ಧಾರಾವಾಹಿ-42
ಒಬ್ಬ ಅಮ್ಮನ ಕಥೆ
ರುಕ್ಮಿಣಿ ನಾಯರ್
ಕಲ್ಯಾಣಿಯವರ ಚಿಕ್ಕ ಅತ್ತಿಗೆ ಮುಖ್ಯದ್ವಾರ ಯಾರೋ ತಟ್ಟುತ್ತಾ ಇರುವರಲ್ಲವೇ ಯಾರಿರಬಹುದು? ಎಂದು ಯೋಚಿಸುತ್ತಲೇ ಬಾಗಿಲು ತೆಗೆದರು. ಎದುರಿಗೆ ಕಂಡ ಚಿಗುರು ಮೀಸೆಯ ಹುಡುಗನನ್ನು ಮೇಲಿಂದ ಕೆಳಗೆ ನೋಡಿದರು. ಈತನನ್ನು ಮೊದಲು ಇಲ್ಲೆಲ್ಲೂ ಕಂಡ ಹಾಗೆ ಅನಿಸಲಿಲ್ಲ. ಆದರೆ ಮುಖವನ್ನು ಗಮನವಿಟ್ಟು ನೋಡಿದರು
ಸುಂದರವಾದ ಗಂಭೀರ ಮುಖ, ಸ್ವಲ್ಪ ಗುಂಗುರು ಎನಿಸುವ ಕೂದಲು,ಅಗಲವಾದ ಹಣೆ, ನೀಳ ನಾಸಿಕ, ಒತ್ತಾದ ಹುಬ್ಬುಗಳು, ಕಣ್ಣುಗಳನ್ನು ಗಮನಿಸಿದ ಅವರು ಎವೆ ಇಕ್ಕದೇ ನೋಡುತ್ತಲೇ ನಿಂತರು. ಎಲ್ಲೋ ನೋಡಿದ ಕಣ್ಣುಗಳು ಎನಿಸಿತು. ಎಲ್ಲಿ ಎಂದು ಯೋಚಿಸುತ್ತಾ ಇರುವಾಗಲೇ ಅವರ ಕಣ್ಣ ಮುಂದೆ ಮುಖದ ಚಿತ್ರಣವೊಂದು ಮೂಡಿ ಮರೆಯಾಯಿತು. ಕಣ್ಣ ಮುಂದೆ ಮೂಡಿದ ಮುಖದ ಚಹರೆಯನ್ನು ಆ ಹುಡುಗನ ಮುಖದಲ್ಲಿ ಕಂಡು ಅವರಿಗೆ ಅತೀವ ಸಂತೋಷವಾಯಿತು. ಆದರೂ ಅದನ್ನು ತೋರಿಸಿಕೊಳ್ಳದೇ… ಯಾರಪ್ಪಾ ನೀನು ಏನು ಬೇಕಿತ್ತು? ಯಾರನ್ನು ನೋಡಲು ಬಂದಿರುವೆ? ನೀನು ಎಲ್ಲಿಂದ ಬಂದಿರುವೆ?…ಎಂದು ಪ್ರಶ್ನೆಗಳ ಮೇಲೆ ಪ್ರಶ್ನೆಯನ್ನು ಕೇಳಿದರು. ಆ ಹುಡುಗನಿಗೆ ತನ್ನನ್ನು ಈ ರೀತಿ ಪ್ರಶ್ನೆ ಮಾಡುತ್ತಾ ಇರುವವರು ಯಾರೆಂದು ಅವರು ಕದ ತೆರೆದ ಒಡನೇ ತಿಳಿದಿತ್ತು ಆದರೂ ಅವರೇ ತನ್ನನ್ನು ಗುರುತು ಹಿಡಿಯಲಿ ಎಂದೇ ನಗು ಬಂದರೂ ಕೂಡಾ ಮೀಸೆಯಡಿಯಲ್ಲಿ ಸಣ್ಣಗೆ ನಕ್ಕು ಗಂಭೀರ ವದನದಲ್ಲಿಯೇ ಅವರನ್ನು ನೋಡುತ್ತಾ ನಿಂತ. ಅವರು ಮತ್ತೂ ಪ್ರಶ್ನಾರ್ಥಕ ವಾಗಿ ನೋಡಿದ್ದನ್ನು ಕಂಡು ಇನ್ನೂ ಅತ್ತೆಯನ್ನು ಹೀಗೆ ಪರೀಕ್ಷಿಸುವುದು ಸರಿಯಲ್ಲ ಎಂದುಕೊಂಡು… ಅತ್ತೆ ಇದು ನಾನು.. ಕಲ್ಯಾಣಿಯವರ ಕಿರಿಯ ಮಗ ಎಂದು ಹೇಳುತ್ತಾ ಅತ್ತೆಯ ಪಾದವನ್ನು ಮುಟ್ಟಿ ನಮಸ್ಕರಿಸಿದನು. ತನ್ನ ಊಹೆ ಸರಿಯಾಗಿದ್ದನ್ನು ಅರಿತ ಅವರಿಗೆ ಕಣ್ಣು ತುಂಬಿ ಬಂತು…
“ಅಯ್ಯೋ ಮಗುವೇ ನೀನಾ ಇದು!! ನಿನ್ನ ಕಣ್ಣುಗಳನ್ನು ಕಂಡಾಗ ನನಗೆ ಹಾಗೆ ಅನಿಸಿತ್ತು… ಆದರೂ ನೀನು ಯಾರು ಎಂದು ತಿಳಿಯುವ ಕುತೂಹಲವಿತ್ತು…ಹಾಗಾಗಿ ನಿನ್ನನ್ನು ಯಾರೆಂದು ಕೇಳಬೇಕಾಗಿ ಬಂತು ಕಂದಾ”.. ಎಂದು ಹೇಳುತ್ತಾ ಆತನ ಕೆನ್ನೆ ಸವರಿ ಹೆಗಲು ತಟ್ಟಿ ಕೈ ಹಿಡಿದುಕೊಂಡು… “ನಮ್ಮ ಕುಟುಂಬದ ಕುಡಿಯಾದ ನಿನಗೆ ಒಳಗೆ ಬರಲು ನನ್ನ ಅಪ್ಪಣೆಯ ಅಗತ್ಯ ಇದೆಯೇ”… ಎಂದು ಹೇಳುತ್ತಾ ನಸು ನಗುವಿನೊಂದಿಗೆ ಒಳಗೆ ನಡೆದರು. ಹೊರಗೆ ಏನೋ ಅಸ್ಪಷ್ಟ ಸಂಭಾಷಣೆ ನಡೆಯುತ್ತಿರುವುದನ್ನು ಕೇಳಿ ದೊಡ್ಡ ಅತ್ತಿಗೆ ಹೊರಗೆ ಬಂದರು. ತನ್ನ ಓರಗಿತ್ತಿಯು ಒಬ್ಬ ಸುಂದರ ತರುಣನ ಕೈ ಹಿಡಿದು ನಸುನಗುತ್ತಾ ಆತನೊಂದಿಗೆ ಮಾತನಾಡುತ್ತಾ ಒಳಗೆ ಬರುತ್ತಿರುವುದನ್ನು ಕಂಡು ಆಶ್ಚರ್ಯದಿಂದ ಪ್ರಶ್ನಾರ್ಥಕವಾಗಿ ನೋಡುತ್ತಾ ನಿಂತರು. ತಮ್ಮ ಹತ್ತಿರ ಬಂದಾಗ “ಯಾರು ಈತ ಎಂದು ಪ್ರಶ್ನಿಸಿದರು. ಅವರ ಪ್ರಶ್ನೆಗೆ ಉತ್ತರವಾಗಿ ನಗುತ್ತಾ….”ಈತನನ್ನು ಸರಿಯಾಗಿ ಗಮನಿಸಿ ಆಗ ತಿಳಿಯುತ್ತದೆ”… ಎಂದು ತುಂಟ ನನಗೆ ನಗುತ್ತಾ ಅಲ್ಲಿಯೇ ನಿಂತರು. ಅವರೂ ಕೂಡಾ ಸರಿಯಾಗಿ ಆತನನ್ನು ಗಮನಿಸಿ ಆತ ಯಾರೆಂದು ತಿಳಿದ ಕೂಡಲೇ ಅವರ ಕಣ್ಣುಗಳೂ ಸಂತೋಷದಿಂದ ಅರಳಿದವು.
ಹುಡುಕುತ್ತಿದ್ದ ಔಷಧದ ಬಳ್ಳಿ ಕಾಲಿಗೆ ಬಂದು ತಡಕಿದಂತೆ ಆಯ್ತು ಅಲ್ಲವೇ ಎಂದು ಮನಸ್ಸಲ್ಲಿ ಅಂದುಕೊಳ್ಳುತ್ತಾ… “ಕಲ್ಯಾಣಿ ಇಲ್ಲಿ ಹೊರಗೆ ಬಾ …ಯಾರು ಬಂದಿದ್ದಾರೆ ನೋಡು… ಬೇಗ ಬಾ…ಎಂದು ಹಜಾರದಿಂದಲೇ ಕೂಗು ಹಾಕಿದರು. ಒಳಗೆ ಗಂಡ ಮಕ್ಕಳ ಯೋಚನೆಯಲ್ಲಿ ಮಗ್ನಳಾಗಿದ್ದ ಕಲ್ಯಾಣಿಗೆ ಏಕೆ ಅತ್ತಿಗೆ ಹೀಗೆ ಕೂಗಿಕೊಳ್ಳುತ್ತಾ ಇರುವರು? ಓ ಇವರು ನಮ್ಮನ್ನು ಕರೆದುಕೊಂಡು ಹೋಗಲು ಬಂದಿರುವರೇನೋ ಎಂದು ಕಾತುರದಿಂದ ಓಡು ನಡುಗೆಯಲ್ಲಿ ಹಜಾರಕ್ಕೆ ಬಂದರು.
ಚಿಕ್ಕ ಅತ್ತಿಗೆಯು ಓರ್ವ ತರುಣನ ಕೈ ಹಿಡಿದು ನಗುತ್ತಾ ನಿಂತಿರುವುದನ್ನು ಕಂಡು ಹತ್ತಿರ ಬಂದು ಆತನನ್ನು ದಿಟ್ಟಿಸಿ ನೋಡಿದರು. ಕೂಡಲೇ ಅವರ ಕಣ್ಣುಗಳಿಂದ ಆನಂದ ಭಾಷ್ಪ ಹರಿಯಿತು. ತನ್ನ ಚಿಕ್ಕ ಮಗನನ್ನು ಆಕೆ ತಕ್ಷಣವೇ ಗುರುತು ಹಿಡಿದರು. ತನ್ನ ಪತಿಯ ತದ್ರೂಪವನ್ನು ಕಂಡು ಆವಕ್ಕಾದರು. ತಮ್ಮ ತರವಾಡನ್ನು ಮಾರಿ ಕರ್ನಾಟಕಕ್ಕೆ ಹೋಗುವಾಗ ಕಡೆಯದಾಗಿ ನೋಡಿದ್ದ ಪುಟ್ಟ ಮಗುವು ಇಂದು ತನಗಿಂತ ಎತ್ತರಕ್ಕೆ ಬೆಳೆದು ಯುವಕನಾಗಿ ಪತಿಯ ರೂಪವನ್ನೇ ಹೋಲುತ್ತಿವುದನ್ನು ಕಂಡು ಹಿರಿಹಿರಿ ಹಿಗ್ಗಿದರು. ಕೂಡಲೇ ಮಗನನ್ನು ಅಪ್ಪಿಕೊಂಡರು. ಅಮ್ಮನನ್ನು ಕಂಡಿದ್ದೇ ಗಂಭೀರ ವದನ ಹೊತ್ತು ಇಷ್ಟು ಹೊತ್ತೂ ನಿಂತಿದ್ದ ಮಗನಿಗೆ ಇನ್ನು ತಡೆಯಲು ಆಗಲಿಲ್ಲ…”ಅಮ್ಮಾ”… ಎನ್ನುತ್ತಾ ಅಮ್ಮನ ತೋಳನ್ನು ಬಿಗಿಯಾಗಿ ಹಿಡಿಕೊಂಡ. ಅಮ್ಮ ಮಗನ ಈ ಪುನರ್ಮಿಲನ ಕಂಡು ಕಲ್ಯಾಣಿಯವರ ಅತ್ತಿಗೆಯರ ಕಣ್ಣಲ್ಲೂ ಆನಂದಭಾಷ್ಪ ತುಂಬಿತು. ಅಷ್ಟು ಹೊತ್ತಿಗೆ ಕಲ್ಯಾಣಿಯ ಪುಟ್ಟ ಮಗಳೂ ಹೊರಗೆ ಬಂದಳು.
ಅಮ್ಮ ಯಾರೋ ತರುಣನನ್ನು ಅಪ್ಪಿ ಅಳುತ್ತಿರುವುದನ್ನು ಕಂಡು ಅತ್ತೆಯರ ಮುಖವನ್ನು ಆತಂಕದಿಂದ ನೋಡಿದಳು.
ಅತ್ತೆಯರು “ಬಾಮ್ಮಾ ಇಲ್ಲಿ” ಎಂದು ಹತ್ತಿರ ಕರೆದರು.
ಓಡಿ ಹೋಗಿ ಅತ್ತೆಯನ್ನು ಅಪ್ಪಿಕೊಂಡಳು. ಕತ್ತು ಮೇಲೆತ್ತಿ ಅತ್ತೆಯನ್ನು ನೋಡಿದಳು. ಅತ್ತೆ ಅವಳ ತಲೆಯನ್ನು ನೇವರಿಸುತ್ತಾ…”ಇವನು ನಿನ್ನ ಚಿಕ್ಕ ಅಣ್ಣ”…ಎಂದು ಹೇಳಿ ಅವಳ ಆತಂಕವನ್ನು ದೂರ ಮಾಡಿದರು. ಚಿಕ್ಕ ಅಣ್ಣ ಎಂದು ಕೇಳಿದ ಒಡನೆ ಆ ಮುದ್ದು ಪೋರಿಯ ಕಣ್ಣು ಅರಳಿತು. ಈಗ ಅವಳು ಅತ್ತೆಯನ್ನು ಬಿಟ್ಟು ನೇರವಾಗಿ ಅಮ್ಮನ ಬಳಿಗೆ ಓಡಿದಳು. ಅಮ್ಮನ ಸೆರಗನ್ನು ಭದ್ರವಾಗಿ ಹಿಡಿದು ನಿಂತಳು. ಮಗಳು ಬಂದಿದ್ದನ್ನು ಅರಿತ ಕಲ್ಯಾಣಿ ಅಪ್ಪುಗೆಯನ್ನು ಸಡಿಲಗೊಳಿಸಿ ಮಗನನ್ನು ಉದ್ದೇಶಿಸಿ…” ಇವಳು ನಿನ್ನ ಪುಟ್ಟ ತಂಗಿ”… ಎಂದು ಹೇಳಿದರು. ಆ ಮಾತನ್ನು ಕೇಳಿದ ಆತ ಬೆರಗು ಗಣ್ಣಿನಿಂದ ಆ ಪುಟ್ಟ ಹುಡುಗಿಯನ್ನು ನೋಡಿದ
ಅಪ್ಪ ಅಮ್ಮ ಇಬ್ಬರ ರೂಪವನ್ನೂ ಸಮವಾಗಿ ಹಂಚಿಕೊಂಡಿದ್ದಳು ತನ್ನ ಪುಟ್ಟ ತಂಗಿ.
ಆ ಪುಟ್ಟ ಹುಡುಗಿ ತನ್ನ ತಂಗಿ ಎಂದು ತಿಳಿದ ಕೂಡಲೇ ಅವನ ಸಂತೋಷ ಎಲ್ಲೆ ಮೀರಿತ್ತು. ಅಮ್ಮನ ತೋಳನ್ನು ಬಿಟ್ಟು ಆ ಪುಟ್ಟ ಹುಡುಗಿಯನ್ನು ಪ್ರೀತಿಯಿಂದ ಎತ್ತಿಕೊಂಡ.
ಅಣ್ಣನ ತೋಳನೇರಿದ ಆ ಪುಟ್ಟ ಹುಡುಗಿ ಅಣ್ಣನನ್ನು ಹೆಮ್ಮೆಯಿಂದ ನೋಡಿದಳು. ಅವಳಿಗೆ ಬಹಳ ಸಂತೋಷವಾಯಿತು. ಎಲ್ಲರೂ ಒಟ್ಟಾಗಿ ಮನೆಯ ಒಳಗೆ ಕೋಣೆಯಲ್ಲಿ ಕುಳಿತು ಮಾತನಾಡುತ್ತಾ ಇದ್ದ ಅಜ್ಜ ಅಜ್ಜಿಯ
ಬಳಿಗೆ ಹೋದರು. ಎಲ್ಲರೂ ಒಳಗೆ ಬಂದಾಗ ಮೊಮ್ಮಗಳನ್ನು ಎತ್ತಿಕೊಂಡು ನಿಂತಿದ್ದ ತರುಣನನ್ನು ನೋಡಿ ನಾರಾಯಣನ್ ಹಾಗೆ ಕಂಡಿತಾದರೂ ಯಾರೆಂದು ಅಚ್ಚರಿಯಿಂದ ಕೇಳಿದರು. ದೊಡ್ಡ ಅತ್ತಿಗೆ ಎಲ್ಲವನ್ನೂ ವಿವರವಾಗಿ ಹೇಳಿದರು. ತಮ್ಮ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡೆದುಕೊಂಡ ಮೊಮ್ಮಗನನ್ನು ಅಜ್ಜ ಅಜ್ಜಿ ಹರಸಿ ಸಂತೋಷದಿಂದ “ಕಡೆಗೂ ನಮ್ಮನ್ನೆಲ್ಲಾ ನೋಡಲು ಈಗಲಾದರೂ ಬಂದೆಯಲ್ಲ”. ಎಷ್ಟು ದೊಡ್ಡವನಾಗಿದ್ದೀಯ ಅಳಿಯ ನಾರಾಯಣನ ಹಾಗೇ ಕಾಣುತ್ತಿರುವೆ ಎಂದರು… ನಾರಾಯಣನ್ ಎಲ್ಲಿ? ನಿನ್ನ ಅಣ್ಣ ಅಕ್ಕಂದಿರು ಎಲ್ಲಿ? ಎಂದಾಗ ಆ ತರುಣ ಈಗ ನಾನೊಬ್ಬನೇ ಇಲ್ಲಿಗೆ ಬಂದಿರುವೆ ಎಂದನು. ಬೇರೆಲ್ಲ ವಿಶೇಷಗಳನ್ನು ನಂತರ ನಿಧಾನವಾಗಿ ಕೇಳಿದರೆ ಆಯ್ತು ಎಂದುಕೊಂಡು ಅವನು ಬಂದ ಸಂಭ್ರಮಕ್ಕೆ ವಿಶೇಷ ಅಡುಗೆ ತಯಾರಿ ಮಾಡಲೆಂದು ಅತ್ತಿಗೆಯರು ಇಬ್ಬರೂ ಒಳಗೆ ನಡೆದರು. ಅಜ್ಜ ಅಜ್ಜಿ ಮೊಮ್ಮಗನನ್ನು ತಮ್ಮ ಪಕ್ಕದಲ್ಲಿ ಕುಳ್ಳಿರಿಸಿ ತಲೆ ನೇವರಿಸಿದರು. ಕಲ್ಯಾಣಿಯೂ ಅತ್ತಿಗೆಯರನ್ನು ಹಿಂಬಾಲಿಸಿ ಅಡುಗೆ ಮನೆಗೆ ಹೋಗಿ ಮಗನಿಗೆ ಕುಡಿಯಲು ಹಾಲು ಕಾಯಿಸಲು ಒಲೆಯ ಮೇಲೆ ಇಟ್ಟರು. ಅಷ್ಟು ದೂರದಿಂದ ಮಗ ಬಂದಿದ್ದಾನೆ ಬಳಲಿರಬಹುದು ನಾನು ಅದನ್ನು ಗಮನಿಸದೇ ಅವನನ್ನು ಕಂಡ ಸಂಭ್ರಮಕ್ಕೆ ಅವನನ್ನು ಅಪ್ಪಿಕೊಂಡು ಅತ್ತೆನಲ್ಲ ಛೇ ಎಂದುಕೊಳ್ಳುತ್ತಾ ದೊಡ್ಡ ಗಾಜಿನ ಲೋಟದ ತುಂಬಾ ಹಾಲನ್ನು ತೆಗೆದುಕೊಂಡು ತಿನ್ನಲು ಪಲಹಾರವನ್ನೂ ಒಂದು ಪಿಂಗಾಣಿ ತಟ್ಟೆಯಲ್ಲಿ ಹಾಕಿ ಅಜ್ಜ ಅಜ್ಜಿಯ ಜೊತೆಗೆ ಕುಳಿತು ಹರಟುತ್ತಿದ್ದ ಮಗನೆಡೆಗೆ ನಡೆದರು.