ಕಾವ್ಯ ಸಂಗಾತಿ
ಮಾಲಾ ಹೆಗಡೆ
ನನ್ನ ಅಪ್ಪ
ವರ್ಣಿಸಲಾಗದ ಜೀವವದು,
ಹೋಲಿಕೆಗೆ ಸಿಗದಿಹ ವ್ಯಕ್ತಿತ್ವವದು,
ನಮಗಾಗೆ ಈ ಜೀವ ಸೋತಿರುವುದು,
ತನ್ನ ಬೆವರಹನಿಯಲೆ ನಮ್ಮ ನಗಿಸಿರುವುದು.
ಹೊರ ನೋಟಕೆ ತೋರುವನು ಭೀತಿ
ಆಂತರ್ಯದಲ್ಲಿರುವುದು ಬರೀ ಪ್ರೀತಿ.
ಕೋಪಿಷ್ಟನೆನ್ನುವುದೆ ಎಲ್ಲೆಡೆ ಪ್ರತೀತಿ
ಇದುವೇ ನನ್ನಪ್ಪ ಬದುಕುವ ರೀತಿ.
ಅಗುಳನ್ನು ತಿನ್ನಿಸಿ ಜಗವ ತೋರಿದ ಗುರುವು,
ಹೆದರಿ ನಿಂತಾಗ ಗದರಿ ಮುನ್ನಡೆಸಿದ ಬಲವು
ಉಪ್ಪಿರದ ನನ್ನಡುಗೆಯನು ಮೆಚ್ಚಿ ಹೊಗಳಿದ ಒಲವು,
ಇವನಪ್ಪುಗೆಯಲೆ ಅಡಗಿದೆ ನನ್ನ, ಧೈರ್ಯೋತ್ಸಾಹವು.
ಓ ದೇವ ನಿನ್ನಲ್ಲಿ ನನದೊಂದೇ ಕೋರಿಕೆ,
ಬತ್ತದ ಪ್ರೀತಿಯ ತುಂಬಿಹ ಈ ಮನಕೆ,
ಆಯುರಾರೋಗ್ಯವನಿತ್ತು ಕಾವಲಿರು ದೇಹಕೆ,
ನಮ್ಮಮೇಲಿರಲಿ ಸದಾ ನಿನ್ನ ಹರಕೆ ಹಾರೈಕೆ.
ಮಾಲಾ ಹೆಗಡೆ