ನಯನ. ಜಿ. ಎಸ್-ವಿಜಯಪ್ರಕಾಶ್ ಕಣಕ್ಕೂರು ಅವರ ಜುಗಲ್ ಬಂಧಿ ಗಝಲ್


ಎಡವಿದ ಹಾದಿಯಲಿ ಬಿರುಕುಗಳನು ಮೆಟ್ಟಿ ಮುಂದೆ ಸಾಗಬಹುದು ಸುಮ್ಮನಿರು
ಚಿತ್ತದೃಢತೆಯ ಕದಡಿದ ಚಾಂಚಲ್ಯಕೆ ಮೇರೆಯ ಕಟ್ಟಿ ಬದುಕಬಹುದು ಸುಮ್ಮನಿರು

ಮತಿ ಶೂನ್ಯರ ಕುಹಕ ನಗೆಗಳಲಿ ವಿಹರಿಸಿ ಭ್ರಮೆಗೆ ಒಳಗಾಗಿ ಅಳದಿರು ಜೋಕೆ
ಗಳಿಸಿದಷ್ಟೂ ಉಳಿಯುವ ಜ್ಞಾನ ಸಾಗರದೊಳು ಪ್ರವಹಿಸಬಹುದು ಸುಮ್ಮನಿರು

ನಿಶೆಯ ಭುಂಜಿಸಿದ ಆಗಸದಲಿ ಉಷೆಯ ಕಾಂತಿ ಮಿಂಚುವುದು ಜಗದ ನಿಯಮ
ಸಾಧನೆಯ ತಪಸ್ಸಿನಲಿ ಭರವಸೆಯ ಬೇರೊಂದು ಭದ್ರವಾಗಬಹುದು ಸುಮ್ಮನಿರು

ಸವೆದು ಹೋದ ಪಥಗಳ ನಿರಾಸೆಯಲಿ ಬದುಕಿನ ಚೇತನವ ನೀರಸಗೊಳಿಸದಿರು
ಸಂದಷ್ಟೂ ತೆರೆದುಕೊಳ್ಳುವ ಬಾಳ ರಹದಾರಿಗೆ ಸಾರಥಿಯಾಗಬಹುದು ಸುಮ್ಮನಿರು

ಮುಗ್ಗರಿಸಿ ಬಿದ್ದ ದಿನದ ನಡೆಗೆ ಕನಸುಗಳ ಸಾರವನು ಶುಷ್ಕಗೊಳಿಸುವುದು ತರವೇ
ಛಲವೆತ್ತ ನಯನಗಳಲಿ ವಿಜಯದ ನಗು ಮಿಂಚಿ ಮೆರೆಯಬಹುದು ಸುಮ್ಮನಿರು.

****


ಆಶಾವಾದವಿರಲು ಬಾಳಿನಲಿ ಅಡೆತಡೆಗಳನು ದಾಟಿ ಗಮ್ಯ ಸೇರಬಹುದು ಸುಮ್ಮನಿರು
ಕುಸಿದು ಕುಳಿತಿರದಿದ್ದರೆ ಆತ್ಮ ಸ್ಥೈರ್ಯದಿಂದಲಿ ಎದೆ ಸೆಟೆದು ನಿಲ್ಲಬಹುದು ಸುಮ್ಮನಿರು

ಸ್ತುತಿ ನಿಂದೆಗಳಿಗೆ ವಿಚಲಿತನಾಗಿ ಲಕ್ಷ್ಯವನ್ನು ಮರೆಯದಿರು ಸ್ತುತ್ಯನಾಗುವೆ ಕೊನೆಯಲಿ
ಹಿತ ಶತ್ರುಗಳ ಬಣ್ಣದ ಮಾತುಗಳನು ನೆಚ್ಚದಿರಲು ಜಗವನ್ನೇ ಗೆಲ್ಲಬಹುದು ಸುಮ್ಮನಿರು

ಇರಲಿ ಇಷ್ಟ ಕಷ್ಟಗಳಿಗೆ ಸಮಪಾಲು ಕಾರಣ ಇರುಳಿರದೆ ಅರಳುವ ಬೆಳಗಿಗಿಲ್ಲ ಸೊಗಸು
ಹಚ್ಚಿಟ್ಟ ಅರಿವಿನ ಹಣತೆ ಅಜ್ಞಾನವೆಂಬ ಅಂಧಕಾರವನ್ನು ಕರಗಿಸಬಹುದು ಸುಮ್ಮನಿರು

ನಿನ್ನೆಯ ನೋವುಗಳ ತಳಹದಿಯ ಮೇಲೆ ಕಂಗೊಳಿಸುತ್ತಿರಬೇಕು ಭವ್ಯವಾದ ನಾಳೆಗಳು
ಇಂದು ನಿನ್ನದಾಗಿರುವುದಕೆ ಸಂತೃಪ್ತನಾದರೆ ಆನಂದವ ಹೊಂದಬಹುದು ಸುಮ್ಮನಿರು

ಎದುರಿಸುತಿರು ಸವಾಲುಗಳನ್ನು ಅಧೀರನಾಗದೆ ಅಧಿಪತಿಯು ನೀನಾಗುವೆ ಅವುಗಳಿಗೆ
ನಯನಗಳ ತುಂಬಿಸಿದ ಅಭಿಭವದ ಕಿಚ್ಚು ವಿಜಯಕ್ಕೆ ಹೇತುವಾಗಬಹುದು ಸುಮ್ಮನಿರು.

Leave a Reply

Back To Top