‘ವ್ಯರ್ಥವಾಗದಿರಲಿ ನಮ್ಮ ಮಾತು ಮತ್ತು ಮತಿ’ಡಾ. ಸುಮಂಗಲಾ ಅತ್ತಿಗೇರಿ.

ನಾಲ್ಕು ಜನ ಸೇರಿದ ಯಾವುದೊ ಸಭೆ ಸಮಾರಂಭ ಸ್ನೇಹಕೂಟಗಳಲ್ಲಿ ಒಳ್ಳೆಯ ನಾಲ್ಕು ಮಾತುಗಳನ್ನು ಆಡುವ, ಒಳ್ಳೆಯದರ ಕುರಿತು ಚಿಂತಿಸುವ, ಒಳ್ಳೆಯದನ್ನು ಹಾರೈಸುವ ಬದಲಾಗಿ ಬರೀ ಅವರ ಹಂಗ, ಇವರ ಹಿಂಗ ಅಂತ ಬಹುತೇಕ ಅವರಿವರ ಬಗ್ಗೆ ಆಡಿಕೊಂಡು ಖುಷಿ ಪಡುವುದನ್ನು ಕಾಣುತ್ತೇವೆ. ಆದರೆ ಇದು ನಿಜವಾದ ಖುಷಿ ಅಲ್ಲವೇ ಅಲ್ಲ. ಮತ್ತೊಬ್ಬರನ್ನು ಕಂಡು ಸಹಿಸದೆ ಆಡಿಕೊಳ್ಳುವವರ ಈ ವರ್ತನೆಯಲ್ಲಿ ಅಸಹನೆ, ಅಸೂಹೆ, ದ್ವೇಷದ ಭಾವವಿರುತ್ತದೆ. ಈ ರೀತಿಯ ಮನಸ್ಥಿತಿ ಆಡಿಕೊಳ್ಳುವವರ ಮನೋ ವಿಕೃತಿಯೇ ಆಗಿರುತ್ತದೆ.


“ಲೋಕದ ಡೊಂಕ ನೀವೇಕೆ ತಿದ್ದುವಿರಿ
  ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ
  ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ
  ನೆರೆ ಮನೆಯ ದುಃಖಕ್ಕೆ ಅಳುವವರ ಮೆಚ್ಚ
  ನಮ್ಮ ಕೂಡಲ ಸಂಗಮದೇವ”

ತನ್ನನ್ನು ತಾನು ತಿದ್ದಿಕೊಳ್ಳದೆ ಸದಾ ಬೇರೆಯವರನ್ನು ತಿದ್ದಲು ಬಯಸುವವರನ್ನು ಮತ್ತು ಅಂತಹ ವರ್ತನೆ ಹೊಂದಿದವರ ಕುರಿತು ೧೨ ನೇ ಶತಮಾನದಲ್ಲಿಯೇ ಬಸವಣ್ಣನವರು ಹೇಳಿದ ವಚನ ಇವತ್ತಿಗೂ ಎಷ್ಟು ಪ್ರಸ್ತುತ ಅನಿಸುತ್ತದೆ ಅಲ್ಲವೆ? ಬಹುಶಃ ಅವತ್ತೂ ಇಂತಹವರಿದ್ದರಬಹುದು. ಆ ಕಾರಣಕ್ಕಾಗಿಯೇ ಅವರನ್ನುದ್ದೇಶಿಸಿ ಹೀಗೆ ಹೇಳಿದ್ದಾರೆ.

ಅದೇ ರೀತಿ ಪರ ನಿಂದೆ ಮಾಡುವವರ ಕುರಿತು ನಮ್ಮ ಜನಪದ ಸಾಹಿತ್ಯದಲ್ಲಿ ಹೀಗೊಂದು ಭಜನಾ ಪದವಿದೆ. “ನಿಂದ ನಿನಗ ತಿಳಿದಿಲ್ಲ ಪರನಿಂದೆ ಮಾತ್ರ ಬಿಡಲಿಲ್ಲ.” ಅಂತ. ಈ ಭಜನೆ ಹಾಡಿನಲ್ಲಿ ಮನುಷ್ಯರ ಇತಿಮಿತಿಗಳನ್ನು ಅವರ ಅವಗುಣಗಳನ್ನು, ಅವರ ತಪ್ಪುಗಳನ್ನು ತುಂಬಾ ಅರ್ಥಪೂರ್ಣವಾಗಿ ಕಟ್ಟಿಕೊಟ್ಟಿದಾರೆ. ಆ ಭಜನಾ ಪದದ ಒಟ್ಟು ಸಾರ ಏನಾಗಿದೆ ಅಂದರೆ; ಗುರು ಸೇವೆಮಾಡುವುದಾಗಲಿ, ಮಮತೆಯಿಂದ ಬಾಳುವುದಾಗಲಿ, ಯಾರ ಅಳಲನ್ನು ಕೇಳುವುದಾಗಲಿ, ಹೆತ್ತವರನ್ನು ನೋಡುವುದಾಗಲಿ, ಉತ್ತಮರ ಜೊತೆ ಕೂಡುವುದಾಗಲಿ, ಹಿತವಾಗಿ ಮಾತನಾಡುವುದಾಗಲಿ ಇಂತಹ ಯಾವುದೇ ಒಳ್ಳೆಯ ಕೆಲಸಾ ಮಾಡದೇ ಗರ್ವದಿಂದ ಬದುಕಿ ಮತಿಗೆಟ್ಟು ಹೊಂಟಿದಿಯಾ. ಇಂತಹ ನಿನ್ನ ತಪ್ಪುಗಳ ಬಗೆಗೆ ನಿನಗ ತಿಳಿದಿಲ್ಲ ಆದರೂ ಪರರ ನಿಂದಿಸುವುದನ್ನು ಮಾತ್ರ ನೀ ಬಿಟ್ಟಲ್ಲ ಎಂದು ಚಾಟಿ ಎಟಿನಂತೆ ಹೇಳಲಾದ ಈ ವಿಚಾರಗಳು ಸುಳ್ಳಲ್ಲ ಅನಿಸುತ್ತದೆ. ಏಕೆಂದರೆ ಈ ಆಧುನಿಕ ಜಗತ್ತಿನಲ್ಲಿ ನಾವು-ನಮ್ಮವರು ಎಂಬುವುದನ್ನು ಮರೆತು, ಎಲ್ಲಾ ನಾನ, ನನ್ನಿಂದಲೇ ಎಲ್ಲಾ, ನನ್ನಂಗೆ ಯಾರಿಲ್ಲ ಅನ್ನುವ ಹಾಗೆ ವರ್ತಿಸುತ್ತಿದ್ದೇವೆ.


ನಾವು ಒಬ್ಬರ ಬಗೆಗೆ ಆಡಿಕೊಂಡರೆ, ನಮ್ಮ ಬಗ್ಗೆ ಮತ್ತೊಬ್ಬರು ಆಡಿಕೊಳ್ಳುವವರು ಇದ್ದೇ ಇರುತ್ತಾರೆ. ಮತ್ತೊಬ್ಬರಿಗೆ ನಾವು ಬೆರಳು ಮಾಡಿ ತೋರಿಸುವುದಕ್ಕಿಂತ ಪೂರ್ವದಲ್ಲಿ ನಾವೆಷ್ಟು ಸರಿಯಾಗಿದ್ದೇವೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಾಗುತ್ತದೆ. ಬರಿ ಬೇರೆಯವರ ತಪ್ಪುಗಳನ್ನು ಎತ್ತಾಡಿಕೊಂಡು ಸಮಯವನ್ನು ವ್ಯರ್ಥಗೊಳಿಸಿಕೊಳ್ಳುವುದಕ್ಕಿಂತ ನಮ್ಮ ಸಮಯವನ್ನು ಒಳ್ಳೆಯ ಕೆಲಸಗಳಿಗಾಗಿ ಸದ್ವಿನಿಯೋಗ ಮಾಡಿಕೊಳ್ಳೊಣ. ಒಳ್ಳೆಯ ಪುಸ್ತಕಗಳನ್ನು ಓದುವ ಮೂಲಕ, ಶರಣರ-ಸಂತರ, ದಾರ್ಶನಿಕರ, ಚಿಂತಕರ, ಸಮಾಜಕ್ಕೆ ಒಳತು ಮಾಡಿದಂತಹ ಆದರ್ಶ ಜೀವಿಗಳ ಆತ್ಮ ಚರಿತ್ರೆಗಳನ್ನು, ಅವರ ಜೀವನ ಚರಿತ್ರೆಗಳನ್ನು ಓದುವ ಮತ್ತು ಕೇಳುವ ಮೂಲಕ, ಸಾಧ್ಯವಾದರೆ ಅವರ ಹಲಕೆಲವು ತತ್ವಾದರ್ಶಗಳನ್ನಾದರೂ ಅನುಸರಿಸೋಣ. ನಮ್ಮಿಂದಾದರೆ ಸಂಕಷ್ಟದಲ್ಲಿರುವ ಸ್ನೇಹಿತರ, ಬಂಧುಬಳಗದವರ, ದೀನದುರ್ಬಲರ ಜೊತೆ ನಿಲ್ಲೊಣ. ಆ ಮೂಲಕ ನಮ್ಮ ಜೀವನವನ್ನು ಒಂದಿಷ್ಟು ಸಾರ್ಥಕಗೊಳಿಸಿಕೊಳ್ಳೊಣ.
ಒಟ್ಟಿನಲ್ಲಿ ನಾವಾಡುವ ಮಾತು ಮತ್ತೊಬ್ಬರ ಗುರಿ ಸಾಧನೆಗೆ ಸ್ಪೂರ್ತಿಯಾಗಬೇಕೇ ಹೋರತು ವ್ಯಕ್ತಿಯನ್ನು ನಿಂದಿಸಿ, ಅವರ ಮನಸ್ಸನ್ನು ಘಾಸಿಗೊಳಿಸಿ, ಕುಗ್ಗಿಸಿ ಅವರನ್ನು ಕೊರಗುವಂತೆ ಮಾಡಬಾರದಲ್ಲವೆ? ಹಾಗೆ ನಮ್ಮ ಸಹವಾಸವೂ ಕೂಡಾ ಅಂತವರಿಂದ ಒಂದಿಷ್ಟು ಅಂತರ ಕಾಯ್ದುಕೊಳ್ಳುವುದು ಒಳಿತು. ಇಲ್ಲವೆ ನಮಗೆ ಬೇಡದ ವಿಚಾರಗಳನ್ನಾಡುವವರ ಮಧ್ಯ ಕೇಳಿಯೂ ಕೇಳದಂತಿರಬೇಕು. ಅದರಾಚೆ ನಾವು ತಲೆ ಎತ್ತಿ ನಿಲ್ಲುವುದು ಹೇಗೆ ಎಂಬುದರ ಕಡೆ ನಮ್ಮ ಗಮನವಿರಬೇಕು. ಇಲ್ಲ ಸಲ್ಲದ ಮಾತು ಕೇಳಿ ಮನದ ನೆಮ್ಮದಿ ಕೆಡೆಸಿಕೊಳ್ಳುವುದಕ್ಕಿಂತ ಸಜ್ಜರ ಸಂಘದಿಂದ ಮತ್ತು ಒಳ್ಳೆಯ ಕೆಲಸಕಾರ್ಯಗಳಲ್ಲಿ ನಮ್ಮನು ತೊಡಗಿಸಿಕೊಂಡು ನೆಮ್ಮದಿಯಾಗಿರುವುದು ಲೇಸಲ್ಲವೇ? ನಿವೇನಂತೀರಿ?

Leave a Reply

Back To Top