ಕಾವ್ಯ ಸಂಗಾತಿ
ಹನಮಂತ ಸೋಮನಕಟ್ಟಿ
ರತ್ನದ ಪದಕದ ರವಿ
ಉಗಿ ಉಗುಳದ ಕುಲುಮೆಯಿಂದ
ಕೆಂಪು ಕೆಂಪಾದ
ಬಿಸಿಯೆಲ್ಲವ ಕುಡಿದು
ಬೆಳಗಿನ ಜಾವದಲ್ಲಿ ಭುವಿಯ ಮೇಲಣ
ಇರುಳ ಮಾಲೆ ಸರಿಸಲು……………….
ತೆರೆದ ಬಾಗಿಲಿಂದ
ನೇಗಿಲು ಗೀರಿನಂತೆ
ಹರಿದ ಹಾದಿಯಲಿ ಬೇಸರವಿಲ್ಲದೆ
ಬೆಳಗೆಂದು ಶಂಖನಾದ ಮೊಳಗಿಸುತ……………..
ಬೆಳಗಿನ ಪೂರ್ವೋದಯ
ಗರಡಿಯಲ್ಲಿ ಸೆಣಸಾಡಿ
ಶಕ್ತಿ ಚಿಗುರಿಸುತ್ತಾ
ನೆತ್ತರಿನ ನೆಲಮಾಳಿಗೆಯಿಂದ………………..
ಬೇರಿರದ ಬಳ್ಳಿಯ ಮಿಂಚು
ಎಂಥ ಅದ್ಭುತ
ವರ್ಣಿಸಲು ಬಹು ಶಬ್ದಗಳ ಸನಿಹಕ್ಕೂ
ನಿಲುಕದು…………..
ಅಕ್ಷರಗಳ ನಿಧಿ ಬಗೆದು ಮಾಡಿದ
ಶಬ್ದ ಕೋಶವನೆಲ್ಲವ
ಹೆಕ್ಕಿ ತೆಗೆದು ಮಾಡಿದ
ತೋರಣಕ್ಕೂ ಸಿಗದೂ………
ಗಾಳಿಗೆ ತೂಗಾಡಿದಾಗೊಮ್ಮೆ
ಸ್ಥಾನ ಪಲ್ಲಟವಾಗದ
ರತ್ನದ ಪದಕ ಮೈಮೇಲೆ ಹೊದ್ದು
ವೇಳೆಯ ಬೆಳೆ ಉಳಿಸಿಕೊಳ್ಳಲು……………….
ಬೆಳಗಿನ
ಸಂತೋಷದ ಅಲೆಗಳ
ಕಿರಣದ ಚೆಲುವಿನ ಉಂಗುರ
ಕಂಡೆಡೆಯಲ್ಲಿ ಚಾಚುತ್ತಾ…….,……..
ಹನಮಂತ ಸೋಮನಕಟ್ಟಿ