ಕಾವ್ಯಸಂಗಾತಿ
ಮಾಲಾ ಹೆಗಡೆ ಅವರ ಕವಿತೆ-
ಸಪ್ತ ಸಾಗರದಾಚೆ
ಸಪ್ತ ಸಾಗರದಾಚೆಯಿಂದ
ಕೇಳಿ ಬರುತ್ತಿದೆಯೊಂದು
ಸುಪ್ತ ಸ್ವರ,
ಗುಪ್ತ ಗಾಮಿನಿಯಾಗಿ
ಹರಿಯುತಿದೆ ಮನದ
ಭಾವ ಪ್ರವರ.
ನಾವಿಕನಿಲ್ಲದ ನೌಕೆಯಿದು
ದಿಕ್ಸೂಚಿ ತಪ್ಪಿ ನಿಂತಿದೆ.
ಮರೆತು ಗಮ್ಯವ ಮಾರ್ಗ ಮಧ್ಯದಿ
ಮರುತಕೆ ಬಲಿಯಾಗಿದೆ.
ನಗ್ನ ಮೌನದ ಪಯಣದಿ
ಈಗ ಒಬ್ಬಂಟಿಯ ಓಟ.
ನೆಟ್ಟ ದಿಗಂತದಾಚೆಯ ನೋಟದಿ
ಸಂಗಾತಿ ಹುಡುಕಾಟ.
ಏಕಾಂಗಿ ಈ ತಟದಿ ಯುಗವಾಗುತ್ತಿದೆ ಚಣ ದಿವಸ.
ನಭದೊಡೆಯನೂ ನಕ್ಕು
ಸರಿಯುತಿರುವ ಭಾಸ.
ವಿಯೋಗ ವಿಲಾಪಾದಲೂ
ನುಸುಳಿದೆ ನೂರು ಆ
ಪ್ರೇಮಗೀತ,
ಕಾಲ ದೂಡಿದೆ ಕಾಯ ನೆನಪ
ಬುತ್ತಿಯ ಬಿಚ್ಚಿ ನಿತ್ಯ
ಉಣುತ.
—————————–
ಮಾಲಾ ಹೆಗಡೆ.