ಕಾವ್ಯಸಂಗಾತಿ
ಎ.ಎನ್.ರಮೇಶ್.ಗುಬ್ಬಿ.
ಕವಿತೆಯಲ್ಲ ಚರಮಗೀತೆ..!
“ಇದು ವರ್ತಮಾನದ ವಿದ್ಯಮಾನಗಳ ವಿಷಾದದ ಕವಿತೆ. ಸಂವೇದನಾಶೀಲ ಸಮಾಜದ ಸಾತ್ವಿಕ ಮನಸುಗಳ ಆಕ್ರೋಶ ನರಳಿಕೆಗಳ ನೋವಿನ ಭಾವಗೀತೆ. ಹೆಚ್ಚೇನೂ ಪೀಠಿಕೆಯ ಅವಶ್ಯಕತೆಯಿಲ್ಲ. ಏಕೆಂದರೆ ಇಲ್ಲಿನ ಪ್ರತಿ ಪದವು ನಿಮ್ಮದೇ ಅಂತರಾಳದ ಅಶ್ರುಬಿಂದುಗಳಿಗೆ ಬರೆದ ಭಾಷ್ಯ. ಅಭಿವ್ಯಕ್ತಿಸಲಾಗದ ಅಸಂಖ್ಯ ಜೀವಗಳ, ಅಗಣಿತ ಭಾವಗಳ ಕಣ್ಣೀರ ಕಾವ್ಯ. ಕಣ್ಣೆದುರಿನ ಕರುಳು ಕತ್ತರಿಸುವ, ಬೆಚ್ಚಿ ಬೀಳಿಸುವ, ಕಂಗಾಲಾಗಿಸುವ, ನಾಗರೀಕ ಸಮಾಜ ತಲೆ ತಗ್ಗಿಸುವ ಘಟನೆಗಳಿಗೆ ದಿಗ್ಭ್ರಮೆಗೊಂಡ ನಮ್ಮ-ನಿಮ್ಮದೇ ಆಂತರ್ಯದ ತಲ್ಲಣಗಳ ಕಂಬನಿಯ ಗೀತೆಯಿದು. ಏನಂತೀರಾ..?” – ವಿಷಾದದಿಂದ ಎ.ಎನ್.ರಮೇಶ್.ಗುಬ್ಬಿ.
ಕಿರಾತಕರ ಕ್ರೂರತೆ ಕ್ರೌರ್ಯಕ್ಕೆಲ್ಲಿದೆ
ದಯೆ ಕರುಣೆ ಅನುಕಂಪದ ಅರಿವು?
ಹಿಂಸಾವಿನೋದಿಗಳ ರೌದ್ರಕ್ಕೆಲ್ಲಿದೆ
ಕಾರುಣ್ಯ ಕ್ಷಮೆ ಪ್ರೀತಿಯ ಹರಿವು.?
ದಾನವತೆಯ ಧಾರ್ಷ್ಟ್ಯ ದರ್ಪಕೆಲ್ಲಿದೆ
ಮಮತೆ ಮಾನವೀಯತೆ ಪರಿವು?
ಕಟುಕರ ಭೀಕರ ಭೀಭತ್ಸತೆಗೆಲ್ಲಿದೆ
ಮಮಕಾರ ಮನುಶ್ಯತ್ವದ ಸ್ವರವು.?
ಮದಾಂಧರ ಆಟಾಟೋಪಗಳಿಗೆಲ್ಲಿದೆ
ಕಾನೂನು ಕಟ್ಟಳೆಗಳ ಭಯವು?
ದುರಹಂಕಾರ ದುರಾಚಾರಗಳಿಗೆಲ್ಲಿದೆ
ಆಸ್ಥೆ ಅಂತಃಕರಣಗಳ ಹರವು?
ಮದಿರೆ ಮಾದಕಗಳ ವಿಕೃತಿಗೆಲ್ಲಿದೆ
ಸಾವು ನೋವುಗಳ ಸುಳಿವು?
ನಶಾ ಪರವಶರ ಹೀನ ಕುಕೃತಿಗೆಲ್ಲಿದೆ
ವಿವೇಕ ವಿವೇಚನೆಗಳ ತಿಳಿವು?
ಸಿರಿತನ ಅಧಿಕಾರಗಳ ಸೊಕ್ಕಿಗೆಲ್ಲಿದೆ
ಅಬಲರ ಕಂಬನಿಯ ಅರಿವು?
ಮೃಗತ್ವ ಪೈಶಾಚಿಕತೆಗಳ ದಿಕ್ಕಿಗೆಲ್ಲಿದೆ
ನರಳಿಕೆ ಆಕ್ರಂದಗಳ ಪರಿವು.?
ಸಂಸ್ಕೃತಿ ಸಂಸ್ಕಾರ ಸತ್ತ ಮೇಲೆಲ್ಲಿದೆ
ಸತ್ಯ ನ್ಯಾಯಧರ್ಮದ ಉಳಿವು.?
ಪಾಶಾಣ ತುಂಬಿದ ಎದೆಗಳಲೆಲ್ಲಿದೆ
ನೀತಿ ಪ್ರೀತಿ ನೇಮದ ಸ್ಫುರಿವು?
ಆದರ್ಶವಾಗುವವರೇ ಅಂಧರಾಗುತ
ಸಮಾಜದ ಸಾಕ್ಷಿಪ್ರಜ್ಞೆ ಸತ್ತ ಮೇಲೆ
ನಿದರ್ಶನವಾಗುವವರೆ ನೀಚರಾಗುತ
ನೆಲದ ಅಸ್ಮಿತೆ ನೆಲ ಕಚ್ಚಿದ ಮೇಲೆ
ತತ್ವ ಸತ್ವ ಸಿದ್ಧಾಂತಗಳೆಲ್ಲ ಬೂದಿಯಾಗಿ
ಮನೆ-ಮನಗಳಿಗೆಲ್ಲ ಮಸಣದ ಕಳೆ.!
ನಾಗರೀಕತೆಯ ನರಸತ್ತು ನಿರ್ನಾಮವಾಗಿ
ಬದುಕುಗಳು ಬೆತ್ತಲಾದಾವು ನಾಳೆ.!
——————————————-
ಎ.ಎನ್.ರಮೇಶ್.ಗುಬ್ಬಿ.