ತಿಂಗಳ ಕವಿ
ವಾಣಿ ಯಡಹಳ್ಳಿ ಮಠ
ಕವಿ ಪರಿಚಯ
ಹೆಸರು :ಶ್ರೀಮತಿ ಶ್ರೀದೇವಿ ಯಡಹಳ್ಳಿಮಠ
ಕಾವ್ಯನಾಮ :ವಾಣಿ
ಸ್ಥಳ :ಕಲಬುರಗಿ
ತಂದೆ : ಶ್ರೀ ಶಾಂತಯ್ಯ ಸ್ವಾಮಿ . ನಿವೃತ್ತ ಲೆಕ್ಕ ಅಧೀಕ್ಷಕರು ರಾಜ್ಯ ಲೆಕ್ಕ ಪತ್ರ ಇಲಾಖೆ
ತಾಯಿ :ಶ್ರೀಮತಿ ಗಂಗಮ್ಮ. ಗೃಹಿಣಿ
ಅಜ್ಜ :ದಿ .ಸೂಗವೀರ ಶರ್ಮಾ.ಕನ್ನಡ ಪಂಡಿತರು , ಶಿಕ್ಷಕರು , ಸಾಹಿತಿಗಳು ,ವಿಮರ್ಶಕರು ರಾಯಚೂರು .
ಸಹೋದರರು :ಶರಣಬಸವ ಎಸ್.ಸಾಫ್ಟ್ವೇರ್ ಇಂಜಿನಿಯರ್ ಬೆಂಗಳೂರು ಮತ್ತು ಗಿರೀಶ ಎಸ್.ಸ್ವಂತ ಉದ್ಯೋಗ ಕಲಬುರಗಿ .
ಸಹೋದರಿ :ಶ್ರೀಮತಿ ವಿಜಯಲಕ್ಷ್ಮಿ .ಎಸ್
ಪತಿ :ಈರಯ್ಯ ಯಡಹಳ್ಳಿಮಠ. ಸ್ವಂತ ಉದ್ಯೋಗ ಕಲಬುರಗಿ
ಮಕ್ಕಳು :ಕು. ಆದಿತ್ಯ ಮತ್ತು ಕು. ಆಯುಷ್
ಶಿಕ್ಷ ಣ : ಎಂ.ಎ , ಬಿ.ಎಡ್ (ಇಂಗ್ಲಿಷ್ )
ವೃತ್ತಿ :ಸರಕಾರಿ ಪ್ರೌಢ ಶಾಲೆಯ ಇಂಗ್ಲಿಷ್ ಭಾಷಾ ಶಿಕ್ಷಕಿ ಕಲಬುರಗಿ ಜಿಲ್ಲೆ
ಹವ್ಯಾಸ :ಕನ್ನಡ ಮತ್ತು ಹಿಂದಿ ಕವಿತೆ , ಶಾಯರಿ , ಗಝಲ್ ಬರೆಯುವುದು
ಹಂಚಿಕೊಳ್ಳಲು ಬಯಸುವ ಅವರ ಹವ್ಯಾಸಿ ಬರಹದ ಕೆಲ ವಿಷಯಗಳು :
*ಪ್ರಕಟಿತ ಚೊಚ್ಚಲ ಕವನ ಸಂಕಲನ :ಭಾವ ಬಿಂಬ (೨೦೨೨ )
*ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಲಬುರಗಿ ಯವರಿಂದ ಪ್ರಕಟಗೊಂಡ “ಅರಿವೇ ಗುರು “ಕವನ ಸಂಕಲನ (ಆಯ್ದ ಶಿಕ್ಷಕರ ಕವನಗಳಲ್ಲಿ) ಇವರದೊಂದು ಕವನವೂ ೨೦೨೩ ರಲ್ಲಿ ಪ್ರಕಟಗೊಂಡಿಹುದು .
*ಸಂಗಾತಿ ಬ್ಲಾಗ್ ನಲ್ಲಿ ಆಗಾಗ ಇವರ ಕವಿತೆ ಮತ್ತು ಗಝಲ್ಗಳು ಪ್ರಕಟವಾಗುತ್ತವೆ .
*ಆನ್ಲೈನ್ ಕವಿತೆ ರಚನೆಯ ಸ್ಪರ್ಧೆಗಳಲ್ಲಿ ಭಾಗಿಯಾಗಿ ಕೆಲವು ಪ್ರಶಸ್ತಿ ಪತ್ರಗಳನ್ನು ಸಹ ಪಡೆದಿರುವರು .
ವೃತ್ತಿ ಹಾಗು ಹವ್ಯಾಸ ಎರಡನ್ನೂ ಸರಿದೂಗಿಸಿಕೊಂಡು
ಕನ್ನಡ ಸಾಹಿತ್ಯ ಲೋಕಕ್ಕೆ ಉತ್ತಮ ಕವಿತೆಗಳನ್ನು ನೀಡುವ ಸದಾಶಯವನ್ನು ಈ ಕವಯತ್ರಿಯವರು ಹೊಂದಿರುವರು .
******
ವಾಣಿಯವರ ಕವಿತೆಗಳು
ಬದುಕು
ಕ್ಷಣಿಕ ಬದುಕಿನ
ಪ್ರತಿ ಕ್ಷಣವೂ ಕ್ಷೀಣಿಸುತ ಸಾಗಿದೆ
ಮದ ಮತ್ಸರ, ತಾತ್ಸಾರಗಳಿಗೆ
ದಿನಗಳೆಲ್ಲಿ ಉಳಿದಿವೆ
ನಾಲ್ಕು ದಿನಗಳಲಿ,
ಉಳಿದ ಚಣಗಳೆಷ್ಟೋ ತಿಳಿದಿಲ್ಲ
ನಗಿಸಿ ನಗಲು
ಉಳಿದ ಘಳಿಗೆಗಳೆಷ್ಟೋ ಗೊತ್ತಿಲ್ಲ
ಕಟ್ಟಿಕೋ ಕುಣಿದು ಕುಪ್ಪಳಿಸಲು ಕೆಲ ನೆನಪುಗಳ
ಜೊತೆಗಿಟ್ಟುಕೋ ಒಂದೆರಡು ಈರ್ಷೆಯಿರದ ಜೀವಗಳ
ಕಣ್ಣೊರೆಸಲು ಕೈಗಳಂತೆ ಕೆಲ ಸ್ನೇಹಿತರಿದ್ದರೆ ಸಾಕು
ಹಗುರಾಗಲು ಹೆಗಲಾಗೋ ಒಲವೊಂದಿದ್ದರೆ ಸಾಕು
ಮಡಿದಾಗ ಮಸಣವೂ ಮಿಡಿವಂತೆ ಇರಲಿ ನಿನ್ನ ಬದುಕು
ಚಿಕ್ಕದಿದ್ದರೂ ಚೊಕ್ಕವಾಗಿ ಸವೆಯಲಿ ನಿನ್ನ ಬದುಕು
*****
ಆಯಸ್ಸು ನಕ್ಕಿತು
ಮೊಗವು ಚೆಲುವೆಲ್ಲ ನನ್ನದೆಂದಿತು
ನಾ ಚಂದವಿರದಿರೆ , ಅದಕೆ ಬೆಲೆಯಿಲ್ಲವೆಂದು
ಮನವು ನಕ್ಕಿತು
ನಗುವು ಚೆಲುವೆಲ್ಲ ನನ್ನದೆಂದಿತು
ನಾ ನಲಿಯದಿರೆ , ಅದು ಕ್ಷಣಿಕವೆಂದು
ನೆಮ್ಮದಿ ನಕ್ಕಿತು
ನಲಿವು ಚೆಲುವೆಲ್ಲ ನನ್ನದೆಂದಿತು
ನಾ ಮರೆಯದಿರೆ , ಅದಕೆ ಉಳಿವಿಲ್ಲವೆಂದು
ನೋವು ನಕ್ಕಿತು
ಶಶಿಯು ಚೆಲುವೆಲ್ಲ ನನ್ನದೆಂದಿತು
ನಾ ಬರದಿರೆ , ಅದಕೆ ಬೆಲೆಯಿಲ್ಲವೆಂದು
ಇರುಳು ನಕ್ಕಿತು
ಕುಸುಮ ಚೆಲುವೆಲ್ಲ ನನ್ನದೆಂದಿತು
ನಾ ನೋಡದಿರೆ , ಅದು ವ್ಯರ್ಥವೆಂದು
ನಯನ ನಕ್ಕಿತು
ಬದುಕು ಚೆಲುವೆಲ್ಲ ನನ್ನದೆಂದಿತು
ನಾ ಜೊತೆಗಿರದಿರೆ , ಅದಕರ್ಥವಿಲ್ಲವೆಂದು
ಪ್ರೀತಿ ನಕ್ಕಿತು
ಮನವು ನಕ್ಕು
ನೆಮ್ಮದಿ ಸಿಕ್ಕು
ನೋವು ದೂರಾಗಿ
ಇರುಳು ಮರೆಯಾಗಿ
ಪ್ರೀತಿ ಕಣ್ತುಂಬಿಕೊಂಡರೇ
ಬದುಕು ಸಾರ್ಥಕವಾದೀತು
ಇಲ್ಲದಿರೇ , ಉಸಿರಿಗೆ ಅರ್ಥವಿಲ್ಲವೆಂದು
ಆಯಸ್ಸು ನಕ್ಕಿತು
****
ಅವನಿನ್ನೂ ಕಾಡುವನು
ಆ ನಯನವೆನಗೆ ನೂರು ಸಂದೇಶ ಕಳುಹಿಸುತ್ತಿತ್ತೇ ?
ಆ ಮೌನವೆನಗೆ ಮಾತುಗಳ ಮಲ್ಲಿಗೆ ಮುಡಿಸುತ್ತಿತ್ತೇ ?
ಅಲ್ಲಿಲ್ಲಿ ನೋಡಿ ನನ್ನೆಡೆಗೆ ಸಾಗುವ ಆ ನೋಟ
ಸಾವಿರ ಸಾರಿ ತನ್ನೊಲವ ತೆರೆದು ತೋರುತಿತ್ತೆ ?
ಅವನ ಮಾತಿನಲಿ ನಾ ಸುಳಿಯುತ್ತಿದ್ದೆನಂತೆ
ಕಂಗಳ ಕನ್ನಡಿಯಲಿ ನನ್ನ ಬಿಂಬವಿತ್ತಂತೆ
ಕೊಡದ ಗುಲಾಬಿಯೊಂದು ಕಪಾಟಿನಲ್ಲಿತ್ತಂತೆ
ಕಳುಹಿಸದ ಪತ್ರವೊಂದು ಪುಸ್ತಕದಲ್ಲಿತ್ತಂತೆ
ಅವರಿವರ ಮುಂದೆ ಗುಟ್ಟು ರಟ್ಟಾಗಿತ್ತಂತೆ
ಅವನೆದೆಯಲಿ ನಾನಿರುವುದು ಖಚಿತವಾಗಿತ್ತಂತೆ
ಅವನ ಮನದ ಮುಗಿಲಿಗೆ ನಾನೇ ಚುಕ್ಕಿಯಂತೆ
ಪ್ರೀತಿಯದು ಅಡಿಗಡಿಗೆ ಅನಾವರಣಗೊಳ್ಳುತ್ತಿತ್ತಂತೆ
ಅವ ಗುನುಗುತಿದ್ದ ಹಾಡು ನನಗಾಗಿತ್ತೇ ?
ತುಟಿ ಮೇಲಿನ ನಸು ನಗು ನನಗಾಗಿತ್ತೇ ?
ಅವ ನಾಚುವ ಆ ಪರಿ ನನಗಾಗಿತ್ತೇ ?
ಕಣ್ಣ ಹೇಳುತಿದ್ದ ಕವಿತೆ ನನಗಾಗಿತ್ತೇ ?
ಅವ ಹೇಳಲಿಲ್ಲ , ನಾ ತಿಳಿಯಲಿಲ್ಲ
ಅವ ಹೆಸರು ಉಸುರಲಿಲ್ಲ , ನಾ ಹಿಂತಿರುಗಿ ನೋಡಲಿಲ್ಲ
ಆದರಿಂದಿಗೂ ,,,
ಮಳೆ ಹನಿಯ ನೆಪದಲಿ ಕಣ್ಣೀರಾಗಿ ಜಿನುಗುವನು
ಎದೆಯ ಕದ ಬಡಿದು ನೆನಪಿನಂಗಳದಿ ಬರುವನು
ಅವನಿನ್ನೂ ಕಾಡುವನು
ಅವನಿನ್ನೂ ಕಾಡುವನು …