ವೈಚಾರಿಕ ಸಂಗಾತಿ
ಡಾ.ಯಲ್ಲಮ್ಮ ಕೆ.
ಚಿಂತೆಯೆಂಬ ಸಂತೆಯಲ್ಲಿ
ಅಲೆದಾಡಿತೀ ಮನ..!
ವೈಚಾರಿಕ ಲೇಖನ
ಈ ಬದುಕಿನ್ಯಾಗ ಚಿಂತೆ ಯಾರನ್ನು ಬಿಟ್ಟಿದೆ ನೀವೇ ಹೇಳಿ ನೋಡುವ..! ಇದಕ್ಕೆ ನಾನೂ ಹೊರತಾದವಳೇನಲ್ಲ. ನನ್ನೊಳಗಿನ ಚಿಂತೆಗಳನ್ನಿಲ್ಲಿ ಅರುಹಿದ್ದೇನೆ. ಬದುಕಿನ ಕುರಿತಾದ ನನ್ನ ವ್ಯಾಖ್ಯಾನ ಹೀಗಿದೆ : ‘ಮನುಷ್ಯನಾಗಿ ಹುಟ್ಟಿದ ಬಳಿಕ ಬದುಕಿನ್ಯಾಗ ಚಿಂತಿ ಮಾಡ್ಬೇಕು ಇಲ್ಲವೇ ಚಿಂತನಾ ಮಾಡ್ಬೇಕು. ಇದ್ಯಾವುದನ್ನೂ ಮಾಡಿಲ್ಲ ಅಂದರೆ ಇದ್ದೂ ಸತ್ತ ಹಾಗೆ’. ‘ಚಿಂತೆ ಯಾಕೆ ಮಾಡತಿಯೋ ಗೆಳೆಯ ಹೇಳಯ್ಯ ಲವ್ವೇ ಹೀಗಯ್ಯ..!’ ಎಂದು ಹಾಡೇಳ್ಕಂಡು ಕುಣಿದು ಕುಪ್ಪಳಿಸಿದವರೇ ತಮ್ಮೆಲ್ಲ ಚಿಂತೆಗಳನ್ನು ಮರೆತು ಪ್ರೇಮಲೋಕದಲ್ಲಿ ವಿಹರಿಸಿದರು. ಚಿಂತೆ ಮತ್ತು ಚಿತೆಯಲ್ಲಿನ ಅನುಸ್ವಾರವಿಲ್ಲದಿರುವ ವ್ಯತ್ಯಾಸವನ್ನು ಗುರುತಿಸುತ್ತ ಮುಂದುವರೆದು ‘ಚಿತೆ ಎಂಬುದು ನಾವು ಸತ್ತಮೇಲೆ ನಮ್ಮನ್ನು ಸುಟ್ಟರೆ ; ಚಿಂತೆ ಎಂಬುದು ನಮ್ಮನ್ನು ಜೀವಂತ ಸುಡುತ್ತದೆ’ ಬಲ್ಲವರು ತಿಳಿಹೇಳಿದ ಮಾತು. ಹೀಗಿದ್ದೂ ನಾವು ಈ ಚಿಂತೆಯನ್ನು ಮಾಡುವುದನ್ನು ಬಿಟ್ಟಿಲ್ಲ. ಈ ಚಿಂತೆ ಕುರಿತಾಗಿಯೇ ಹನ್ನೆರಡನೆಯ ಶತಮಾನದಲ್ಲಿ ಶಿವಶರಣರು ತಮ್ಮ ವಚನ ವಾಙ್ಮಯದಲ್ಲಿ ಸ್ಪಷ್ಟಪಡಿಸಿದ ಮಾತುಗಳನ್ನಿಲ್ಲಿ ನೋಡೋಣ.
ಕನ್ನಡ ಸಾಹಿತ್ಯದ ಆದಿಕವಯಿತ್ರಿ ಎಂದೆನಿಸಿದ ಮಹಾದೇವಿಯಕ್ಕಳು ಈ ಭವ ಬಂದನದಲ್ಲಿ ಸಿಲುಕಿ ಹೊರಳಾಡುವ ಜೀವಿಗಳಿಗೆ ಒದಗಬಹುದಾದ ಚಿಂತೆಯ ಬಗೆಗಳ ಪ್ರಸ್ತಾಪ ಪ್ರಸ್ತುತ ವಚನದಲ್ಲಿ ಇಂತಿದೆ :
‘ಎಮ್ಮೆಗೊಂದು ಚಿಂತೆ, ಸಮಗಾರಗೊಂದು ಚಿಂತೆ
ಧರ್ಮಿಗೊಂದು ಚಿಂತೆ, ಕರ್ಮಿಗೊಂದು ಚಿಂತೆ
ಎನಗೆ ಎನ್ನ ಚಿಂತೆ, ತನಗೆ ತನ್ನ ಕಾಮದ ಚಿಂತೆ
ಒಲ್ಲೆ ಹೋಗು, ಸೆರಗ ಬಿಡು ಮರುಳೆ
ಎನಗೆ ಎನ್ನ ಚೆನ್ನಮಲ್ಲಿಕಾರ್ಜುನ ದೇವರು
ಒಲಿವನೋ ಒಲಿಯನೋ ಎಂಬ ಚಿಂತೆ’.
-ಮಹಾದೇವಿಯಕ್ಕ
ತನ್ನ ಬಾಹ್ಯ ಸೌಂದರ್ಯದಿಂದಾಗಿ ತನಗೆ ಕೌಶಿಕ ಮಹಾರಾಜನಿಂದ ಬಂದೊದಗಿದ ಆಪತ್ತಿನಿಂದ ಪಾರಾಗುವ ಬಗೆಯನ್ನು ಕಂಡು-ಕೊಳ್ಳುವ ಯತ್ನದಲ್ಲಿ ಚಿಂತೆಗಳ ಸರಮಾಲೆಯ ಸುಳಿಯಲ್ಲಿ ಸಿಲುಕಿದವರು ಪಟ್ಟ ಪಾಡನ್ನು ಚಿತ್ರಿಸಿದ್ದಾಳೆ.
ಇದೇ ಹಿನ್ನಲೆಯಲ್ಲಿ ಮತ್ತೋರ್ವ ಶಿವಶರಣನ ವಚನವನ್ನಿಲ್ಲಿ ಉದ್ದರಿಸುವುದು ಸೂಕ್ತವೆನಿಸುತ್ತದೆ.
‘ಬಡತನಕ್ಕೆ ಉಂಬುವ ಚಿಂತೆ, ಉಣಲಾದರೆ ಉಡುವ ಚಿಂತೆ
ಉಡಲಾದರೆ ಇಡುವ ಚಿಂತೆ, ಇಡಲಾದರೆ ಹೆಂಡಿರ ಚಿಂತೆ
ಹೆಂಡಿರಾದರೆ ಮಕ್ಕಳ ಚಿಂತೆ, ಮಕ್ಕಳಾದರೆ ಬದುಕಿನ ಚಿಂತೆ
ಬದುಕಾದರೆ ಕೇಡಿನ ಚಿಂತೆ, ಕೇಡಾದರೆ ಮರಣದ ಚಿಂತೆ
ಇಂತೀ.., ಹಲವು ಚಿಂತೆಯಲ್ಲಿ ಇಪ್ಪವರ ಕಂಡೆನು.
ಶಿವನ ಚಿಂತೆಯಲ್ಲಿದ್ದವರೊಬ್ಬರನೂ ಕಾಣೆನೆಂದಾತ
ನಮ್ಮ ಅಂಬಿಗರ ಚೌಡಯ್ಯ ‘ನಿಜ’ಶರಣನು’.
-ಅಂಬಿಗರ ಚೌಡಯ್ಯ
‘ಸತ್ಯವನ್ನರುಹಿಕೊಂಬಲು ಎಂಟೆದೆಬೇಕೆಂಬ ಮಾತಿನಂತೆ’ ನೇರ ನಡೆ-ನುಡಿಯ, ನಿಜಶರಣನಾದ ಅಂಬಿಗರ ಚೌಡಯ್ಯನು ತನ್ನ ಬದುಕಿನಲ್ಲೊದಗಿದ ಅನುಭವದ ಜ್ಞಾನವನ್ನಿಲ್ಲಿ ವಿಡಂಬನಾತ್ಮಕ ಶೈಲಿಯಲ್ಲಿ ಉಣಬಡಿಸಿದ್ದಾನೆ. ಆಚಾರ-ವಿಚಾರ, ಸಂಪ್ರದಾಯದ ಹೆಸರಿನಲ್ಲಿ ಡಾಂಭಿಕ ಭಕ್ತಿಯನ್ನು ತೋರ‍್ಪಡಿಸುವ ವೇಷಧಾರಿಗಳನ್ನು ಕಟುವಾಗಿ ಟೀಕಿಸಿದ್ದಾನೆ.
ಈ ಶರಣರ ಆಂದೋಲನದ ತರುವಾಯ ಸಮತಾ ಸಮಾಜವನ್ನು ಕಟ್ಟುವ ಆಶಯವನ್ನು ಮುಂದುವರೆಸಿಕೊಂಡು ಬಂದ ಪರಂಪರೆ ಎಂದರೆ..? ದಾಸಸಾಹಿತ್ಯವೆಂದು ಹೇಳಬಹುದು. ಇಲ್ಲಿ ದಾಸಶ್ರೇಷ್ಠರು, ಕೀರ್ತನಾಕಾರರು, ಸಾಧು-ಸಂತ-ಸತ್ಪುರುಷರು, ತತ್ವಪದಕಾರರು – ಕೀರ್ತನೆಗಳು, ಸುಳಾದಿಗಳು, ಉಗಾಭೋಗಗಳು ಇತರ ಹತ್ತು-ಹಲವು ಪ್ರಕಾರದ ಸಾಹಿತ್ಯ ರಚಿಸಿ, ರಾಗಬದ್ಧವಾಗಿ ಹಾಡುತ್ತ ಬೀದಿ ಬೀದಿ ಅಲೆಯುತ್ತ ಅಧ್ಯಾತ್ಮ ಜ್ಞಾನವನ್ನು ಜಗತ್ತಿನೆಲ್ಲಡೆ ಪಸರಿಸುವಂತೆ ಮಾಡಿದ್ದಾರೆ. ಅಂಥಹ ಪ್ರಮುಖರಲ್ಲಿ ಓರ್ವ ತತ್ವಪದಕಾರರಾದ ಕಡಕೋಳ ಮಡಿವಾಳಪ್ಪನವರು ಈ ಚಿಂತೆಯ- ಕುರಿತಾಗಿ ಹೇಳಿರುವ ತತ್ವಪದವನ್ನು ಉಲ್ಲೇಖಿಸುತ್ತ :
ತತ್ವಪದ :
‘ಯಾಕ ಚಿಂತಿ ಮಾಡ್ತಿದಿ ಎಲೆ ಮನವೆ
ನಿನಗೆ ಯಾತರ ಸುಖವಿಲ್ಲ ಎಲೆ ಮನವೆ |
ಲೋಕನಾಥನ ಧ್ಯಾನವ ಮಾಡಿ
ಸಾಕಾರ ಮಾಡಿಕೊಳ್ಳಲೆ ಮನವೆ. ||
ಕಳ್ಳತನ ಮಾಡಬಾರದು ಎಲೆ ಮನವೆ
ನೀ ಸುಳ್ಳತನ ಹೇಳಬಾರದು ಎಲೆ ಮನವೆ|
ಬಲ್ಲಂತ ಜ್ಞಾನಿಗಳು ಬಲ್ಲಷ್ಟು ಹೇಳಿದರೆ
ನೀ ಅಲ್ಲಂತ ಅನಬಾರದು ಎಲೆ ಮನವೆ. ||
ಯಾರಿಗೆ ಯಾರಿಲ್ಲ ಎಲೆ ಮನವೆ
ಇದು ಮೂರು ದಿನದ ಸಂತಿ ಮನವೆ|
ಸೇರದವರ ಮುಂದೆ ಜಾರಿ ಬೀಳುವಂತೆ
ಪಾರಾಗಿ ಹೋಗಬೇಕು ಎಲೆ ಮನವೆ. ||
ಆಸೆ ಅಳಿಬೇಕು ಎಲೆ ಮನವೆ
ಇದು ಹೇಸಿಗೆ ಸಂಸಾರ ಎಲೆ ಮನವೆ|
ದೇಹದೊಳಗೆ ನಮ್ಮ ಗುಡ್ಡದ ಮಹಾಂತನ
ಧ್ಯಾನವ ಮರಿಬ್ಯಾಡ ಎಲೆ ಮನವೆ’. ||
-ಕಡಕೋಳ ಮಡಿವಾಳಪ್ಪ
ಈ ಮೇಲಿನ ತತ್ವಪದದಲ್ಲಿ ‘ನಗುವವರ ಮುಂದೆ ಎಡವಿ ಬೀಳದಂತೆ’ ಎಚ್ಚರಿಸುತ್ತ, ಬದುಕಿನ ನಿಸ್ಸಾರತೆಯನ್ನು, ಸಾಕಾರದ ಮಾರ್ಗವನ್ನು ಸೃಷ್ಟಿಗೀಶನಾದ ಗುಡ್ಡದ ಮಹಾಂತನನ್ನು ಅನುದಿನವು ನೆನೆನೆನೆದು ಮುಕ್ತಿಯನ್ನು ಹೊಂದುವಂತೆ ಸಾರಿದ್ದಾರೆ.
ಕನ್ನಡ ಸಾಹಿತ್ಯದ ಮೂಲ ಬೇರುಗಳು ಬಿಟ್ಟಿದ್ದು ಜನಪದ ಸಾಹಿತ್ಯದಲ್ಲಿ ಎಂದರೆ ತಪ್ಪಾಗಲಿಕ್ಕಿಲ್ಲ. ಜನಪದರು ತಮ್ಮ ನಿತ್ಯಜೀವನದ ಬದುಕು-ಬವಣೆಯನ್ನು, ಹಾಡು-ಪಾಡನ್ನು ಪ್ರಾದೇಶಿಕವಾದ ಭಾಷೆಯಲ್ಲಿಯೇ ಮೌಲಿಕವಾಗಿ ಕಟ್ಟಿಕೊಟ್ಟಿರುವಂತದ್ದು. ಜನಪದರ ಸಾಹಿತ್ಯದ ಸರಕೆಂದರೆ..? ಅವರ ಬದುಕೇ ಅಗಿತ್ತು. ಆ ಮೂಲಕ ಹುಟ್ಟಿಕೊಂಡಂತಹ ಗಾದೆಮಾತುಗಳು, ಪಡೆನುಡಿಗಳು, ನಾಣ್ಣುಡಿಗಳು, ನುಡಿಗಟ್ಟಗಳು, ಗೀಗೀಪದ, ಲಾವಣಿ, ಗೌರಿ-ಗಣೇಶ, ಜೋಕುಮಾರಸ್ವಾಮಿ ಹಾಡುಗಳು, ಡೊಳ್ಳು, ಹಂತಿ, ರಿವಾಯತ್-ಸವಾಲ್-ಜವಾಬ್ ಪದಗಳು ಇತರ.., ಇವು ಕಂಠಸ್ಥ ಸಾಹಿತ್ಯವಾಗಿ ತಲೆಮಾರಿನಿಂದ-ತಲೆಮಾರಿಗೆ ಹರಿದುಬಂದು, ಜನರ ನಾಲಿಗೆಯ ಮೇಲೆ ನಲಿದಾಡುತ್ತಿರುವ ಸಮೃದ್ಧವಾದ ಸಾಹಿತ್ಯವೆನಿಸಿದೆ. ಕೂದಲಿನ ಎಳೆಗೊಂದರಂತೆ ಗಾದೆಕಟ್ಟಬಲ್ಲವರಾದ ಈ ಜನಪದರು ಸಮಾಜದಲ್ಲಿ ತಪ್ಪುದಾರಿಗೆ ಇಳಿದವರಿಗೆ ಗಾದೆಮಾತುಗಳ ಮೂಲಕ ತಿಳಿಹೇಳಿ ಸರಿದಾರಿಗೆ ತರುವು ಕಟ್ಟಳೆ-ಕಾನೂನಿನ ರೂಪದಲ್ಲಿ ಬಳಸಲ್ಪಡುತ್ತಿದ್ದವು. ಆ ಮೂಲಕ ಸಮಾಜದಲ್ಲಿನ ಸ್ವಾಸ್ಥವನ್ನು ಕಾಪಾಡಿಕೊಂಡು ಹೋಗುತ್ತಿದ್ದರು.
ಜನಪದರು ಚಿಂತೆಯ ಕುರಿತಾಗಿ ಏನೆಲ್ಲ ಹೇಳಿರಬಹುದೆಂದು ಆಲೋಚಿಸುತ್ತಿರುವಾಗ ತಕ್ಷಣ ಹೊಳೆದದ್ದು : ಮನೆ-ಮಠ, ಆಳು-ಕಾಳು, ಗಂಡ-ಹೆಂಡ್ತಿ-ಮಕ್ಕಳು ಅಂತ ಯಾವುದೇ ಜವಾಬ್ದಾರಿಯನ್ನರಿದೇ ಅಥವ ಜವಾಬ್ದಾರಿಯನ್ನು ಮರೆತ ಜನಗಳಿಗೆ ಬುದ್ಧಿ ಹೇಳುವ ಸಂದರ್ಭದಲ್ಲಿ ಕಟ್ಟಿದ ಗಾದೆ – ‘ಚಿಂತಿ ಇಲ್ದಾಕಿ ಸಂತ್ಯಾಗ ನಿದ್ದಿ ಮಾಡಿದ್ಲಂತೆ’ ಎಂಬುದು. ಮುಂದುವರೆದು ಈ ಬಾಳಿನ ಗೋಳಿನಲ್ಲಿ ಯಾರಿಗೆ ಯಾರು..? ಅವರವರ ಬದುಕು ಅವರಿಗೆ ದೊಡ್ಡದು. ಅವರವರ ಚಿಂತೆ ಅವರವರಿಗೆ ಎನ್ನುತ್ತ ‘ಅಜ್ಜಿಗೆ ಅರಿವೆಯ ಚಿಂತೆ, ಮಗಳಿಗೆ ಮಿಂಡರ ಚಿಂತೆ, ಮೊಮ್ಮಗಳಿಗೆ ಕಜ್ಜಾಯದ ಚಿಂತೆ’ ಹೀಗೆ ತಮ್ತಮ್ಮ ಚಿಂತೆಗಳಲ್ಲಿರುವಾಗ.., ‘ಅವರವರಿಗೆ ಹೊಟ್ಟೆನೋವಿಗೆ ಅವರೇ ಅಜಿವಾನ ತಿನ್ನಬೇಕು’ ನಾನು ಅಜಿವಾನ ತಿಂದರೆ ನಿಮ್ಮ ಹೊಟ್ಟೆನೋವು ಕಡಿಮೆಯಾದೀತೇ..? ‘ಬಾವಿಯ ಕಪ್ಪೆಗೆ ನಾಡಿನ ಗೋಜೇಕೇ..?’ಎನ್ನುವ ಕಟುವಾಸ್ತವಗಳನ್ನು ಗಾದೆಗಳ ಮೂಲಕ ಕಟ್ಟಿಕೊಡುವ ಕುಶಲತನವು ಬೆರಗನ್ನು ಹುಟ್ಟಿಸುವಂತದ್ದು. ಕೌಶಲ್ಯ ಮೆರೆದ ಜನಪದರ ಬುದ್ಧಿಮತ್ತೆಗೆ ಏನನ್ನಬೇಕು..? ಶರಣೆನ್ನಲೇ..? ತಿಳಿಯದು ನನಗೆ.
ಚಿಂತೆಯೆಂಬ ಸಂತೆಯಲ್ಲಿ ಅಲೆದಾಡಿದ ಮನಕ್ಕೀಗಾದರೂ ಸ್ವಲ್ಪ ಚಿಂತೆ ಕಡಿಮೆಯ್ತಾ..? ಅಂದರೆ ಅದೇನೋ ಹೆಳ್ತಾರಲ್ಲ ‘ಬಾವಿ ಅಗಿಯಲು ಹೋಗಿ ಭೂತವನ್ನೆಬ್ಬಿಸಿದಂತಾಯ್ತು’ ನನ್ನ ಕಥೆ. ೨೦೧೯ ನೆಯ ವರ್ಷವನ್ನು ಆಡಾಡ್ತಾ ಹೇಗೇಗೋ ಕಳೆದುಬಿಟ್ಟಿವಿ, ನನ್ನ ವಾರಿಗಿ ಗೆಳತಿಯರೂ, ಸಹದ್ಯೋಗಿಗಳೂ ಆದ ಹಲವರು ಈ ಮೊದಲೂ ನಿನ್ನ ಬರೆವಣಿಗೆಯಲ್ಲಿ ತೊಡಗಿಸಿಕೊಂಡಿದಿಲ್ಲ, ಈಗೀಗ ನಿನ್ನ ಬರಹಗಳು ನಮಗೆ ಅಚ್ಚರಿಯನ್ನುಂಟುಮಾಡಿವೆ, ನೀನೇ ಬರೆದಿದ್ದಾ..? ಎಂದು ಅನುಮಾನ ಹುಟ್ಟಿಸುವಷ್ಟು. ಒಂದು ವಿಶೇಷ ಲಯದೊಂದಿಗೆ ಬರೆವಣಿಗೆಯ ಕಲೆ ನಿನಗೆ ಸಿದ್ದಿಸಿದೆ, ಹೀಗೆ ಬರೆಯುತ್ತಾ ಮುಂದೆ ಮುಂದೆ ಸಾಗೂ ಒಳ್ಳೆಯ ಭವಿಷ್ಯವಿದೆಯೆಂದು ಸಲಹೆ-ಸೂಚನೆಯನ್ನು ಕೊಟ್ಟು ನನ್ನನ್ನವರು ‘ದೊಡ್ಡ ಮೂರುತಿಯನ್ನು ಮಾಡಿಬಿಟ್ಟಿದ್ದರು’ ತತ್ಫಲವಾಗಿ ಅದೇನೋ-ಅಂಥಾರಲ್ಲ ‘ಸೈಯಲೇ ಭಂಟ ಅಂದ್ರೆ.., .., .., .., ನಂತೆ..!’ ಹಾಗೇ ನಾನೂ ೨೦೨೦ ರಲ್ಲಿ ಏನಾದರೂ ಬರೆದು ಗುಡ್ಡೆ ಹಾಕಿ ವರ್ಷದ ಕೊನೆಯಲ್ಲಿ ಒಂದು ಪುಸ್ತಕ ಹೊರತಂದ್ರಾಯ್ತ ಅನ್ಕೊಂಡಿದ್ದೆ, ಅದ್ಸರಿ ಏನ್ ಬರೆಯುವುದು..? ಎಂಬುದೇ ನನಗೆ ಬಹುದೊಡ್ಡ ಚಿಂತೆಯಾಗಿ ಕಾಡಲಿಕ್ಕೆ ಶರುವಿಟ್ಟುಕೊಂಡಿತ್ತು. ಕಥೆ-ಕವನ-ಕಾದಂಬರಿ, ಬಿಡಿ ಲೇಖನ, ಲಲಿತ ಪ್ರಬಂಧ.., ಎಲ್ಲರೂ ಏನೆಲ್ಲ ಬರೆದು, ಕಡೆದು ಕಟ್ಟಿಯಾಕಿದಮೇಲೆ ನಾನೇನು ಬರೆಯಲಿ..? ಎಂಬ ಚಿಂತೆಯೇ ಈ ನನ್ನ ಲೇಖನಕ್ಕೆ ಸ್ಫೂರ್ತಿಯಾಯಿತು.
ಕೊನೆಯಲ್ಲಿ : ‘ಚಿಂತೆಗೆ ಕೊನೆಯಿಲ್ಲ’ ಆ ಮಾತು ಬೇರೆ. ‘ಚಿತೆ ಎಂಬುದು ನಾವು ಸತ್ತಮೇಲೆ ನಮ್ಮನ್ನು ಸುಟ್ಟರೆ ; ಚಿಂತೆ ಎಂಬುದು ನಮ್ಮನ್ನು ಜೀವಂತ ಸುಡುತ್ತದೆಂಬ ಬಲ್ಲವರ ಮಾತನ್ನೇ ಒಂದಿಷ್ಟು ಮುಂದುವರೆಸಿ ವಿಭಿನ್ನಮುಖ ಚಿಂತನೆಗಳು ಕೂಡ ಒಮೊಮ್ಮೆ ಗುಂಡಿಟ್ಟು ಸುಡುವಂತೆ ಮಾಡುತ್ತವೆ, ಇಂಥಹ ಸಾಕಷ್ಟು ನಿದರ್ಶನಗಳು ನಮ್ಮ ಕಣ್ಣ ಮುಂದಿವೆ. ಚಿಂತನೆಯು ಅಪಾಯವನ್ನು ತಂದ್ದೊಡ್ಡುವ ಸಾಧ್ಯಾಸಾಧ್ಯತೆಗಳ ಕುರಿತು ನಾವೊಂದಿಷ್ಟು ಚಿಂತೆ-ಚಿಂತನಾ ಮಾಡಬೇಕಾಗುತ್ತದೆ.
-ಡಾ.ಯಲ್ಲಮ್ಮ.ಕೆ