ಕಾವ್ಯ ಸಂಗಾತಿ
ಡಾ.ಡೋ.ನಾ.ವೆಂಕಟೇಶ
ಡಾಕ್ಟರ್
ಮನ್ವಂತರಗಳು ಉರುಳಿ
ನವ ನವ ವೈದ್ಯ ವಿಧಾನಗಳು ಅವತರಿಸಿ
ನವ್ಯಾತಿನವ್ಯ ಶಸ್ತ್ರ ಗಳು
ಅಸ್ತ್ರಗಳು ತೂಣೀರದೊಳಗಿದ್ದೂ
ವೈದ್ಯನೀಗ ಶಾಪಗ್ರಸ್ತ!
ಮುಂದಡಿಯಿಡೆ
ಸಹಾಯ ಬೇಡಿದ ರೋಗಿ
ತಾನಾಗಿ ಗ್ರಾಹಕ, ಹೊಸ ಹೊಸ
ಕಾನೂನು ಕಲಂ ಗಳ ಅಡಿಯಲ್ಲಿ
ರಕ್ತ ಪಿಪಾಸು!
ಹೊರಳಿ ನೋಡಿದರೆ ವೈದ್ಯ
ವಿಷಣ್ಣ ವದನ
ಕರ್ತವ್ಯವಿಮೂಢ
ಸಂವತ್ಸರಗಳ ಮುಗಿಯದ
ಅಧ್ಯಯನ ಮುಗಿಸಿದ
ಮಾನವ ಸೇವೆಯ ಹಂಬಲದಿಂದ ಬಂದ ವೈದ್ಯ
ನಿಂತಿದ್ದು ಸೀಳು ದಾರಿಯಲ್ಲಿ
ಅರಿವು ಬರುವ ಮುನ್ನವೇ
ಪ್ರಪಂಚ ಕೊಟ್ಟ
ಅರಿವಳಿಕೆಯಲ್ಲಿ !
ಬದುಕಿಗೆ
ಹಸುರಾಗವ ವೈದ್ಯ ಈಗ
ಬರೇ ಗಾಣದ ಎತ್ತು
ಕರ್ತವ್ಯದ ಪ್ರತಿ ತುತ್ತಿಗೂ ಸುಸ್ತು!
ತನ್ನ ಪೂರ್ವಜರು
ಧನ್ವಂತರಿಯಂತಾಗದೆ
ಸುಶ್ರೂತರಂತಾಗದೆ
ಕಡೆಗೆ ಹಿಪೋಕ್ರಟಿಸ್ಸ ರ
ಆಣತಿಯಂತೆಯೂ
ನಡೆಯಲಿಕ್ಕಾಗದ
ವೈದ್ಯ
ಈಗಲೂ ಪರಿಶುದ್ಧ
ಸಮಾಜ ಸೇವೆಗೆ ಸದಾ ಬದ್ಧ !!
ಡಾ.ಡೋ.ನಾ.ವೆಂಕಟೇಶ
ಹಿಪ್ಪೋಕ್ರಟಿಸರ ಅಣತಿ ಪಾಲಿಸುವವರು ಅರ್ಧಭಾಗದ ವೈದ್ಯಗಳಾದರೆ, ಇನ್ನರ್ಧ ಭಾಗ ವೈದ್ಯರು ಲಕ್ಷ-ಕೋಟಿಗಳಿಸುವ ಆಮೀಷಕ್ಕೆ ಒಳಗಾದರೆ, ಹುಲುಮಾನವರಿಗೆ ಕಾಪಾಡಲು ಭಗವಂತನಿಗೂ ದಾರಿಕಾಣದಾಗಿದೆಯಯ್ಯ. ಡಾ:ಪುರುಷೋತ್ತಮ.
ಧನ್ಯವಾದಗಳು