ಪುಸ್ತಕ ಸಂಗಾತಿ

ಲೋಕಪ್ರಸಿದ್ದ ಸಚಿತ್ರ ಮಕ್ಕಳ ಕತೆಗಳು

ಮಕ್ಕಳ ಸಾಹಿತ್ಯ ಕೃತಿ ಪರಿಚಯ

ಪುಸ್ತಕದ ಹೆಸರು- ಲೋಕಪ್ರಸಿದ್ದ ಸಚಿತ್ರ ಮಕ್ಕಳ ಕತೆಗಳು

ಲೇಖಕರು – ಪ್ರೊ. ಎಚ್. ಜಿ. ಸಣ್ಣಗುಡ್ಡಯ್ಯ

ಪ್ರಕಾಶಕರು – ಅಕ್ಷಯ ಪ್ರಕಾಶನ – ತುಮಕೂರು

ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಮಕ್ಕಳಿಗೆ ಹೆಚ್ಚು ಕುತೂಹಲ ಕೆರಳಿಸಿ ಅವರಿಗೆ ನೀತಿಯನ್ನು ತಿಳಿಸುವ ಬಹುಮುಖ್ಯ ಪ್ರಕಾರವೆಂದರೆ ಈ ಕಥಾಪ್ರಕಾರ. ಇದು ಮಕ್ಕಳಲ್ಲಿ ಕಲ್ಪನಾ ಕೌಶಲ್ಯವನ್ನು ಬೆಳೆಸುವುದಲ್ಲದೆ ಆಲಿಸುವ ಸಾಮರ್ಥ್ಯವನ್ನು ಕೂಡ ಹೆಚ್ಚಿಸುತ್ತದೆ. ಮಕ್ಕಳ ಅಚ್ಚುಮೆಚ್ಚಿನ ಪ್ರಕಾರವಾದ ಕತೆಗಳು ಮಕ್ಕಳಲ್ಲಿ ಮೌಲ್ಯಗಳನ್ನು ಬೆಳೆಸಿ ಆದರ್ಶ ವ್ಯಕ್ತಿಗಳನ್ನಾಗಿ ಮಾಡುವಲ್ಲಿಯೂ ಬಹುಮುಖ್ಯ ಪಾತ್ರ ವಹಿಸುತ್ತಿದೆ. ಇದಕ್ಕೊಂದು ಉತ್ತಮ ನಿದರ್ಶನವಾಗಿ ವೀರಮಾತೆ ಜೀಜಾಬಾಯಿಯವರು ಚಿಕ್ಕಂದಿನಲ್ಲೇ ಶಿವಾಜಿಯಲ್ಲಿ ಉದಾತ್ತ ಗುಣಗಳನ್ನು ಬೆಳೆಸಿದ ಪರಿಯನ್ನು ನಾವಿಲ್ಲಿ ಸ್ಮರಿಸಬಹುದು. ಇಂತಹ ಈಗಾಗಲೇ ಲೋಕದಲ್ಲಿ ಪ್ರಚಲಿತದಲ್ಲಿದ್ದು ಮೆಚ್ಚುಗೆಯ ಮೂಲಕ ಹೃದಯವಾಸಿಯಾಗಿರುವ ಒಟ್ಟು ಮೂವತ್ತ ನಾಲ್ಕು ಲೋಕಪ್ರಸಿದ್ದ ಸಚಿತ್ರ ಮಕ್ಕಳ ಕಥಾಗುಚ್ಛವೇ ಈ ಹೊತ್ತಗೆಯಾಗಿದೆ. ಇದರ ಲೇಖಕರು ಪ್ರೊ. ಎಚ್. ಜಿ. ಸಣ್ಣಗುಡ್ಡಯ್ಯನವರು ಹಾಗೂ ಪ್ರಕಾಶಕರು ಅಕ್ಷಯ ಪ್ರಕಾಶನ, ತುಮಕೂರು. ಇದರಲ್ಲಿನ ಕಥೆಗಳಿಗೆ ಸೂಕ್ತವಾದ ಚಿತ್ರಗಳನ್ನು ರಚಿಸಿ ಪುಸ್ತಕದ ಸೊಗಸನ್ನು ಕಲಾವಿದೆಯಾದ ಶ್ರೀಮತಿ ಸಿ. ಎಸ್ ನಿರ್ಮಲ ಕುಮಾರಿಯವರು ಹೆಚ್ಚಿಸಿದ್ದಾರೆ.

ಶೀರ್ಷಿಕೆಯೇ ಹೇಳುವಂತೆ ಲೋಕದಲ್ಲಿ ಪ್ರಸಿದ್ದವಾಗಿರುವಂತಹ ನಾವು ನೀವೆಲ್ಲರೂ ನಮ್ಮ ಬಾಲ್ಯವನ್ನು ಸವಿದು ಬೆಳೆದು ಇಂದು ಕಣ್ಮರೆಯಾಗಿರುವ ಅತ್ಯಮೂಲ್ಯ ಮೌಲ್ಯಗಳುಳ್ಳ ಈ ಕತೆಗಳನ್ನು ಮಕ್ಕಳಮಟ್ಟಕ್ಕೆ ಅರ್ಥವಾಗುವಂತೆ ಲೇಖಕರು ಬಹಳ ಸರಳ ಭಾಷೆಯಲ್ಲಿ ಕಟ್ಟಿಕೊಟ್ಟಿದ್ದಾರೆ. ಮುಖಪುಟವು ಗಮನಸೆಳೆಯುವಂತಿದ್ದು ಆಕರ್ಷಕ ಸನ್ನಿವೇಶದ ಚಿತ್ರವನ್ನು ಒಳಗೊಂಡಿದೆ. ಈ ಪುಸ್ತಕಕ್ಕೆ ಬೆನ್ನುಡಿಯನ್ನು ಡಿ. ಸುಮಿತ್ರ ಸಣ್ಣಗುಡ್ಡಯ್ಯನವರು ಬರೆದಿದ್ದಾರೆ. ಒಳಪುಟಗಳಲ್ಲಿರುವ ಪ್ರತಿಯೊಂದು ಕತೆಯೂ ಉನ್ನತ ಮೌಲ್ಯವನ್ನು ಹೊಂದಿದ್ದು ಮಕ್ಕಳ ಮನಸ್ಸಿನಲ್ಲಿ ಅಚ್ಚಳಿಯದೆ ಬೀರುತ್ತವೆ.


ಬೆಕ್ಕು ಕಲಿಸಿದ ಪಾಠ ಕತೆಯು ಅಲ್ಪಜ್ಞಾನಿಯಾದವನು ಎಂದಿಗೂ ಗರ್ವ ಪಡಬಾರದು. ಮರಕ್ಕಿಂತ ಮರ ದೊಡ್ಡದಿರುತ್ತದೆ ಎಂಬ ನೀತಿಯನ್ನು ಸಾರಿದರೆ, ಹುಡುಗಿಯನ್ನು ಬಯಸಿದ ಸಿಂಹ ಕತೆ ವಿವೇಚನೆಯಿಲ್ಲದೆ ಯಾರಿಗೂ ಕೋಪದಲ್ಲಿ ಮತ್ತು ಖುಷಿಯಲ್ಲಿ ಮಾತು ಕೊಡಬಾರದು ಎಂಬುದನ್ನು ತಿಳಿಸುತ್ತದೆ. ಕೋತಿ ಚೇಷ್ಟೆ ಕತೆಯು ಆತುರದ ಬುದ್ದಿಯಿಂದ ಪೇಚಾಟಕ್ಕೆ ಸಿಲುಕಿಕೊಳ್ಳುವ ಪ್ರಸಂಗವನ್ನು ತಿಳಿಸಿದರೆ ಠಕ್ಕ ನರಿ ಕತೆಯು ಅಸೆ, ಆಮಿಷ, ಅನಿವಾರ್ಯತೆಗೆ ಒಳಗಾಗಿ ವಂಚನೆಯ ಬಲೆಯಲ್ಲಿ ಸಿಲುಕಿಕೊಳ್ಳುವ ಪರಿಯನ್ನು ತೋರಿಸಿಕೊಡುತ್ತದೆ. ಚೇಷ್ಟೆಯ ಫಲ ಕತೆಯು ಚೇಷ್ಟೆ ಅತಿಯಾದರೆ ಆಪತ್ತಿನ ಸಂದರ್ಭದಲ್ಲೂ ಸಹಾಯ ಸಿಗದೇ ಹೋಗುವ ನೀತಿಯನ್ನು ತಿಳಿಸುತ್ತದೆ. ಪರಸ್ಪರ ಸಹಾಯ ಕತೆಯಲ್ಲಿ ಒಬ್ಬರಿಗೊಬ್ಬರು ಸಹಕಾರ ಇಲ್ಲದಿದ್ದರೆ ಒಬ್ಬಂಟಿಯಾಗಿ ಹೆಚ್ಚಿನ ಹೊರೆಯನ್ನು ಹೊರಬೇಕಾದ ಪರಿಸ್ಥಿತಿಯನ್ನು ತಿಳಿದರೆ ಕೋಟಿಯ ನ್ಯಾಯ ಕತೆಯಲ್ಲಿ ಬೆಕ್ಕುಗಳ ಪರಸ್ಪರ ಜಗಳದಿಂದ ಇಬ್ಬರ ಜಗಳ, ಮೂರನೆಯವರಿಗೆ ಲಾಭ ಎಂಬುದನ್ನು ತಿಳಿಯಬಹುದು. ಮೇಕೆಗಳ ಮೇಲಾಟವು ಗರ್ವದಿಂದ ಹಳ್ಳಕ್ಕೆ ಬೀಳುವುದನ್ನು ತೋರಿಸಿದರೆ ಚಿನ್ನದ ಮೊಟ್ಟೆಯ ಕೋಳಿ ಕತೆಯು ಅತಿ ಆಸೆ ಗತಿಗೇಡು ಎಂಬುದನ್ನು ಅರಿವು ಮಾಡಿಕೊಡುತ್ತದೆ. ಮುದುಕಿಯ ಹುಂಜ ಕತೆಯು ಕೇವಲ ತನ್ನಿಂದಲೇ ಬೆಳಗಾಗುವುದಿಲ್ಲ ಎಂಬ ನೀತಿ ಹೇಳಿದರೆ ಮಗು ಯಾರದು? ಕತೆಯು ಸತ್ಯಕ್ಕೆ ಜಯವಿದೆ ಎಂಬುದನ್ನು ನಿರೂಪಿಸುತ್ತದೆ. ಬುದ್ದಿವಂತ ದೊರೆ ಕತೆಯಲ್ಲಿ ಸತ್ಯವು ಯಾವುದಾದರೊಂದು ರೀತಿಯಲ್ಲಿ ಅರಿವಾಗುತ್ತದೆ ಎಂಬುದನ್ನು ತಿಳಿಸಿದರೆ ಯಾರ ಶಕ್ತಿ ಹೆಚ್ಚು? ಕತೆಯು ಗಾಳಿಗಿಂತಲೂ ಸೂರ್ಯನೇ ಶಕ್ತಿಶಾಲಿ ಎಂಬ ತೀರ್ಮಾನವನ್ನು ಕೊಡುತ್ತದೆ. ದುಂದುಗಾರ್ತಿ ಕತೆಯು ಮಾತಿಗೂ ವರ್ತನೆಗೂ ಇರುವ ಸತ್ಯವನ್ನು ಅರಿಯುವ ನೀತಿಯನ್ನು ತಿಳಿಸಿದರೆ ಬೆಕ್ಕಿನ ಕೊರಳಿಗೆ ಘಂಟೆ ಕತೆಯು ಕಲ್ಪನೆಯ ಕನಸುಗಳೆಲ್ಲವೂ ನನಸಾಗುವುದಿಲ್ಲ ಎಂಬುದನ್ನು ತಿಳಿಸುತ್ತವೆ. ಓಟದ ಸ್ಪರ್ಧೆಯಲ್ಲಿ ಅತಿಯಾದ ಆತ್ಮವಿಶ್ವಾಸದಿಂದ ಸೋಲುಂಟಾಗುತ್ತದೆ ಮತ್ತು ತಾಳ್ಮೆಯಿಂದ ಕಠಿಣವಾದದ್ದನ್ನು ಸಾಧಿಸಬಹುದು ಎಂಬುದನ್ನು ತಿಳಿಸುತ್ತದೆ. ವೇಷ ಕತೆಯು ಸತ್ಯವನ್ನು ಹೆಚ್ಚುಕಾಲ ಬಚ್ಚಿಡುವುದಕ್ಕೆ ಸಾಧ್ಯವಿಲ್ಲ ಎಂಬ ನೀತಿಯನ್ನು ಸಾರಿದೆ. ಹೀಗೆ ದೊರೆ ಮತ್ತು ಆಮೆ, ನರಿ ಮತ್ತು ಕೊಕ್ಕರೆ, ಸಿಂಡರೆಲ್ಲ, ಸೊಹ್ರಬ್ ಮತ್ತು ರುಸ್ತುಮ್, ಬ್ಲೆನ್ಹೀಮ್ ಯುದ್ಧ, ಡೊಂಬರ ಚೆನ್ನೆ, ಕುರೂಪಿ ಬಾತುಕೋಳಿ ಮರಿ, ತೊಟಕಪ್ಪ, ಸಿರಾಕ್ಯೂಸಿನ ಇಬ್ಬರು ಅಪೂರ್ವ ಸ್ನೇಹಿತರು, ಜಾರ್ ಚಕ್ರವರ್ತಿ ಮತ್ತು ರೈತ, ಪ್ರೀತಿಯ ಮೂಲಕ ನೀತಿ, ಬೊ ಬೊನ ತುಂಟಾಟ, ನಾವಾಬಾಯಣ, ಮದುವಣಿಗನ ಪ್ರೇತ, ಪಾಪದ ಹುಡುಗ ಪೀಟರ್, ಸಾಂಕೊ ಪಾಂಜಾನ ತೀರ್ಪುಗಳು ಮತ್ತು ವ್ಯರ್ಥವಾದ ವರಗಳು.. ಹೀಗೆ ಒಂದೊಂದು ಕತೆಯೂ ವಿಭಿನ್ನವಾಗಿದ್ದು ಓದಿದಾಗ ಒಂದು ರಸಮಯ ಅನುಭವವನ್ನು ನೀಡುತ್ತವೆ.

ಒಟ್ಟಾರೆಯಾಗಿ ಈಗಾಗಲೇ ಲೋಕಪ್ರಸಿದ್ಧವಾಗಿ ಜನರ ಮನದಲ್ಲಿ ಅಚ್ಚೂತ್ತಿದ್ದ ಕತೆಗಳನ್ನು ಮಕ್ಕಳಿಗೆಂದು ತಮ್ಮದೇ ಆದ ಸರಳ ಭಾಷೆಯಲ್ಲಿ ಪ್ರೊ. ಜಿ ಎಸ್ ರವರು ಬರೆದಿದ್ದಾರೆ. ಇಲ್ಲಿಯ ಪಾತ್ರಗಳ ಜಾಣ್ಮೆ, ಸಾಹಸ, ಛಲ, ಸಹನೆ ಮುಂತಾದ ಸದ್ಗುಣಗಳು ಮಕ್ಕಳನ್ನು ಪ್ರೇರೇಪಿಸಲಿ, ಅವರನ್ನು ಸನ್ಮಾರ್ಗದಲ್ಲಿ ಕೊಂಡೊಯ್ಯಲಿ ಎಂಬುದು ಇಲ್ಲಿಯ ಕತೆಗಳ ಹೂರಣ. ಇಂಥದ್ದೊಂದು ಕೃತಿ ಮಕ್ಕಳ ಸಾಹಿತ್ಯ ಪ್ರಕಾರದಲ್ಲಿ ಉತ್ತಮ ಮೌಲ್ಯಗಳನ್ನು ಬೆಳೆಸುವಲ್ಲಿ ಅಮೂಲ್ಯ ಕೊಡುಗೆಯನ್ನು ನೀಡಿದೆ. ಈ ಪುಸ್ತಕವು ಪೋಷಕರಲ್ಲಿ ಹಾಗೂ ಮಕ್ಕಳಲ್ಲಿ ಒಳ್ಳೆಯ ಓದಿನ ಅಭಿರುಚಿಯನ್ನು ಬೆಳೆಸುವಂತ ಕೃತಿಯಾಗಿದೆ..

*********

ತೇಜಾವತಿ ಹೆಚ್. ಡಿ.

Leave a Reply

Back To Top