ಗುರು ಪೂರ್ಣಿಮಾ ವಿಶೇಷ-ವೀಣಾ ಹೇಮಂತ್ ಗೌಡ ಪಾಟೀಲ್

ಗುರುಬ್ರಹ್ಮಾ ಗುರುರ್ವಿಷ್ಣು
ಗುರುರ್ದೇವೋ ಮಹೇಶ್ವರಾ
ಗುರು ಸಾಕ್ಷಾತ್ ಪರಬ್ರಹ್ಮ
ತಸ್ಮೈಶ್ರೀ ಗುರುವೇನ್ನಮಃ    

   ಅಖಂಡ ಮಂಡಲಾಕಾರಂ
ವ್ಯಾಪ್ತಂ ಯೇನ ಚರಾಚರಂ
 ತತ್ಪದಂ ದರ್ಶಿತಂ ಯೇನಾ
 ತಸ್ಮೈ ಶ್ರೀ ಗುರುವೇ ನಮಃ

ಅಜ್ಞಾನ ತಿಮಿರಾಂಧಸ್ಯ
ಜ್ಞಾನಾಂಜನ ಶಲಾಕಯ
 ಚಕ್ಷುರ೦ ಮೀಲಿತಂ ಯೇನ
ತಸ್ಮೈ ಶ್ರೀ ಗುರುವೇ ನಮಃ….      



                    ಗುರುವೇ ಸೃಷ್ಟಿಕರ್ತನಾದ  ಬ್ರಹ್ಮ, ಗುರುವೇ  ಸ್ಥಿತಿಕರ್ತನಾದ ವಿಷ್ಣು ಮತ್ತು  ಗುರುವೇ ಲಯಕರ್ತ ದೇವನಾದ ಮಹೇಶ್ವರನು. ಗುರು ಸಾಕ್ಷಾತ್ ಪರಬ್ರಹ್ಮ ಸ್ವರೂಪಿ . ಅಂತಹ ಶ್ರೀಗುರುವಿಗೆ ನಮಸ್ಕಾರ .
ಸಂಪೂರ್ಣ ಮಂಡಲಾಕಾರವಾದ,  ಚರಾಚರಗಳಿಂದ ಕೂಡಿದ ಜಗತ್ತನ್ನು ವ್ಯಾಪಿಸಿರುವ ತತ್ವವು ಯಾರಿಂದ ತೋರಿಸಲ್ಪಟ್ಟಿತೋ ಅಂತಹ ಮಹಾನ್ ಗುರುವಿಗೆ ನಮಸ್ಕಾರ.
ಅಜ್ಞಾನವೆಂಬ ಕತ್ತಲೆಯಿಂದ ಅಂಧನಾದವನ ಕಣ್ಣನ್ನು ಜ್ಞಾನವೆಂಬ ಅಂಜನ(ದೀಪ) ಸಲಾಕೆಯಿಂದ ಬಿಡಿಸುವ ಶ್ರೀಗುರುವಿಗೆ ನಮಸ್ಕಾರ…..ಹೀಗೆ ಗುರುವನ್ನು ಸ್ತುತಿಸುತ್ತವೆ  ನಮ್ಮ ಪೂರ್ವಜರ ಉಕ್ತಿಗಳು . ಗುರು ಎಂದರೆ  ‘ಗು’ ಎಂಬ ಪದವು ಗಾಢ ಅಂಧಕಾರ, ಕತ್ತಲನ್ನು ಸೂಚಿಸಿದರೆ ‘ರು’ ಎಂಬ ಪದವು ಕತ್ತಲನ್ನು  ಹೋಗಲಾಡಿಸುವವನು, ಕಳೆಯುವವನು ಎಂದು. ಅಷ್ಟಲ್ಲದೆ ಹೇಳಿಲ್ಲ ನಮ್ಮ ಹಿರಿಯರು ಗುರು ತಂದೆ ತಾಯಿಗಳ ನಂತರದ ಸ್ಥಾನದಲ್ಲಿ ಬರುತ್ತಾನೆ ತಂದೆ ತಾಯಿಗಳು ಜೈವಿಕವಾಗಿ ನಮಗೆ ಸಂಬಂಧವನ್ನು ಹೊಂದಿದ್ದರೆ  ಗುರು ಮಾನಸಿಕವಾಗಿ ನಮ್ಮೊಂದಿಗೇ ಸಂಬಂಧ ಹೊಂದಿರುತ್ತಾನೆ ತಂದೆ ತಾಯಿ ಕಲಿಸಲು ಸಾಧ್ಯವಾಗದ್ದನ್ನು ಕಲಿಸುವವನೇ ಗುರು ಅಂತೆಯೇ ಆತನ ಸ್ಥಾನ ಈ ಜಗತ್ತಿನಲ್ಲಿ ಅತ್ಯಂತ ಮೇಲ್ಮಟ್ಟದಲ್ಲಿ ಇದೆ .                          

       ಗುರು ತನ್ನ ಶಿಷ್ಯರಲ್ಲಿ ಜ್ಞಾನ-ಬುದ್ಧಿಗಳ  ವಿಕಾಸವನ್ನು  ಹೊಂದುವಲ್ಲಿ ಸಹಕರಿಸುತ್ತಾ ಆತನ ಬದುಕನ್ನು ದೇದೀಪ್ಯಮಾನವಾಗಿ ಬೆಳಗಲು ಸಹಾಯ ಮಾಡುತ್ತಾನೆ . ನಾಲ್ಕು ಯೋಗಗಳಲ್ಲಿ ಒಂದಾದ ಕರ್ಮಯೋಗದಲ್ಲಿ  ಗುರುವಿನ ಕುರಿತಾಗಿ ಈ ಹೇಳಿಕೆ ಇದೆ ..ಗುರು ಕೇವಲ  ಏಕಮುಖವಾಗಿ ಹೇಳುವುದಿಲ್ಲ ,ಆತ ಮಕ್ಕಳ ಮನದೊಡನೆ ಸಂಭಾಷಿಸುತ್ತಾನೆ ಆತ ಕೊಡುಗೈ ದಾನಿ ತನ್ನಲ್ಲಿರುವ ಎಲ್ಲ ವಿದ್ಯೆಯನ್ನು ತನ್ನ ಶಿಷ್ಯರು ಕಲಿತು ಪರಿಪೂರ್ಣರಾದಾಗ ಆ ಗುರು ಸಂಪ್ರೀತನಾಗುತ್ತಾನೆ .                    

  ಹಿಂದೂ ಪುರಾಣಗಳ ಪ್ರಕಾರ ದೇವಾಧಿದೇವ ಮಹಾದೇವ ಪರಶಿವನು ತನ್ನೆಲ್ಲಾ ಜ್ಞಾನವನ್ನು ತನ್ನ ಏಳು ಜನ ಹಿಂಬಾಲಕರಾದ ಸಪ್ತರ್ಷಿಗಳಿಗೆ ಆಷಾಢ  ಪೂರ್ಣಿಮೆಯ ದಿನ ಧಾರೆ ಎರೆದನು. ಇಲ್ಲಿ ಗುರು ಎಂದರೆ ನಮ್ಮ ಆಧ್ಯಾತ್ಮಿಕ, ಐಹಿಕ  ಜೀವನ ಗಳೆರಡಕ್ಕೂ ದಾರಿ ತೋರಿಸುವವ ಎಂದೇ ಅರ್ಥ .ಆ ಅರ್ಥದಲ್ಲಿ ಶಿವನು ಪರಮ ಗುರು, ಆದಿ ಗುರು ಎಂದೇ ಹೆಸರಾದ. ಇದು ಮಾನವತ್ವದಿಂದ ದೈವತ್ವದೆಡೆಗೆ ಶಿವನು ಕ್ರಮಿಸಿದ ಹಾದಿ ಯನ್ನು ನೆನೆಯುವ ದಿನ …ಶಿವನು ಆದಿಯೋಗಿಯಾಗಿ, ಮೊತ್ತ ಮೊದಲ ಗುರುವಾದ ದಿನ ಹೀಗೆ ಶೈವ ಸಂಪ್ರದಾಯದ ಜನರು ಗುರುಪೂರ್ಣಿಮೆಯನ್ನು ಶಿವನ ಹೆಸರಿನಲ್ಲಿ ಆಚರಿಸುತ್ತಿದ್ದಾರೆ.

ಉತ್ತರ ಭಾರತದಲ್ಲಿ ಗುರು ಪೂರ್ಣಿಮೆಯನ್ನು ಬುದ್ಧ ಪೂರ್ಣಿಮೆ ಎಂದು ಕೂಡ ಆಚರಿಸುತ್ತಾರೆ . ನಡುರಾತ್ರಿಯಲ್ಲಿ ಶಾಂತಿಯನ್ನು ಅರಸಿ  ಮನೆಬಿಟ್ಟು ಹೊರಟ ಗೌತಮನು,ಹಲವಾರು ಹುಡುಕಾಟಗಳ ನಂತರ ಇಂದಿನ ಬುದ್ಧಗಯಾದ  ಬೋಧಿವೃಕ್ಷದ ಕೆಳಗೆ ಜ್ಞಾನೋದಯವನ್ನು ಹೊಂದಿದನು.ಮುಂದೆ ಬುದ್ಧನು ಇಂದಿನ ಉತ್ತರ ಪ್ರದೇಶ ರಾಜ್ಯದಲ್ಲಿರುವ  ಸಾರಾನಾಥದಲ್ಲಿ  ತನ್ನ ಮೊತ್ತಮೊದಲ ಪ್ರವಚನವನ್ನು ಆಷಾಢ ಹುಣ್ಣಿಮೆಯ ದಿನವೇ  ನೀಡಿದನು.ಆದ್ದರಿಂದಲೇ ಆ ದಿನವನ್ನು ಬುದ್ಧ ಪೂರ್ಣಿಮಾ ಎಂದು ಆಚರಿಸಲು ಆರಂಭಿಸಿದರು.ಬುದ್ದನ ಪ್ರವಚನಗಳು ಸಾರ್ವತ್ರಿಕ ಹಾಗೂ ಸಾರ್ವಕಾಲಿಕ  ಅನ್ವಯಿಕಗಳು ಆದ್ದರಿಂದಲೇ ಬುದ್ಧನ ಮೊದಲ ಪ್ರವಚನದ ಈ ದಿನವನ್ನು  ಬುದ್ಧ ಪೂರ್ಣಿಮೆ ಎಂದು ಜಗತ್ತಿನಾದ್ಯಂತ ಬೌದ್ಧ ಧರ್ಮದ ಅನುಯಾಯಿಗಳು ಆಚರಿಸುತ್ತಾರೆ .                          

ಇನ್ನು ಗುರುಪೂರ್ಣಿಮೆಯನ್ನು ಮಹರ್ಷಿ ವೇದವ್ಯಾಸರ ಜನ್ಮದಿನದ ನೆನಪಿನ  ಗೌರವದ್ಯೋತಕವಾಗಿ ‘ವ್ಯಾಸ ಪೂರ್ಣಿಮೆ’ ಎಂದು ಕೂಡ ಕರೆಯುತ್ತಾರೆ .ಮಹರ್ಷಿ ವೇದ ವ್ಯಾಸರು ಮಹಾಭಾರತ ಕೃತಿಯನ್ನು  ರಚಿಸಿದರು.ಚತುರ್ವೇದಗಳಾದ ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವಣವೇದ ಗಳನ್ನು ಪರಿಷ್ಕರಿಸಿದರು.    

ಹತ್ತೊಂಬತ್ತನೆಯ ಶತಮಾನದ ಆದಿಯಲ್ಲಿ  ಮಹಾತ್ಮಾ ಗಾಂಧೀಜಿಯವರು ತಮ್ಮ ಆಧ್ಯಾತ್ಮಿಕ ಗುರುಗಳಾದ ಶ್ರೀಮದ್ ರಾಜಚಂದ್ರರಿಗೆ ಗೌರವ ಸಲ್ಲಿಸುವ ದೃಷ್ಟಿಯಿಂದ ಗುರುಪೂರ್ಣಿಮೆಯ ದಿನವನ್ನು ಆರಂಭಿಸಿದರು. ಜೈನ ಸಂಪ್ರದಾಯದಲ್ಲೂ ಗುರು ಪೂರ್ಣಿಮೆಯೆಂದು ಆಚರಿಸುತ್ತಾರೆ .

                     ಗುರು ಪೂರ್ಣಿಮೆಯ ಮಹತ್ವವನ್ನು ಕುರಿತು ಇಲ್ಲಿ ಕಥೆಯೊ೦ದನ್ನು ನೆನೆಯಬಹುದು.  4 ಜನ ವೃದ್ಧರು ಹುಣ್ಣಿಮೆಯ ದಿನ ಪೂರ್ಣಚಂದ್ರನ ಬೆಳಕಿನಲ್ಲಿ ಜ್ಞಾನದ ನಿಜವಾದ ಅರ್ಥವನ್ನು ಪಡೆದುಕೊಂಡು ಗುರುಗಳಾದ ಕಥೆ. ಮೊದಲನೆಯ ವೃದ್ಧ ನಿರಾಶೆಯನ್ನೇ ಹೊತ್ತವನು, ಎರಡನೆಯ ವೃದ್ಧ  ಸಮೃದ್ಧಿ ಮತ್ತು ಸಂತೋಷದ ಹುಡುಕಾಟದಲ್ಲಿದ್ದ,ಮೂರನೆಯ ವೃದ್ಧ ಜೀವನಕ್ಕೊಂದು ಅರ್ಥವನ್ನು ಹುಡುಕಾಡುತ್ತಿದ್ದ ಮತ್ತು ನಾಲ್ಕನೆಯ ವೃದ್ಧ ಎಲ್ಲ ಜ್ಞಾನವನ್ನು ಹೊಂದಿದ್ದರೂ ಏನನ್ನೋ ಕಳೆದುಕೊಂಡ ಭಾವದಲ್ಲಿದ್ದ.ತಮ್ಮೆಲ್ಲಾ ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕುತ್ತಾ ಅವರೆಲ್ಲರೂ ದೊಡ್ಡ ಆಲದ ಮರದ ಕೆಳಗೆ ಬಂದು ಕುಳಿತರು.ಆ ಆಲದ ಮರದ ಕೆಳಗೆ ಕುಳಿತ ಇನ್ನೋರ್ವ ತರುಣ ಯುವ ಸನ್ಯಾಸಿಯನು ನೋಡಿದಾಗ ತಮ್ಮ ಪ್ರಶ್ನೆಗಳಿಗೆ ಈತ ಉತ್ತರ ಕೊಡಬಲ್ಲ ಎಂದು ಅವರಿಗೆ ಬೋಧೆಯಾಯಿತು .ಎಲ್ಲರೂ ಆತನ ಮುಖವನ್ನು ದಿಟ್ಟಿಸಿ ನೋಡಿದರು.ಆ ತರುಣ ಒಂದೂ ಮಾತನಾಡದೆ ಅವರ ಎಡೆಗೆ ಕೇವಲ ಮುಗುಳ್ನಗೆಯನ್ನು ಬೀರಿದ ಆಗಲೇ ಅವರೆಲ್ಲರಿಗೂ ಆ ತರುಣ ಹೇಳದೆಯೇ , ಅವರಿಗೆ ಬೇಕಾದ ಎಲ್ಲ ಉತ್ತರಗಳು ದೊರಕಿದವು.ಅವರು ಜ್ಞಾನಿಗಳಾದರು, ಗುರುಗಳಾದರು ಹೀಗೆ ಗುರುಗಳೊಂದಿಗೆ ಅವರಲ್ಲಿ ಆಧ್ಯಾತ್ಮಿಕ ಮೂಲ ತಂತು ಸ್ಥಾಪಿತವಾಯಿತು..ಇದೇ ಗುರುಪೂರ್ಣಿಮೆಯ ಮೂಲಕಥೆ. ಇದನ್ನೇ ಆದಿಶಂಕರಾಚಾರ್ಯರು ‘ಮೌನ ವಾಕ್ಯ ಪ್ರಕಟಿತ ಪರಬ್ರಹ್ಮ ತತ್ತ್ವಮ್ ಯುವನಂ  ‘       ಎಂದು ಹೇಳಿದರು .ಇದರ ತಾತ್ಪರ್ಯವಿಷ್ಟೇ ನಿಜವಾದ ಬ್ರಾಹ್ಮಣ ಅಂದರೆ ಶಾಂತ ಸ್ವರೂಪದಲ್ಲಿ  ಬ್ರಹ್ಮಜ್ಞಾನ ಪಡೆದ ಮೂಲ ಗುರುವಿನ ನೈಜ ಪ್ರಕೃತಿಯನ್ನ ವಂದಿಸುವೆ ಎಂದು.

ಇಲ್ಲಿ ಆಲದ ಮರ ಯಾರ ಆಶ್ರಯವಿಲ್ಲದೆ, ಕಾಳಜಿಯ ಮತ್ತು ಸಂರಕ್ಷಣೆಯ ಅವಶ್ಯಕತೆಯೇ ಇಲ್ಲದೆ ತನ್ನ ಪಾಡಿಗೆ ತಾನು ಬೆಳೆಯುತ್ತದೆ .ಅಂದರೆ ಒಂದು ಚೂರು ಮಣ್ಣು ಮತ್ತು ಒಂದು ಹನಿ ನೀರು ಆಲದ ಮರ ಬೆಳೆಯಲು ಸಾಕು.  ಕಲ್ಲಿನ ಪೊಟರೆಯಲ್ಲಿಯೂ ಬೆಳೆಯುವ ಆಲದ ಮರ ದಿನದ ೨೪ ಘಂಟೆಯೂ   ಆಮ್ಲಜನಕವನ್ನು ಉತ್ಪತ್ತಿ ಮಾಡುತ್ತದೆ .ಈ ರೀತಿ ಸಂಪೂರ್ಣವಾಗಿ ಕೊಡುವ ಪ್ರಕೃತಿಯನ್ನ ಹೊಂದಿರುವುದು ಗುರುವಿನ ತತ್ವ .ಅಂದರೆ ಗುರು ಅಂದರೆ ಕತ್ತಲೆಯನ್ನು ಕಳೆಯುವ ,ಸಮೃದ್ಧಿಯನ್ನು ತರುವ ಸ್ವತಂತ್ರ ವಿಚಾರಗಳನ್ನು ಮಾಡುವ ಸ್ವಾತಂತ್ರ್ಯವನ್ನು ನೀಡುವ ವ್ಯಕ್ತಿ, ಅರಿವು ನೀಡುವ ವ್ಯಕ್ತಿ  ಎಂದು ಅರ್ಥ.                            ಅಂತೆಯೇ ಪ್ರತಿ ವರ್ಷ ಆಷಾಢ ಶುದ್ಧ ಹುಣ್ಣಿಮೆಯ ದಿನವನ್ನು  ಗುರುಪೂರ್ಣಿಮೆ, ವ್ಯಾಸಪೂರ್ಣಿಮೆ, ಬುದ್ಧ ಪೂರ್ಣಿಮೆ ಎಂದು ಹಲವಾರು ಹೆಸರುಗಳಲ್ಲಿ ಆಚರಿಸುತ್ತಾರೆ .

ಜಾತಿ, ಮತ, ಪಂಥ, ಧರ್ಮಗಳ ಹೊರತಾಗಿಯೂ ಕೂಡ ಗುರು ಪೂಜನೀಯ, ಅನುಕರಣೀಯ, ಆದರ್ಶ ಮತ್ತು ಗುರು ಎಂಬುದು ಒಂದು ಮೌಲ್ಯ.ಅಂತೆಯೇ ಈ ಗುರುಪೂರ್ಣಿಮೆಯ ದಿನ ನಮಗೆ ಪಾಠ ಕಲಿಸಿದ ,ಲೌಕಿಕವಾಗಿ, ಅಲೌಕಿಕವಾಗಿ, ಪಾರಮಾರ್ಥಿಕವಾಗಿ ಎಲ್ಲ ರೀತಿಯಲ್ಲಿಯೂ ವಿದ್ಯೆ ಕಲಿಸಿದ ಗುರುವನ್ನು ನೆನೆಯುವ, ನೆನೆದು ಪೂಜಿಸುವ, ಪೂಜಿಸಿ ಭಜಿಸುವ ಅವರಿಂದ ಮತ್ತೆ ಮತ್ತೆ ಆಶೀರ್ವಾದ ಪಡೆಯುವ  ತನ್ಮೂಲಕ  ಅವರು ತೋರಿದ ಜಗದ ಬೆಳಕಲ್ಲಿ ಒಂದಾಗಿ ಸಾಗುವ  ಆಶಯದೊಂದಿಗೆ


Leave a Reply

Back To Top