ಕಾವ್ಯ ಸಂಗಾತಿ
ವಿದ್ಯಾಲೋಕೇಶ್ ಮಂಗಳೂರು
ಇರುವ ಭಾಗ್ಯವ ನೆನೆ
ಅದೃಷ್ಟ ಎಂದರೆ ಆಕೆಯದು
ಎಂದು ಗೊಣಗುತ್ತ ಕೂತಳು
ಬಡ ಗಂಡನ ಎದುರು.
ಮನೆಗೆ ಬಂದ ಗೆಳತಿಯ ಕುರಿತು
ಓಡಾಡಲು ಕಾರು,ಬಂಗಲೆ
ಒಡವೆ..ಎಂದು ಶುರುಮಾಡಿ
ಗಂಡನ ಕಿವಿಯಲಿ ರಕ್ತ
ಸೋರುವುದೊಂದು ಬಾಕಿ.
ಪಕ್ಕದಲ್ಲೇ ಕುಳಿತ ಗೆಳತಿಯು
ಮಾತು ಶುರು ಮಾಡಿದಳು
ಹಾಗೇನಿಲ್ಲ ನಿನ್ನಷ್ಟು ಅದೃಷ್ಟ
ನನಗಿಲ್ಲ ಎಂದು ಕಣ್ಣೀರಿಟ್ಟಳು.
ಕಾರಿದ್ದರೇನು ಕೈ ಹಿಡಿದವನು
ಬಾರದಿರೆ ಜೊತೆಗೆ.
ಒಡವೆಗಳಿದ್ದರೇನು ಒಡೆಯನ
ಆಡಂಬರದ ತೋರ್ಪಡಿಕೆಗೆ.
ಬಂಗಲೆ ಇದ್ದರೇನು ಹಿಡಿ
ನೆಮ್ಮದಿಯ ಗಾಳಿ ಬೀಸದಿರೆ.
ಎಂದಳು ಮೋರೆ ಸಪ್ಪಗಾಗಿಸಿ.
ಇರುವ ಭಾಗ್ಯವ ನೆನೆ ನೀನು
ಚಿನ್ನವೇಕೆ ಮನವು ನಗುವಿನ
ಒಡವೆ ಧರಿಸಿರಲು, ಕಾರು
ಏಕೆ ಕೈ ಹಿಡಿದು ಸುತ್ತಾಡಿಸಲು
ಗುಣವಂತ ಒಡೆಯನಿರಲು.
ಇನ್ನು ಗುಡಿಸಲಾದರು ಸರಿ
ನೆಮ್ಮದಿಯ ಉಸಿರಾಡಲು ಎಂದಳು
ಗೆಳತಿಯ ಮಾತು ಕೇಳಿ
ಸ್ತಬ್ಧಳಾಗಿ ತನ್ನ ಗಂಡನ ಮೋರೆ
ನೋಡುತ ಕಣ್ಸನ್ನೆಯಲೆ
ಕ್ಷಮೆ ಯಾಚಿಸಿದಳಾಕೆ
ತನ್ನ ಅದೃಷ್ಟವ ನೆನೆದು..
ವಿದ್ಯಾಲೋಕೇಶ್ ಮಂಗಳೂರು