ಅರುಣಾ ನರೇಂದ್ರ ಅವರ ಗಜಲ್

ಕಾವ್ಯದ ರಸಗಂಗೆಯಾಗಿ ಬಾಯೆಂದು ಕರೆದೆ
ಬಾಳಿನ ಸವಿಸುಧೆಯಾಗಿ ಬಾಯೆಂದು ಕರೆದೆ

ನೀ ಆಡಿದ ಮಾತು ಎದೆಚಿಪ್ಪಿನಲಿ ಮುತ್ತಾಗಿವೆ
ಸುರಿವ ಸ್ವಾತಿಮಳೆಯಾಗಿ ಬಾಯೆಂದು ಕರೆದೆ

ಹೊದ್ದ ಸೆರಗಿನ ತುಂಬಾ ಕವಿತೆಗಳ ಸಿಂಗಾರ
ಒಲವಿನ ಚಂದ್ರಿಕೆಯಾಗಿ ಬಾಯೆಂದು ಕರೆದೆ

ಅಕ್ಷರದ ಜಾತ್ರೆಯಲಿ ತಮದ ಕೇಡಾಗಿದೆ
ಬದುಕಿನ ದೀಪಿಕೆಯಾಗಿ ಬಾಯೆಂದು ಕರೆದೆ

ನಿನ್ನಿಂದ ಗಾವುದ ದೂರದಲ್ಲಿದ್ದಾಳೆ ಅರುಣಾ
ನನ್ನ ಅಂತರಗಂಗೆಯಾಗಿ ಬಾಯೆಂದು ಕರೆದೆ


Leave a Reply

Back To Top