ಕಾವ್ಯ ಸಂಗಾತಿ
ಅಭಿಷೇಕ್ ಬಾರದ್ವಜ್(ಶೈವಾನೀಕ)
‘ನಾನೊಂದು ಹಣ್ಣೆಲೆ’
ನಾನೊಂದು ಎಲೆ ಚಿಗುರುವೆ ಚಿರನೂತನವಾಗಿ ಬೆಳೆದು ದೊಡ್ಡೆಲೆಯಾಗುವೆ ನಂತರ ಹಣ್ಣೆಲೆಯಾಗುವೆ ನನ್ನ ವೃದ್ದಾಪ್ಯವ ನೋಡಿ ನನ್ನ ಸಹವೃಂದವೆ ಗದ್ಗದಿಸಿ ನಗುವುದು
ಅವರಿಗೆ ಅರಿವೆ ಇಲ್ಲ ಮುಂದೊಂದು ದಿನ ನಮಗೂ ಅದೇ ಗತಿಯೆಂದು |
ನೆಲದ ಮೇಲ್ಬಿದ್ದೆ ಬಿಸಿಲ ಬೇಗಯೊಳು ಬೆಂದೆ
ಗಾಳಿಯ ಹೊಡೆತಕ್ಕೆ ತರಗೆಲೆಯಾಗಿ ತೂರೋದೆ
ನನ್ನ ಜೀವದ ಪಯಣ ಗುಂಡಿಯ ಪಾಲಾಗಿ ಹೋದೆ |
ಹಸಿರಿರುವಾಗ ದನ ಕರುಗಳಿಗೆ ಆಹಾರವಾದೆ ಅಲ್ಲಿ ಪಚನವ ಗೊಂಡು ಸಗಣಿಯ ರೂಪದಿ ಹೊರ ಬಂದೆ
ತಿಪ್ಪೆಯನು ಸೇರಿ ನನ್ನ ಸಂಗಡಿಗರೊಡಗೂಡಿ ಸರಸವನು ಗೈದೆ
ಫಲವತ್ತತೆಯ ಸತ್ವವಾಗಿ ನಾ ಮಾರುಹೋದೆ |
ನನ್ನ ಮತ್ತೆ ಮಾನವನು ಹೊಲಗದ್ದೆಗೆರಚಿ
ನಾ ಅಲ್ಲಿನ ಮಣ್ಣಿನೊಳು ಬೆರೆತು
ಮಳೆಯನೀರನು ಕುಡಿದು ನನ್ನೊಡಲೊಳಗೆ ಬೀಜಕೆ ಮರುಜನ್ಮವನು ಕೊಟ್ಟೆ
ನನ್ನದೇ ಮತ್ತೊಂದು ಎಲೆಯ ಜನನಕ್ಕೆ ಕಾರಣವಾದೆ
ನಾನಳಿದರೂ ನನ್ನಿಂದ ಪ್ರಯೋಜನವ ನಾ ಕೊಟ್ಟೆ
ನೀ ನಾರಿಗಾದೆಯೋ ಹುಲು ಮಾನವಾ ನಾನೊಂದು ಕೇವಲಾ ತರಗೆಲೆಯ ಬಿಂದಿ|
ನನ್ನ ನಂಬಿದರೆ ಕೈ ಬಿಡೆನು ಎಂದೆಂದು
ನನ್ನ ನಾಶವ ಪಡಿಸಿ ಪ್ರಯೋಜನವ ಪಡೆಯುವರು ಸಾಕಷ್ಟು
ನನ್ನ ವಂಶದ ಮರವ ಕಡಿದು ಕಟ್ಟಿಹರು ಮನುಜರ ಸ್ವಾರ್ಥದ ಮಹಲು
ನನ್ನಿಂದೇ ಗಾಳಿ ನಿನ್ನ ಜೀವಕೆ ಉಸಿರೆಂಬುದ ಮರೆತಿಹರು
ಆದರೂ ನಿಮ್ಮ ಮೇಲಿನ ಪ್ರೀತಿಗೆ ನಾನಳಿದರೂ ಬೆಳೆಸಿಹೆನು ನನ್ನ ವಂಶದ ಮತ್ತೊಂದು ಕುಡಿಯನು
ನೀನಾರಿಗಾದೆಯೋ ಎಲೆ ಹುಲು ಮಾನವಾ ನಾನೊಂದು ಹಣ್ಣೆಲೆಯ ಕಸಕಡ್ಡಿ |
—————————-
ಶೈವಾನೀಕ