ಕಾವ್ಯ ಸಂಗಾತಿ
ನಾಗರಾಜ್ ಬೆಳಗಟ್ಟ ಅವರ ಕವಿತೆ-
ಜೊತೆಗಷ್ಟು ಆಯಸ್ಸು
ಭೂಮಿಗೆ ಬೀಸೊ ತಂಗಾಳಿಗೆ ಗೊತ್ತಿಲ್ಲ
ತನ್ನ ದಿಕ್ಕು ಎಲ್ಲಿ ಹೇಗೆ ಎಂದು
ಬೀಸುತ್ತದೆ ಎಲ್ಲಾ ಕಡೆ
ಎಲ್ಲಾ ಎಲ್ಲೆಗಳ ಮೀರಿ
ಎಲ್ಲೇ ಬೀಸಿದರೂ ಒಂದಿಷ್ಟು ನಿಟ್ಟುಸಿರಾಗಬಹುದು
ಭೂಮಿಗೆ ಬಿಳುವ ಮಳೆಹನಿಗೆ ಗೊತ್ತಿಲ್ಲ
ಯಾವ ಎಲೆ
ಯಾವ ಹೂವು
ಯಾವ ಬಳ್ಳಿ ಹೇಗೆ ಎಂದು
ಬಿದ್ದ ಹನಿ ನೀರಾಗಬಹುದು
ದಾಹ ಇಂಗಿಸುವ ಜಲವಾಗಬಹುದು
ಬಿದ್ದಲ್ಲೆ ಇಂಗಬಹುದು
ಎಲ್ಲೇ ಬಿದ್ದರೂ ಒಂದಿಷ್ಟು ಆಸರೆಯಾಗಬಹುದು
ಭೂಮಿಗೆ ಬೀಳೊ ಕಿರಣಕ್ಕೆ ಗೊತ್ತಿಲ್ಲ
ಯಾವ ಗೋಪುರ
ಯಾವ ಶಿಖರ
ಯಾವ ಊರು ಕೇರಿ ಎಂದು
ಬಿದ್ದ ಕಿರಣ ಬೆಳಗಬಹುದು
ಹಸಿರಾಗಬಹುದು ಉಸಿರಾಗಬಹುದು
ಮಳೆ ನೀರಿಗೆ ಬಿದ್ದ ಕಿರಣ
ಒಂದಿಷ್ಟು ಕಾಮನಬಿಲ್ಲಾಗಬಹುದು
ಭೂಮಿಗೆ ಬಂದ ನನಗೂ ಗೊತ್ತಿಲ್ಲ
ಯಾವುದು ಬದ್ಧ
ಯಾವುದು ಅಸಂಬದ್ಧ
ಯಾವುದು ಬಂಧ
ಯಾವುದು ಸಂಬಂಧ
ಒಂದು ಉಸಿರಲ್ಲಿ ಎಲ್ಲಾವೂ
ಹರಿಯಬಹುದು
ಬಾಳಿಸಬಹುದು
ಹೆಣಿಯಬಹುದು
ಏನಾದರೂ ಇಲ್ಲೊಂದು ಮಳೆಹನಿ
ಅಲ್ಲೊಂದು ಕಿರಣ
ಒಂದಿಷ್ಟು ತಂಗಾಳಿ
ಜೊತೆಗಷ್ಟು ಆಯಸ್ಸು
ನಾಗರಾಜ್ ಬೆಳಗಟ್ಟ.