ಡಾ ಗೀತಾ ಡಿಗ್ಗೆ ಅವರ ಕವಿತೆ-‘ಮರಿ ಕೋಗಿಲೆ ಕೂಗು’

ಮನೆಯಂಗಳದ ಗಿಡಮರಗಳ
ರೆಂಬೆ ಕೊಂಬೆಗೆ ಜಿಗಿಯುತ
ಕೂಗುತಿದೆ ಮರಿ ಕೋಗಿಲೆ
ಅವ್ವ.. ಅವ್ವ.. ಎಂದು
ತನ್ನವ್ವನ ಕರೆಯುತಿದೆ ನೀ
ಎಲ್ಲಿರುವಿ ಬಾಯೆಂದು
  ಕಾಗೆಯ ಗೂಡಲಿ ಮರಿಯಾಗಿ
  ಕಣ್ಣ್ ಬಿಡಲು ಇಲ್ಲಿ  
  ಅಪ್ಪಿಕೊಳ್ಳಲು ತನ್ನವರಿಲ್ಲ
  ಕಾಗೆಯೂ ಕುಕ್ಕುತ ಅಟ್ಟಿಸಿ
  ಓಡಿಸುತಿದೆ ನೀ  
  ನಮ್ಮವನಲ್ಲವೆಂದು
ಜಗತ್ತೇ ಗೊತ್ತಿಲ್ಲದ ಕಂದಮ್ಮ
ಅದು ಅಲಾಪಿಸುತಿದೆ
ನಾನೆಲ್ಲಿದ್ದೇನೆಂದು ಹಲಬುತ್ತಿದೆ
ಅವ್ವಾ.. ಅವ್ವಾ.. ಎಂದು
ನೀನೆಲ್ಲಿರುವಿ ಬಾಯೆಂದು
   ನಾಲ್ಕುದಿನದ ಹೊತ್ತಾಯಿತು
   ಒಂದೇ ಸಮನೇ ಅರಚುತ್ತಿದೆ
   ಬೆಳಗಾಗುತ್ತಲೇ ಕರುಳು  
   ಹಿಂಡುವ ಹಿಂಸೆ ಅದರ
   ಕೂಗು ಕೇಳುತ್ತಲೇ..
   ಗೊತ್ತಾಗುತ್ತಿಲ್ಲ ನನಗೆ
    ಅದಕೇನು ಬೇಕೆಂದು
ಎಂಥಹ ಬಾಂಧವ್ಯವಿದು
ಅಮ್ಮ ಮಗುವಿನದು?
ಕರುಳಿನ ಕೂಗುಕೇಳಿಸದಂತದು
ಹುಟ್ಟುತ್ತಲೇ ತಬ್ಬಲಿಯ ಜನ್ಮ
ಪರದೇಶಿ ಕಂದಮ್ಮ
   ಅವ್ವ. ಅವ್ವ. ಎನುವ
  ಕಂದಮ್ಮನ ಕೂಗು
  ಕರುಳು ಹಿಂಡುತ್ತಿದೆ
  ಯಾಕೆಂದರೆ ನಾನೂ
  ಒಬ್ಬ ತಾಯಿಯಲ್ಲವೇ?
ಅಮ್ಮ ಬೇಕೆನ್ನುತ್ತಿದೆಯಾ
ತಿನ್ನಲು ಅನ್ನ ಬೇಕೆನ್ನುತ್ತಿದೆಯಾ
ಗೊತ್ತಾಗುತ್ತಿಲ್ಲ ಅದರ ಅಳಲು
    ಸೃಷ್ಟಿಕರ್ತನಲಿ ದೀನಳಾಗಿ
    ಬೇಡಿಕೊಳ್ಳುತ್ತಿರುವೆ    
    ಮರಿಕೋಗಿಲೆಯ ಕೂಗು
    ಕೇಳೆಂದು, ತಪ್ಪದೇ ಪೂರೈಸು
     ಅದಕೇನುಬೇಕೆಂದು
    ಅದರಮ್ಮನೊಡನೆ    
    ಒಂದುಗೂಡಿಸೆಂದು
   ಮತ್ತೆ ಆ ಕೋಗಿಲೆ
   ಕುಹೂ ಕುಹೂ
   ಇಂಪಾದ ಧ್ವನಿಯಲಿ
   ಸಂತಸದಿ ಹಾಡಲೆಂದು

——————————————————————————————————————–

Leave a Reply

Back To Top