ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್

ಪ್ರೀತಿಯನರಸಿ ಅಲೆದ ದಿನಗಳನೆಂತು ಲೆಕ್ಕ ಹಾಕಲಿ
ಒಲವನರಸಿ ಸುತ್ತಿದ ಕ್ಷಣಗಳನೆಂತು ಲೆಕ್ಕ ಹಾಕಲಿ

ಹೃದಯ ಹಿಂಡೊ ಅನುಭವ ತಪ್ತತೆಯಲೇ ಈ ಜೀವ
ಸಲುಗೆಯನರಸಿ ಕಳೆದ ಗಳಿಗೆಗಳನೆಂತು ಲೆಕ್ಕ ಹಾಕಲಿ

ಸದಾ ನನ್ನೆದೆಯಲಿ ತೋಮ್ ತನನ ನಾದ ಮೃದಂಗ
ಸವಿಮಾತನರಸಿ ಸಾಗಿದ ನಿಮಿಷಗಳನೆಂತು ಲೆಕ್ಕ ಹಾಕಲಿ

ತಲ್ಲಣ ತವಕಗಳೇ ಮೇಳೈಸಿ ಮಾರ್ಧನಿಸಿ ನಡುಗಿಸಿದವು
ಸಲ್ಲಾಪವನರಸಿ, ತುಳಿದ ಹೆಜ್ಜೆಗಳನೆಂತು ಲೆಕ್ಕ ಹಾಕಲಿ

ಮಿಡಿತ ತುಡಿತದ ಭಯದಲಿ ಎದೆ ಝಲ್ಲೆಂದು ಜರ್ಜರಿತ
ಸ್ಪರ್ಶಸುಖವನರಸಿ ಬಾಳಿದ ಭರವಸೆಯನೆಂತು ಲೆಕ್ಕ ಹಾಕಲಿ

ನೆನೆದಾಗಲೆಲ್ಲ ಏರುವ ಚಳಿಜ್ವರಕೆ ಔಷಧಿ ಸಿಗಲಿಲ್ಲ ಎಂದೂ
ಆಪ್ತತೆಯನರಸಿ ಸುಳಿದ ಅಹವಾಲನೆಂತು ಲೆಕ್ಕ ಹಾಕಲಿ

ಕಣ್ಣ ಕಂಬನಿ ಹೆಪ್ಪುಗಟ್ಟಿ ಹನಿಯೊಡೆಯದೆ ಮೂಕಮೌನ
ಸರಸ ಸಲುಗೆಯನರಸಿ ಸವೆದ ಕಾಲವನೆಂತು ಲೆಕ್ಕ ಹಾಕಲಿ

ಬಿಗಿದ ಕಂಠದಲಿ ಹೂತಿಟ್ಟ ಮಾತುಗಳ ನಿಲ್ಲದ ಮೊರೆತ
ಪ್ರೇಮವನರಸಿ ತಾಳಿದ ವೇದನೆಯನೆಂತು ಲೆಕ್ಕ ಹಾಕಲಿ

ತೆರೆದ ತೋಳುಗಳು ಒಂದಾಲಿಂಗನಕೆ ಗೋಗರೆದವೆಷ್ಟೋ
ಬಿಸಿಯುಸಿರನರಸಿ ತೆರೆದ ಆತುರವನೆಂತು ಲೆಕ್ಕ ಹಾಕಲಿ

ಹಾತೊರೆವ ಅನುಳ ತುಟಿಗಳಲಿ ಹೆಪ್ಪುಗಟ್ಟಿದ ಅಮೃತಧಾರೆ
ತುಸು ತೃಪ್ತಿಯನರಸಿ ಬಡಿದ ಬಡಿತವನೆಂತು ಲೆಕ್ಕ ಹಾಕಲಿ


Leave a Reply

Back To Top