ಶುಭಲಕ್ಷ್ಮಿ ಆರ್ ನಾಯಕ ಅವರ ಕವಿತೆ-ನನ್ನ ಅಪ್ಪ

ನನ್ನ ಅಪ್ಪ ಒಬ್ಬ ನೇಗಿಲಯೋಗಿ
ಅವರೊಬ್ಬ ನಿತ್ಯ ಕಾಯಕಯೋಗಿ
ಅವರಿಗಿತ್ತಂತೆ ಓದಬೇಕೆಂಬ ಮಹದಾಸೆ
ಆದರೆ ಅಜ್ಜ ಕಲಿಸಿದರಂತೆ ಮೇಟಿವಿದ್ಯೆ

ಮುಲ್ಕಿ ಪರೀಕ್ಷೆ ಮುಗಿಸಿ ಹೋದರಂತೆ ಹಳ್ಳಿಗೆ
ಹನ್ನೆರಡನೇ ವಯಸ್ಸಿಗೆ ಹೊತ್ತರಂತೆ ನೊಗಭಾರ
ಅಂದು ಅಪ್ಪನಲ್ಲಿರಲಿಲ್ಲ ಹಣದ ಶ್ರೀಮಂತಿಕೆ
ಆದರೆ ಇಂದಿನವರೆಗೂ ಇದೆ ಹೃದಯ ಶ್ರೀಮಂತಿಕೆ

ಹಟ್ಟಿಯ ದನಗಳು ಫಸಲಿನ ಗದ್ದೆಗಳೇ ಅವರಾಸ್ತಿ
ದೇವರಲ್ಲಿದೆ ಅವರಿಗೆ ಅನುಪಮ ನಂಬಿಕೆ ಭಕ್ತಿ
ಆಗಾಗ ಹೇಳುತ್ತಿದ್ದರು ದೇವರ ಬಗೆಗಿನ ಕಥೆಗಳ
ಅದರಿಂದ ನಮಗೂ ಕಲಿಸಿದ್ದರು ಸಂಸ್ಕಾರ
ದುಶ್ಚಟಗಳಿಂದ ನನ್ನಪ್ಪ ಇದ್ದರು ಯೋಜನಗಳದೂರ

ಕಷ್ಟದಿಂದ ಸಾಕಿದರು ನಾಲ್ಕು ಮಕ್ಕಳ
ಅವರ ಬಲಗೈಯಾಗಿದ್ದರು ನನ್ನಮ್ಮ
ನನ್ನಪ್ಪ ಕಂಡರು ದುಃಖಗಳ ಸರಮಾಲೆ
ಯಾರು ಬಲ್ಲರು ವಿಧಿ ಬರೆದ ಲೀಲೆ?

ಕಳೆದುಕೊಂಡರು ಅಪ್ಪ ತನ್ನೀರ್ವರು ಪುತ್ರರ
ಸಾಲದೆಂಬಂತೆ ಬಲಗೈಯಾದ ಸತಿಯನು ಕೂಡ
ಎಲ್ಲ ನೋವನು ನುಂಗಿ ಮುನ್ನಡೆಯುತಿಹರು
ಕಾಯಕದಲೇ ನೋವ ಮರೆಯಲು ಯತ್ನಿಸುತಿಹರು

ಮಕ್ಕಳು ಮೊಮ್ಮಕ್ಕಳೆಂದರೆ ಅಪ್ಪನಿಗೆ ಪಂಚ ಪ್ರಾಣ
ಇಂದಿಗೂ ನೆನಪಿಸುವರು ಸಂಸ್ಕಾರ ಕಾಯಕ ಪ್ರಜ್ಞೆ
ಇಂಥ ಅಪ್ಪನನು ಪಡೆದ ನಾನೇ ಧನ್ಯ
ಬಾಳಲಿ ಸುಖವಾಗಿ ನನ್ನಪ್ಪ ನೂರ್ಕಾಲ
ಅವರ ಆಶೀರ್ವಾದವಿರಲೆಮಗೆ ಸದಾಕಾಲ


Leave a Reply

Back To Top