“ವಯಸ್ಕರಲ್ಲಿ ಎ ಡಿ ಎಚ್ ಡಿ ತೊಂದರೆ” ವಿಶೇಷ ಲೇಖನ-ವೀಣಾ ಹೇಮಂತ ಗೌಡ ಪಾಟೀಲ್.

ತನ್ನ ಗಂಡನ ಹುಟ್ಟುಹಬ್ಬವನ್ನು ಆಚರಿಸಲು ಎಲ್ಲ ಸಂಬಂಧಿಕರೊಂದಿಗೆ ಹೋಟೆಲಿಗೆ ಆಗಮಿಸಿದ ರಾಣಿ ಊಟದ ಎಲ್ಲಾ ಆರ್ಡರ್ಗಳನ್ನು ನೀಡಿದ ನಂತರ ಮೊದಲು ಬಂದ ಟೊಮೇಟೊ ಸೂಪನ್ನು ಸವಿಯುತ್ತಿರುವಾಗ ಮೈ ಮೇಲೆ ಸೂಪನ್ನು ಚೆಲ್ಲಿಕೊಂಡಳು. ಪತಿಯ ಸಹೋದರಿಯರು ಆಕೆಗೆ ಸಾಂತ್ವನ ಪಡಿಸಿದರೂ ಕೂಡ ವಾಶ್ ರೂಮಿಗೆ ಹೋದ ಆಕೆ ಧರಿಸಿದ ಉಡುಪನ್ನು ಉಜ್ಜಿ ಉಜ್ಜಿ ತೊಳೆಯತೊಡಗಿದಳು. ಕಣ್ಣಲ್ಲಿ ನೀರು ಧಾರಾಕಾರವಾಗಿ ಹರಿಯುತ್ತಿದ್ದು ಮನಸ್ಸು ಕೂಡ ಸದ್ದಿಲ್ಲದೆ  ಒಳಗೊಳಗೆ ಅಳುತ್ತಿತ್ತು.

 ಮತ್ತಷ್ಟು ತನ್ನ ಉಡುಪನ್ನು ತಿಕ್ಕಿ ತೊಳೆಯುತ್ತಲೇ ಕಳೆದ ಕೆಲ ತಿಂಗಳುಗಳಿಂದ ತನಗಾಗುತ್ತಿರುವ ತೊಂದರೆಯನ್ನು ನೆನೆದು ಬೆಚ್ಚಿಬಿದ್ದಳು. ಇತ್ತೀಚೆಗೆ ಯಾವುದೇ ಕೆಲಸಗಳನ್ನು ಸರಿಯಾದ ಸಮಯಕ್ಕೆ ಮಾಡಲು ಆಗುತ್ತಿಲ್ಲ, ಒಗೆಯಲು ಇಟ್ಟಿರುವ ಬಟ್ಟೆಗಳು ಮತ್ತು ಒಗೆದ ಸ್ವಚ್ಚ ಬಟ್ಟೆಗಳನ್ನು ಕೂಡಿಸುವುದು, ಮನೆಯ ತುಂಬಾ ಅಸ್ತವ್ಯಸ್ತವಾಗಿ ಅಲ್ಲಲ್ಲಿ ಬಿದ್ದಿರುವ ಬಟ್ಟೆಗಳು, ಅಡುಗೆಯ ಮನೆಯಲ್ಲಿ  ರಾಶಿರಾಶಿ ಪಾತ್ರೆಗಳು ಟೇಬಲ್ ಮೇಲೆ ಕೂಡ ಸಾಕಷ್ಟು ಸಾಮಾನುಗಳು ಮನೆಯ ಯಾವುದೇ ಒಂದು ಮೂಲೆಯೂ ಸ್ವಚ್ಛವಾಗಿ ಇಲ್ಲದಂತಹ ಪರಿಸ್ಥಿತಿ, ಎಲ್ಲವನ್ನು ಮಾಡಬಯಸಿದರೂ ಎಲ್ಲದರಲ್ಲೂ ಒಂದು ವಿಳಂಬ ಪ್ರವೃತ್ತಿ ಆಕೆಯನ್ನು ಆವರಿಸಿತ್ತು. ಕೈಯಲ್ಲಿ ಮೊಬೈಲ ಹಿಡಿದು ಸ್ಕ್ರೀನ್ ನ್ನು ತೀಡುತ್ತ ಕುಳಿತುಕೊಳ್ಳುತ್ತಿದ್ದ ಆಕೆಗೆ  ಅಲ್ಲೂ ಕೂಡ ಹೆಚ್ಚು ಲಕ್ಷ್ಯ ಕೊಡಲು ಆಗುತ್ತಿರಲಿಲ್ಲ.

 ನನಗಾಗುತ್ತಿರುವ ತೊಂದರೆ ಏನು? ಅದಕ್ಕೆ ಪರಿಹಾರ ಯಾವುದು ಎಂದು ಯೋಚಿಸುತ್ತಾ ಸದಾ ಅನ್ಯಮನಸ್ಕಳಾಗಿಯೇ ಇರುತ್ತಿದ್ದಳು. ಅದೊಂದು ದಿನ ಆಫೀಸಿಗೆ ಬಂದು ಕುಳಿತ ರಾಣಿಯ ಅನ್ಯ ಮನಸ್ಥಿತಿಯನ್ನು ಗಮನಿಸಿದ ಆಕೆಯ ಸ್ನೇಹಿತೆ ಸ್ನೇಹ  ಆಕೆಯನ್ನು ವಿಚಾರಿಸಲು ರಾಣಿ ಹನಿಗಣ್ಣಾದಳು. ಕೂಡಲೇ ಆಕೆಯನ್ನು ಕಚೇರಿಯ ಒಳ ಆಭರಣದಲ್ಲಿರುವ ಕ್ಯಾಂಟೀನ್ಗೆ ಕರೆದೊಯ್ದ ಸ್ನೇಹ ಆಕೆಗೆ ಸಮಾಧಾನ ಮಾಡಿ ಏನಾಯಿತು ಎಂದು ಕೇಳಿದಳು.

 ರಾಣಿ ಇಂದು ಮುಂಜಾನೆ ತನ್ನ ಪತಿ ತಾನು ಮಾಡಿದ ತಿಂಡಿಯನ್ನು ಏನೂ ಮಾತನಾಡದೆ, ಮನಸ್ಸಿಲ್ಲದೆ ಹೋದರೂ ಬಲವಂತವಾಗಿ ತಿಂದು ಹೋದದ್ದಾಗಿಯೂ ತಾನು ಮಾಡಿದ ತಿಂಡಿ ಬಾಯಲ್ಲಿ ಇಟ್ಟುಕೊಳ್ಳಲು ಆಗದಷ್ಟು ಕಳಪೆಯಾಗಿತ್ತು. ಆದರೂ ತನ್ನ ಅನ್ಯಮನಸ್ಕತೆಯನ್ನು, ತನಗಾಗುತ್ತಿರುವ ತೊಂದರೆಯನ್ನು ಅರಿತಿರುವ ಪತಿ ಒಂದೂ ಮಾತನಾಡದೆ ತಿಂಡಿ ತಿಂದು ಹೋದದ್ದು ಆಕೆಗೆ ನೋವನ್ನು ತರಿಸಿತ್ತು ಜೊತೆಗೆ ತನ್ನ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕೆಂಬ ಅದಮ್ಮ ಬಯಕೆಯನ್ನು ಕೂಡ ಆಕೆ ಸ್ನೇಹಳಿಗೆ ಹೇಳಿದಳು.

 ಅಯ್ಯೋ! ಇಷ್ಟೇನಾ ನಿನ್ನ ಸಮಸ್ಯೆ. ಈ ಜಗದ ಎಲ್ಲ ಸಮಸ್ಯೆಗಳಿಗೂ ಪರಿಹಾರವಿದೆ. ನನ್ನ ಚಿಕ್ಕಮ್ಮ ಕೂಡ ಹೀಗೆಯೇ ಒದ್ದಾಡುತ್ತಿದ್ದರು ಮನೆಯವರಾರಿಗೂ ಅವರ ಸಮಸ್ಯೆ ಅರ್ಥವಾಗಲಿಲ್ಲ. ಅವರಿಗೆ ನಾನೇ ಒಂದು ಆಪ್ ನ ಮೂಲಕ  ಅವರ ತೊಂದರೆಯನ್ನು ಅರಿತು ಸ್ವಯಂ ಚಿಕಿತ್ಸೆ ಆರಂಭಿಸಿ ಇದೀಗ ಆಕೆ ಸಂಪೂರ್ಣ ಗುಣಮುಖವಾಗಿದ್ದಾರೆ ಎಂದು ಹೇಳಿದಳು.

 ಕೂಡಲೇ ರಾಣಿ ಹಾಗಾದರೆ ನನಗೂ ಆಪ್ ಹಾಕಿ ಕೊಡು ನಾನು ಕೂಡ ನನ್ನ ಈ ತೊಂದರೆಗಳಿಂದ ಮುಕ್ತಳಾಗಿ ಬದುಕಲು ಇಚ್ಚಿಸುವೆ ಎಂದು ಹೇಳಿದಳು.

 ಕೂಡಲೇ ರಾಣಿಯ ಮೊಬೈಲ್ ನ ಪ್ಲೇಸ್ಟೋರ್ ಗೆ ಹೋಗಿ ಅಲ್ಲಿ ಆಪ್ ಅನ್ನು ತೆರೆದು ಅದರಲ್ಲಿ ಮೊದಲು ಆಕೆಯ ತೊಂದರೆಯ ಪ್ರಮಾಣವನ್ನು ಅರಿಯಲು ಮೊದಲ 20 ಪ್ರಶ್ನೆಗಳಿಗೆ ರಾಣಿ ಪ್ರಾಮಾಣಿಕವಾಗಿ ಉತ್ತರಗಳನ್ನು ಕಳುಹಿಸಿದಳು. ಆಕೆಯ 20 ಉತ್ತರಗಳಿಂದ ಆಕೆಯ ಸಮಸ್ಯೆಯನ್ನು ಅರಿತ ಆಪ್ ಮತ್ತೆ ಮುಂದುವರೆದು ಆಕೆಯ ತೊಂದರೆಗೆ ಸಂಬಂಧಪಟ್ಟಂತೆ ಮತ್ತಷ್ಟು ಪ್ರಶ್ನೆಗಳನ್ನು ಕಳುಹಿಸಿ ಉತ್ತರ ಪಡೆಯಿತು.

 ನಂತರ ಸ್ನೇಹ ರಾಣಿಗೆ ಇದೊಂದು ಸಂಪೂರ್ಣ ವ್ಯಕ್ತಿಗತವಾದ  ಸಮಾಲೋಚನೆ ಕ್ರಿಯೆಯಾಗಿದ್ದು ಕೇವಲ ಆಕೆಯ ವೈಯುಕ್ತಿಕ ತೊಂದರೆಗಳನ್ನು ಮತ್ತು ಅವುಗಳ ನಿವಾರಣೆಗಳನ್ನು ಕುರಿತು ಯೋಜಿಸುವ ಸಮಾಲೋಚನೆಯ ಆಪ್ ಆಗಿದೆ ಎಂದು ಹೇಳಿದಳು.

 ಪ್ರತಿದಿನ ತನ್ನನ್ನು ತಾನು 10 ರಿಂದ 20 ನಿಮಿಷಗಳ ಕಾಲ ಆ ಆಪ್ ನ ಸಮಾಲೋಚನೆಗೆ ಒಡ್ಡಿಕೊಳ್ಳುತ್ತಿದ್ದ ರಾಣಿ ಮುಂದಿನ ಕೆಲವೇ ದಿನಗಳಲ್ಲಿ ತನ್ನ ತೊಂದರೆಗಳಿಂದ ಮುಕ್ತಳಾದಳು. ಇದೀಗ ಆಕೆಯ ಮನೆ ಯಾವಾಗಲೂ ಓರಣವಾಗಿರುತ್ತಿತ್ತು. ಗಾರ್ಡನ್ನಲ್ಲಿ ಗಿಡ ಮರಗಳು ನಳನಳಿಸುತ್ತಿದ್ದವು. ಮನೆಯ ಪಾತ್ರೆಗಳು ಲಕಲಕ ಹೊಳೆಯುತ್ತಿದ್ದವು. ಆಕೆಯ ಅಡುಗೆಯ ರುಚಿಯನ್ನು ಗಂಡ ಮತ್ತು ಮಕ್ಕಳು ಇಷ್ಟಪಟ್ಟು ಸವಿಯಲಾರಂಭಿಸಿದ್ದು ಆಕೆ ಮತ್ತೆ ಮೊದಲಿನ ಲವಲವಿಕೆಯ ರಾಣಿಯಾಗಿ  ಜೀವಿಸಲಾರಂಭಿಸಿದಳು.

 ಸ್ನೇಹಿತರೇ ಇದು ಯಾವುದೇ ಕಥೆಯಲ್ಲ, ಸಮಾಜದ ಹಲವಾರು ಸಂಸಾರಗಳಲ್ಲಿ ಇಂತಹ ಹಲವಾರು ರಾಣಿಯರು ಇದ್ದಾರೆ. ಅವರು ರಾಣಿಯಂತಹದ್ದೇ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಅಂಥವರನ್ನು ನಾವು ಬೇಜವಾಬ್ದಾರರು, ಮುದುಕಿಯಾದರೂ ಸರಿಯಾಗಿ ಸಂಸಾರ ಮಾಡಲು ಬರಲಿಲ್ಲ ಎಂದು ನಗಾಡುತ್ತೇವೆ. ಯಾವುದೇ ರೀತಿಯ ಸಮಾಲೋಚನೆಗಳಿಗೆ, ವೈದ್ಯಕೀಯ ಚಿಕಿತ್ಸೆಗೆ ಅವರನ್ನು ಒಡ್ಡುವುದಿಲ್ಲ,ಆದರೆ ವಾಸ್ತವದಲ್ಲಿ ಅವರ ಈ ತೊಂದರೆಗೆ ಕಾರಣವಾಗಿರುವುದು
‘ ಪೋಸ್ಟ್ ಎ ಡಿ ಹೆಚ್ ಡಿ ಎಂಬ ತೊಂದರೆ’.

 ಸಾಮಾನ್ಯವಾಗಿ ಮಕ್ಕಳಲ್ಲಿ  ನಾವು ಎ ಡಿ ಹೆಚ್ ಡಿ ತೊಂದರೆಯನ್ನು ಕಾಣುತ್ತೇವೆ. ಮಕ್ಕಳಲ್ಲಿ ಈ ತೊಂದರೆ ಸಾಮಾನ್ಯವಾಗಿದ್ದು ವಯಸ್ಕರಿಗೆ ಅಷ್ಟಾಗಿ ಬಾಧಿಸುವುದಿಲ್ಲ. ಅದು ವಿಪರೀತಕ್ಕೆಳಸದೆ ಇರುವುದರಿಂದ ಈ ತೊಂದರೆಯ ಅರಿವು ಬಹಳಷ್ಟು ಜನರಿಗೆ ಇರುವುದಿಲ್ಲ.

 ಪೋಸ್ಟ್ ಎ ಡಿ ಹೆಚ್ ಡಿ ಇರುವವರು ಅನುಭವಿಸುವ ತೊಂದರೆಗಳು
* ತೀವ್ರ ಉದ್ವೇಗ ಮತ್ತು ಹಠಾತ್ ನಿರ್ಧಾರಗಳನ್ನು ಕೈಗೊಳ್ಳುವುದು.
* ಅತಿಯಾದ ಮೊಬೈಲ್ ಬಳಕೆ ಮತ್ತು ಟಿವಿ ನೋಡುವುದು.
*ವಿಪರೀತ ವಿಳಂಬ ಪ್ರವೃತ್ತಿ ಎಲ್ಲ ಕೆಲಸಗಳಲ್ಲಿಯೂ ಅತಿಯಾದ ನಿಧಾನಿಕೆ.
* ತಮ್ಮ ಮೇಲೆ ತಮಗೆ ನಂಬಿಕೆ ಇಲ್ಲದೆ ಇರುವುದು.
* ಜಂಕ್ ಫುಡ್ಗಳ ಸೇವನೆ
* ರಾತ್ರಿ ಬಹಳ ಹೊತ್ತಿನವರೆಗೆ ಎಚ್ಚರವಾಗಿರುವುದು ಇಲ್ಲವೇ ನಿದ್ರಾರಾಹಿತ್ಯ
* ಚಡಪಡಿಸುವುದು
* ತಮಗೆ ಸಂಬಂಧಿಸದ ಮಾತುಕತೆಗಳಲ್ಲಿ ಮೂಗು ತೂರಿಸುವುದು ಮತ್ತು ವಿನಾಕಾರಣ ಸಲಹೆ ನೀಡುವುದು.
* ಕೆಲವೊಮ್ಮೆ ಅತಿಯಾಗಿ ಮಾತನಾಡುವ ಇವರು ಮತ್ತೆ ಕೆಲವೊಮ್ಮೆ ನೋಡಿಯೂ ನೋಡದಂತೆ ವರ್ತಿಸುವರು.
* ಚಿಕ್ಕ ಮಕ್ಕಳಂತೆ ಹಟ, ಛಲ ಮತ್ತು ಹ್ಯಾಂವ ಮಾಡುವರು .
* ತಾವು ಬೇರೆಯವರಿಗೆ ಮಾಡಿದ ಉಪಕಾರವನ್ನು ಪದೇಪದೇ ನೆನಪಿಸಿ ಹೇಳುವ ಮತ್ತು ಅವರಿಂದ ಪ್ರತ್ಯುಪಕಾರವನ್ನು, ಕೃತಜ್ಞತೆಯನ್ನು ನಿರೀಕ್ಷಿಸುವುದು.
* ವಿಪರೀತ ಮೇಲರಿಮೆ ಇಲ್ಲವೇ ಕೀಳರಿಮೆಗಳಿಂದ ಬಳಲುವುದು

 ಮೇಲಿನ ಕೆಲ ವಿಷಯಗಳು  ಸಾಮಾನ್ಯವಾಗಿ ಸ್ವಲ್ಪ ಪ್ರಮಾಣದಲ್ಲಿ ಇದ್ದರೆ, ಅದು ಅವರ ದೈನಂದಿನ ಜೀವನಕ್ಕೆ ಯಾವುದೇ ತೊಂದರೆಯನ್ನು ತರದಿದ್ದರೆ ಪರವಾಗಿಲ್ಲ. ಆದರೆ ಅವರು ತಮ್ಮ ಪ್ರತಿ ಕೆಲಸಕ್ಕೂ  ತೊಂದರೆಯನ್ನು ಅನುಭವಿಸಿ ತಾವು ಒದ್ದಾಡುವುದರ ಜೊತೆಗೆ ಮನೆಯವರಿಗೂ ತೊಂದರೆ ಆಗುತ್ತಿದೆ ಎಂದೆನಿಸಿದಾಗ ಖಂಡಿತವಾಗಿಯೂ ವೈದ್ಯಕೀಯ ಚಿಕಿತ್ಸೆಯ ಮೊರೆ ಹೋಗಬೇಕು.

 ಮನೋ ವೈದ್ಯಕೀಯ ಶಾಸ್ತ್ರದಲ್ಲಿ ಈ ತೊಂದರೆಗೆ ಪರಿಹಾರಗಳು ಇವೆ. ಇದರ ಜೊತೆಗೆ ಚಿಕಿತ್ಸೆ ಮತ್ತು ಸಮಾಲೋಚನೆಯ ಮೂಲಕ ಈ ತೊಂದರೆಯನ್ನು ಸರಿಪಡಿಸಬಹುದು.


* ಈ ತೊಂದರೆಯಿಂದ ಬಳಲುತ್ತಿರುವವರಿಗೆ ಸಕಾರಾತ್ಮಕ ಧೋರಣೆಯನ್ನು ಬೆಳೆಸಲು ನಿರಂತರ ಪ್ರೋತ್ಸಾಹವೀಯಬೇಕು.
* ಕಡ್ಡಾಯವಾಗಿ ಮುಂಜಾನೆಯ ದೈನಂದಿನ ದಿನಚರಿ  ಕರ್ಮಗಳನ್ನು ಪಾಲಿಸಲು ಒತ್ತಾಯಿಸಬೇಕು.
 *ಒಳ್ಳೆಯ ನಿದ್ರೆ ಅತ್ಯಂತ ಅವಶ್ಯಕ
* ಎಲ್ಲಾ ಪೋಷಕಾಂಶವುಳ್ಳ ಒಳ್ಳೆಯ ಆಹಾರ ಸೇವನೆ ಅಪೇಕ್ಷಣೀಯ.
  *ವ್ಯಾಯಾಮ, ಯೋಗ, ಧ್ಯಾನ ಮತ್ತು ನಡಿಗೆಗಳನ್ನು ನಿಯಮಿತವಾಗಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.
 *ತಾನು ಮಾಡಿ ಮುಗಿಸಬೇಕೆಂದಿರುವ ಕೆಲಸಗಳ ಪಟ್ಟಿಯೊಂದನ್ನು ತಯಾರಿಸಿ ಅತ್ಯಂತ ಸರಳವಾದ ಕೆಲಸವನ್ನು ಮೊದಲು ಮಾಡಿ ನಂತರ ಒಂದೊಂದಾಗಿ ಉಳಿದ ಕೆಲಸಗಳನ್ನು ಮಾಡಿ ಪೂರೈಸಬೇಕು.
 *ಅಂತಿಮವಾಗಿ ಅತಿ ಮುಖ್ಯವಾದ ಕೆಲಸ ಎಂದರೆ ಮೊಬೈಲ್,ಲ್ಯಾಪ್ಟಾಪ್ ಮುಂತಾದ ಎಲೆಕ್ಟ್ರಾನಿಕ್ ಗ್ಯಾಜೆಟ್ಗಳನ್ನು ಕೆಲ ನಿಮಿಷಗಳಿಂದ ಹಿಡಿದು ಕೆಲ ಗಂಟೆಗಳವರೆಗೆ ದೂರವಿರಿಸಲು ಪ್ರಯತ್ನಿಸಿ ಯಶ ಕಾಣಬೇಕು.

 ನಮ್ಮೆಲ್ಲಾ ಪ್ರಯತ್ನಗಳ ಹೊರತಾಗಿಯೂ ತೊಂದರೆ ಹಾಗೆಯೇ ಉಳಿದರೆ, ಅಂತಹ ವ್ಯಕ್ತಿಯೊಂದಿಗೆ ಪ್ರೀತಿ ಸಹನೆ ಮತ್ತು ಸಹಾನುಭೂತಿಗಳಿಂದ ವರ್ತಿಸಬೇಕು. ಅಂಥವರ ಕೆಲ ಒರಟು ಮಾತುಗಳನ್ನು ಗಂಭೀರವಾಗಿ ಇಲ್ಲವೇ ಲಘುವಾಗಿ ಪರಿಗಣಿಸದಿರಿ.
 ಕಾರಣ ಹಾಗೆ ಮಾತನಾಡುವುದು ಅವರಲ್ಲ, ಅವರಲ್ಲಿರುವ ತೊಂದರೆ.


Leave a Reply

Back To Top