ಹನಮಂತ ಸೋಮನಕಟ್ಟಿ ಅವರಕವಿತೆ-ಮನೆದೇವರು ನನ್ನಪ್ಪ

ಕರುಳು ಹಿಂಡುವಂತ
ಕಷ್ಟಗಳನ್ನು ಹೊಟ್ಟೆತುಂಬಾ ಉಂಡು
ಸಂತೃಪ್ತಿಯ ಮೃಷ್ಟಾನ್ನ ಭೋಜನದ
ತಟ್ಟೆಯನ್ನು ತೊಟ್ಟಿಲಿನಲ್ಲಿಯೇ ತಂದಿಟ್ಟು
ತುತ್ತಿಡುವಾಗ ಚಿಗುರೆಲೆಯಂತ ತುಟಿಯ ಮೇಲೆ
ತೇಲಿ ಬರುವ ನಗು ಕಂಡು
ಬಗೆಬಗೆಯ ಕನಸು ಕಂಡ ಮನೆದೇವರು ನನ್ನಪ್ಪ

ಕಟ್ಟಿಸಿದ್ದು ಅರಮನೆಯಲ್ಲದಿದ್ದರು
ಸರ್ಕಾರ ಕಟ್ಟಿಸಿದ ಹಂಚಿನ ಸೂರಿನಲ್ಲಿಯೇ
ಸುಖದ ಅಲೆಗಳಿಂದ ತೇಲಿಸಿ
ನೆರೆಮನೆಯ ನೆರಳಿಗೆ ತಾಗದಂತೆ
ನಮ್ಮನ್ನೆಲ್ಲ ದೊರೆಯಂತೆ ನೋಡಿದ
ಅಪ್ಪನೆ ನಮಗೆಲ್ಲ ತಿಳಿದ ಮನೆದೇವರು ನನ್ನಪ್ಪ

ಬೆಂಕಿಯ ಸೋಲಿಸುವ ಬಿಸಿಲಿಗೆ
ಮೈ ಮುರಿದು ದುಡಿಯುವಾಗ
ಕಡಲ ನೀರಂತೆ ಆವಿಯಾಗುವ
ಮೈ ಬೆವರ ಹನಿಗಳನ್ನು ಹೀರಿ ಹೊರ ಚೆಲ್ಲಿದ
ಮೈಯುಡಿಗೆ ಮುದುಡಿ ಸುಕ್ಕು ಗಟ್ಟಿದ ಚರ್ಮಕ್ಕೆ
ಅಂಟಿಕೊಂಡರು ಸಿಹಿ ಅಂಟು ತಿನಿಸಿದ ಮನೆದೇವರು ನನ್ನಪ್ಪ

ಬದುಕಿನ ಸುತ್ತಲೂ ಹಾಕಿದ
ಬಡತನದ ಬೇಲಿ ದಾಟಲು ಆಸರೆಯಾಗಲು
ಆನಂದದಿಂದ ಕಲಿಸಿಕೊಟ್ಟ ಅಕ್ಷರ
ಇಂದಿಗೂ ಅಕ್ಷಯ ಪಾತ್ರೆಯಂತೆ
ನಮ್ಮನ್ನು ಕಾಪಾಡುವಂತೆ ಮಾಡಿದ
ಶಿವಾಲಯವ ತೊರೆದು ಹೃದಯಾಲದಲ್ಲಿ
ನಿತ್ಯ ಪೂಜಿಸುವ ಮನೆದೇವರು ನನ್ನಪ್ಪ

ಬಳಿಯಲ್ಲಿದ್ದಾದ ಬರವಣಿಗೆ ಕಂಡು
ಬೆಳವಣಿಗೆ ಕಂಡು
ಸಂತೋಷದ ಸಾಗರಲ್ಲಿ ನಗುವ ಹೂವಿನಂತೆ
ನಿಂತು ನಮಗೆಲ್ಲ ಬೆನ್ನು ತಟ್ಟಿ
ಭೇಷ್ ಭೇಷ್ ಎಂದು ಸಂತಸದ ಕ್ಷಣ ಅನುಭವಿಸಿ
ಅಕ್ಕರೆಯಿಂದ ಅಪ್ಪಿಕೊಳ್ಳುತ್ತಿದ್ದ ಮನೆದೇವರು ನನ್ನಪ್ಪ

ಉಸಿರು ನಿಂತು ಇಪ್ಪತ್ತೆಂಟು ವರುಷ ಕಳೆದರೂ
ದಿನದ ಇಪ್ಪತ್ನಾಲ್ಕು ಗಂಟೆಯೂ
ನನ್ನೊಂದಿಗಿದ್ದು ಹೆಜ್ಜೆ ತಪ್ಪಿದಾಗ
ಕೈ ಹಿಡಿದೆತ್ತಿ ಸರಿದಾರಿಯಲ್ಲಿ ಸಾಗುವಂತೆ ಮಾಡಿದ
ಸರಳತೆಯ ಸಾಹುಕಾರ ಬೆಳಗಿನ ಹೂಬಿಸಿಲು
ಗುರಿ ಮುಟ್ಟಿಸಿದ ಮನೆದೇವರು ನನ್ನಪ್ಪ

ನೋಡುವರ ಕರುಳು ಚುರ್ರೆಂದರು
ಪ್ರೀತಿ ಪ್ರೇಮ ವಾತ್ಸಲ್ಯ ಮಮತೆ
ಮೃದು ಭಾಷೆಯಲಿ ಬಹುದೊಡ್ಡ ಬೆಟ್ಟದಂತಿದ್ದ
ಬದುಕಿನ ದೋಣಿಯ ಇಳಿದು ಬಹುದೂರ ಸಾಗಿದರೂ
ಸಹೋದರತೆಯ ಸೂತ್ರ ಹರಿಯದಂತೆ
ಒಡಹುಟ್ಟಿದವರನ್ನೆಲ್ಲ ಹುರಿದುಂಬಿಸಿ
ಒಟ್ಟಿಗೆ ಬಾಳುವಂತೆ ಬಂಧನ ಬೆಸೆದು ಹೋದ
ಆತ್ಮದಲ್ಲಿ ನಿತ್ಯ ನಂದಾ ಜ್ಯೋತಿಯಂತೆ ಬೆಳಗಿ ಬೆಳಕು ಕೊಡುವ
ತೈಲ ತೀರದ ಕಡಲಲ್ಲಿ ಕುಳಿತ ಮನೆ ದೇವರು ನನ್ನಪ್ಪ

3 thoughts on “ಹನಮಂತ ಸೋಮನಕಟ್ಟಿ ಅವರಕವಿತೆ-ಮನೆದೇವರು ನನ್ನಪ್ಪ

  1. ❤️❤️ ತುಂಬಾ ಚೆನ್ನಾಗಿ ಬರೆದಿದ್ದೀರಿ ಸರ್
    ತುಂಬಾ ಇಷ್ಟವಾಯ್ತು ❤️

Leave a Reply

Back To Top