ಕಾವ್ಯ ಸಂಗಾತಿ
ಕುಸುಮಾ ಜಿ.ಭಟ್
ನನ್ನೊಳಗಿನ ಅವಳು
ಕಳೆದು ಹೋಗುತ್ತಾಳೆ ಆಗಾಗ
ನನ್ನೊಳಗಿನ ಅವಳು
ಕಾಡಿ ಬೇಡಿದರೂ ಓ ಗೊಡದೆ
ಅಡಗಿ ಕೂತಿರುತ್ತಾಳೆ!!
ಏಕಾಂತಕ್ಕೆ ಒದಗುವವಳು
ಭಾಷೆಯ ಬಳಕೆಯಾಟಕೆ ಬಗ್ಗುವವಳು
ಅಳುನಗುವಲಿ ಭಾಗಿಯಾದವಳು
ಹೊಗಳಿಕೆಗೆ ಹಿಗ್ಗದೆ ಮೂದಲಿಕೆಗೆ
ಅಳುಕದೇ ಭಾವಬಿಂಬವಾಗಿ ನಿಂದವಳು
ಇಲ್ಲೆಲ್ಲೋ ಕೈತಪ್ಪಿ ಹೋಗಿದ್ದಾಳೆ
ಮೂರು ಆರಾಗಿ ಮತ್ತೆ
ನೂರಾಗಿ ಅಕ್ಷಯವಾದವಳು
ಜೀವಜೀವಗಳ ಹೃದಯಕ್ಕೆ ಲಗ್ಗೆಯಿಟ್ಟವಳು
ಸತ್ವವಿಲ್ಲದೆ, ಸೆಳೆತವಿಲ್ಲದೆ
ಈಗೀಗ ಹುಟ್ಟುತ್ತಲೇ ಸತ್ತು
ತನ್ನಸ್ಥಿತ್ವ ಕಳೆದುಕೊಳ್ಳುವಳು
ಮತ್ತೆ ಮರುಹುಟ್ಟು ಪಡೆವಳೇ?
ತನ್ಮೂಲಕ ನನ್ಹೆಸರ ಲೋಕಕೆ
ಪರಿಚಯಿಸಿದವಳು
ನನಗಿರದ ಸ್ವಾತಂತ್ರ್ಯ ಅವಳೇ
ಪಡೆದುಕೊಂಡವಳು
ಸಡಗರದಿ ಮನೆಮನಗಳಲೆಲ್ಲ
ಓಡಾಡಿ ಕೊಂಡಿದ್ದಳು
ಇದ್ದಕಿದ್ದಲೇ ಕಾಣೆಯಾಗಿದ್ದಾಳೆ!
ನೋವಿನೆದೆಗೂ ಸ್ಪಂದಿಸುತ್ತಿಲ್ಲ,
ಲೇಖನಿಗೂ ನಿಲುಕುತ್ತಿಲ್ಲ
ಮನಮಂಥನಕ್ಕೆ ದೊರಕುತ್ತಿಲ್ಲ
ಅದ್ಯಾವ ಕಾಕದೃಷ್ಟಿ ತಾಕಿತೋ
ಭಾವಬಂಧನದಿಂ ಕಳಚಿ
ಬೇರಾದಳೇ? ದೂರಾದಳೇ?
ಕಂಡಿರಾ ಯಾರಾದರೂ?!
ಹುಡುಕುತಿದ್ದೇನೆ….
————————–
ಕುಸುಮಾ. ಜಿ. ಭಟ್