“ಮಾತೇ ಮುತ್ತು ಮಾತೇ ಮೃತ್ಯು”-ಕಾವ್ಯ ಸುಧೆ ಅವರ ಲೇಖನ

 ಆಹಾ… ಈ ಮಾತೇ ಎಷ್ಟು ಅರ್ಥಗರ್ಭಿತ.
ಈ ಪದದಲ್ಲಿ ಒಂಚೂರೆ   ವ್ಯತ್ಯಾಸದಲ್ಲಿ ಎಷ್ಟು ಮಹತ್ವ  ತುಂಬಿದೆ. ಇದೆ ಮಾತು ನುಡಿ ನಡೆಯಲ್ಲೂ ಅನ್ವಯಿಸುತ್ತೆ.
ಮನಸಿಗೆ ಶರಣಾಗು ಮಾತಿಗೆ ಗುಣವಾಗು, ಕೇಳುವ ಮನಸುಗಳೆಲ್ಲ ನಮ್ಮಲ್ಲಿ ಒಂದಾಗುವವು….

ಈ ಜಗತ್ತಿನಲ್ಲಿ ಮಾನವ ಬೇರೆ ಜೀವಿಗಳಿಗಿಂತ ವಿಭಿನ್ನನಾಗಿ ಶ್ರೇಷ್ಠನಾಗಿ ಗುರುತಿಸಿಕೊಳ್ಳಲು ಪ್ರಮುಖ ಕಾರಣ ಎಂದರೆ ಆತನಿಗೆ ಪ್ರಕೃತಿದತ್ತ ವಾಗಿ ಬಂದಿರುವ ಬುದ್ಧಿಶಕ್ತಿಯೇ ಹಾಗೆಂದ ಮಾತ್ರಕ್ಕೆ ಉಳಿದ ಪ್ರಾಣಿ ಗಳಿಗೆ ಈ ಶಕ್ತಿ ಇಲ್ಲ ಎಂದಲ್ಲ.   ಬುದ್ಧಿಮತ್ತೆಯಿಂದ ಜ್ಞಾನ ಹೆಚ್ಚಿಸಿಕೊಳ್ಳಲು ಮಾನವನಿಗೆ ಸಾಧ್ಯವಿದೆ.
ಇನ್ನು  ಮಾನವನಿಗೆ ದೇವರು ನೀಡಿರುವ ಇನ್ನೊಂದು ಮಹತ್ವದ ಕೊಡುಗೆ ಎಂದರೆ ಮಾತು.  ಆದರೆ ಮಾತು ಎಷ್ಟು ಅಮೂಲ್ಯವೋ ಅಷ್ಟೇ ಅಪಾಯಕಾರಿಯೂ ಹೌದು.  ಈ ಅದ್ಭುತ ಶಕ್ತಿಯ ಕಾರಣದಿಂದಾಗಿಯೇ ಮನುಷ್ಯನು ಸೃಷ್ಟಿಯ ಉಳಿದ ಪ್ರಾಣಿಗಳಿ ಗಿಂತ ಭಿನ್ನನಾಗಿರುವುದು.

ಭಾರತೀಯ ಸಂಪ್ರದಾಯದಲ್ಲಿ ಮಾತನ್ನು ಸರಸ್ವತೀ ಸ್ವರೂಪ ಎಂದೇ ಭಾವಿಸಲಾಗುತ್ತದೆ. ತಸ್ಯವಾಚ್ಕಃ ಪ್ರಣವಃ ಎನ್ನುತ್ತ ಓಂಕಾರವನ್ನೇ ‘ವಾಕ್‌’ ಎನ್ನುತ್ತವೆ ಶಾಸ್ತ್ರಗಳು. ‘ಓಂಕಾರದಿಂದಲೇ ಎಲ್ಲ ಬೀಜಗಳು ಉದಿಸಿ ಅವು ಅಕ್ಷರಗಳಾಗಿ ಆಧ್ಯಾತ್ಮಿಕ ಬೀಜಾಕ್ಷರ ವಾಕ್ಯಗಳಾಗಿ ಭಾಷೆಯಾಗಿ ನಮ್ಮ ಜೀವನವನ್ನು ಸಲಹುತ್ತಿದೆ’ ಎನ್ನುವ ಭಾವ ಪರಂಪರೆಯಲ್ಲಿದೆ. ಹಾಗಾಗಿ ನಮ್ಮ ಲೌಕಿಕ ಅಕ್ಷರಗಳೂ ಲೋಕೋತ್ತರವಾದ ‘ಅಕ್ಷರ’ವಾದ(ನಾಶವಿಲ್ಲದ) ಓಂಕಾರದ ಅಂಶಭೂತಗಳೇ ಎನ್ನುವ ಭಕ್ತಿ ಭಾವವಿದೆ.

ಮಾತಿನಿಂದಲೇ ಓರ್ವನ ವ್ಯಕ್ತಿತ್ವವನ್ನು ನಿರ್ಧರಿಸಬಹುದು. ಮಾತುಗಾರಿಕೆ ಎಲ್ಲರಿಗೂ ಸಿದ್ಧಿಸಲಾರದು. ಅದೂ ಒಂದು ಕಲೆ. ನಾವಾಡುವ ಒಂದು ಮಾತು ಮಧುರವಾದ  ಸಂಬಂಧವನ್ನು ಬೆಸೆಯಲೂಬಹುದು /  ಮುರಿಯಲೂಬಹುದು. ನಾವಾಡುವ ಒಂದು ಪ್ರೇರಣೆಯ ಮಾತು ಎಲ್ಲವನ್ನೂ ಕಳೆದುಕೊಂಡು ಹತಾಶನಾದ ಒಬ್ಬ ವ್ಯಕ್ತಿಯಲ್ಲಿ ಆಶಾಭಾವನೆಯನ್ನು ಮೂಡಿಸಬಹುದು, ಅದೇ ಒಂದು ಕುಹಕದ ಮಾತು ಗೆಲುವಿನ ತುತ್ತ ತುದಿಯಲ್ಲಿ ಇದ್ದವನನ್ನೂ ಪಾತಾಳಕ್ಕೆ ತಳ್ಳಬಹುದು.

ಬಾಯಿಯಿಂದ ಹೊರ ಹೊರಟ ಮಾತು ಬಿಟ್ಟ ಬಾಣದಂತೆ. ಒಮ್ಮೆ ಚಿಮ್ಮಿದ ಮೇಲೆ ಆಯ್ತು, ಮತ್ತೆ ಹಿಂದಿರುಗಲಾರದು!
ಹಾಗಾಗಿ ಆಡಬೇಕಾದ ಮಾತನ್ನು ಧ್ಯಾನವಿಟ್ಟು  ಸಂದರ್ಭವರಿತು  ಪರಿಣಾಮವನ್ನೂ ಮುಂದಾಲೋಚಿಸಿ ಸಹನೆಯಿಂದ ಹದದಲ್ಲಿ ಮಾತನಾಡಬೇಕು ಎನ್ನಲಾಗುತ್ತದೆ.
ಭಾರತದಾದ್ಯಂತ ಸಂಚರಿಸಿ ಅಪಾರವಾದ ಲೋಕಾನುಭವವನ್ನೂ  ದೇಶೀಯ ಸಾಂಸ್ಕೃತಿಕ ಸ್ವರೂಪವನ್ನೂ  ಶಾಸ್ತ್ರ ಸಂಪ್ರದಾಯ ನೇರ ಜ್ಞಾನವನ್ನೂ ಸಂಪಾದಿಸಿದ್ದ ಸ್ವಾಮಿ ವಿವೇಕಾನಂದರ ಅಪ್ರತಿಮ ವಾಕ್‌ ವೈಖರಿಗೇ ಜಗತ್ತೇ ಬೆರಗಾಗಿದ್ದನ್ನು ನೆನೆಯಬಹುದು. ರಾಮಕೃಷ್ಣ ಪರಮಹಂಸರು ಸುಮ್ಮನೆ ಭಕ್ತರೊಡನೆ ಸಂಭಾಷಿಸಿದ ಮಾತುಗಳೆಲ್ಲ ಇಂದು ಮಹತ್ವಪೂರ್ಣ ಸಾಹಿತ್ಯ ಪ್ರಕಾರವಾಗಿ ‘ವಚನವೇದ’ ಎನಿಸಿ ಜನಪ್ರಿಯವಾಗಿದೆ. ರಮಣ ಮಹರ್ಷಿಗಳಂತೂ ಮಾತನಾಡಿದ್ದೇ ಕಡಿಮೆ. ಆದರೆ ಆ ಕೆಲವೇ ನುಡಿಗಳಲ್ಲಿ ಸೂಸುವ ವಿವೇಕವಂತೂ ಅಪಾರ.

*ಹೀಗೆ ಮಹನೀಯರ ನುಡಿನಡೆಗಳಲ್ಲೆಲ್ಲಾ ಮಾತು ಮುತ್ತಾಗಿಯೇ ಹೊಳೆದು ಎಲ್ಲರೊಳಗೆ ಮನೆಮಾಡಿದ್ದು ನಾವು ಕಂಡಿದ್ದೇವೆ.
ಮೃತ್ಯುವಾಗುವ ಈ ಮಾತು
ನಮ್ಮ ದ್ವೇಶಿಗಳಲ್ಲಿಯೆ ಹೊರತು ಉತ್ತಮರಲ್ಲಿ ಮೃತ್ಯುವಾಗದು. ಯಾವತ್ತಿದ್ದರೂ ಮುತ್ತಾಗಿಯೇ ಇರುವುದು.
ಮಾತಿಗೆ ಮನಸು ಜೋಡಿಯಾಗಿರತ್ತದೆ.  ಆ ಮನಸಿಗೆ ಸಿಟ್ಟೆಂಬ ಬೆಂಕಿ ತಗುಲಿಸಿಕೊಂಡು ಮಾತಾಡಿದರೆ ಸುಡುವ ಮೃತ್ಯುವಾಗಿಬಿಡುವುದು,
ಅದೇ ಮನಸಿಗೆ ಸಮಾಧಾನವೆಂಬ ತಂಗಾಳಿ ಬೀರಿದರೆ ಮಾತು ಘಮಲಾಗಿ ಹೃದಯ ಸೇರಿ ಎಲ್ಲರ ಮನ ಗೆಲ್ಲಿಸುವುದು, ಹಾಗೆ ಮೃತ್ಯುವನ್ನೂ ಮೃತ್ಯುವಾಗಿ ಅಳಿದುಬಿಡುವುದು , ಇದೆ ಉತ್ತಮದ ಮುತ್ತಿನಂಥಾ ಮಾತಿಗಿರುವ ಮಹತ್ವ.
ಪ್ರೀತಿಸುವ ಮನಸುಗಳಿಗೆ ಮಾತು ಮುತ್ತಾಗಿ ಶೃಂಗರಿಸಿಕೊಳ್ಳುತ್ತದೆ, ಆಗ ಮುತ್ತಿನಂಥಾ ಮಾತು ಪ್ರೇಮಿಗಳ ತಣಿಸುವ ಮುದ್ದಾಗಿ ನೀಡುವ ಮುತ್ತಿಗೂ
ಶಕ್ತಿನೀಡಿ ಚಿಪ್ಪಿನೊಳ ಮುತ್ತಂತೆ ಸದಾ ಪ್ರೇರೇಪಿಸುವುದು.
ಏನೆ ಇರ್ಲಿ, ಮಾತು ಮಾತಿಗೆ ಬೆಸೆಯೊ ಮನಸು ಮುತ್ತಿನಂಥ ಮಾತಿಗೆ ಮುಡಿಪಾಗಿರಲಿ,
ಮೃತ್ಯುವಾಗದೆ ಮೃತ್ಯುವನ್ನೂ ಸುಡುವ ಮುತ್ತಿನಂತ ಮಾತಾಗಿ ಹೃದಯದಲಿ ಸದಾ ಮನೆ ಮಾಡಿರಲಿ ಎನ್ನುವುದು ನನ್ನ ಬಯಕೆ. ಏನಂತೀರಿ…..!!


Leave a Reply

Back To Top