೆಯ ಇಳಿಜಾರಿನಲ್ಲಿ ಮೇಲೇಳದಂತ
ಸೆಳೆತವಿಹುದು”
“ಮುಂಗುರುಳಿಗೆ ಮರುಳಾಗದಿರು ಹೇಳಲಾಗದ ಕಳವಳವಿಹುದಲ್ಲಿ”
‘ಮುಂಗುರುಳಿಗೆ ಮರುಳಾಗದಿರು’ ಎಂಬ ನುಡಿಗಟ್ಟು ನೀಡುವ ಎಚ್ಚರಿಕೆಯಂತೂ ಅದೇ ಆಗಿದೆ. ಯಾವುದೋ ಆಕರ್ಷಣೆ ನಿನ್ನನ್ನು ಸೆಳೆಯದಿರಲಿ ಎನ್ನುವ ಸದ್ದ್ವಿವೇಕ ಗಜಲ್ ಹೇಳುವ ಭೋದೆಯಲ್ಲಿದೆ. ಮುಂಗುರುಳಿನ ವ್ಯಾಮೋಹ ಹೇಳಲಾಗದ ಕಳವಳ ತಂದೀತು ಎನ್ನುವ ಎಚ್ಚರ ಅಲ್ಲಿದೆ.
ಒಮ್ಮೊಮ್ಮೆ ನಾವು ಹಿತವಾದ ಸಂಗತಿ ಎಂದು ತಿಳಿದ ಒಲವೆ ಸಿಂಬಳದ ನೊಣದಂತೆ ನಮ್ಮನ್ನು ಅದರಲ್ಲಿ ಅದ್ದಿ ಮುಳುಗಿಸುವದಾದರೆ ಅದನ್ನೇಕೆ ನೆಚ್ಚಬೇಕು. ಇದು ಗಜಲ್ ತೋರುವ ವಿವೇಕ. ನಿನ್ನ ವಿವೇಕ ಅವಳನ್ನು ಉಳಿಸಲಿ. ಹೆಂಗಳರುಳಿಗೆ ಉರುಳಾಗಿ ಕಾಡದಿರು ಎನ್ನುತ್ತದೆ ಗಜಲ್. ಮೋಹ ಕೇವಲ ನಿನ್ನನ್ನಲ್ಲ , ಅವಳನ್ನೂ ನಾಶ ಮಾಡಿತು ಎಂಬ ಎಚ್ಚರ ನಿನಗಿರಲಿ ಎನ್ನುತ್ತ…
“ಸಿಂಬಳದ ನೊಣದಂತೆ ಸೆಣಸಾಟದ ಸೆರೆಮನೆ
ನಿನ್ನೊಲವು”
“ಹೆಂಗರುಳಿಗೆ ಉರುಳಾಗದಿರು ಹೊರಳಲಾಗದ
ಇರುಳಿಹುದಲ್ಲಿ”
ಎನ್ನುವ ವಿನಂತಿ ಮಾಡುತ್ತದೆ. ಸಿಂಬಳದ ನೊಣ ಎನ್ನುವ ರೂಪಕ ಅರ್ಥಪೂರ್ಣ.ಅಲ್ಲಿಯೆ ಬಿದ್ದು ಒದ್ದಾಡುವ ದುಸ್ತಿತಿಗೆ ಸಂಕೇತ.
ಇಲ್ಲಿ ಎಲ್ಲ ಹೂವುಗಳೂ ತಾವು ಬಯಸಿದ ಮುಡಿಗೇರಲು ಸಾಧ್ಯವಿಲ್ಲ. ಎಲ್ಲ ಮನಸುಗಳು ತಾವು ಬಯಸಿದ್ದನ್ನು ಹೊಂದಲು ಸಾಧ್ಯವಿಲ್ಲ. ಈ ಅರಿವು ಇರದೆ ಹೋದರೆ ದುಃಖವೇ. ಎಲ್ಲಿಯವರೆಗೆ ಈ ಸತ್ಯ ಅರಿವಾಗುವದಿಲ್ಲವೊ ಅಲ್ಲಿಯವರೆಗೂ ನಾವು ಅನುಭವಿಸುತ್ತಲೆ ಇರಬೇಕಾಗುತ್ತದೆ ಎನ್ನುವದನ್ನು ಗಜಲ್ ಸಾರುತ್ತದೆ.
“ಅರಳುವ ವನದ ಸುಮಗಳಿಗೆ ಭಾಗ್ಯವಿಹುದೇ
ಮುಡಿಯೇರಲು”
“ಬೆರಳುಗಳಿಗೆ ಬೆಂಕಿಯಾಗದಿರು ಉರಿಯಲಾಗದ ಸಹನೆಯಿಹುದಲ್ಲಿ”
ಆದ್ದರಿಂದ ” ಬೆರಳುಗಳಿಗೆ ಬೆಂಕಿಯಾಗದಿರು ” ಎನ್ಸೂನುವ ಸೂಚನೆಯೂ ಅಲ್ಲಿದೆ. ಬಯಸಿದ ನೆರಳೇ ಉರುಳಾದೀತು ಎನ್ನುವ ಮಾತು ಅದ್ಭುತ ರೂಪಕ. ಜಗತ್ತು ಅಂದುಕೊಂಡಂತೆ ಸರಳವಿಲ್ಲ. ಅಲ್ಲಿ ಮಡುಗಟ್ಟಲೇ ವಿಷವೂ ಇದೆ. ಅರಿತಲ್ಲದೆ ಬದುಕು ನಡೆಯದು.
“ಬರಸೆಳೆಯದಿರು ದುರುಳ, ಮರುಳ ತರಳೆಯೆಂದು
ಬಗೆದು”
“ನೆರಳ ಬಳಿಗೆ ಸುಳಿಯದಿರು ಉಳಿಯಲಾಗದ
ವಿಷವಿಹುದಲ್ಲಿ.”
ಸೂಕ್ಷ್ಮತೆಗೂ ಅರ್ಥವಾಗದ ಸೂಚನೆಯೊಂದು ನಮ್ಮನ್ನು ಕಾಡುತ್ತದೆ. ಏನೋ ಒಂದು ಸಾಧ್ಯವಲ್ಲದ ,ಸಾಧ್ಯವಾಗದಿರುವ ಬಂಧಕ್ಕೆ ಗಜಲ್ ಎಚ್ಚರಿಕೆ ನೀಡಿವಂತಿದೆ.’ ಬರಸೆಳೆಯದಿರು ದುರುಳ ತರಳೆಯಂದು ತಿಳಿದು ‘. ಎಂಭಾಗ ಸೂಕ್ಷ್ಮವಾಗಿ ಆಲೋಚಿಸುವಂಥದ್ದು ಒಪ್ಪಿತವಲ್ಲದ ಬಂಧವೊಂದಕೆ ಎಚ್ಚರಿಕೆ ಅಲ್ಲಿರುವಂತಿದೆ. ಅದನ್ನೆ ದೈಹಿಕ ಸಾಮಿಪ್ಯವಲ್ಲ ನೆರಳ ಬಳಿಯೂ ಸುಳಿಯದಿರು ಬಾಲೆಯಲಿ ವಿಷವಿರುವುದನ್ನು ಹೇಳುತ್ತದೆ. ಅಕ್ಕ ಕೌಶಿಕನಿಗೆ ನೀಡಿದ ಎಚ್ಚರದ ಹಾಗೆ ಈ ಎಚ್ಚರ ಭಾಸವಾಗುತ್ತದೆ. ಗಜಲ್ ಬಿಡಿಸಲಾಗದ ಗೂಢ ಸಮದತ್ತ ಸಾಗುವದು ಗಜಲ್ ನ ಶ್ರೇಷ್ಠತೆಯಾಗಿದೆ.ಎಲ್ಲವನು ಬಿಟ್ಟುಕೊಡುವದು ಕವಿತೆಯಲ್ಲ ಎನ್ನುವ ಮಾತಿಗೆ ಈ ಷೇರ್ ಸಾಕ್ಷಿಯಾಗಿವೆ.
“ಕೆರಳಿಸದಿರು ಕೇಸರಿಯ ಕೊಸರಿದರೂ ಉಸುರಲಾರೆ
ಹೆಸರನು”
“ಸುಳಿಯೊಳಗೆ ಸರಿಯದಿರು ಇಳಿಯಲಾಗದ
ಆಳವಿಹುದಲ್ಲಿ”
ಕೇಸರಿ ,ಕೊಸರುವಿಕೆ ಇವಕೆ ತನ್ನದೇ ಆದ ಅರ್ಥ ವಿಸ್ತಾರವಿದೆ
“ತೆರಳದಿರು ಹೊಸಲಿನಾಚೆ ರಾಮ ಸೋದರನ ರೇಖೆಯಿಹುದು”
“ಮನಸೊಳಗೆ ಇಳಿಯದಿರು ಬೆಳಗಲಾಗದ ಶಮೆಯಿಹುದಲ್ಲಿ”
ರಾಮ ಸಹೋದರ ಲಕ್ಷ್ಮಣ , ಸೀತೆಗೆ ಹಾಕಿದ ಲಕ್ಷ್ಮಣ ರೇಖೆಯ ನೆನಪಿಸುತ್ತದೆ.ಸೀತೆ ಅಲ್ಲಿ ಬಂಧಿ .ಆಕೆ ಹೊರಗೆ ಬರಲಾರಳು. ಇನ್ನೊಬ್ಬರನ್ನು ಒಳಗೆ ಬಿಟ್ಟುಕೊಳ್ಳಲಾರಳು . ಇದು ಅವಳಿಗೆ ಅವಳೇ ಹಾಕಿಕೊಂಡ ಶರ್ಯತ್ತು. ಆ ರೇಖೆಯನ್ನು
ಮುರಿಯಲೆತ್ನಿಸುವವರಿಗೂ ಹೇಳುತ್ತಾಳೆ. ಇದು ಅನಿವಾರ್ಯ ಕೂಡ. ಬೆಳಗಲಾಗದ ಶಮೆಯಾಗಿರುವದು ಬಾಳಿನ ದುರಂತ.
ಒಮ್ಮೊಮ್ಮೆ ನಿರ್ಬಂಧ ಬಾಳಿಗೆ ಅನಿವಾರ್ಯ. ಎಷ್ಟೇ ಆಕರ್ಷಕವೆನಿಸಿದರೂ , ಮನಸು ಹರಿದರೂ ವಿವೇಕ ನಮ್ಮನ್ನು ಕಾಯಬೇಕು. ಇದು ಗಜಲ್ ತೋರುವ ಸತ್ಯ.
ಹೀಗೆ ಶಮಾ ಅವರ ಗಜಲ್ ಬದುಕಿನ ಸತ್ಯವನ್ನು ಸಾರುವ ನಿಜವಾದ ಗಜಲ್ ಹೇಳಿಕೊಡಬೇಕಾದ ಪಠ್ಯ.
ಅರ್ಥಪೂರ್ಣ ಆಳ ಒಳನೋಟಗಳನ್ನು ಗಜಲ್ ನೀಡಿದೆ. ಅಭಿನಂದನೆಗಳನ್ನು ಸಲ್ಲಿಸುತ್ತೇನೆ.