ಮಗನನ್ನು ಎಷ್ಟು ನೋಡಿದರೂ ಕಲ್ಯಾಣಿಯವರಿಗೆ ಸಾಲದು. ಇಲ್ಲಿಂದ ಸಕಲೇಶಪುರಕ್ಕೆ ಹೋಗುವಾಗ ಪುಟ್ಟ ಹುಡುಗನಾಗಿದ್ದ ಮಗ ಈಗ ತನಗಿಂತಲೂ ಎತ್ತರಕ್ಕೆ ಬೆಳೆದು 

ಚಿಗುರು ಮೀಸೆಯ ತರುಣನಾಗಿದ್ದಾನೆ. ಇಷ್ಟು ದಿನವೂ ಪತಿ ಹಾಗೂ ಮಕ್ಕಳನ್ನು ನೋಡದೇ ತಾನು ಎಷ್ಟು ಚಿಂತಿಳಾಗಿದ್ದೆ ಎಂದು ಆ ಅಂಬಲಪ್ಪುಳ ಕ್ಷೇತ್ರದ ಶ್ರೀ ಕೃಷ್ಣನಿಗೆ ತಿಳಿದಿದೆ. ಕಡೆಗೂ ತನ್ನ ಮೊರೆ ಕೇಳಿದ ಎಂದು ಇಷ್ಟದೈವವನ್ನು ಮನಸಾರೆ ಸ್ಮರಿಸಿದರು. ಕೇರಳ ಬಿಟ್ಟು ಕರ್ನಾಟಕದ ಸಕಲೇಶಪುರಕ್ಕೆ ಹೋದ ನಂತರದ ಎಲ್ಲಾ ಬೆಳವಣಿಗೆಗಳನ್ನು ತಿಳಿಯಲು ಎಲ್ಲರೂ ಉತ್ಸುಕರಾಗಿದ್ದರು.

ಅಲ್ಲಿನ ವಿಷಯಗಳನ್ನು ತಿಳಿದ ಎಲ್ಲರೂ ಅಚ್ಚರಿಗೊಂಡರು. 

ಇಷ್ಟೆಲ್ಲಾ ಆದರೂ ನಾರಾಯಣನ್ ಇಲ್ಲಿಗೆ ಬಂದು ಯಾವ ವಿಷಯಗಳನ್ನೂ ತಿಳಿಸದೇ ಇದ್ದಿದ್ದು ಹಾಗೂ ಮಕ್ಕಳನ್ನೆಲ್ಲ ಇಂಥಹ ಕಷ್ಟಕ್ಕೆ ಒಡ್ಡಿದ್ದು ಅರಿತು ಕಲ್ಯಾಣಿಯ ಕುಟುಂಬದ ಪ್ರತಿಯೊಬ್ಬರೂ ಬಹಳ ನೊಂದುಕೊಂಡರು. ಹೆಣ್ಣುಮಕ್ಕಳ ಮದುವೆಯನ್ನು ಕೂಡಾ ಅವರ ಇಷ್ಟಕ್ಕೆ ವಿರುದ್ಧವಾಗಿ ನಡೆಸಿದ್ದು ಕಲ್ಯಾಣಿಯವರ  ಅಣ್ಣಂದಿರಿಗೆ ತೀರಾ ಹಿಡಿಸಲಿಲ್ಲ.  ಕಲ್ಯಾಣಿಯ ಅನುಪಸ್ಥಿತಿಯಲ್ಲಿ ಮಕ್ಕಳ ಮದುವೆ ಹೇಗೆ ಮಾಡಿದ ನಾರಾಯಣನ್? ಈ ರೀತಿಯ ಹಲವಾರು ಪ್ರಶ್ನೆಗಳನ್ನು ಎಲ್ಲರೂ ಕೇಳಿದರು. ಅಮ್ಮನ ಕುಟುಂಬದವರು ಕೇಳಿದ ಪ್ರಶ್ನೆಗಳಿಗೆಲ್ಲಾ ಆ ಮಗನಿಗೆ ಉತ್ತರಕೊಡುವುದು ಬಹಳ ಕಷ್ಟವಾಯಿತು. ಎಲ್ಲವನ್ನೂ ಮಗನಿಂದ ಕೇಳಿ ತಿಳಿದ ಕಲ್ಯಾಣಿಯವರು ಮಾತೇ ಆಡದೆ ತಲೆಮೇಲೆ ಕೈ ಹೊತ್ತು ಕುಳಿತುಬಿಟ್ಟರು. ಕಣ್ಣಿಂದ ತಡೆಯಿಲ್ಲದೇ ಧಾರಾಕಾರವಾಗಿ ಕಣ್ಣೀರ ಕೋಡಿ ಹರಿಯಿತು. ಎಲ್ಲರಿಗೂ ಈಗ ಅವರನ್ನು ಸಮಾಧಾನ ಪಡಿಸುವುದೇ ದೊಡ್ಡ ಕೆಲಸವಾಗಿ ಬಿಟ್ಟಿತು. ಅಯ್ಯೋ ದೇವರೇ ಎಂಥಹಾ ತಪ್ಪುಗಳೆಲ್ಲಾ ನಡೆದು ಹೋಯಿತು. ನಾನು ಹೀಗೆ ಇಲ್ಲಿ ಕೇರಳದಲ್ಲಿ ಉಳಿದದ್ದು ಎಷ್ಟು ದೊಡ್ಡ ಪ್ರಮಾದವಾಯಿತು. ಪತಿ ಹಾಗೂ ಮಕ್ಕಳು ತಾನಿಲ್ಲದೇ ಖಂಡಿತಾ ಹೋಗುವುದಿಲ್ಲ ಎಂಬ ಹುಚ್ಚು ಭ್ರಮೆಯಲ್ಲಿ ಇಲ್ಲಿಯೇ ಉಳಿದೆನಲ್ಲ ಎಂದು ಬಹಳ ದುಃಖಿತರಾದರು.

ಇಷ್ಟೆಲ್ಲಾ  ಪ್ರಮಾದಗಳು ಆದ ನಂತರ ಮಕ್ಕಳೆಲ್ಲರೂ ನನ್ನನ್ನು ಕ್ಷಮಿಸುವರೇ? ದೇವರೇ ಈ ಭೂಮಿಯೇ ಬಾಯ್ಬಿಟ್ಟು ನನ್ನನ್ನು ಏಕೆ ನುಂಗಲಿಲ್ಲ? ಎಂತಹಾ ಅನಾಹುತಗಳು ಘಟಿಸಿದವಲ್ಲ. ಆಸ್ತಿ ಹೋದರೆ ಹೋಗಲಿ ಮಕ್ಕಳನ್ನಾದರೂ ಇಲ್ಲಿಗೆ ಕರೆತಂದು ಬಿಡಬಹುದಿತ್ತಲ್ಲ. ನನ್ನ ಕುಟುಂಬದವರು ಊರಿನವರು ಎಷ್ಟೆಲ್ಲಾ ಹೇಳಿದರೂ ವಿನಾಶ ಕಾಲೇ ವಿಪರೀತ ಬುದ್ಧಿ ಎಂಬಂತೆ ಯಾರ ಮಾತೂ ಕೇಳದೇ ಹೋದರಲ್ಲ. ಪತಿಯ ಕೋಪ  ಹಾಗೂ ಹಠದ ಸ್ವಭಾವವನ್ನು ಚೆನ್ನಾಗಿ ಬಲ್ಲರು ಕಲ್ಯಾಣಿ. ಪತಿಯು ಎದುರಿಗೆ ಸೌಮ್ಯವಾಗಿ ಕಂಡರೂ ಕೂಡಾ ಅವರ ತೀರ್ಮಾನಕ್ಕೆ ವಿರೋಧವಾಗಿ ನಡೆದರೆ ಮತ್ತೆಂದೂ ಅವರನ್ನು ತಿರುಗಿಯೂ ನೋಡುತ್ತಿರಲಿಲ್ಲ. ಆಸ್ತಿ ಮಾರುವ ವಿಚಾರದಲ್ಲಿ ನಾನು ವಿರೋಧ ತೋರಿದ್ದನ್ನು ಸಹಿಸದೇ ನನ್ನ ಜೊತೆ ಕೂಡಾ ಸಂಬಂಧ ಕಡಿದುಕೊಂಡಂತೆ ಇದ್ದಾರಲ್ಲಾ. ನಮಗೆ ಅವರು ಇರುವ ಊರು ತಿಳಿದಿರಲಿಲ್ಲ. ಆದರೆ ಪತಿ ನನ್ನ ತವರುಮನೆಯ ದಾರಿಯನ್ನೂ ಮರೆತರಲ್ಲ.  ಕಲ್ಯಾಣಿಯ ಸ್ಥಿತಿ ಈಗ ಮೊದಲಿಗಿಂತಲೂ ಕಷ್ಟವಾಯಿತು. ಗರ ಬಡಿದವರಂತೆ ಕುಳಿತುಬಿಟ್ಟರು. ಮಗನ ತೊಡೆಯಮೇಲೆ ತಲೆ ಇಟ್ಟು ಮನಸೋ ಇಚ್ಚೆ ಅತ್ತರು.

ಕಲ್ಯಾಣಿಯ ತವರಿನವರು ಕಲ್ಯಾಣಿಯನ್ನು ಕುರಿತು….” ಘಟಿಸುವುದೆಲ್ಲಾ ಘಟಿಸಿಯಾಗಿದೆ. ನೀನು ಹೀಗೆ ಅಳುತ್ತಾ ಕುಳಿತರೆ ಈಗ ಏನೂ ಲಾಭವಿಲ್ಲ….ಈಗ ನಿನ್ನ ಕೊನೆಯ ಮಗನಾದರೂ ನಿನ್ನನ್ನು ಕರೆದುಕೊಂಡು ಹೋಗಲು ಬಂದಿರುವನಲ್ಲ….ಆದಷ್ಟು ಬೇಗ ಅವನೊಡನೆ ಸಕಲೇಶಪುರಕ್ಕೆ ಹೋಗು”….ಎಂದರು. ತವರಿನವರು ಹೇಳಿದರೂ ಹೇಳದಿದ್ದರೂ ಆದಷ್ಟು ಬೇಗ ಮಕ್ಕಳನ್ನು ಮತ್ತು ಪತಿಯನ್ನು  ನೋಡಬೇಕು ಎಂದು ಕಲ್ಯಾಣಿ ಎಂದೋ ನಿರ್ಧಾರ ಮಾಡಿದ್ದರು. 

ಸಕಲೇಶಪುರಕ್ಕೆ ಹೊರಡಲು ಬೇಕಾದ ಎಲ್ಲಾ ತಯಾರಿಯನ್ನೂ ತವರಿನವರು ಮಾಡಿದರು. ಕಲ್ಯಾಣಿಗೆ ಹಾಗೂ ಹೆಣ್ಣು ಮಕ್ಕಳಿಗೆ ಬೇಕಾದ ಒಡವೆಗಳನ್ನು ಕೊಟ್ಟರು. ಸಾಕಷ್ಟು ಹಣವನ್ನೂ ತವರಿನಿಂದ ಕೊಟ್ಟರು. ಅಮ್ಮನನ್ನು ತಂಗಿಯನ್ನು ಕರೆದುಕೊಂಡು ಮಗನು ಕರ್ನಾಟಕಕ್ಕೆ ಹೊರಟನು. ಬಸ್ ನಿಲ್ದಾಣದವರೆಗೂ ಎಲ್ಲರೂ ಹೋಗಿ ಮೂವರನ್ನು ಬೀಳ್ಕೊಟ್ಟರು. ಪ್ರಯಾಣದಲ್ಲಿ ಕಿಟಕಿಯ ಆಚೆಯ ರಮಣೀಯ ದೃಶ್ಯಗಳು ಯಾವುವೂ ಕಲ್ಯಾಣಿಯ ಗಮನವನ್ನು ಸೆಳೆಯಲಿಲ್ಲ. ಮನದಲ್ಲಿ ಪೂರಾ ಪತಿ ಹಾಗೂ ಮಕ್ಕಳನ್ನು ನೋಡುವ ಆಸೆಯೇ ತುಂಬಿತ್ತು. ಮಗ ಹೇಳಿದ ವಿಚಾರಗಳು ಕೂಡಾ ಅವರನ್ನು ಬಹಳ ಚಿಂತೆಗೀಡು ಮಾಡಿತ್ತು. ಅಲ್ಲಲ್ಲಿ ಇಳಿದು ಬಸ್ಸು ಬದಲಿಸಿ ಮೂರು ದಿನಗಳ ನಂತರ ಅಮ್ಮ ಮಕ್ಕಳು ಸಕಲೇಶಪುರದ ಪುಟ್ಟ ಮನೆಯನ್ನು ತಲುಪಿದರು. ನಾರಾಯಣನ್ ಬಂದು ಬಾಗಿಲು ತೆರೆದರು. ಮಗನ ಜೊತೆ ಪತ್ನಿ ಹಾಗೂ ಒಬ್ಬ ಮುದ್ದಾದ ಹದಿ ಹರೆಯದ ಪುಟ್ಟ ಹುಡುಗಿಯನ್ನು ಕಂಡರು. ಏನೂ ಮಾತನಾಡದೇ ಒಳಗೆ ನಡೆದರು. ಪತಿಯು ತನ್ನನ್ನು ಕಂಡರೂ ಒಳಗೆ ಬಾ ಎಂದು ಕರೆಯದೇ ಹಾಗೇ ಹೋಗಿದ್ದು ಕಲ್ಯಾಣಿಯ ಮನಸ್ಸಿಗೆ ಬಹಳ ಆಘಾತವನ್ನು ಉಂಟು ಮಾಡಿತು. ತನ್ನ ಜೊತೆ ಮಗಳನ್ನು ಕಂಡರೂ ಏಕೆ ಯಾರು ಎಂದು ಕೇಳಲಿಲ್ಲವಲ್ಲ? ಅಪ್ಪನ ಗುಣವನ್ನು ಅರಿತಿದ್ದ ಮಗ ಅಮ್ಮನನ್ನು ಮತ್ತು ತಂಗಿಯನ್ನು ಮನೆಯ ಒಳಗೆ ಕರೆದುಕೊಂಡು ಬಂದ. ಒಳಗೆ ಹೋದ ನಾರಾಯಣನ್ ಬಟ್ಟೆ ಬದಲಿಸಿ ಯಾರಿಗೂ ಏನೂ ಹೇಳದೇ ಹೊರನಡೆದರು. ಪತಿಯ ಈ ಹೊಸ ರೀತಿಯನ್ನು ಕಂಡು ಕಲ್ಯಾಣಿ ಅವಕ್ಕಾದರು. ತನ್ನನ್ನು ಮಗಳನ್ನು ಕಂಡೂ ಒಂದು ಮಾತು ಸಹಾ ಆಡದೇ ಹೀಗೆ ಹೊರಗೆ ಹೋದರಲ್ಲ ಇವರು!!

ಜೊತೆಗೆ ಬಂದ ಆ ಹೆಣ್ಣುಮಗು ಏನೂ ಅರ್ಥ ಆಗದೇ ಸುಮ್ಮನೇ ಪಿಳಿಪಿಳಿ ನೋಡುತ್ತಾ ನಿಂತುಬಿಟ್ಟಿತು. ಅಣ್ಣ ಮೊದಲೇ ಇಲ್ಲಿನ ವಿಷಯಗಳನ್ನು ಸೂಕ್ಷ್ಮವಾಗಿ ಹೇಳಿದ್ದರೂ ಕೂಡಾ ಆ ಪುಟ್ಟ ಹುಡುಗಿಯ ಮನಸ್ಸು ಬಹಳ ನೊಂದಿತು.

ಪ್ರಯಾಣದ ಆಯಾಸ ಇದ್ದರೂ ಕೂಡಾ ಕಲ್ಯಾಣಿಯು ಲಗುಬಗೆಯಿಂದ ಅಡುಗೆ ಮಾಡಿದರು. ಪತಿಗೆ ಪ್ರಿಯವಾದ ರುಚಿಕರವಾದ ಅಡುಗೆಯನ್ನೇ ಮಾಡಿದ್ದರು. ಎಷ್ಟು ಹೊತ್ತಾದರೂ ಪತಿ ಬಾರದಿದ್ದನ್ನು ಕಂಡು ಮಕ್ಕಳಿಗೆ ಊಟ ಬಡಿಸಿ ಕಲ್ಯಾಣಿ ಊಟ ಮಾಡದೇ ಪತಿಗಾಗಿ ಕಾಯುತ್ತಿದ್ದರು. ಮನೆಯಿಂದ ಸಕಲೇಶಪುರ ಪಟ್ಟಣಕ್ಕೆ ಬಂದ ನಾರಾಯಣನ್ ಗೆ ಮನೆಗೆ ಹೋಗುವ ಮನಸ್ಸೇ ಆಗಲಿಲ್ಲ. ಪತ್ನಿಯನ್ನು ಕರೆದುಕೊಂಡು ಬರಲು ಕೊನೆಯ ಮಗ ಹೋದದ್ದು ಅವರಿಗೆ ತಿಳಿದೇ ಇರಲಿಲ್ಲ. ಮಗ ಎಲ್ಲಿಯೋ ಹೊರಗೆ ಕೆಲಸಕ್ಕೆ ಹೋಗಿರಬಹುದು ಎಂದು ತಿಳಿದಿದ್ದರು. ಮಗ ಹೀಗೆ ಪತ್ನಿಯನ್ನು ಕರೆದುಕೊಂಡು ಬಂದಿರುವುದು ಅವರಿಗೆ ಸಹ್ಯವಾಗಲಿಲ್ಲ. ಜೊತೆಗೆ ಒಂದು ಪುಟ್ಟ ಹುಡುಗಿ ಕೂಡಾ ಇರುವಳು. ಆಕೆ ಯಾರೆಂದು ತಾನು ಗಮನಿಸಲೂ ಇಲ್ಲವಲ್ಲ. ಯಾರಿರಬಹುದು ಆಕೆ? ತೋಟ ಕೊಂಡುಕೊಳ್ಳಲು ಬಂದ ತಾನು ಈ ಪರಿಸ್ಥಿತಿಗೆ ಬಂದಿದ್ದು ಹಾಗೂ ಹೆಣ್ಣು ಮಕ್ಕಳ ಮದುವೆಯನ್ನು ಕೂಡಾ ಪತ್ನಿಯ ಅರಿವಿಗೆ ಬಾರದಂತೆ ಮಾಡಿದ್ದು ಎಲ್ಲವೂ ನೆನೆದು ತಪ್ಪಿತಸ್ಥ ಭಾವ ಮೂಡಿತ್ತು. ಇದೆಲ್ಲಕ್ಕಿಂತ ಹೆಚ್ಚಾಗಿ ತಾನು ಕರೆದಾಗ ಪತ್ನಿಯು ತನ್ನ ಜೊತೆಗೆ ಬಾರದೇ ಇದ್ದಿದ್ದು, ಇವೆಲ್ಲಾ ಚಿಂತಿಸಿ ಮನೆಗೆ ಹೋಗಲು ನಾರಾಯಣನ್ ಗೆ  ಮನಸ್ಸೇ ಬರಲಿಲ್ಲ.

ಗೆಳೆಯನೊಬ್ಬನ ದಿನಸಿ ಅಂಗಡಿಯಲ್ಲಿ ಸುಮಾರು ಹೊತ್ತು ಕಳೆದರು. ಪತ್ನಿಯನ್ನು ನೋಡುವುದಿರಲಿ ಮಾತನಾಡಿಸುವುದು ಹೇಗೆ ಎಂದು ಕೂಡಾ ಅವರಿಗೆ ಹೊಳೆಯಲಿಲ್ಲ. ಇಡೀ ದಿನ ಚಿಂತಿಸುತ್ತಾ ಕಳೆದರು. ರಾತ್ರಿಯಾಯ್ತು ಮನೆಗೆ ಹೋಗುವ ಮನಸ್ಸಾಗಲಿಲ್ಲ. ಅಂದು ಗೆಳೆಯನ ಮನೆಯಲ್ಲಿಯೇ ಉಳಿದರು. ಕಲ್ಯಾಣಿ ಪತಿಯ ಬರವನ್ನೇ ಇದಿರು ನೋಡುತ್ತಾ ಹಸಿವಾದರೂ ಊಟ ಮಾಡದೇ ಯೋಚಿಸುತ್ತಾ ಕುಳಿತೇ ಇದ್ದರು. ಎಷ್ಟೇ ಪ್ರಯತ್ನ ಪಟ್ಟರೂ ತಮ್ಮ ಕುಟುಂಬದ ಇಂದಿನ ಪರಿಸ್ಥಿತಿಗೆ ಮನಸ್ಸನ್ನು ಒಗ್ಗಿಸಿಕೊಳ್ಳಲು ಅವರಿಗೆ ಆಗಲಿಲ್ಲ.


Leave a Reply

Back To Top