ಭಾವಯಾನಿ ಅವರ ಕವಿತೆ-ಭಾವ ವಿಸ್ಮಿತೆ

ಅಂದುಕೊಂಡಿರಲಿಲ್ಲ,
ಹೀಗೊಂದು ಅದೃಷ್ಟ
ನನ್ನ ಕೈ ಹಿಡಿದು ಬರುತ್ತದೆಂದು..
ಮೌನದ ಚಿಪ್ಪಿನೊಳಗೆ
ಸದಾ ಬಚ್ಚಿಟ್ಟುಕೊಂಡವಳಿಗೆ,
ಅಪೂರ್ವ ಮುತ್ತೊಂದು ದೊರಕುತ್ತದೆಂದು!!

ಅದೆಷ್ಟೋ ವರ್ಷಗಳಿಂದ ನಿಮ್ಮ ಕುರಿತಾದ
ಮನದ ಭಾವಗಳನ್ನು
ಎದೆಗೂಡಿನಲ್ಲಿ ಬೆಚ್ಚಗೆ ಕಾಪಿಟ್ಟುಕೊಂಡಿದ್ದೆ,
ಎಲ್ಲೋ ಹೇಗೋ ಇದ್ದವರು
ಮತ್ತೆ ನನ್ನ ಬದುಕಿನಂಗಳಕೆ ಬಂದು
ಒಲವಿನ ಮಳೆಗರೆಯುವಾಗ
ನಾ ಭಾವವಿಸ್ಮಿತೆ!

ನಿಮಗೊತ್ತಾ?
ನನ್ನ ನೆನಪುಗಳ ತುಂಬಾ ನೀವಿದ್ರಿ
ಅದ್ಭುತ ಕಂಠದ ಕೋಗಿಲೆ ಎಂದು
ಜನ ಹೊಗಳಿದಾಗಲೆಲ್ಲ
ನಿಮ್ಮ ನೆನಪುಗಳು ಮತ್ತಷ್ಟು ಭಾವುಕವೆನಿಸುತ್ತಿದ್ದವು!
ನಿಮ್ಮ ನೆನಪುಗಳೇ
ಬೆಲೆ ಕಟ್ಟಲಾಗದ ಆಸ್ತಿಯಾಗಿತ್ತು ಕೂಡ!

ಹೆಚ್ಚೇನು ನಿರೀಕ್ಷೆಗಳಿಲ್ಲ ಈ ಭಾವ ಜೀವಿಗೆ
ಬಯಸಿದ್ದು, ಹಂಬಲಿಸಿದ್ದು ಎಲ್ಲವೂ
ಕಲ್ಮಷಗಳ ಲೇಪನವಿಲ್ಲದ ನಿಷ್ಕಲ್ಮಶ ಒಲವಿಗಾಗಿ ಅಷ್ಟೇ….
ಬದುಕು ಸಾಗಿದಷ್ಟು ದೂರ
ಜೊತೆಗಿದ್ದು ಬಿಡಿ ಸಾಕು,
ಅದುವೇ ಅಮೂಲ್ಯ ಕಾಣಿಕೆ
ಈ ಭಾವದೊಡತಿಗೆ!!


One thought on “ಭಾವಯಾನಿ ಅವರ ಕವಿತೆ-ಭಾವ ವಿಸ್ಮಿತೆ

Leave a Reply

Back To Top