‘ಅಸುರಕ್ಷಿತ ಬಾಲ್ಯ ಮತ್ತು ಮುಂದಿನ ಬದುಕಿನ ನಿರ್ವಹಣೆ’ ವಿಶೇಷ ಲೇಖನ ವೀಣಾ ಹೇಮಂತ್ ಗೌಡ ಪಾಟೀಲ್

ನಾನು ನನ್ನ ತಾಯಿಯನ್ನು ತುಂಬಾ ಪ್ರೀತಿಸುತ್ತೇನೆ. ಚಿಕ್ಕಂದಿನಿಂದಲೂ  ನನ್ನ ಬದುಕಿನ ಎಲ್ಲಾ ನಿರ್ಧಾರಗಳನ್ನು ನನ್ನ ತಾಯಿಯೇ ತೆಗೆದುಕೊಳ್ಳುತ್ತಿದ್ದಳು. ಇದೀಗ ನಾನು ಬೆಳೆದು ದೊಡ್ಡವನಾಗಿದ್ದರು ನನಗೆ ಯಾವುದೇ ಸ್ವಾತಂತ್ರ್ಯವಿಲ್ಲದಂತಾಗಿದೆ. ನನ್ನಮ್ಮನ ಈ ವಿಪರೀತ ನಡವಳಿಕೆಯಿಂದಾಗಿ ನನಗೆ ಸ್ವಂತ ಜೀವನವೇ ಇಲ್ಲ ಎನಿಸುವಂತಾಗಿದೆ.

 ನಾನು ಮತ್ತು ನನ್ನ ಗಂಡ ವಿಚ್ಛೇದನ ತೆಗೆದುಕೊಳ್ಳುತ್ತಿದ್ದೇವೆ… ಏಕೋ ಮದುವೆಗೆ ಮುಂಚೆ ಇದ್ದ ಆಸಕ್ತಿ, ಪ್ರೀತಿ, ಮಾರ್ದವತೆ ನಮ್ಮಿಬ್ಬರ ಸಂಬಂಧದಲ್ಲಿ ಉಳಿದಿಲ್ಲ.ನಮ್ಮಿಬ್ಬರ ನಡುವಿನ ಅಸಹನೆಯಿಂದಾಗಿ ನಾವಿಬ್ಬರೂ ಅಸಂತುಷ್ಟರಾಗಿದ್ದೇವೆ.

 ನಮ್ಮ ಮನೆಯಲ್ಲಿ ಎಲ್ಲರೂ ನನ್ನ ಅಪ್ಪ ಹಾಕಿದ ಗೆರೆಯನ್ನು ದಾಟುವಂತಿಲ್ಲ.ಮನೆಗೆ ಬೇಕಾಗುವ ತರಕಾರಿಯಿಂದ ಹಿಡಿದು ಟಿವಿ ತರುವವರೆಗೆ, ನಾನು ಧರಿಸುವ ಒಳ ಉಡುಪಿನಿಂದ ಹಿಡಿದು ನನ್ನಮ್ಮ ಧರಿಸುವ ಸೀರೆ ಕುಪ್ಪಸ ಎಲ್ಲವೂ ನನ್ನಪ್ಪನ ಆಯ್ಕೆಯೇ ಆಗಿರಬೇಕು…. ನನಗಂತೂ ಸಾಕಾಗಿ ಹೋಗಿದೆ.

 ಇಂತಹ ಮಾತುಗಳನ್ನು ನಾವು ಅಲ್ಲಲ್ಲಿ ಕೇಳಿಯೇ ಇರುತ್ತೇವೆ… ಇದಕ್ಕೆ ಕಾರಣ ಹೀಗೆ ಮಾತನಾಡುತ್ತಿರುವವರು ಅಸುರಕ್ಷಿತ  ಬಾಲ್ಯವನ್ನು ಅನುಭವಿಸಿದವರು.ಒಡೆದ,ಮುರಿದ ಮನಸ್ಸುಗಳ ಪಾಲಕರ ಮಕ್ಕಳು.ಅವರೊಳಗಿನ ಬಾಲ ಮನಸ್ಸು
 ಹೀಗೆ ಕಿರಿಕಿರಿ ಅನುಭವಿಸಲು ಕಾರಣ ಅವರು ಬಾಲ್ಯದಲ್ಲಿ ಅನುಭವಿಸಿದ ನೋವು, ನಿರಾಶೆ ಮತ್ತು ಸಂಕಟಗಳು. ತಮ್ಮ ಪಾಲಕರು ಮಾತನಾಡುವ ಮಾತುಗಳ ಶಿಕಾರಿಗಳು ಈ ಮಕ್ಕಳಾಗಿರುತ್ತಾರೆ.

 ಪತಿ-ಪತ್ನಿಯರಲ್ಲಿ ಪತ್ನಿ… ನಾನು ನಿನಗಾಗಿ, ಮಕ್ಕಳಿಗಾಗಿ, ಈ ಮನೆಗಾಗಿ ನನ್ನ ಜೀವವನ್ನೇ ತೇದಿರುವೆ,ಆದರೂ ನಾನು ನಿನಗೆ ಹೊರೆ ಎಂದು ನೀನು ಭಾವಿಸುತ್ತಿರುವೆ ಎಂದು ಹೇಳಿದಾಗ ಅದಕ್ಕೆ ಉತ್ತರವಾಗಿ ಪತಿ ನಾನೇನು ಕಡಿಮೆ ಮಾಡಿದ್ದೇನೆಯೇ? ಬೆಳಗಿನಿಂದ ಸಂಜೆಯವರೆಗೂ ಕತ್ತೆಚಾಕರಿ ಮಾಡಿ ದುಡಿದು ನಿಮಗೋಸ್ಕರ ತಂದು ಹಾಕಿಲ್ಲವೇ? ಸ್ವಲ್ಪವಾದರೂ ಕೃತಜ್ಞತೆ ನಿನಗೆ ಇದೆಯೇ? ಎಂದು ಮರು ಪ್ರಶ್ನಿಸುತ್ತಾನೆ.

 ಸಾಮಾನ್ಯವಾಗಿ ಎಲ್ಲರ ಮನೆಗಳಲ್ಲಿ ಕಂಡು ಬರುವ ದೃಶ್ಯದಂತೆ ತೋರಿದರೂ ಇದು ಸತಿಪತಿಗಳು ಅನುಭವಿಸುವ ಅವರಿಬ್ಬರ ನಡುವಿನ ಪರಸ್ಪರ ಅವಲಂಬನೆಯ ಆಘಾತ. ಜೊತೆಗಿದ್ದೂ ಕೂಡ ಮಾನಸಿಕವಾಗಿ ಉಳಿದುಹೋಗುವ ಅಂತರ.

  ಪಾಲಕರ ಕುರಿತು ನಾವಿಲ್ಲಿ ನಿರ್ಣಯಾತ್ಮಕವಾಗಿ ಮಾತನಾಡುವುದು ಬೇಡ, ಅವರವರು ಅನುಭವಿಸಿರುವ ನೋವು, ಸಂಕಟಗಳು ಅವರವರ ಸ್ವತ್ತುಗಳು ಮಾತ್ರ… ಅವುಗಳ ಫಲಿತಾಂಶದಿಂದ ನಾವು ಪಾಠ ಕಲಿತರೆ ಸಾಕು.

ಇನ್ನು ನಮ್ಮನ್ನು ನಾವು ಅಸಂತುಷ್ಟ ಮಕ್ಕಳು ಎಂದು ಕೂಡ ಹೇಳಿಕೊಳ್ಳಲು ಸಾಧ್ಯವಿಲ್ಲ ಏಕೆಂದರೆ ಚಿಕ್ಕಂದಿನಲ್ಲಿ ನಾವು ಅನುಭವಿಸಿರುವ ಕೆಲ ಭಯ, ನೋವು ಮತ್ತು ನಿರಾಶೆಗಳು ನಮ್ಮಲ್ಲಿ ಬದುಕಿನ ಕುರಿತು ಭ್ರಮನಿರಸನವನ್ನು ಉಂಟು ಮಾಡಿರಬಹುದು… ಮುಂದಿನ ಬದುಕು ಕೂಡ ಹೀಗೆಯೇ ಇರಬೇಕು ಎಂದಿಲ್ಲ, ನಮ್ಮ ಬದುಕಿನ ಹಣೆಬರಹವನ್ನು ಬದಲಿಸುವ ಹಕ್ಕು ಮತ್ತು ಸ್ವಾತಂತ್ರ್ಯ ನಮಗೆ ಇದ್ದೇ ಇದೆ.

 ಪಾಲಕತ್ವದ ಜವಾಬ್ದಾರಿಯಲ್ಲಿ ಮಕ್ಕಳ ಅರಿವಿಗೆ ಬಾರದಂತೆ ಪತಿ-ಪತ್ನಿಯರ ನಡುವೆ ಗುದ್ದಾಟ ಇರಬೇಕು. ಬಹಿರಂಗವಾಗಿ ಪ್ರೀತಿಸಲು ನಮ್ಮ ಸಭ್ಯತೆಯಲ್ಲಿ ಹೇಗೆ ಸಾಧ್ಯವಿಲ್ಲವೋ ಹಾಗೆಯೇ ಜಗಳಗಳು ಕೂಡ ಬಹಿರಂಗವಾಗಿ ನಡೆದರೆ ಸೂಕ್ಷ್ಮ ಮನಸ್ಸಿನ ಮಕ್ಕಳು ಇದರಿಂದ ನೊಂದುಕೊಳ್ಳಬಲ್ಲವು. ಇದು ಅವರ ಭವಿಷ್ಯದ ದಾಂಪತ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ.
 ಅದರ ಫಲವೇ ಲೇಖನದ ಮೊದಲ ಮಾತುಗಳು.

 ಇಂತಹ ಕಠಿಣ ಪಾಲಕರ ನಡುವೆ ಬೆಳೆದ ಮಕ್ಕಳಲ್ಲಿ ಹೊಂದಾಣಿಕೆಯ ಕೊರತೆ ಎದ್ದು ಕಾಣುತ್ತದೆ, ಜೊತೆಗೆ ಎಲ್ಲದಕ್ಕೂ ನಾನೇ ಏಕೆ ಸೋಲಬೇಕು? ಎಂಬ ಅಹಂಭಾವ ಕೂಡ.
 ಸಮಸ್ಯೆಗಳು ತಮ್ಮ ಕಬಂಧ ಬಾಹುಗಳಿಂದ ಅವರನ್ನು ಆವರಿಸಿಕೊಳ್ಳುವ ಮುನ್ನವೇ ಅಂಥವರು ತೆಗೆದುಕೊಳ್ಳುವ ಎಚ್ಚರಿಕೆಗಳು ಹೀಗಿವೆ  

 ನಿಮ್ಮ ಪಾಲಕರು ತಮ್ಮ ಸಮಸ್ಯೆಗಳನ್ನು ನೀವು ಬಗೆಹರಿಸಲಿ ಎಂದು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದರೆ ಅವರ ಸಮಸ್ಯೆ ಎಂದೂ ಪರಿಹಾರವಾಗುವುದಿಲ್ಲ… ಏಕೆಂದರೆ ಅವರಿಗೆ ಸಹಾಯ ಮಾಡುತ್ತಿರುವವರು ನೀವು. ಕಾರಣವಿಷ್ಟೇ ಅವರು ತಮ್ಮ ತೊಂದರೆಗಳನ್ನು ನಿಮ್ಮ ಮುಂದೆ ಹೇಳಿಕೊಳ್ಳಲು ಕಾರಣ ತಮ್ಮನ್ನು  ತಾವು ಸುರಕ್ಷಿತ ಎಂದು ಭಾವಿಸಲು ನೀವು ಕೂಡ ಅವರ ತೊಂದರೆಯ ಭಾಗವಾಗಲಿ ಎಂದು, ಜಗಳದಲ್ಲಿ ಅವರ ಪರ ನಿಲುವು ತೆಗೆದುಕೊಳ್ಳಲಿ ಎಂಬ ಆಶಯದಿಂದ ಮಾತ್ರ.

 ಇಂತಹ ಬಾಲ್ಯವನ್ನು ಹೊಂದಿದ ಮಕ್ಕಳು ತಮ್ಮ ಯೌವನದಲ್ಲಿ ವಿಫಲ ದಾಂಪತ್ಯ, ಜಗಳ, ಅಮ್ಮನ ಅಳು ಅಪ್ಪನ ದುಶ್ಚಟಗಳನ್ನು ಕಂಡಿದ್ದು ಎಷ್ಟೋ ಬಾರಿ ವಿವಾಹದ  ನೆರಳನ್ನು ಕಂಡು ಕೂಡ ಹೆದರುವಂತೆ ಆಗುತ್ತಾರೆ. ಏಕೆಂದರೆ ನಮ್ಮಲ್ಲಿ ಜಗಳಗಳನ್ನು ಬಹಿರಂಗವಾಗಿ ಮಾಡುವಂತೆ ಪತಿ ಪತ್ನಿಯರು ಪ್ರೀತಿಯನ್ನು ಬಿಡಿ,ಬಹಿರಂಗವಾಗಿ ಕ್ಷಮೆ ಕೇಳುವುದಕ್ಕೂ ಕೂಡ ಮುಜುಗರ ಪಡುತ್ತಾರೆ. ಇದರ ಪರಿಣಾಮವಾಗಿ ಮಕ್ಕಳಲ್ಲಿ ಕೇವಲ ತಮ್ಮ ಪಾಲಕರ ಜಗಳಗಂಟಿತನದ ತಾಪ ಕಾಣುತ್ತದೆಯೇ ಹೊರತು ಅದರ ಹಿಂದಿನ ಪ್ರೀತಿ ಪ್ರೇಮಗಳಲ್ಲ. ಇಂತಹವರು ಯೌವನಕ್ಕೆ ಬಂದಾಗ ತಮ್ಮ ಪಾಲಕರಿಗೆ ಬುದ್ಧಿ ಹೇಳಿ ತಿದ್ದುವುದು ಬೇಡ… ಬದಲಾಗಿ ತಮ್ಮ ಪಾಲಕರ ಬದುಕಿನಂತೆ ತಮ್ಮ ಬದುಕು ಆಗದಿರುವಂತೆ ಎಚ್ಚರ ವಹಿಸಿದರೆ ಸಾಕು.

 ಕಠಿಣ ಬಾಲ್ಯವನ್ನು ಹೊಂದಿದ ಮಕ್ಕಳು ತಮ್ಮಲ್ಲಿರುವ ಒಂದೊಂದೇ ಬಲಹೀನತೆಗಳನ್ನು ಗುರುತಿಸಿ ಬರೆದಿಟ್ಟುಕೊಳ್ಳಬೇಕು  ತಮ್ಮ ಬಲಹೀನತೆಗಳು ಯಾವ ಕ್ಷಣದಲ್ಲಿ ಹೆಚ್ಚು ವಿಜೃಂಭಿಸುತ್ತವೆ ಎಂಬುದನ್ನು ಕಂಡುಕೊಳ್ಳಬೇಕು.ನಿಧಾನವಾಗಿ ಆ ಬಲಹೀನತೆಗಳನ್ನು ಮೆಟ್ಟುವ,ದಮನಿಸುವ ಕ್ರಿಯೆಯಲ್ಲಿ ತೊಡಗಬೇಕು. ಒಂದು ಬಾರಿ ದಮನಿಸುವ ಕ್ರಿಯೆ ಪ್ರಾರಂಭವಾದರೆ ನೀವು ನಿಜವಾಗಿಯೂ ಮಾನಸಿಕವಾಗಿ ಬಲಿಷ್ಠರಾಗುತ್ತಾ ಹೋಗುತ್ತೀರಿ.. ಮತ್ತು ನಿಮಗೆ ನೀವೇ ಹೆಚ್ಚಿನ ಮಿತಿಗಳನ್ನು ಹಾಕಿಕೊಂಡು ಅವುಗಳನ್ನು ಸಾಧಿಸುತ್ತಾ ಹೋಗುವಿರಿ, ಒಂದೆರಡು ಬಾರಿ ನಿಮ್ಮ ಪ್ರಯತ್ನ ವಿಫಲವಾದರೂ ಖಿನ್ನತೆಗೆ ಒಳಗಾಗದೆ, ಬೇಸರಪಟ್ಟುಕೊಳ್ಳದೆ ಈಗಾಗಲೇ ಕಲಿತ ಪಾಠದ ಅನುಭವದ ಮೇಲೆ ನೀವು ಮತ್ತೆ ಪ್ರಯತ್ನವನ್ನು ಮುಂದುವರಿಸಿ ನಿಮ್ಮ ಕಾರ್ಯದಲ್ಲಿ ಸಫಲತೆಯನ್ನು ಪಡೆಯುವಿರಿ.

 ನಿಮ್ಮ ಬದುಕನ್ನು ನಿಮಗೆ ಬೇಕಾದಂತೆ ರೂಪಿಸಿಕೊಳ್ಳುವ ಎಲ್ಲಾ ಹಕ್ಕುಗಳು ಮತ್ತು ಸಾಮರ್ಥ್ಯ ನಿಮ್ಮಲ್ಲಿದೆ… ಅದರ ಸದುಪಯೋಗ ಮಾಡಿಕೊಳ್ಳುವ ಮೂಲಕ ನಿಮ್ಮೆಲ್ಲಾ ಬಲಹೀನತೆಗಳನ್ನು ಮೆಟ್ಟಿ ಸುಂದರ ನೆಮ್ಮದಿಯುತ ಜೀವನ ನಿಮ್ಮದಾಗಿಸಿಕೊಳ್ಳಿ.


Leave a Reply

Back To Top