‘ಕತ್ತಲಲ್ಲಿ ಬೆಳಕ ತೋರುವ ದೀವಿಗೆ’ವಿಶೇಷ ಲೇಖನ ಶುಭಲಕ್ಷ್ಮಿ ಆರ್ ನಾಯಕ

“ಅಜ್ಞಾನ ತಿಮಿರಾಂಧಸ್ಯಜ್ಞಾನಾಂಜನ ಶಲಾಕಯಾ, ಚಕ್ಷುಋಣ್ಮೀಲಿತಂ ಏನ ತಸ್ಮೈ ಶ್ರೀ ಗುರವೇ ನಮಃ”
ಎಂಬ ಸಂಸ್ಕೃತ ಸುಭಾಷಿತದಂತೆ ಅಜ್ಞಾನವೆಂಬ ಕತ್ತಲೆಯನ್ನು ಕಳೆದು ಜ್ಞಾನವೆಂಬ ಬೆಳಕಿನ  ಕಡೆಗೆ ನಡೆಸುವ ಗುರುವಿಗೆ ನಮನವನ್ನು ಸಲ್ಲಿಸುತ್ತಾ
ಗುರುವಿನ ಸ್ಥಾನ ಸಮಾಜದಲ್ಲಿ, ಜಗದಲ್ಲಿ, ಅಷ್ಟೇಕೆ ಇಹ ಪರದಲ್ಲೂ ಗುರುತರವಾದುದು. ಗು ಎಂದರೆ ಕತ್ತಲೆ ರು ಎಂದರೆ ಕಳೆಯುವವ. ನಮ್ಮಲ್ಲಿಯ ಅಜ್ಞಾನವನ್ನು ಕಳೆದು ಸುಜ್ಞಾನವನ್ನು ನೀಡುವ ಪ್ರತಿಯೊಬ್ಬರೂ ಗುರುಸಮಾನರು. ಇದರಲ್ಲಿ ನಮ್ಮ ಮಾತಾಪಿತರು, ಪ್ರಕೃತಿಯ ತರು, ಲತೆ, ಕಲ್ಲು ಮಣ್ಣು, ಪಂಚಭೂತಗಳು, ವಿದ್ಯಾದಾನ ಮಾಡಿದ ಗುರುಗಳು, ಬುದ್ದಿ ಹೇಳಿತಿದ್ದಿದ ಹಿರಿಯರು, ಜ್ಞಾನಿಗಳು ಎಲ್ಲರೂ ಬರುತ್ತಾರೆ.
ಹಾಗಿದ್ದರೆ  ಗುರುವೆಂದರೆ ಹೀಗಿರಬೇಕು ಎಂದಾಗ ಗುರುಗಳು ಹೇಗಿರಬೇಕು? ಎಂಬ ಪ್ರಶ್ನೆ ಹಾಗೂ ಅದಕ್ಕೆ ಉತ್ತರ ಗುರುವಲ್ಲೇ ಇದೆ. ಗುರು ನಿಶ್ಕಲ್ಮಷ ಮನದವನಾಗಿ, ಸ್ವಾರ್ಥ ರಹಿತನಾಗಿ, ಸುಜ್ಞಾನವನ್ನು ಪಡೆದವನಾಗಿ, ತನ್ನ ಹತ್ತಿರ ವಿದ್ಯೆಗಾಗಿ ಬಂದವರಿಗೆ ಆತ್ಮ ವಿಶ್ವಾಸ ತುಂಬುವವನಾಗಿ, ನುಡಿ ಹಾಗೂ ನಡೆಯಲ್ಲಿ ಅಂತರವಿಲ್ಲದವನಾಗಿ,ಕಷ್ಟದಲ್ಲಿ ಕೈಹಿಡಿದು ನಡೆಸುವ ಬೆಳಕಾಗಿ,ಮತ್ಸರವನ್ನು ತೊರೆದವನಾಗಿ,  ಸನ್ಮಾರ್ಗದಲ್ಲಿ ನಡೆಯುವ ಸದಾಚಾರಿಯಾಗಿ ಕತ್ತ ಲಲ್ಲಿ ಬೆಳಕನ್ನು ತೋರುವ ದೀವಿಗೆಯಾಗಿರಬೇಕು. ಸಮಾಜವನ್ನು ತಿದ್ದುವ, ಕಿರಿಯರಿಗೆ ಮಾರ್ಗದರ್ಶಿಯಾಗಿರುವ ಗುರು ಅತ್ಯಂತ ಜಾಗ್ರತೆಯಿಂದ ಹೆಜ್ಜೆಯನ್ನು ಸರಿದಾರಿಯಲ್ಲಿ  ತಾನು ಮೊದಲು ಹಾಕುತ್ತ ತನ್ನ ಶಿಷ್ಯರನ್ನು ತನ್ನ ಹಿಂದೆ ಸನ್ಮಾರ್ಗದಲ್ಲಿ ತರಬೇಕು.
“ವಿದ್ಯೆ ಕೊಡದಾ ತಂದೆ,  ಬುದ್ಧಿ ಹೇಳದಾ ಗುರುವು, ಬಿದ್ದಿರಲು ಬಂದು ನೋಡದಾ ತಾಯಿಯು ಶುದ್ಧ ವೈರಿಗಳು ಸರ್ವಜ್ಞ” ಎಂದು ಸರ್ವಜ್ಞ ಕವಿ ತಿಳಿಸಿದಂತೆ ತನ್ನ ಶಿಷ್ಯರು ಎಡವಿದಾಗ, ಬುದ್ಧಿ ಹೇಳಿ ಸರಿದಾರಿಯಲ್ಲಿ ತರಬೇಕು. ಈ ಬುದ್ಧಿ ಹೇಳುವಾಗ ಮೊದಲು ಮೃದುವಾಗಿ,ಪ್ರೀತಿಯಿಂದ ಅನಿವಾರ್ಯತೆ ಬಂದರೆ ಕಟುವಾಗಿ, ಖಾರವಾಗಿ ತಿಳಿಸಬೇಕು. ಕಾರಣ ಈ ಕಟುತನದ ಹಿಂದಿನ ಉದ್ದೇಶ ಒಳ್ಳೆಯದೇ ಆಗಿರಬೇಕು.
ಕಲಿಸುವ ಗುರುವಿಗೆ ಕಲಿಯುವ ದಾಹವಿದ್ದಾಗ, ಅವನ ಕಲಿಕೆ ನಿರಂತರ ಸಾಗಿದಾಗ ಮಾತ್ರ ಗುರು ಕಾಯಕದಲ್ಲಿ ತೃಪ್ತಿ ಕಾಣಬಲ್ಲ. ನೀತವಂತನಾದ ಗುರುತಾನೆ ನೀತಿವಂತ, ಮೌಲ್ಯಾಧಾರಿತ ಸಮಾಜವನ್ನು ನಿರ್ಮಿಸಬಲ್ಲ.
ಜ್ಞಾನ , ವಿವೇಕ, ತಾಳ್ಮೆ, ಸರಳತೆ, ಸಮಚಿತ್ತ, ನಿಸ್ವಾರ್ಥ ಮನಸ್ಥಿತಿ ವ್ಯಷ್ಟಿಯಿಂದ ಸಮಷ್ಟಿ ಎಂಬ ಭಾವ ಗುರುವಿನ ಜೀವನವನ್ನು ಸಾರ್ಥಕ್ಯ ಗೊಳಿಸಬಲ್ಲವು.

ಆದರೆ ಇಂದು ಗುರು ಹಾಗೂ ಶಿಷ್ಯರಿಬ್ಬರೂ  ಎಲ್ಲರೀತಿಯಿಂದಲೂ ತಮ್ಮ  ತಮ್ಮ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಗುರುತರ ಜವಾಬ್ದಾರಿ ಇದೆ.



Leave a Reply

Back To Top