ಸತೀಶ್ ಬಿಳಿಯೂರು ಕವಿತೆ-ಕರುಳಿನ ಕೂಗು

ಕಂದನ ಕೂಗು ಕೇಳಿದ ಭ್ರಮೆಯೊಳಗೆ
ನಿಟ್ಟುಸಿರು ಬಿಟ್ಟು ಎದ್ದು ಬಿದ್ದು ಓಡಿ ಬಂದಳು
ಮಾಡುವ ಕರ್ಮ ಕಾರ್ಯವ ಬದಿಗಿಟ್ಟು
ಅಳುವನ್ನು ನಿಲ್ಲಿಸುವ ಪಣತೊಟ್ಟು

ಮುದ್ದಾಡಿಸುತ ಮುದ್ದಿಸುವ ಆಸೆಯಲಿ
ನೋವುಗಳ ಮನದೊಳಗೆ ಬಚ್ಚಿಟ್ಟು
ಅವಳಿಗೆ ಮಗುವಿನ ಮುದ್ದಾದ ನಗುವೆ
ಮನಃಶಾಂತಿ ನೆಮ್ಮದಿಗೆ ಸೇತುವೆ

ಮಾನಪಮಾನ ಸಹಿಸಿ ದಹಿಸಿ
ಸೆರಗಿನಲಿ ಕಂಬನಿಯನ್ನು ಓರೆಸಿ
ಮಡಿಲಲಿ ಕಂದನ ಅಪ್ಪುವ ಮುನ್ನ
ಮಡಿಲಿನಾಸರೆ ಕೈ ಜಾರಿ ಹೋಯಿತು

ಹಸಿ ಹಸಿ ಕನಸ ಕಾಣುವುದರೊಳಗೆ
ಸೆರಗನ್ನು ಎಳೆದರು ಮೂಢರು
ತೊಟ್ಟಿಲು ಕಟ್ಟುವ ಮುನ್ನವೆ
ಕಟ್ಟಿದ ಹಗ್ಗವನ್ನು ತುಂಡರಿಸಿದರು

ಮೈ ತುಂಬ ಹೊದ್ದ ತಾಯ್ತಾನ
ನಗುವು ಚೆಲ್ಲಿದ ಆ ಕಂದನ
ನಗುವನ್ನು ಸಹಿಸದ ಇವರು
ನೂರಾರು ನೋವುಗಳ ಅದುಮಿದರು

ಸೆರಗ ಮೂಲೆಯಲಿ ಬಚ್ಚಿಟ್ಟರು
ಓರೆ ಕಣ್ಣ ದೃಷ್ಟಿ ಹಾಯಿಸಿದರು
ಬದುಕಿಗೆ ಭಾರವಾಗದ ಕಂದನ
ಮೊಗ್ಗಲ್ಲಿಯೆ ಚಿವುಟಿ ಎಸೆದರು

ಶ್ರಮದ ಬೆವರಿನ ಹನಿ
ಸೋತು ಸುರಿದಿದೆ ಕಂಬನಿ
ಚೀರುವ ಅಮ್ಮನ ಕರುಳ ಕೂಗು
ದೇವರಿಗೂ ಅರ್ಥವಾಗಿಲ್ಲವೆ ಇಂದಿಗೂ


Leave a Reply

Back To Top