ಒಂದು ದೇಶದ ಆಡಳಿತವು ಆ ದೇಶದ ಎಲ್ಲಾ ನಾಗರಿಕರ ಸಮಾನ ಸಹಭಾಗಿತ್ವದೊಂದಿಗೆ ಸಾಗುವುದನ್ನು ನಾವು ‘ಪ್ರಜಾಪ್ರಭುತ್ವ’ ಎಂದು ಕರೆಯಬಹುದು. ಅಮೆರಿಕಾದ ಹಿಂದಿನ ಅಧ್ಯಕ್ಷರಾಗಿದ್ದ ಅಬ್ರಹಾಂ ಲಿಂಕನ್ ಅವರು ಹೇಳಿದಂತೆ ‘ಜನರಿಂದ ಜನರಿಗಾಗಿ ಜನರಿಗೋಸ್ಕರ ಇರುವ ಸರ್ಕಾರವೇ ಪ್ರಜಾಪ್ರಭುತ್ವ’.

‘ ಲೋಕವಾಣಿಯೇ ದೇವವಾಣಿ’ ಎಂಬಂತಹ ಪರಿಕಲ್ಪನೆಯನ್ನು ಹೊಂದಿರುವ ಪ್ರಜಾಪ್ರಭುತ್ವದಲ್ಲಿ ಆಳುವವರು ಮತ್ತು ಆಳಲ್ಪಡುವವರು ಪ್ರಜೆಗಳೇ. ಯಾವುದೇ ಜಾತಿ, ಮತ, ಪಂಥ, ಬಡವ, ಶ್ರೀಮಂತ ಎಂಬ ಭೇದವಿಲ್ಲದೆ ಸರ್ವರಿಗೂ ಸಮಾನವಾದ ಹಕ್ಕುಗಳು ಮತ್ತು ಕರ್ತವ್ಯಗಳನ್ನು ಕೊಡ ಮಾಡುವ ವ್ಯವಸ್ಥೆಯನ್ನು ಪ್ರಜಾಪ್ರಭುತ್ವ ಎಂದು ಕರೆಯುತ್ತೇವೆ.

ಈ ಮೊದಲು ರಾಜನ ಆಳ್ವಿಕೆಯನ್ನು, ಏಕ ಚಕ್ರಾಧಿಪತ್ಯವನ್ನು ಒಳಗೊಂಡಿದ್ದ ವಿಶ್ವದ ಬಹುತೇಕ ದೇಶಗಳಲ್ಲಿ ಪ್ರಜಾಪ್ರಭುತ್ವದ ಪರಿಕಲ್ಪನೆಯೇ ಇರಲಿಲ್ಲ. 16ನೇ ಶತಮಾನದ ಅಂತ್ಯದ ಸುಮಾರಿಗೆ ಅರಸೊತ್ತಿಗೆಗಳು ತಮ್ಮ ಬಲವನ್ನು ಕಳೆದುಕೊಳ್ಳುತ್ತಾ ಬಂದಂತೆ ಪ್ರಜಾಪ್ರಭುತ್ವದ ಕುರಿತಾದ ಯೋಜನೆಗಳು ರಾಜಕೀಯ ತಂತ್ರಜ್ಞರ, ಜ್ಞಾನಿಗಳ ಮನದಲ್ಲಿ ರೂಪುಗೊಳ್ಳಲಾರಂಭಿಸಿದವು.

ಪ್ರಜಾಪ್ರಭುತ್ವದಲ್ಲಿ ಎರಡು ವಿಧಗಳಿದ್ದು ಒಂದು ನೇರ ಪ್ರಜಾಪ್ರಭುತ್ವವಾದರೆ ಮತ್ತೊಂದು ಪರೋಕ್ಷ ಪ್ರಜಾಪ್ರಭುತ್ವ.
ನೇರ ಪ್ರಜಾಪ್ರಭುತ್ವದಲ್ಲಿ ಏಕಕಾಲದಲ್ಲಿ ಎಲ್ಲರನ್ನೂ ಒಂದೆಡೆ ಸೇರಿಸುವುದು, ಅಭಿಪ್ರಾಯ ಸಂಗ್ರಹಿಸುವುದು, ನಿರ್ವಹಿಸುವುದು ಕಷ್ಟಕರವಾದ್ದರಿಂದ, ಪರೋಕ್ಷ ಪ್ರಜಾಪ್ರಭುತ್ವಕ್ಕೆ ಹೆಚ್ಚಿನ ಮನ್ನಣೆ ದೊರೆತು ಜಗತ್ತಿನಾದ್ಯಂತ ಪರೋಕ್ಷ ಪ್ರಜಾಪ್ರಭುತ್ವವೇ ಜಾರಿಯಲ್ಲಿದೆ.

ಆಡಳಿತವು ಸುಗಮವಾಗಿ ಸಾಗಲು ಕುಗ್ರಾಮಗಳಿಂದ ಹಿಡಿದು ರಾಜ್ಯ ಮತ್ತು ರಾಷ್ಟ್ರಮಟ್ಟಗಳಲ್ಲಿ ಪ್ರಜೆಗಳಿಂದಲೇ ಆಯ್ಕೆಯಾದ ಪ್ರಜಾಪ್ರತಿನಿಧಿಗಳು ಪ್ರಜೆಗಳ ಪರವಾದ, ಅನುಕೂಲಕರವಾದ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಔದ್ಯೋಗಿಕ ಪ್ರಗತಿಗಾಗಿ ಕಾರ್ಯನಿರ್ವಹಿಸುವುದು ಪ್ರಜಾಪ್ರಭುತ್ವದ ಆಡಳಿತದ ವೈಖರಿ. ಇದಕ್ಕೆ ಸರಿಸಮನಾಗಿ ಸರ್ಕಾರದಿಂದ ನಿಯೋಜಿತಗೊಂಡ ನೌಕರರು, ವಿವಿಧ ಉದ್ದೇಶಗಳ ಕಚೇರಿಗಳು ಕೂಡ ಕಾರ್ಯನಿರ್ವಹಿಸುತ್ತದೆ.

ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳು ಪ್ರಜಾಪ್ರಭುತ್ವವನ್ನು ಹೊಂದಿರುವ ದೇಶದ ಮೂರು ಮುಖ್ಯ ಅಂಗಗಳಾಗಿವೆ.

ಪರೋಕ್ಷ ಪ್ರಜಾಪ್ರಭುತ್ವದಲ್ಲಿ ಒಬ್ಬ ವ್ಯಕ್ತಿಯೇ ಆಗಲಿ ಕೆಲವು ವ್ಯಕ್ತಿಗಳೇ ಆಗಲಿ ಸ್ವೇಚ್ಛೆಯಾಗಿ ಆಳಲು ಎಡೆಯಿಲ್ಲ. ಪ್ರಜೆಗಳ ಪ್ರತಿನಿಧಿಗಳು ಪ್ರಜೆಗಳ ಹತೋಟಿಯೊಳಗೆ ಇರಬೇಕಾಗುತ್ತದೆ. ಇಂಥ ಹತೋಟಿಗಳನ್ನು ಪರಿಣಾಮಕಾರಕವಾಗಿಸಲು ಸಂವಿಧಾನದಲ್ಲಿ ಮತ್ತು ಶಾಸನಗಳಲ್ಲಿ ಸೂಕ್ತ ನಿರ್ದೇಶನಗಳಿರುತ್ತವೆ. ಸಂವಿಧಾನ ಹಾಗೂ ಕಾನೂನುಗಳ ಆಚೆಗೂ ಹಲವಾರು ಹತೋಟಿಗಳಿವೆ.

ಶಾಸಕಾಂಗದಲ್ಲಿ ನಾಡಿನ ಅಭಿವೃದ್ಧಿಗೆ ಬೇಕಾದ ಮತ್ತು ಪ್ರಜೆಗಳ ಉತ್ತಮ ಜೀವನ ನಿರ್ವಹಣೆಗೆ ಬೇಕಾಗುವ ಎಲ್ಲ ಒಳ್ಳೆಯ ಅಂಶಗಳನ್ನು ಅಳವಡಿಸಿಕೊಳ್ಳುವ ಕುರಿತು ಚರ್ಚೆ, ಮಸೂದೆಗಳ ಮಂಡನೆ ಮತ್ತು ಅವುಗಳನ್ನು ಕಾನೂನು ಬದ್ಧ ಅನುಷ್ಠಾನಗೊಳಿಸುವ ವ್ಯವಸ್ಥೆ ಇದ್ದು ಕಾರ್ಯಾಂಗದ ವ್ಯಾಪ್ತಿಯಲ್ಲಿ ನಿರ್ವಹಿಸಲ್ಪಡುತ್ತದೆ.

ನ್ಯಾಯಾಂಗವು ಜನರನ್ನು ಶಿಸ್ತು ಬದ್ಧ ನಿಯಮಾವಳಿಗೆ ಒಳಪಡಿಸಿದ್ದು, ಎಲ್ಲರಿಗೂ ಸಮಾನ ಸಾಮಾಜಿಕ ನ್ಯಾಯದ ಅವಕಾಶವನ್ನು ನೀಡುತ್ತದೆ.

ಪ್ರಜಾಪ್ರಭುತ್ವದ ಮೂಲ ಸೂತ್ರಗಳು
ಸಮಾನತೆ, ಸ್ವಾತಂತ್ರ್ಯ, ಸಹೋದರತ್ವ, ರಾಜಕೀಯ ಮುಖಂಡತ್ವ ಮತ್ತು ಸಂಘ ಸಂಸ್ಥೆಗಳು, ಸಮರ್ಥ ಮುಖಂಡತ್ವ, ವ್ಯಕ್ತಿಗೌರವ ಮತ್ತು ಶಿಕ್ಷಣ, ತಾಳ್ಮೆ ಸಹಾನುಭೂತಿ ಮತ್ತು ಸಹಕಾರ,

ಸಮಾನತೆ…ಒಂದು ರಾಷ್ಟ್ರವು ಪರಿಪೂರ್ಣವಾಗಿ ತನ್ನೆಲ್ಲ ಪ್ರಜೆಗಳಿಗೆ ಎಲ್ಲ ರಂಗಗಳಲ್ಲಿಯೂ ಅವಕಾಶಗಳನ್ನು ನೀಡಲೇಬೇಕು,ಸಮಾನತೆಯ ಹಕ್ಕುಗಳಿಗಾಗಿ ನಡೆದಿರುವ ಹೋರಾಟಗಳನ್ನು ಗಮನಿಸಿ ನೋಡಿದಾಗ ಒಂದು ರಾಷ್ಟ್ರದ ಶಕ್ತಿ ಮತ್ತು ಪರಮಾಧಿಕಾರವು ಸಮಾನತೆಯ ತಳಹದಿಯ ಮೇಲೆ ನಿಲ್ಲುತ್ತದೆ ಎಂಬುದು ನಿರೂಪಿತಗೊಂಡಿದ್ದು ಪ್ರಜಾಪ್ರಭುತ್ವದ ಮೂಲ ಸೂತ್ರ ಸಮಾನತೆಯಾಗಿದೆ.

ಸ್ವಾತಂತ್ರ್ಯ…ಪ್ರಜಾಪ್ರಭುತ್ವದಲ್ಲಿ ಪ್ರಜೆಗಳ ಪರಮಾಧಿಕಾರದಲ್ಲಿ ಪ್ರಜಾ ಸರ್ಕಾರದ ಅಂಗೀಕಾರದಲ್ಲಿ ಸ್ವಾತಂತ್ರ್ಯ ಗೋಚರವಾಗುತ್ತದೆ. ಸ್ವತ್ತಿನ ರಕ್ಷಣೆ, ವಾಕ್ ಮತ್ತು ಮುದ್ರಣ ಸ್ವಾತಂತ್ರ್ಯ ಇವು ಪೌರ ಸ್ವಾತಂತ್ರ್ಯದ ಅಂಶಗಳು. ಪಂಚಾಯಿತಿ ಸಭೆಯ ಸದಸ್ಯತ್ವದಿಂದ ಹಿಡಿದು ಮೇಲ್ಮಟ್ಟದವರೆಗೆ ಸರ್ಕಾರದೊಡನೆ ಸಹಕರಿಸುತ್ತ ರಾಜಕೀಯ ಸ್ವಾತಂತ್ರ್ಯವನ್ನು ವ್ಯಕ್ತಿ ಅನುಭವಿಸುತ್ತಾನೆ.

ಸಹೋದರತ್ವ… ಪ್ರಜೆಗಳು ಪರಸ್ಪರ ಸಹೋದರ ಭಾವನೆ ಮತ್ತು ಸೌಹಾರ್ದತೆಯಿಂದ ಬದುಕಬೇಕು.

ರಾಜಕೀಯ ಪಕ್ಷ ಮತ್ತು ಸಂಘ ಸಂಸ್ಥೆಗಳು…. ಸಾಮಾಜಿಕವಾಗಿ ಕಾರ್ಯನಿರ್ವಹಿಸಲು ಒಬ್ಬ ವ್ಯಕ್ತಿಯು ಯಾವುದೇ ರಾಜಕೀಯ ಪಕ್ಷವನ್ನಾಗಲಿ ಇಲ್ಲವೇ ಸಂಘ ಸಂಸ್ಥೆಗಳನ್ನಾಗಲಿ ಸೇರುವ ಸ್ವಾತಂತ್ರ್ಯ

ಸಮರ್ಥ ಮುಖಂಡತ್ವ…. ಸಚ್ಚಾರಿತ್ರ್ಯ, ಸಜ್ಜನಿಕೆ ಮತ್ತು ಉತ್ತಮ ವಿಚಾರಧಾರೆಗಳನ್ನು ಹೊಂದಿದ್ದು ಜನರಿಗೆ ಒಳ್ಳೆಯ ನಾಯಕನಾಗುವ ವ್ಯಕ್ತಿತ್ವದವನು ಪ್ರಜೆಗಳ ಮುಖಂಡತ್ವವನ್ನು ವಹಿಸಬೇಕು. ಪ್ರಜಾಪ್ರಭುತ್ವದಲ್ಲಿ ಸ್ವಾರ್ಥ ಸಾಧನೆಗಿಂತ ಜನಸೇವಕನಾಗುವ ವ್ಯಕ್ತಿ ಮೌಲ್ಯಗಳನ್ನು ತನ್ನ ಬದುಕಿನಲ್ಲಿ ಅಳವಡಿಸಿಕೊಂಡಿರಬೇಕು.

ವ್ಯಕ್ತಿಗೌರವ ಹಾಗೂ ಶಿಕ್ಷಣ…. ಪ್ರಜೆಗಳೇ ಪ್ರಜಾಪ್ರಭುತ್ವದ ಶಕ್ತಿ. ಶಿಕ್ಷಣದ ಮೂಲಕ ಜನರನ್ನು ದೇಶದ ಆಗುಹೋಗುಗಳು ಮತ್ತು ಸಾಮಾಜಿಕ ಆರ್ಥಿಕ ರಂಗಗಳಲ್ಲಿ ಒಳ್ಳೆಯ ಬೆಳವಣಿಗೆಗೆ ಮತ್ತು ಸಾಮಾಜಿಕ ಜಾಗೃತಿಯನ್ನು ಮೂಡಿಸುವುದು.

ತಾಳ್ಮೆ ಸಹಾನುಭೂತಿ ಮತ್ತು ಸಹಕಾರ…. ಜಾತಿ ಮತ ಪಂಥ ಬಡವ ಬಲ್ಲಿದ ಎಂಬ ಭೇದಗಳಿಲ್ಲದೆ ಎಲ್ಲರೊಂದಿಗೆ ಸೌಹಾರ್ದ ಮತ್ತು ಸಾಮರಸ್ಯದೊಂದಿಗೆ ಜೀವನ ಸಾಗಿಸುವ ಸಾಮಾಜಿಕ ಪರಿಕಲ್ಪನೆ

ಈ ಮೂಲ ಪರಿಕಲ್ಪನೆಗಳು ಪ್ರಜಾಪ್ರಭುತ್ವವನ್ನು ಬಲಿಷ್ಠಗೊಳಿಸಿವೆ.

ಪ್ರಜಾಪ್ರಭುತ್ವದಲ್ಲಿ ಸರ್ಕಾರ ಜನತೆಗೆ ಹೊಣೆಯಾಗಿರುತ್ತದೆ. ಜನತಾ ಪ್ರತಿನಿಧಿಗಳಿಂದೊಡಗೂಡಿದ ಶಾಸನಾಂಗವನ್ನು ಧಿಕ್ಕರಿಸಿ ನಡೆದರೆ ಅಂಥ ಸರ್ಕಾರವನ್ನು ಅವಿಶ್ವಾಸದ ಗೊತ್ತುವಳಿಯ ಮೂಲಕ ಉರುಳಿಸಬಹುದು. ಮಂತ್ರಿಗಳು, ಅಧಿಕಾರಿಗಳು, ಶಾಸಕರು ಮನಬಂದಂತೆ ವರ್ತಿಸಲು ಅವಕಾಶವಿಲ್ಲ. ಹೊಣೆಗೆಟ್ಟ ಸರ್ಕಾರವನ್ನು ಜಾಗೃತ ಜನತೆಯೇ ದಾರಿಗೆ ತರಬೇಕಾಗುತ್ತದೆ.

ಪ್ರಜಾಪ್ರಭುತ್ವ ಯಾವುದೇ ವಿಶಿಷ್ಟ ವ್ಯಕ್ತಿ ಅಥವಾ ವರ್ಗಗಳ ಹಿತಕ್ಕಾಗಿ ಶ್ರಮಿಸುವುದಿಲ್ಲ. ಸರ್ವರಿಗೂ ಸಾಂವಿಧಾನಿಕ ರಕ್ಷಣೆ ಇದೆ. ಅದರಲ್ಲೂ ಸಾಮಾನ್ಯ ಜನರ ಏಳ್ಗೆಗಾಗಿ ಇದು ವಿಶೇಷವಾಗಿ ಗಮನ ನೀಡುತ್ತದೆ.

ವ್ಯಕ್ತಿತ್ವದ ಬೆಳವಣಿಗೆಗೆ ಇಂದು ಪೌರನಿಗೆ ಅನೇಕ ಬಗೆಯ ಸ್ವಾತಂತ್ರ್ಯಗಳು ಲಭ್ಯವಾಗಿವೆ. ವಾಕ್ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯ, ಸಂಚಾರ ಸ್ವಾತಂತ್ರ್ಯ, ಸಂಘ ಸ್ವಾತಂತ್ರ್ಯ, ಪತ್ರಿಕಾ ಸ್ವಾತಂತ್ರ್ಯ, ರಾಜಕೀಯ ಸ್ವಾತಂತ್ರ್ಯಗಳನ್ನು ಪ್ರಜಾಪ್ರಭುತ್ವದಲ್ಲಿ ನಾಗರಿಕ ಪಡೆಯುತ್ತಾನೆ. ಎಲ್ಲರೂ ಕಾನೂನಿನ ಮುಂದೆ ಸಮಾನರು.ಜಾತಿ, ಧರ್ಮ, ಭಾಷೆ, ಲಿಂಗ ಹಾಗೂ ಪಕ್ಷ ಪಂಗಡಗಳ ಆಧಾರದ ಮೇಲೆ ಯಾವುದೇ ಪಕ್ಷಪಾತಕ್ಕೆ ಇಲ್ಲಿ ಎಡೆಯಿಲ್ಲ.

ಇಲ್ಲಿ ಹಿಂಸಾಚಾರ, ಬಲಪ್ರಯೋಗಗಳಿಗೆ ಸ್ಥಾನವಿಲ್ಲ. ಸರ್ಕಾರ ಜನತೆಯ ಮನವನ್ನು ಒಲಿಸುವುದರ ಮೂಲಕ, ಕಾರ್ಯಕ್ರಮಗಳನ್ನು ವಿವರಿಸಿ ಅವುಗಳನ್ನು ಅನುಷ್ಠಾನದಲ್ಲಿ ತರುವುದರ ಮೂಲಕ ಶಾಂತಿಯುತ ಪ್ರಗತಿಯನ್ನು ಸಾಧಿಸುತ್ತದೆ.

ಒತ್ತಾಯದ ಕೆಲಸ, ಗುಲಾಮಗಿರಿ, ಆರ್ಥಿಕ ಶೋಷಣೆಗಳಿಗೆ ಇಲ್ಲಿ ಆಸ್ಪದವಿಲ್ಲ. ವ್ಯಕ್ತಿಯ ಸ್ವಾತಂತ್ರ್ಯಕ್ಕೆ ಚ್ಯುತಿ ಬರದಂತೆ ಜನ ಕಲ್ಯಾಣವನ್ನು ಪ್ರಜಾಪ್ರಭುತ್ವದಲ್ಲಿ ಸಾಧಿಸಲಾಗುತ್ತದೆ.

ಪ್ರಜಾಪ್ರಭುತ್ವದ ಧ್ಯೇಯ ಮತ್ತು ಆಶಯಗಳನ್ನು ಎತ್ತಿ ಹಿಡಿಯುವ ಮತ್ತು ಅದರ ಮಹತ್ವವನ್ನು ಸಾರುವ ನಿಟ್ಟಿನಲ್ಲಿ, ಜನಜಾಗೃತಿಯನ್ನು ಸೃಷ್ಟಿಸಲು ವಿಶ್ವಸಂಸ್ಥೆಯು 2007ರಲ್ಲಿ ಸಪ್ಟೆಂಬರ್ 15 ನೇ ದಿನವನ್ನು ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿವಸ ಎಂದು ಆಚರಿಸಲು ನಿರ್ಧರಿಸಿತು. ಆದ್ದರಿಂದ ಪ್ರತಿ ವರ್ಷ ಸೆಪ್ಟೆಂಬರ್ 15ನ್ನು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನಾಗಿ ಆಚರಿಸಲಾಗುತ್ತದೆ.

ಪ್ರಸ್ತುತ ವರ್ಷ ನಮ್ಮ ರಾಜ್ಯದಲ್ಲಿ ಮಾನವ ಸರಪಳಿಯನ್ನು ನಿರ್ಮಿಸುವ ಮೂಲಕ ಪ್ರಜಾಪ್ರಭುತ್ವದ ಮುಖ್ಯ ಮೌಲ್ಯಗಳಾದ ಸಮಾನತೆ ಸ್ವಾತಂತ್ರ್ಯ ಮತ್ತು ಭ್ರಾತೃತ್ವಗಳನ್ನು ಸಾರಲು ಎರಡುವರೆ ಸಾವಿರ ಕಿಲೋಮೀಟರ್ ಉದ್ದದ ಮಾನವ ಸರಪಳಿಯನ್ನು ನಿರ್ಮಿಸುವ ಮಹದಾಶಯವನ್ನು ರಾಜ್ಯಸರ್ಕಾರ ಹೊಂದಿದ್ದು, ಸುಮಾರು 25 ಲಕ್ಷ ಜನ ರಾಜ್ಯಾದ್ಯಂತ ಈ ಮಾನವ ಸರಪಳಿಯ ನಿರ್ಮಿಸುವ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ. ಎಲ್ಲ ಜಿಲ್ಲೆಗಳನ್ನು ಮಾನವ ಸರಪಳಿಯ ಮೂಲಕ ಒಂದುಗೂಡಿಸುವ ಈ ಕ್ರಿಯೆಯಲ್ಲಿ ಪ್ರತಿ ಒಂದು ಕಿಲೋಮೀಟರ್ ಗೆ ಸಾವಿರ ಜನರಂತೆ ಮಾನವ ಸರಪಳಿಯ ನಿರ್ಮಾಣ ಮಾಡುವ ಮೂಲಕ ಪ್ರಜೆಗಳಲ್ಲಿ ಮೂಲಭೂತ ಹಕ್ಕು ಮತ್ತು ಕರ್ತವ್ಯಗಳ ಕುರಿತು ಜಾಗೃತಿಯನ್ನು ಮತ್ತು ಪ್ರಜಾಪ್ರಭುತ್ವದ ಮೂಲ ಆಶಯಗಳು ಮತ್ತು ಧ್ಯೇಯಗಳನ್ನು ಬಿತ್ತರಿಸುವ ಭಿತ್ತಿ ಪತ್ರಗಳನ್ನು ಮತ್ತು ಬ್ಯಾನರ್ ಗಳನ್ನು ಪ್ರದರ್ಶಿಸಲಾಗುತ್ತದೆ. ರಾಜ್ಯದಾದ್ಯಂತ 10 ಲಕ್ಷಕ್ಕೂ ಹೆಚ್ಚು ಸಸಿಗಳನ್ನು ನೆಡಲಾಗುತ್ತದೆ. ಸರಕಾರಿ ಕಚೇರಿಗಳ ನೌಕರರು, ವಿದ್ಯಾರ್ಥಿಗಳು, ಶಿಕ್ಷಕರು, ಸಾರ್ವಜನಿಕರು ಹೀಗೆ ಸಮಾಜದ ಎಲ್ಲ ವರ್ಗದ ಜನರು ಈ ಮಾನವ ಸರಪಳಿಯಲ್ಲಿ ಭಾಗವಹಿಸುವ ಮೂಲಕ ಅಂತರಾಷ್ಟ್ರೀಯ ಪ್ರಜಾಪ್ರಭುತ್ವದ ಆಶಯಗಳನ್ನು ಇಡೀ ಜಗತ್ತಿನಲ್ಲಿ ಮೊಳಗಿಸೋಣ ಎಂಬ ಆಶಯದೊಂದಿಗೆ


Leave a Reply

Back To Top